ವಿಜಯಸಾಕ್ಷಿ ಸುದ್ದಿ, ಬಾಳೆಹೊನ್ನೂರು : ಮಕ್ಕಳ ಮನಸ್ಸು ಪರಿಶುದ್ಧವಾದುದು ಮತ್ತು ಪವಿತ್ರವಾದುದು. ಬೆಳೆಯುವ ಮಕ್ಕಳಿಗೆ ಯೋಗ್ಯ ಸಂಸ್ಕಾರ ಮತ್ತು ಉತ್ತಮ ಮಾರ್ಗದರ್ಶನ ಕೊಟ್ಟರೆ ಆದರ್ಶ ವ್ಯಕ್ತಿಗಳಾಗಿ ಬಾಳಲು ಸಾಧ್ಯ. ಮಕ್ಕಳು ದೇಶದ ಅಮೂಲ್ಯ ಸಂಪತ್ತು ಎಂದು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಹಾಗೂ ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿ ಮಹಾರಥೋತ್ಸವದ ಅಂಗವಾಗಿ ಜರುಗಿದ ಎನ್.ಆರ್. ಪುರ ತಾಲೂಕ ಪ್ರಥಮ ಮಕ್ಕಳ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ ಎಂಬ ಗಾದೆ ಮಾತೊಂದಿದೆ. ಕಿರಿ ವಯಸ್ಸಿನಲ್ಲಿ ಕೊಟ್ಟ ಸಂಸ್ಕಾರ ಜೀವನದ ಕೊನೆವರೆಗೆ ಇರುತ್ತವೆ. ಅವರ ಉಜ್ವಲ ಭವಿಷ್ಯಕ್ಕೆ ಕಾರಣವಾಗುತ್ತವೆ. ಉತ್ತಮ ಶಿಕ್ಷಣದೊಂದಿಗೆ ಮಕ್ಕಳು ದೇಶದ ಭಾವೀ ಪ್ರಜೆಗಳಾಗಿ ಬಾಳಲಿ. ಶ್ರೀ ಪೀಠದ ಜಾತ್ರಾ ಮಹೋತ್ಸವದ ಸುಸಂದರ್ಭದಲ್ಲಿ ಈ ಸಮ್ಮೇಳನ ಜರುಗುತ್ತಿರುವುದು ಅತೀವ ಸಂತೋಷವನ್ನು ಉಂಟುಮಾಡಿದೆ. ಶ್ರೀ ಜಗದ್ಗುರು ರಂಭಾಪುರಿ ಪೀಠ ಮಕ್ಕಳ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸವನ್ನು ನಿರಂತರವಾಗಿ ಮಾಡಿಕೊಂಡು ಬಂದಿದೆ.
ಇಂದಿನ ಮಕ್ಕಳ ಸಮ್ಮೇಳನದ ಅಧ್ಯಕ್ಷೆ ಬಿ.ಎ. ವರ್ಷಿಣಿ, ಸಹ ಅಧ್ಯಕ್ಷ ಮನೋಜ್ ಎಫ್.ಎ., ರಕ್ಷಿತ ಹಾಗೂ ಕಲಾ ಇವರಲ್ಲಿರುವ ಪ್ರತಿಭೆಯನ್ನು ಕಂಡು ಮನಸ್ಸಿಗೆ ಸಂತೋಷವಾಗಿದೆ. ಈ ನಾಲ್ಕೂ ಮಕ್ಕಳಿಗೆ ಈ ವರ್ಷದ ಅಬ್ಬಿಗೇರಿ ದಸರಾ ಮಹೋತ್ಸವದಲ್ಲಿ ಖಂಡಿತವಾಗಿ ಮಾತನಾಡಲು ಅವಕಾಶ ಕಲ್ಪಿಸಿಕೊಡಲಾಗುವುದು.
ಅಲ್ಲದೇ ಈ ನಾಲ್ಕೂ ಮಕ್ಕಳ ಮುಂದಿನ ವಿದ್ಯಾಭ್ಯಾಸಕ್ಕಾಗಿ ಶ್ರೀ ಪೀಠದಿಂದ ಆರ್ಥಿಕ ಸಹಾಯವನ್ನು ಕಲ್ಪಿಸಿಕೊಡುತ್ತೇವೆ ಎಂದರು.
ಸಮಾರಂಭವನ್ನು ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಬೆಂಗಳೂರು ಇದರ ರಾಜ್ಯಾಧ್ಯಕ್ಷ ಸಿ.ಎನ್. ಅಶೋಕ ಉದ್ಘಾಟಿಸಿ ಮಾತನಾಡಿ, ಜಾತಿ-ಮತ-ಪಂಥಗಳ ಬೇಧ ಅರಿಯದೇ ಜನಿಸುವ ಮಗು ಮುಂದಿನ ದಿನಗಳಲ್ಲಿ ವಿಶ್ವ ಮಾನವನಾಗಿ ಬೆಳೆಯಬೇಕೆಂಬುದು ನಮ್ಮ ಉದ್ದೇಶವಾಗಿದೆ. ಮಕ್ಕಳಲ್ಲಿ ಸಾಹಿತ್ಯದ ಅಭಿರುಚಿ ಬೆಳೆಯಬೇಕು. ಉತ್ತಮ ಸಂಸ್ಕಾರದೊಂದಿಗೆ ಉನ್ನತ ಶಿಕ್ಷಣ ಪಡೆದ ಮಕ್ಕಳು ದೇಶವನ್ನು ಕಟ್ಟುವವರಾಗಬೇಕು ಎಂದರು. ಮಕ್ಕಳ ಸಾಹಿತ್ಯ ಪರಿಷತ್ತು ಚಿಕ್ಕಮಗಳೂರು ಕಾರ್ಯದರ್ಶಿ ಹೂ.ವೀ. ಸಿದ್ಧೇಶ ಪ್ರಾಸ್ತಾವಿಕ ಮಾತನಾಡಿದರು.
ಸಮ್ಮೇಳನದ ಅಧ್ಯಕ್ಷೆ ಬಾಳೆಹೊನ್ನೂರು ನಿರ್ಮಲ ಕಾನ್ವೆಂಟಿನ ಬಿ.ಎ. ವರ್ಷಿಣಿ ಅಧ್ಯಕ್ಷೀಯ ಭಾಷಣ ಮಾಡಿದರು. ಸಹ ಅಧ್ಯಕ್ಷ ಶ್ರೀ ರಂಭಾಪುರಿ ಪೀಠದ ಶ್ರೀ ಜ.ರುದ್ರಮುನೀಶ್ವರ ವಸತಿ ಪ್ರೌಢಶಾಲೆಯ ಮನೋಜ್ ಎಫ್.ಎ ಉಪಸ್ಥಿತರಿದ್ದರು. ಸುಳ್ಳ ಪಂಚಗೃಹ ಹಿರೇಮಠದ ಶಿವಸಿದ್ಧರಾಮೇಶ್ವರ ಶಿವಾಚಾರ್ಯ ಸ್ವಾಮಿಗಳು ನೇತೃತ್ವ ವಹಿಸಿದ್ದರು. ಬೇರುಗಂಡಿ ಬೃಹನ್ಮಠದ ರೇಣುಕ ಮಹಂತ ಶಿವಾಚಾರ್ಯ ಸ್ವಾಮಿಗಳು ಉಪದೇಶಾಮೃತ ನೀಡಿದರು.
ಮುಖ್ಯ ಅತಿಥಿಗಳಾಗಿ ಚಿಕ್ಕಮಗಳೂರು ಕ.ರಾ.ಮಕ್ಕಳ ಸಾ.ಪ. ಅಧ್ಯಕ್ಷ ಮಲ್ಲಿಗೆ ಸುಧೀರ್, ಹಾಸನ ಅಧ್ಯಕ್ಷ ಅಧ್ಯಕ್ಷ ಗಂಗಾಧರ್, ಬಿ.ಕಣಬೂರು ಗ್ರಾ.ಪಂ ಅಧ್ಯಕ್ಷ ಸದಾಶಿವ ಆಚಾರಿ, ಕೆ.ಟಿ. ವೆಂಕಟೇಶ್ ಪಾಲ್ಗೊಂಡಿದ್ದರು.
ನವದೆಹಲಿಯ ಪ್ರಥಮ ರಾಷ್ಟ್ರೀಯ ಹೊರನಾಡು ಮಕ್ಕಳ ಸಮ್ಮೇಳನದ ಸಹ-ಅಧ್ಯಕ್ಷೆ ರಕ್ಷಿತ ಹಾಗೂ ಕಲಾ ಇವರಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಗುರುರಕ್ಷೆ ನೀಡಿ ಆಶೀರ್ವದಿಸಿದರು. ಚಿಕ್ಕಮಗಳೂರು ಮಾಧ್ಯಮ ಸಂಸ್ಕೃತಿ ಪ್ರತಿಷ್ಠಾನದ ಅಧ್ಯಕ್ಷ ಚಿ.ಸ. ಪ್ರಭುಲಿಂಗಶಾಸ್ತಿç ಸ್ವಾಗತಿಸಿದರು. ವಿಠಲಾಪುರದ ಗಂಗಾಧರಸ್ವಾಮಿ ಹಿರೇಮಠ ಭಕ್ತಿ ಗೀತೆ ಹಾಡಿದರು. ಶಿಕ್ಷಕ ವೀರೇಶ ಕುಲಕರ್ಣಿ ನಿರೂಪಿಸಿದರು.
ಜನ್ಮ ಕೊಟ್ಟ ತಂದೆ-ತಾಯಿಗಳು ಮಕ್ಕಳಿಗಾಗಿ ಆಸ್ತಿ ಮಾಡುವುದರ ಬದಲಾಗಿ ಹುಟ್ಟಿದ ಮಕ್ಕಳಿಗೆ ಯೋಗ್ಯ ಶಿಕ್ಷಣ, ಸಂಸ್ಕಾರ ಕೊಡುವುದರ ಮೂಲಕ ಬೆಳೆಸಬೇಕು. ಐದು ವರುಷದವರೆಗೆ ಮಕ್ಕಳನ್ನು ಹೂವಿನಂತೆ ಜೋಪಾನ ಮಾಡಬೇಕು. ಹತ್ತು ತುಂಬುವ ಸಂದರ್ಭದಲ್ಲಿ ಮಕ್ಕಳು ತಪ್ಪು ಮಾಡಿದರೆ ಒಂದು ಪೆಟ್ಟು ಕೊಟ್ಟು ತಿದ್ದುವ ಕೆಲಸ ಮಾಡಬೇಕು. ಹದಿನಾರು ಮೀರಿದ ಸಂದರ್ಭದಲ್ಲಿ ಮಕ್ಕಳನ್ನು ಸಹೋದರರಂತೆ ಕಂಡು ಪ್ರೋತ್ಸಾಹಿಸಬೇಕು. ಯಾವ ಯಾವ ಮಕ್ಕಳಲ್ಲಿ ಎಂಥ ಅದ್ಭುತ ಶಕ್ತಿಯಿದೆಯೋ ಅದನ್ನು ಗುರುತಿಸಿ ಸ್ಫೂರ್ತಿ ತುಂಬುವ ಕಾರ್ಯ ಮಾಡಬೇಕು ಎಂದು ರಂಭಾಪುರಿ ಶ್ರೀಗಳು ತಿಳಿಸಿದರು.
Advertisement