ಕಣ್ಣಿಗೆ ಕಾರದ ಪುಡಿ ಎಸೆದು, ಹಲ್ಲೆ ಮಾಡಿ, ಕೊಲೆ ಮಾಡಿರುವ ದುಷ್ಕರ್ಮಿಗಳು…. ಸ್ಥಳಕ್ಕೆ ಪೊಲೀಸರ ಭೇಟಿ, ಪರಿಶೀಲನೆ…
ಗದಗ: ರೋಣ ವಿಧಾನಸಭಾ ಕ್ಷೇತ್ರದ ಡಂಬಳ ಹೋಬಳಿಯ ಗ್ಯಾರಂಟಿ ಫಲಾನುಭವಿಗಳ ಸಮಾವೇಶದ ಹೊತ್ತಿನಲ್ಲಿ ಕಾಂಗ್ರೆಸ್ ಕಾರ್ಯಕರ್ತನೊಬ್ಬನ ಭೀಕರ ಕೊಲೆಯಾಗಿದೆ.
ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಡಂಬಳ ಗ್ರಾಮದ ಬಳಿ ಜಮೀನೊಂದರಲ್ಲಿ ಮರಕ್ಕೆ ನೇತು ಹಾಕಿದ ಸ್ಥಿತಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತನ ಶವ ನೇತಾಡುತ್ತಿದೆ.
ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣದ ಪ್ರಮುಖ ಕಾರ್ಯಕರ್ತ ಡೋಣಿ ಗ್ರಾಮದ ಶರಣಪ್ಪ ಸಂದಿಗೌಡ್ರ ಕೊಲೆಗೀಡಾದ ವ್ಯಕ್ತಿ.
ಕೊಲೆಗೂ ಮುನ್ನ ಹಲ್ಲೆ ಮಾಡಿರುವ ದುಷ್ಕರ್ಮಿಗಳು, ಕಣ್ಣಿಗೆ ಕಾರದಪುಡಿ ಎಸೆದು ಹಲ್ಲೆ ಮಾಡಿದ್ದಾರೆ. ನಂತರ ಶವ ತೂಗು ಹಾಕಿ ವಿಕೃತಿ ಮೆರೆದಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇಂದು ಬೆಳ್ಳಂಬೆಳಿಗ್ಗೆ ಮರದಲ್ಲಿ ನೇತಾಡುತ್ತಿರುವ ಶವ ನೋಡಿದ ಸ್ಥಳೀಯರು ಬೆಚ್ಚಿ ಬಿದ್ದಿದ್ದು, ಇಂದು ಡಂಬಳದಲ್ಲಿ ಕಾಂಗ್ರೆಸ್ ಪಕ್ಷದಿಂದ ಗ್ಯಾರಂಟಿ ಫಲಾನುಭವಿಗಳ ಸಮಾವೇಶ ಹಮ್ಮಿಕೊಳ್ಳಲಾಗಿದ್ದು, ಕಾರ್ಯಕರ್ತರಲ್ಲಿ ಆತಂಕ ಮೂಡಿದೆ.
ಯಾವ ಕಾರಣಕ್ಕಾಗಿ ಈ ಕೊಲೆ ನಡೆದಿದೆ ಎಂಬುದು ಸದ್ಯಕ್ಕೆ ತಿಳಿದು ಬಂದಿಲ್ಲ.
ಘಟನೆಯ ಸುದ್ದಿ ತಿಳಿದ ಮುಂಡರಗಿ ಠಾಣೆಯ ಇನ್ಸ್ಪೆಕ್ಟರ್ ಮಂಜುನಾಥ್ ಕುಸುಗಲ್ಲ ಹಾಗೂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕೊಲೆ ಯಾವ ಕಾರಣಕ್ಕಾಗಿ ನಡೆದಿರಬಹುದು ಎಂದು ಮಾಹಿತಿ ಕಲೆ ಹಾಕುತ್ತಿದ್ದಾರೆ.
ಕೊಲೆ ಮಾಡಿದ ಆರೋಪಿಗಳ ಪತ್ತೆಗೆ ಜಾಲ ಬೀಸಿರುವ ಮುಂಡರಗಿ ಪೊಲೀಸರು, ತನಿಖೆ ಕೈಗೊಂಡಿದ್ದಾರೆ.


