ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಲಕ್ಷ್ಮೇಶ್ವರ ಸೇರಿ ತಾಲೂಕಿನಾದ್ಯಂತ ಮಾರ್ಚ್ ಕೊನೆಯ ವಾರದಲ್ಲಿ ನಡೆಯುವ ಹೋಳಿ ಹಬ್ಬವನ್ನು ಸಂಪ್ರದಾಯಬದ್ಧವಾಗಿ, ಯಾವುದೇ ಅಹಿತಕರ ಘಟನೆಗೆ ಆಸ್ಪದ ನೀಡದಂತೆ ಶಾಂತಿಯುತವಾಗಿ ಆಚರಿಸಬೇಕೆಂದು ಪಿಎಸ್‌ಐ ಈರಣ್ಣ ರಿತ್ತಿ ಸೂಚಿಸಿದರು.
ಅವರು ಬುಧವಾರ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಹೋಳಿ ಹಬ್ಬದ ಪ್ರಯುಕ್ತ ಕರೆಯಲಾಗಿದ್ದ ವಿವಿಧ ಸಮಾಜಗಳ ಮುಖಂಡರುಗಳನ್ನೊಳಗೊಂಡ ಶಾಂತಿ ಸಭೆಯಲ್ಲಿ ಮಾತನಾಡುತ್ತಿದ್ದರು.
ಹಬ್ಬಗಳು ನಾಡಿನ ಸಂಪ್ರದಾಯದ ಪ್ರತೀಕ ಮತ್ತು ಪರಸ್ಪರರಲ್ಲಿ ಸ್ನೇಹ, ಸೌಹಾರ್ದತೆ ಬೆಸೆಯುವ ಕೊಂಡಿಯಾಗಿವೆ. ಹಿಂದೂ-ಮುಸ್ಲಿಂ ಭಾವೈಕ್ಯತೆಗೆ ಹೆಸರಾದ ಪಟ್ಟಣದಲ್ಲಿ ಹೋಳಿ ಹಬ್ಬವನ್ನು ಸಹೋದರತ್ವ ಭಾವನೆಯಿಂದ ಶಾಂತಿಯುತ ಮತ್ತು ಅರ್ಥಪೂರ್ಣವಾಗಿ ಆಚರಿಸಿ. ಹಬ್ಬದ ಸಂದರ್ಭದಲ್ಲಿ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ರಾಸಾಯನಿಕಯುಕ್ತ ಬಣ್ಣ ಬಳಸಬಾರದು. ಮುಂಜಾಗೃತಾ ಕ್ರಮವಾಗಿ ಸೂಕ್ತ ಬಂದೋಬಸ್ತ್ ಕ್ರಮಗಳನ್ನು ಏರ್ಪಡಿಸಿದ್ದು, ಅಹಿತಕರ ಘಟನೆಗೆ ಕಾರಣರಾದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಹಿರಿಯರಾದ ಪೂರ್ಣಾಜಿ ಖರಾಟೆ ಮಾತನಾಡಿ, ಸ್ನೇಹ ಸೌಹಾರ್ದತೆಯ ಸಂಕೇತವಾದ ಹೋಳಿ ಹಬ್ಬವನ್ನು ದ್ವೇಷ ಮತ್ತು ಕೋಮು ಭಾವನೆ ಮರೆತು ಎಲ್ಲರೂ ಸೇರಿ ಆಚರಿಸೋಣ. ನಮ್ಮ ಪೂರ್ವಜರ ಕಾಲದಿಂದಲೂ ಆಚರಣೆಯಲ್ಲಿರುವ ಎಲ್ಲ ಹಬ್ಬಗಳಿಗೂ ಅರ್ಥಪೂರ್ಣವಾದ ಕಾರಣಗಳಿದ್ದು, ಅವುಗಳನ್ನು ಮುಂದಿನ ಸಮಾಜಕ್ಕೆ ಕೊಂಡೊಯ್ಯುವ ಜವಾಬ್ದಾರಿ ಎಲ್ಲರದ್ದಾಗಿದೆ. ಈ ನಿಟ್ಟಿನಲ್ಲಿ ಎಲ್ಲ ಸಮಾಜಗಳ ಮುಖಂಡರು ಮತ್ತು ಸಂಘಟನೆಗಳ ಪ್ರಮುಖರು ಪಾಲ್ಗೊಳ್ಳುವ ಮೂಲಕ ಪರಸ್ಪರ ಸ್ನೇಹಪೂರ್ವಕ ರಂಗಿನಾಟದಲ್ಲಿ ಬೆರೆಯೋಣ ಎಂದು ಹೇಳಿದರು.
ಗಂಗಾಧರ ಮೆಣಸಿನಕಾಯಿ, ಶಿವಣ್ಣ ಕಟಗಿ, ನಜೀರ ಅಹ್ಮದ ಗದಗ ಮಾತನಾಡಿ, ಹೋಳಿ ಹಬ್ಬದ ಆಚರಣೆಗೆ ವಿಶೇಷವಾದ ಅರ್ಥವಿದ್ದು, ಹಬ್ಬ ಆಚರಣೆ ದಾರಿ ತಪ್ಪದಿರಲಿ. ಬರಗಾಲ, ನೀರಿನ ಬವಣೆಯಿದ್ದು ರಾಸಾಯನಿಕ ಮಿಶ್ರಿತ ಬಣ್ಣ ಆಡದಂತೆ ತಿಳಿಸೋಣ. ಪರೀಕ್ಷೆ ನಡೆಯುವುದರಿಂದ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ತೊಂದರೆಯಾಗದಂತೆ ಹಬ್ಬ ಆಚರಿಸೋಣ ಎಂದರು.
ಈ ವೇಳೆ ಸುಲೇಮಾನಸಾಬ ಕಣಕೆ, ಮಂಜುನಾಥ ಹೊಗೆಸೊಪ್ಪಿನ, ಮಹೇಶ ಕಲಘಟಗಿ, ನಾಗರಾಜ ಹಾವಳಕೇರಿ, ಚಂದ್ರು ಹಂಪಣ್ಣನವರ, ಇಸ್ಮಾಯಿಲ್ ಆಡೂರ, ಸದಾನಂದ ನಂದೆಣ್ಣನವರ, ಮಂಜುನಾಥ ನರೇಗಲ್ ಸೇರಿ ವಿವಿಧ ಸಮಾಜದ ಮುಖಂಡರು ಇದ್ದರು. ಸಿಬ್ಬಂದಿ ಮಾಲತಿ ಶೀಗಿಹಳ್ಳಿ, ಮಾರುತಿ ಲಮಾಣಿ ನಿರ್ವಹಿಸಿದರು.
ಮಾ.25ರಂದು ಗೊಜನೂರ, ಅಡರಕಟ್ಟಿ ಸೇರಿ ಕೆಲವು ಗ್ರಾಮಗಳಲ್ಲಿ, ಮಾ. 26ರಂದು ತಾಲೂಕಿನ ಎಲ್ಲ ಗ್ರಾಮಗಳಲ್ಲಿ ಮತ್ತು ಮಾ. 29ರಂದು ಲಕ್ಷ್ಮೇಶ್ವರ ಮತ್ತು ಶಿಗ್ಲಿಯಲ್ಲಿ ರಂಗಿನೋಕಳಿ ಹಬ್ಬ ಜರುಗಲಿದೆ.