Home Blog

ಮುಖ್ಯಮಂತ್ರಿ ಬದಲಾವಣೆ ಹೇಳಿಕೆ: ಆಪ್ತ ಶಾಸಕ ಇಕ್ಬಾಲ್‌ಗೆ ನೋಟಿಸ್ ಕೊಟ್ಟು ವಾರ್ನಿಂಗ್ ಮಾಡಿದ ಡಿಕೆ ಶಿವಕುಮಾರ್!

ಬೆಂಗಳೂರು:- ಮಾಧ್ಯಮಗಳ ಮುಂದೆ ಬಹಿರಂಗವಾಗಿ ಸಿಎಂ ಬದಲಾವಣೆ ಕುರಿತು ಹೇಳಿಕೆ ನೀಡಿದ್ದ ರಾಮನಗರ ಶಾಸಕ ಇಕ್ಬಾಲ್‌ ಹುಸೇನ್‌ಗೆ ನೋಟಿಸ್ ಕೊಟ್ಟು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.

ಮುಖ್ಯಮಂತ್ರಿಗಳ ಬದಲಾವಣೆ ವಿಷಯದಲ್ಲಿ ಪಕ್ಷದಲ್ಲಿ ಗೊಂದಲ ಹಾಗೂ ಮುಜುಗರ ಉಂಟುಮಾಡುವಂತಹ ಬಹಿರಂಗವಾಗಿ ಹೇಳಿಕೆಗಳನ್ನು ನೀಡಿರುತ್ತೀರಿ. ತಮ್ಮ ಈ ಬಹಿರಂಗ ಹೇಳಿಕೆಗಳು ಪಕ್ಷಕ್ಕೆ ಮುಜುಗರ ಉಂಟು ಮಾಡುವುದಲ್ಲದೆ, ಪಕ್ಷದ ಶಿಸ್ತು ಉಲ್ಲಂಘನೆ ಆಗಿರುತ್ತದೆ. ತಮ್ಮ ಈ ಅಶಿಸ್ತಿನ ಹೇಳಿಕೆಗಳನ್ನು ಗಂಭೀರವಾಗಿ ಪರಿಗಣಿಸಿ, ಈ ಕಾರಣ ಕೇಳಿ ನೋಟಿಸ್‌ ನೀಡಲಾಗಿದೆ. ತಾವುಗಳು ಈ ನೋಟಿಸ್‌ ತಲುಪಿದ ಒಂದು ವಾರದ ಒಳಗಾಗಿ ತಮ್ಮ ಹೇಳಿಕೆಗಳ ಬಗ್ಗೆ ಸಮಜಾಯಿಷಿ ನೀಡಲು ಸೂಚಿಸಲಾಗಿದೆ.

ಇನ್ನೂ ಕರ್ನಾಟಕ ಕಾಂಗ್ರೆಸ್​ ನಲ್ಲಿ ಶಾಸಕರ ಅಸಮಾಧಾನದ ಕಿಚ್ಚು ಕಾವೇರುತ್ತಿದೆ. ಒಬ್ಬೊಬ್ಬರದ್ದು ಒಂದೊಂದು ಕಥೆ, ಮುನಿಸು, ಬೇಸರ. ಹೀಗಾಗಿ ಈ ಕಿಚ್ಚು ಮತ್ತಷ್ಟು ಸ್ಫೋಟಗೊಳ್ಳುವ ಮೊದಲೇ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಶಾಸಕರ ಅಸಮಾಧಾನ ತಣಿಸಲು ಬಂದಿದ್ದಾರೆ. ಆದ್ರೆ ಸುರ್ಜೇವಾಲ ಸಭೆ ಪಕ್ಷದ ನಾಯಕರ ಅಸಮಾಧಾನ ತಣಿಸೋ ಬದಲು ಬಹಿರಂಗ ಕಿತ್ತಾಟಕ್ಕೆ ವೇದಿಕೆ ಮಾಡಿಕೊಟ್ಟಿದ್ದು, ಡಿಕೆ ಶಿವಕುಮಾರ್ ಸಿಎಂ ಆಗಬೇಕೆಂದು ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಬಹಿರಂಗವಾಗಿ ಅಬ್ಬರಿಸಿದ್ದಾರೆ. ಹೀಗಾಗಿ ಇದೀಗ ಅವರಿಗೆ ಡಿಕೆಶಿ ಶಾಕ್ ಕೊಟ್ಟಿದ್ದಾರೆ.

ಎಸ್.ಎಸ್.ಕೆ ತರುಣ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ

ವಿಜಯಸಾಕ್ಷಿ ಸುದ್ದಿ, ಬೆಟಗೇರಿ: ಇತ್ತೀಚೆಗೆ ನಡೆದ ಬೆಟಗೇರಿ ಎಸ್.ಎಸ್.ಕೆ ತರುಣ ಸಂಘದ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ 2025-26ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ನಾರಾಯಣಸಾ ಆರ್.ಕಬಾಡಿ, ಉಪಾಧ್ಯಕ್ಷರಾಗಿ ಶ್ಯಾಮ್ ಎನ್.ಮಿಸ್ಕಿನ್, ಗೌರವ ಕಾರ್ಯದರ್ಶಿಗಳಾಗಿ ಸೋಮಶೇಖರ ಆರ್.ಮೇರವಾಡೆ, ಸಹಕಾರ್ಯದರ್ಶಿಯಾಗಿ ಗಣೇಶ ಎಚ್.ಪವಾರ, ಖಜಾಂಚಿಯಾಗಿ ಶ್ರೀರಾಮ ಎಸ್.ಹಬೀಬ, ಲೆಕ್ಕ ತಪಾಸಿಗರಾಗಿ ಶ್ರೀಕಾಂತ ಜೆ.ಕಬಾಡಿ ಹಾಗೂ ವ್ಯಾಯಾಮಶಾಲೆ ಚೇರಮನ್‌ರಾಗಿ ಸತ್ಯನಾರಾಯಣ ಎಫ್.ಮೇರವಾಡೆ ಇವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಆಯ್ಕೆಯಾದ ಎಲ್ಲ ಪದಾಧಿಕಾರಿಗಳಿಗೆ ಪಂಚ ಟ್ರಸ್ಟ ಕಮಿಟಿ, ತರುಣ ಸಂಘ, ಮಹಿಳಾ ಮಂಡಳದ ಸದಸ್ಯರು, ಪದಾಧಿಕಾರಿಗಳು ಸೇರಿದಂತೆ ಸಮಾಜಬಾಂಧವರು ಅಭಿನಂದಿಸಿದ್ದಾರೆ.

ಮೂಲ ಉದ್ದೇಶವನ್ನು ಮರೆಯದೇ ಹಬ್ಬ ಆಚರಿಸಿ

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ತ್ಯಾಗ, ಬಲಿದಾನದ ಪ್ರತೀಕವಾದ ಮೊಹರಂ ಹಬ್ಬವನ್ನು ಹಿಂದೂ-ಮುಸ್ಲಿಂ ಬಾಂಧವರು ಪರಸ್ಪರ ಸ್ನೇಹ, ಸೌಹಾರ್ದತೆ, ಶಾಂತಿಯಿಂದ ಆಚರಿಸಬೇಕು ಎಂದು ಸಿಪಿಐ ನಾಗರಾಜ ಮಾಡಳ್ಳಿ ಹೇಳಿದರು.

ಅವರು ಪಟ್ಟಣದ ಪೊಲೀಸ್ ಠಾಣೆಯಲ್ಲಿ ಜು.1ರಿಂದ ಪ್ರಾರಂಭಗೊಳ್ಳಲಿರುವ ಮೊಹರಂ ಹಬ್ಬದ ಪ್ರಯುಕ್ತ ಕರೆದ ಸಾರ್ವಜನಿಕ ಶಾಂತಿ ಸಭೆಯಲ್ಲಿ ಮಾತನಾಡಿ, ಹಬ್ಬಗಳ ಆಚರಣೆಯ ನೆಪದಲ್ಲಿ ಯಾವುದಕ್ಕೂ ಅಪಚಾರವಾಗದಂತೆ ಹಬ್ಬಗಳ ಮೂಲ ಉದ್ದೇಶವನ್ನು ಗಮನದಲ್ಲಿಟ್ಟುಕೊಂಡು ಶಿಸ್ತು, ಸಂಯಮ ಮತ್ತು ಸಾಂಪ್ರದಾಯಿಕವಾಗಿ ಹಬ್ಬಗಳನ್ನು ಆಚರಿಸಬೇಕು. ಧರ್ಮ, ಸಂಸ್ಕೃತಿಯ ಪ್ರತೀಕವಾದ ಹಬ್ಬಗಳ ಆಚರಣೆಯ ನೆಪದಲ್ಲಿ ಕಾನೂನು ಬಾಹಿರ ಚಟುವಟಿಕೆಗಳು ಮತ್ತು ಶಾಂತಿ-ಸುವ್ಯವಸ್ಥೆ, ಸೌಹಾರ್ದತೆ ಕದಡುವ ಯಾವುದೇ ಘಟನೆಗಳು ಜರುಗಿದರೆ ತಪ್ಪಿತಸ್ಥರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.

ಅಂಜುಮನ್ ಕಮಿಟಿ ಅಧ್ಯಕ್ಷ ಎಂ.ಎಂ ಗದಗ ಮಾತನಾಡಿ, ಪಟ್ಟಣ ಸೇರಿ ತಾಲೂಕಿನಲ್ಲಿ ಮೊಹರಂ ಹಬ್ಬವನ್ನು ಎಲ್ಲ ಸಮುದಾಯದವರು ಒಗ್ಗೂಡಿ ಶೃದ್ಧಾ, ಭಕ್ತಿ ವಿಜೃಂಬಣೆಯಿಂದ ಆಚರಣೆ ಮಾಡುತ್ತಾರೆ. ಭಾವೈಕ್ಯತೆಗೆ ಹೆಸರಾದ ಪಟ್ಟಣದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗೆ ಆಸ್ಪದ ನೀಡದೆ ಎಲ್ಲರೂ ಸಹೋದರ ಭಾವನೆಯೊಂದಿಗೆ ಶಾಂತ ರೀತಿಯಲ್ಲಿ ಹಬ್ಬದ ಆಚರಣೆ ಮಾಡೋಣ ಎಂದರು.

ಪಿಎಸ್‌ಐ ನಾಗರಾಜ ಗಡದ ಸ್ವಾಗತಿಸಿ ಮಾತನಾಡಿದರು. ಕ್ರೈಂ ಪಿಎಸ್‌ಐ ಟಿ.ಕೆ. ರಾಠೋಡ, ದಾದಾಪೀರ ಮುಚ್ಚಾಲೆ, ಎಸ್.ಕೆ. ಹವಾಲ್ದಾರ್, ಸುರೇಶ ನಂದೆಣ್ಣವರ, ಎಂ.ಎಂ. ಮುಳಗುಂದ, ಶರಣು ಗೋಡಿ, ಇಸ್ಮಾಯಿಲ್ ಆಡೂರ, ಅಮರೇಶ ಗಾಂಜಿ, ಬಸವರಾಜ ಕಲ್ಲೂರ, ದಾದಾಪೀರ ತಂಬಾಕ, ಕಲಂದರ ಸೂರಣಗಿ, ಕಾರ್ತಿಕ ಹಿರೇಮಠ, ಪಕ್ಕೀರೇಶ ಭಜಕ್ಕನವರ ಸೇರಿ ಹಿಂದೂ-ಮುಸ್ಲಿಂ ಭಾಂದವರಿದ್ದರು. ನಂದೀಶ ಮಠಪತಿ ನಿರ್ವಹಿಸಿದರು.

ಒತ್ತುವರಿ ಮಾರ್ಗವನ್ನು ತೆರವುಗೊಳಿಸಲು ಮನವಿ

ವಿಜಯಸಾಕ್ಷಿ ಸುದ್ದಿ, ಹರಪನಹಳ್ಳಿ: ಒತ್ತುವರಿಯಾಗಿರುವ ಅರಣ್ಯ ಮಾರ್ಗವನ್ನು ತೆರವುಗೊಳಿಸಿ ಕುರಿಗಾಹಿಗಳಿಗೆ ಓಡಾಡಲು ಅನುಕೂಲ ಮಾಡಿಕೊಡಬೇಕೆಂದು ಅಗ್ರಹಿಸಿ ಹಲುವಾಗಲು, ಕಣಿವಿ ಮತ್ತು ಗರ್ಭಗುಡಿ ಗ್ರಾಮದ ಕುರಿಗಾಹಿಗಳು ತಾಲೂಕು ವಲಯ ಅರಣ್ಯಾಧಿಕಾರಿ ರಾಜು ಗೊಂದ್ಕರ್ ಅವರಿಗೆ ಮನವಿ ಸಲ್ಲಿಸಿದರು.

ಮಳೆಗಾಲದಲ್ಲಿ ಕುರಿಗಳನ್ನು ಮೇಯಿಸಲು ಅರಣ್ಯ ಪ್ರದೇಶಕ್ಕೆ ಹೋಗಲು ಒಂದೇ ದಾರಿಯಿದ್ದು, ಅದನ್ನು ಕೆಲವರು ಒತ್ತುವರಿ ಮಾಡಿಕೊಂಡಿದ್ದಾರೆ. ಇದರಿಂದ ಗುಡ್ಡಕ್ಕೆ ಹೋಗಲು ತೊಂದರೆಯಾಗುತ್ತಿದೆ. ಆದ್ದರಿಂದ, ಒತ್ತುವರಿಯಾಗಿರುವ ಅರಣ್ಯ ಭೂಮಿಯನ್ನು ತೆರವುಗೊಳಿಸಿ ಕುರಿಗಾಹಿಗಳಿಗೆ ಅನುಕೂಲ ಮಾಡಿಕೊಡಬೇಕೆಂದು ಒತ್ತಾಯಿಸಿದರು.

ಮನವಿ ಸ್ವೀಕರಿಸಿದ ವಲಯ ಅರಣ್ಯಾಧಿಕಾರಿಗಳು, ಅರಣ್ಯ ಭೂಮಿ ಒತ್ತುವರಿಗೆ ಸಂಬಂಧಪಟ್ಟಂತೆ ದಾಖಲಾತಿಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗವುದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಕುರುಬ ಸಮಾಜದ ಮಾಜಿ ಅಧ್ಯಕ್ಷ ವೈ.ಕೆಬಿ. ದುರುಗಪ್ಪ, ಪುರಸಭೆ ನಾಮನಿರ್ದೇಶಿತ ಸದಸ್ಯ ಎಚ್.ವಸಂತಪ್ಪ, ಹಲುವಾಗಲು ಗ್ರಾ.ಪಂ ಮಾಜಿ ಅಧ್ಯಕ್ಷ ಎಂ.ದ್ಯಾಮಪ್ಪ, ಭೂತಪ್ಪರ ಗಂಗಪ್ಪ, ಮೇಡ್ಲೆರಿ ನಿಂಗಪ್ಪ, ಬಿ.ನಾಗರಾಜ, ರುದ್ರಪ್ಪ, ಪರಸಪ್ಪ ಸೇರಿದಂತೆ ಇತರರು ಇದ್ದರು.

ಬೀದಿ ಬದಿ ವ್ಯಾಪಾರಸ್ಥರ ಸಂಘಕ್ಕೆ ಕೊಠಡಿ ನೀಡಲು ಮನವಿ

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ಭಾನು ಮಾರ್ಕೆಟ್‌ನ ವಾಣಿಜ್ಯ ಸಂಕೀರ್ಣದ ಮೇಲಂತಸ್ತಿನ ಕಟ್ಟಡದಲ್ಲಿ ಖಾಲಿ ಇರುವ ಕೊಠಡಿಯನ್ನು ಬೀದಿ ಬದಿ ವ್ಯಾಪಾರಸ್ಥರ ಸಂಘದ ಕಾರ್ಯಾಲಯಕ್ಕೆ ಬಳಸಿಕೊಳ್ಳಲು ಕೊಡಬೇಕೆಂದು ಬೀದಿ ಬದಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಮಂಜುನಾಥ ಹೊಗೆಸೊಪ್ಪಿನ ಅವರ ನೇತೃತ್ವದಲ್ಲಿ ಪುರಸಭೆಗೆ ಮನವಿ ಸಲ್ಲಿಸಲಾಯಿತು.

ಮನವಿ ಪತ್ರದಲ್ಲಿ, ಮುಖ್ಯ ಬಜಾರ್‌ನಲ್ಲಿನ ಪುರಸಭೆ ವಾಣಿಜ್ಯ ಸಂಕೀರ್ಣದ ಮೇಲಂತಸ್ತಿನಲ್ಲಿ ಹಲವು ಕೊಠಡಿಗಳು ಖಾಲಿ ಇವೆ. ಬೀದಿ ಬದಿ ವ್ಯಾಪಾರಸ್ಥರ ಸಂಘಕ್ಕೆ ಇಲ್ಲಿರುವ ಕೊಠಡಿ ನೀಡಿದರೆ ಅನಕೂಲವಾಗುತ್ತದೆ. ಈಗಾಗಲೇ ಒಂದಷ್ಟು ಸಂಘಕ್ಕೆ ಕೊಠಡಿ ನೀಡಲಾಗಿದ್ದು, ನಮ್ಮ ಮನವಿ ಪುರಸ್ಕರಿಸಿ ಅವಕಾಶ ಕೊಡಬೇಕು. ಖಾಲಿ ಇರುವ ಕೊಠಡಿಯನ್ನು ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡಿಕೊಳ್ಳುತ್ತೇವೆ ಎಂದು ಕೋರಲಾಗಿದೆ. ಮನವಿ ಸ್ವೀಕರಿಸಿದ ಮುಖ್ಯಾಧಿಕಾರಿ ಮಾಂತೇಶ ಬೀಳಗಿ, ತಮ್ಮ ಮನವಿಯನ್ನು ಆಡಳಿತ ಮಂಡಳಿಯ ಗಮನಕ್ಕೆ ತಂದು ನಿರ್ಧರಿಸಲಾಗುವುದು ಎಂದರು.

ಈ ವೇಳೆ ಮುನೀರ ಸಿದ್ಧಾಪುರ, ಹನಮಂತಪ್ಪ ರಾಮಗೇರಿ, ಮೆಹಬೂಬ ಜಮಾಲಾಖಾನವರ, ಪರಶೂರಾಮ ಬಳ್ಳಾರಿ, ಸೋಮಪ್ಪ ಗೌರಿ, ಲಕ್ಷ್ಮಣ ಮುಳಗುಂದ, ಶಬ್ಬೀರ ಶಿರಹಟ್ಟಿ, ದಾದಪೀರ ಬೆಂಡಿಗೇರಿ ಮುಂತಾದವರಿದ್ದರು.

ವಿದ್ಯಾರ್ಥಿ ಜೀವನ ಸುವರ್ಣ ಯುಗವಿದ್ದಂತೆ

ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ: ಮನುಷ್ಯನ ಬದುಕಿನಲ್ಲಿ ವಿದ್ಯಾರ್ಥಿ ಜೀವನ ಅಮೂಲ್ಯವಾಗಿದ್ದು, ವಿದ್ಯಾರ್ಥಿಗಳು ಗುರುಗಳು ತೋರಿಸುವ ಉತ್ತಮ ಮಾರ್ಗದಲ್ಲಿ ಸಾಗಬೇಕು ಹಾಗೂ ಚೆನ್ನಾಗಿ ವಿದ್ಯಾಭ್ಯಾಸ ಮಾಡಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ನಿವೃತ್ತ ಪ್ರಾಚಾರ್ಯ ಬಿ.ಎಸ್. ಚೇಗರಡ್ಡಿ ಹೇಳಿದರು.

ಗಜೇಂದ್ರಗಡ ನಗರದ ಪುರ್ತಗೇರಿ ಕ್ರಾಸ್ ಬಳಿ ಇರುವ ಶ್ರೀ ಅನ್ನದಾನೇಶ್ವರ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಪ್ರಸಕ್ತ ಸಾಲಿನ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಹಾಗೂ ವಿವಿಧ ಸಾಂಘಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭದ ಅಂಗವಾಗಿ ನಡೆದ `ಸಿಂಧೂರ-2025ʼ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಸಮಾಜದಲ್ಲಿ ಮೌಲ್ಯಯುತ ಬದುಕನ್ನು ನಡೆಸುವಂತಾಗಲು ಶಿಕ್ಷಣ ಬಹುಮುಖ್ಯ ಪಾತ್ರ ವಹಿಸುತ್ತದೆ. ಅಂತಹ ಶಿಕ್ಷಣ ಪಡೆಯುವ ವಿದ್ಯಾರ್ಥಿ ಜೀವನ ಸುವರ್ಣಯುಗ ಇದ್ದಂತೆ. ಆದ್ದರಿಂದ ಈ ಸಮಯವನ್ನು ವ್ಯರ್ಥ ಮಾಡದೆ ಶಿಕ್ಷಣದೊಂದಿಗೆ ಸಂಸ್ಕಾರ ಹೊಂದಿ ತಂದೆ-ತಾಯಿಗೆ, ಗುರು-ಹಿರಿಯರಿಗೆ ಗೌರವ ನೀಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಪಿಯು ಕಾಲೇಜಿನ ಚೇರಮನ್ ವೀರಯ್ಯ ವ್ಹಿ.ವಸ್ತçದ ಮಾತನಾಡಿ, ಅಂಕ ಗಳಿಕೆ ಜೊತೆಗೆ ಮಕ್ಕಳಿಗೆ ಕೌಶಲ್ಯ, ಸಂವಹನ ಕಲೆ, ಕ್ರಿಡೆ ಹಾಗೂ ಸಾಂಘಿಕ ಚಟುವಟಿಕೆಗಳಲ್ಲಿ ತಮ್ಮ ಪ್ರತಿಭೆಯನ್ನು ವೃದ್ಧಿಸಲು ಒತ್ತು ಕೊಡಬೇಕು. ದಿನ ನಿತ್ಯದ ಅಭ್ಯಾಸದ ಜೊತೆಗೆ ಸ್ಪರ್ಧಾತ್ಮ ವಿಷಯಗಳ ಬಗ್ಗೆ ಓದಿದರೆ ಗೆಲುವು ನಿಶ್ಚಿತ ಎಂದರು.

ಪಿಯು ಪ್ರಾಚಾರ್ಯ ವಸಂತರಾವ್ ಗಾರಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಕಳೆದ ಸಾಲಿನ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು, ಆಡಳಿತ ಮಂಡಳಿಯವರನ್ನು ಸನ್ಮಾನಿಸಲಾಯಿತು. ಆಡಳಿತ ಮಂಡಳಿ ಸದಸ್ಯರಾದ ಸದಾಶಿವ ಕರಡಿ, ಕಿವುಡ ಮತ್ತು ಮೂಕ ಮಕ್ಕಳ ವಸತಿಯುತ ಶಾಲೆಯ ಚೇರಮನ್ ಶರಣಪ್ಪ ಕೆ.ರೇವಡಿ, ಅನ್ನದಾನೇಶ್ವರ ಆಂಗ್ಲ ಮಾಧ್ಯಮ ಶಾಲೆಯ ಚೇರನ್ನರಾದ ಪ್ರಭು ಎನ್.ಚವಡಿ, ಐಟಿಐ ಪ್ರಾಚಾರ್ಯ ಎ.ಪಿ. ಗಾಣಗೇರ, ಪದವಿ ಪ್ರಾಚಾರ್ಯ ಬಸಯ್ಯ ಎಸ್.ಹಿರೇಮಠ, ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷ ಮಂಜುನಾಥ ಕಾಡದ ಹಾಗೂ ಸಿಬ್ಬಂದಿಗಳು, ಪಾಲಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಅನ್ನದಾನ ವಿಜಯ ವಿದ್ಯಾ ಪ್ರಸಾರಕ ಸಮಿತಿಯ ಶೈಕ್ಷಣಿಕ ಸಲಹೆಗಾರ ಬಿ.ಎಸ್. ಗೌಡರ ಮಾತನಾಡಿ, ವಿದ್ಯಾರ್ಥಿಗಳು ಯಾವುದೇ ದುಶ್ಚಟಕ್ಕೆ ಬಲಿಯಾಗಿ ಜೀವನ ಹಾಳು ಮಾಡಿಕೊಳ್ಳುಬಾರದು. ಉತ್ತಮ ಸ್ನೇಹಿತರನ್ನು ಸಂಪಾದಿಸಿ ಉತ್ತಮ ಹವ್ಯಾಸಗಳನ್ನು ಅಳವಡಿಸಿಕೊಳ್ಳಬೇಕು. ವಿದ್ಯಾರ್ಥಿ ಜೀವನದಲ್ಲಿ ಪುಸ್ತಕಗಳೇ ನಿಮ್ಮ ಸಹಪಾಠಿಗಳಾಗಿ ಇರಬೇಕು ಎಂದರು.

ಎಸ್‌ಎಸ್‌ಎಲ್‌ಸಿ ಪರೀಕ್ಷೆ-3 ವ್ಯವಸ್ಥಿತವಾಗಿ ಜರುಗಿಸಿ

ವಿಜಯಸಾಕ್ಷಿ ಸುದ್ದಿ, ಗದಗ: ಜಿಲ್ಲೆಯಲ್ಲಿ ಜುಲೈ 5ರಿಂದ 12ರವರೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ-3 ಜರುಗಲಿದ್ದು, ಪರೀಕ್ಷೆಗಳನ್ನು ವ್ಯವಸ್ಥಿತವಾಗಿ ಹಾಗೂ ಪಾರದರ್ಶಕವಾಗಿ ನಡೆಸಬೇಕೆಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಂಗಳವಾರ ಎಸ್‌ಎಸ್‌ಎಲ್‌ಸಿ ಪರೀಕ್ಷೆ-3ರ ಕುರಿತು ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪರೀಕ್ಷೆಗಳಲ್ಲಿ ಯಾವುದೇ ನಕಲು, ಅವ್ಯವಹಾರ, ಅಕ್ರಮ ನಡೆಯದಂತೆ ಕ್ರಮ ವಹಿಸಬೇಕು. ಪರೀಕ್ಷಾ ಕೇಂದ್ರಗಳಲ್ಲಿ ಸೂಕ್ತ ಆಸನದ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ, ವಿದ್ಯುತ್ ಸರಬರಾಜು ಸೇರಿದಂತೆ ಮೂಲಭೂತ ಸೌಲಭ್ಯ ಇರುವಂತೆ ನೋಡಿಕೊಳ್ಳಬೇಕು. ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಅಳವಡಿಕೆಗೆ ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭರತ್ ಎಸ್ ಮಾತನಾಡಿ, ಪರೀಕ್ಷಾ ಸಮಯದಲ್ಲಿ ಯಾವುದೇ ಲೋಪದೋಷಗಳಾಗದಂತೆ ಸಂಬಂಧಿತ ಅಧಿಕಾರಿಗಳು ನಿಗಾ ವಹಿಸಿ ಕಾರ್ಯ ನಿರ್ವಹಿಸಬೇಕು ಎಂದು ಸೂಚಿಸಿದರು.

ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಆರ್.ಎಸ್. ಬುರುಡಿ ಮಾತನಾಡಿ, ಎಸ್‌ಎಸ್‌ಎಲ್‌ಸಿ ಪರೀಕ್ಷೆ-3 ಪರೀಕ್ಷೆಗಳು ಜುಲೈ 5ರಿಂದ 12ರವರೆಗೆ ಜಿಲ್ಲೆಯ 12 ಪರೀಕ್ಷಾ ಕೇಂದ್ರಗಳಲ್ಲಿ ಜರುಗಲಿದ್ದು. ಒಟ್ಟು 3528 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಪರೀಕ್ಷೆಗಳನ್ನು ವ್ಯವಸ್ಥಿತವಾಗಿ ಹಾಗೂ ಅಚ್ಚುಕಟ್ಟಾಗಿ ಜರುಗಿಸಲು ಸಕಲ ಸಿದ್ಧತೆ ಮಾಡಲಾಗಿದೆ ಎಂದು ಸಭೆಗೆ ವಿವರಿಸಿದರು.

ಸಭೆಯಲ್ಲಿ ಶಾಲಾ ಶಿಕ್ಷಣ ಇಲಾಖೆಯ ಜಿ.ಎಲ್. ಬಾರಾಟಕ್ಕೆ ಸೇರಿದಂತೆ ಪರೀಕ್ಷಾ ಕೇಂದ್ರದ ಮುಖ್ಯಸ್ಥರು ಹಾಜರಿದ್ದರು.

ಪರೀಕ್ಷಾ ಕೇಂದ್ರಗಳ ವಿವರ

ಗದುಗಿನ ವಿಡಿಎಸ್‌ಟಿ ಬಾಲಕಿಯರ ಸಂಯುಕ್ತ ಪ.ಪೂ ಕಾಲೇಜು, ಬಸವೇಶ್ವರ ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆ, ವಿಡಿಎಸ್‌ಟಿ ಬಾಲಕರ ಸಂಯುಕ್ತ ಪ.ಪೂ ಕಾಲೇಜು, ಮುಳಗುಂದದ ಎಸ್‌ಜೆಜೆಎಮ್ ಪ.ಪೂ ಕಾಲೇಜು, ಕಳಸಾಪೂರದ ಬ್ರೈಟ್ ಹಾರಿಝೋನ್ ಪ್ರೌಢಶಾಲೆ, ಮುಂಡರಗಿಯ ಜ.ಅ. ಪ್ರೌಢಶಾಲೆ, ಮುಂಡರಗಿಯ ವಿ.ಜಿ. ಲಿಂಬಿಕಾಯಿ ಪ್ರೌಢಶಾಲೆ, ನರಗುಂದದ ನವೋದಯ ಪ್ರೌಢಶಾಲೆ, ರೋಣದ ವಿ.ಎಫ್. ಪಾಟೀಲ ಎಸ್.ಎಸ್, ಗಜೇಂದ್ರಗಡದ ಸರ್ಕಾರಿ ಬಾಲಕಿಯರ ಪ್ರೌಢಶಾಲೆ, ಲಕ್ಷ್ಮೇಶ್ವರದ ಉಮಾವಿದ್ಯಾಲಯ ಮುನ್ಸಿಪಲ್ ಪ್ರೌಢಶಾಲೆ, ಶಿರಹಟ್ಟಿಯ ಎಫ್.ಎಮ್. ಡಬಾಲಿ ಸಂಯುಕ್ತ ಪ.ಪೂ ಕಾಲೇಜು.

ನಾನು ನಿನ್ನನ್ನು ಪ್ರೀತಿಸುತ್ತೇನೆ ಅನ್ನೋದ್ರಲ್ಲಿ ಲೈಂಗಿಕ ಉದ್ದೇಶವಿಲ್ಲ: ಬಾಂಬೆ ಹೈಕೋರ್ಟ್

ಮುಂಬೈ:- I Love You ಅನ್ನೋದ್ರಲ್ಲಿ ಲೈಂಗಿಕ ಉದ್ದೇಶವಿಲ್ಲ ಎಂದು ಬಾಂಬೆ ಹೈಕೋರ್ಟ್‌ನ ನಾಗ್ಪುರ ಪೀಠ ಅಭಿಪ್ರಾಯಪಟ್ಟಿದೆ.

ವ್ಯಕ್ತಿಯೊಬ್ಬ ಕಳೆದ 10 ವರ್ಷಗಳ ಹಿಂದೆ 17 ವರ್ಷದ ಬಾಲಕಿಯೊಬ್ಬಳ ಕೈಹಿಡಿದು ‘I Love You’ ಎಂದು ಹೇಳಿದ್ದಕ್ಕೆ ಲೈಂಗಿಕ ಕಿರುಕುಳ ಆರೋಪದಡಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ಸೆಷನ್ ನ್ಯಾಯಾಲಯವು, ತಪ್ಪಿತಸ್ಥ ಎಂದು ಪರಿಗಣಿಸಿ ಪೋಕ್ಸೋ ಕಾಯ್ದೆಯಡಿ 2017ರಲ್ಲಿ ಮೂರು ವರ್ಷಗಳ ಜೈಲು ಶಿಕ್ಷೆ ಪ್ರಕಟಿಸಿತ್ತು. ಕೆಳಹಂತದ ನ್ಯಾಯಾಲಯದ ಆದೇಶವನ್ನು ವ್ಯಕ್ತಿಯು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.

ಸೆಷನ್ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸಿದ ಹೈಕೋರ್ಟ್‌, ವ್ಯಕ್ತಿಯ ವಿರುದ್ಧದ ಆರೋಪದಲ್ಲಿ ಯಾವುದೇ ಲೈಂಗಿಕ ಉದ್ದೇಶ ಕಂಡುಬಂದಿಲ್ಲ. ‘ನಾನು ನಿನ್ನನ್ನು ಪ್ರೀತಿಸುತ್ತೇನೆ’ ಎಂದು ಪದಗಳಲ್ಲಿ ಹೇಳಿದರೆ ಅದರಲ್ಲಿ ಯಾವುದೇ ಲೈಂಗಿಕ ಉದ್ದೇಶ ಇರುವುದಿಲ್ಲ ಎಂದು ನ್ಯಾ. ಊರ್ಮಿಳಾ ಜೋಶಿ ಫಾಲ್ಕೆ ಅವರಿದ್ದ ಪೀಠ ತನ್ನ ಆದೇಶದಲ್ಲಿ ಹೇಳಿದೆ.

ದಾನಿಗಳಿಗೆ ಪುಣ್ಯದ ಫಲ ಪ್ರಾಪ್ತವಾಗುತ್ತದೆ

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಅನ್ನ, ಅಕ್ಷರ, ಆಶ್ರಯ ತ್ರಿವಿಧ ದಾಸೋಹ ಸೇವೆ ಮಾಡುತ್ತಿರುವ ಮಠಮಾನ್ಯಗಳಿಗೆ ಭಕ್ತರೇ ಆಧಾರ ಸ್ತಂಭ. ಶತಮಾನಗಳಿಂದಲೂ ಮಠಮಾನ್ಯಗಳು, ಗುರುಕುಲಗಳು ನಡೆಸುತ್ತಿರುವ ಸೇವೆ ತನು-ಮನ-ಧನದಿ ಕೈ ಜೋಡಿಸುತ್ತಿರುವ ದಾನಿಗಳಿಗೆ ಪುಣ್ಯದ ಫಲ ಪ್ರಾಪ್ತವಾಗುತ್ತದೆ ಎಂದು ಹೂವಿನ ಶಿಗ್ಲಿ ವಿರಕ್ತಮಠದ ಶ್ರೀ ಚನ್ನವೀರ ಮಹಾಸ್ವಾಮಿಗಳು ಹೇಳಿದರು.

ಅವರು ಭಾನುವಾರ ಹೂವಿನಶಿಗ್ಲಿ ಮಠದ ಗುರುಕುಲದಲ್ಲಿನ ನೂರಾರು ಅನಾಥ, ಬಡಮಕ್ಕಳ ದಾಸೋಹ ಸೇವೆಗೆ ಹಲವು ವರ್ಷದಿಂದ 6 ತಿಂಗಳಿಗೊಮ್ಮೆ ಲಕ್ಷಾಂತರ ರೂಗಳ ದಾಸೋಹ ಸೇವೆ ನೀಡುವ ಕಲಬುರ್ಗಿ ತಾಲೂಕಿನ ಸೋನಾಳ ಗ್ರಾಮದ ವಿಜಯಕುಮಾರ ಸೂರ್ಯಕಾಂತ ಬಿರಾದಾರ ಅವರಿಂದ ದಿನಸಿ ಸ್ವೀಕರಿಸಿದ ಗ್ರಾಮಸ್ಥರು ಮತ್ತು ಗುರುಕುಲ ಮಕ್ಕಳಿಂದ ಹಮ್ಮಿಕೊಳ್ಳಲಾಗಿದ್ದ ಸತ್ಕಾರ ನೆರವೇರಿಸಿ ಮಾತನಾಡುತ್ತಿದ್ದರು.

ಪ್ರಸ್ತುತ ದಿನಮಾನಗಳಲ್ಲಿ ಎಲ್ಲ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ. ಈ ಸಂದರ್ಭದಲ್ಲಿ ಸರ್ಕಾರದ ಸೌಲಭ್ಯವಿಲ್ಲದ ಮಠದ ಗುರುಕುಲದಲ್ಲಿನ 300ಕ್ಕೂ ಹೆಚ್ಚು ಮಕ್ಕಳಿಗೆ ಗ್ರಾಮಸ್ಥರ, ಭಕ್ತರ ಸಹಾಯ-ಸಹಕಾರವಿದ್ದರೂ ನಿತ್ಯ ತ್ರಿವಿಧ ದಾಸೋಹ ಸೇವೆ ಅತ್ಯಂತ ಕಷ್ಟವಾಗಿದೆ. ಹರ ಮುನಿದರೂ ಗುರು ಕಾಯುವರು ಎಂಬಂತೆ ಲಿಂ.ನಿರಂಜನ ಜಗದ್ಗುರುಗಳ ಆಶೀರ್ವಾದಿಂದ ವಿಜಯಕುಮಾರ ಅವರಂತಹ ಪರಮ ಶ್ರೇಷ್ಠ ಭಕ್ತರು, ದಾನಿಗಳಿಂದ ಈ ಮಕ್ಕಳ ಸೇವೆ ಮಾಡಲು ಸಾಧ್ಯವಾಗುತ್ತಿದೆ. ವಿಜಯಕುಮಾರ ಕಲಬುರ್ಗಿ ತಾಲೂಕಿನ ಸೋನಾಳ ಗ್ರಾಮದ ಶ್ರೀಮಠದ ಭಕ್ತರಾಗಿದ್ದು, ಸದ್ಯ ಪುಣೆಯಲ್ಲಿ ಉದ್ಯಮ ನಡೆಸುತ್ತಿದ್ದಾರೆ. ಪ್ರತಿ 6 ತಿಂಗಳಿಗೊಮ್ಮೆ ತಪ್ಪದೇ 8 ಲಕ್ಷ ರೂ ಮೊತ್ತದ ಶ್ರೇಷ್ಠ ಗುಣಮಟ್ಟದ ದಿನಸಿ ಸೇವೆ ಮಾಡುತ್ತಿದ್ದಾರೆ. ಇದರಿಂದ ನೂರಾರು ಅನಾಥ, ಬಡ ಮಕ್ಕಳು ಸಂತೃಪ್ತರಾಗಿದ್ದು ಗುರುಕುಲದ ತ್ರಿವಿಧ ದಾಸೋಹದ ಶ್ರೇಷ್ಠ ಪರಂಪರೆ ಮುಂದುವರೆಯಲೂ ಅನುಕೂಲವಾಗಿದೆ. ಅವರ ಈ ನಿಸ್ವಾರ್ಥ, ಪುಣ್ಯದ ಸೇವೆಗೆ ಶ್ರೀಮಠದ ಆಶೀರ್ವಾದ ಮತ್ತು ಮಕ್ಕಳ ಶುಭ ಹಾರೈಕೆಯಿದ್ದು ಭಗವಂತ ಅವರಿಗೆ ಇನ್ನಷ್ಟು ಶಕ್ತಿ ನೀಡಲಿ ಎಂದು ಹಾರೈಸಿದರು.

ಈ ವೇಳೆ ಡಾ. ಚಂದ್ರು ಲಮಾಣಿ ಮಾತನಾಡಿದರು. ಸರೋಜಾ ಬನ್ನೂರ, ಲಲಿತಾ ಮೆಕ್ಕಿ, ವಿಜಯಲಕ್ಷ್ಮೀ ಬಾಳಿಕಾಯಿ, ಶಾರದಾ ಮಹಾಂತಶೆಟ್ಟರ, ಅಶೋಕ ಶಿರಹಟ್ಟಿ, ನೆಹರು ಬಿರಾದಾರ, ಲೋಕೇಶ ಹನಮಶೆಟ್ಟಿ, ಸಂಜುಕುಮಾರ ಪಾಟೀಲ, ಶಿವಕುಮಾರ ಕೌಡಗಾಂವೆ, ಡಾ. ಪರಮೇಶ್ವರ ಬಿರಾದಾರ, ನಾಗಶೆಟ್ಟಿ ಕಾರಮುಂಗೆ, ರಾಜು ಲಾಂಡಗೆ, ರಾಜು ಬಿರಾದಾರ, ನಿಂಗಪ್ಪ ಹೆಬಸೂರ, ಅನ್ನದಾನಯ್ಯ ಹಿರೇಮಠ, ದೇವೇಂದ್ರಪ್ಪ ಸಣ್ಣ ಬಾಳಪ್ಪನವರ, ಆರ್.ಬಿ. ಬಡಿಗೇರ, ಪಿ.ಎಚ್. ಪಾಟೀಲ ಸೇರಿ ಶಿಕ್ಷಕ ವೃಂದ, ಸಿಬ್ಬಂದಿ, ಗುರುಕುಲದ ಮಕ್ಕಳು ಹಾಜರಿದ್ದರು.

ಶ್ರೀಮಠದ ಗೌರವ ಸ್ವೀಕರಿಸಿದ ವಿಜಯಕುಮಾರ ಎಸ್.ಬಿರಾದಾರ ಮಾತನಾಡಿ, ಮಕ್ಕಳ ಸೇವೆ ದೇವರ ಸೇವೆ ಎಂಬುದು ನನ್ನ ಹಿರಿಯರಿಂದ ಕಲಿತಿದ್ದೇನೆ. ಶ್ರೀಮಠವು ಬಡ, ಅನಾಥ ಮಕ್ಕಳಿಗಾಗಿ ಮಾಡುತ್ತಿರುವ ಸೇವೆಗೆ ತಮ್ಮದೊಂದು ಅಳಿಲು ಸೇವೆ. ಈ ಸೇವೆಗೆ ಅವಕಾಶ ಸಿಕ್ಕಿರುವುದು ನನ್ನ ಭಾಗ್ಯ ಮತ್ತು ಸಂತೃಪ್ತಿ ತಂದಿದೆ. ಈ ಸೇವೆಯನ್ನು ಇನ್ನಷ್ಟು ಹೆಚ್ಚಿಸುವ ಶಕ್ತಿ ದೇವರು ನೀಡಲೆಂದು ಧನ್ಯತಾಭಾವದಿಂದ ಪ್ರಾರ್ಥಿಸುವೆ. ಗುರುಕುಲದ ಮಕ್ಕಳು ಉತ್ತಮ ನಾಗರಿಕರಾಗಿ, ನಾಡಿಗೆ ಬೆಳಕಾಗಿ ಶ್ರೀಮಠದ ಕೀರ್ತಿಗೆ ಕಾರಣರಾಗಲಿ ಎಂಬುದು ನನ್ನ ಕೋರಿಕೆ ಎಂದರು.

ಗೃಹರಕ್ಷಕರ ಪಾತ್ರ ಅತ್ಯಂತ ಮಹತ್ವದ್ದು

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಜೀವನದಲ್ಲಿ ಎದುರಾಗುವ ಎಡರು-ತೊಡರುಗಳನ್ನು ಸಮರ್ಥವಾಗಿ ಎದುರಿಸಿ ಸಮರ್ಪಕವಾಗಿ ಮುನ್ನಡೆದಾಗ ನಮಗೆ ಯಶಸ್ಸು ಸಿಗಲು ಸಾಧ್ಯ. ಗೃಹರಕ್ಷಕ ಸಿಬ್ಬಂದಿಗಳು ಕೂಡ ತಮ್ಮೆಲ್ಲ ಸಮಸ್ಯೆಗಳನ್ನು ಮೆಟ್ಟಿ ನಿಂತು ಸಮಾಜಕ್ಕಾಗಿ ದುಡಿಯುತ್ತಿದ್ದಾರೆ. ಸ್ವಸ್ಥ ಸಮಾಜ ನಿರ್ಮಾಣದಲ್ಲಿ ಗೃಹರಕ್ಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಶಾಸಕ, ರಾಜ್ಯ ಖನಿಜ ಅಭಿವೃದ್ಧಿ ನಿಗಮದ ಅಧ್ಯಕ್ಷ. ಜಿ.ಎಸ್. ಪಾಟೀಲ ಹೇಳಿದರು.

ಅವರು ಸ್ಥಳೀಯ ಗಾಂಧಿ ಭವನದಲ್ಲಿ ನಡೆದ ಗೃಹರಕ್ಷಕ ದಳದ 21ನೇ ವಾರ್ಷಿಕೋತ್ಸವ ಮತ್ತು ಕಾರ್ಯಾಲಯದ ಉದ್ಘಾಟನೆ ಹಾಗೂ ವಿಶ್ವ ಪರಿಸರ ದಿನಾಚರಣೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಭಾರತದ ಆಂತರಿಕ ಭದ್ರತೆಯನ್ನು ಕಾಪಾಡಲು ಹಾಗೂ ಪೊಲೀಸ್ ಇಲಾಖೆಗೆ ಪೂರಕವಾಗಿ ಕಾರ್ಯನಿರ್ವಹಿಸಲು ನೆರವಾಗುವ ನಾಗರಿಕ ಸ್ವಯಂ ಸೇವಕದಳ ಗೃಹ ರಕ್ಷಕದಳವಾಗಿದ್ದು, ಸದಸ್ಯರು ಪೊಲೀಸರಿಗೆ ಸಹಾಯಕರಾಗಿ ಕಾರ್ಯ ನಿರ್ವಹಿಸುವ ಮೂಲಕ ತುರ್ತು ಪರಿಸ್ಥಿಯಲ್ಲಿ ನೆರವಾಗುವ ಮಹತ್ತರ ಸಂಸ್ಥೆ ಇದಾಗಿದೆ ಎಂದರು.

ಕಾರ್ಯಕ್ರಮದ ನೇತೃತ್ವವನ್ನು ಸಿದ್ದನಕೊಳ್ಳದ ಡಾ. ಶ್ರೀ ಶಿವಕುಮಾರ ಮಹಾಸ್ವಾಮಿಗಳು ವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಗೃಹರಕ್ಷಕ ದಳದ ಜಿಲ್ಲಾ ಸಮಾದೇಷ್ಟರಾದ ಎಮ್.ಬಿ. ಸಂಕದ ವಹಿಸಿದ್ದರು. ವೇದಿಕೆ ಮೇಲೆ ರವೀಂದ್ರನಾಥ ದೊಡ್ಡಮೇಟಿ, ಪ.ಪಂ ಅಧ್ಯಕ್ಷ ಫಕೀರಪ್ಪ ಮಳ್ಳಿ, ಉಪಾಧ್ಯಕ್ಷ ಕುಮಾರಸ್ವಾಮಿ ಕೋರಧಾನ್ಯಮಠ, ಸ್ಥಾಯಿ ಸಮಿತಿ ಅಧ್ಯಕ್ಷ ಮುತ್ತಪ್ಪ ನೂಲ್ಕಿ, ಸಿಪಿಐ ಎಸ್.ಎಸ್. ಬೀಳಗಿ, ಪಿಎಸ್‌ಐ ಐಶ್ವರ್ಯ ನಾಗರಾಳ, ಗೃಹರಕ್ಷಕ ದಳದ ನರೇಗಲ್ಲ ಘಟಕದ ಮುಖ್ಯಸ್ಥ ಸುರೇಶ ಹಳ್ಳಿಕೇರಿ, ಪ.ಪಂ ಮುಖ್ಯಾಧಿಕಾರಿ ಮಹೇಶ ನಿಡಶೇಶಿ, ಬಸವರಾಜ ಗೂಳರಡ್ಡಿ, ಜಿಲ್ಲಾ ಬೋಧಕರು, ಗೃಹರಕ್ಷಕ ದಳದ ಕಿರಣಕುಮಾರ ಕಟಗಿ, ಟಿ.ಎಲ್. ರಾಜಕುಮಾರ, ನಿವೃತ್ತ ಶಿಕ್ಷಕ ಎಮ್.ಎಸ್. ಧಡೆಸೂರಮಠ, ಅಂದಪ್ಪ ಬಿಚ್ಚೂರ, ಶಿವನಗೌಡ ಪಾಟೀಲ, ಜಿಲ್ಲಾ ಕರವೇ ಅಧ್ಯಕ್ಷ ಹನಮಂತಪ್ಪ ಅಬ್ಬಿಗೇರಿ ಮುಂತಾದವರಿದ್ದರು.

ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ನರೇಗಲ್ಲ ಹಿರೇಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ, ಸೇವಾ ಮನೋಭಾವವನ್ನು ಮೈಗೂಡಿಸಿಕೊಂಡು ಬಂದಿರುವ ಏಕೈಕ ಸಂಸ್ಥೆಯೇ ಗೃಹರಕ್ಷಕ ದಳವಾಗಿದ್ದು, ನರೇಗಲ್ಲ ಹಾಗೂ ಸುತ್ತಮುತ್ತಲ 20 ಗ್ರಾಮಗಳಲ್ಲೂ ಸೇವೆ ಸಲ್ಲಿಸುತ್ತಿದ್ದು, ಸಾಮಾಜಿಕ ಧಾರ್ಮಿಕ ಕಾರ್ಯಗಳಲ್ಲೂ ಗೃಹರಕ್ಷಕ ದಳದ ಕಾರ್ಯ ಶ್ಲಾಘನೀಯ ಎಂದರು.

error: Content is protected !!