ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಸೋಮೇಶ್ವರ ರಸ್ತೆಯಲ್ಲಿರುವ ಐತಿಹಾಸಿಕ ರಾಮೇಶ್ವರ ದೇವಸ್ಥಾನಕ್ಕೆ ರಾಜ್ಯದ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರ, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಕೆ. ಪಾಟೀಲ ಶನಿವಾರ ಭೇಟಿ ನೀಡಿ ವೀಕ್ಷಿಸಿದರು.
ಗದಗ ನಗರ ಸೇರಿದಂತೆ ಜಿಲ್ಲೆಯಲ್ಲಿ ಅನೇಕ ಐತಿಹಾಸಿಕ, ಮಹತ್ವದ ದೇವಸ್ಥಾನಗಳಿವೆ. ಅವುಗಳ ಜೀರ್ಣೋದ್ಧಾರ ಮಾಡುವ ಮೂಲಕ ಯುವಪೀಳಿಗೆಗೆ ಇತಿಹಾಸದ ಪರಿಚಯ ಮಾಡಿಸಬೇಕಿದೆ ಎಂದು ಸಚಿವರು ಅಭಿಪ್ರಾಯಪಟ್ಟರು.
ರಾಮೇಶ್ವರ ದೇವಸ್ಥಾನದ ಇತಿಹಾಸ ಸೇರಿದಂತೆ ಎಲ್ಲ ವಿಷಯಗಳ ಕುರಿತು ತಿಳಿಸಿಕೊಡುವ ಪ್ರಯತ್ನಗಳಾಗಬೇಕಿದೆ. ಸರ್ಕಾರದಿಂದ ಜೀರ್ಣೋದ್ಧಾರ ಕೈಗೊಳ್ಳುವ ಮೂಲಕ ಮೂಲ ದೇವಸ್ಥಾನದ ರಚನೆಗೆ ತೊಂದರೆಯಾಗದಂತೆ ಮಾಡಲು ಪ್ರಯತ್ನ ಸಾಗಿದೆ. ದೇವಸ್ಥಾನ ಪ್ರದೇಶದ ಸಾರ್ವಜನಿಕರು ಸೂಕ್ತ ಸಹಕಾರ ನೀಡಬೇಕು ಎಂದು ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಈ ಸಂದರ್ಭದಲ್ಲಿ ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ ಬಬರ್ಚಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ. ಅಸೂಟಿ, ತಾಲೂಕಾಧ್ಯಕ್ಷ ಅಶೋಕ ಮಂದಾಲಿ, ಪ್ರಭು ಬುರಬುರೆ, ಸಿದ್ದು ಪಾಟೀಲ, ಎಸ್.ಎನ್. ಬಳ್ಳಾರಿ, ರವಿ ಮೂಲಿಮನಿ, ಫಾರೂಕ್ ಹುಬ್ಬಳ್ಳಿ, ಅ.ದ. ಕಟ್ಟಿಮನಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.