ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಅನ್ನ, ಅಕ್ಷರ, ಆಶ್ರಯ ತ್ರಿವಿಧ ದಾಸೋಹ ಸೇವೆ ಮಾಡುತ್ತಿರುವ ಮಠಮಾನ್ಯಗಳಿಗೆ ಭಕ್ತರೇ ಆಧಾರ ಸ್ತಂಭ. ಶತಮಾನಗಳಿಂದಲೂ ಮಠಮಾನ್ಯಗಳು, ಗುರುಕುಲಗಳು ನಡೆಸುತ್ತಿರುವ ಸೇವೆ ತನು-ಮನ-ಧನದಿ ಕೈ ಜೋಡಿಸುತ್ತಿರುವ ದಾನಿಗಳಿಗೆ ಪುಣ್ಯದ ಫಲ ಪ್ರಾಪ್ತವಾಗುತ್ತದೆ ಎಂದು ಹೂವಿನ ಶಿಗ್ಲಿ ವಿರಕ್ತಮಠದ ಶ್ರೀ ಚನ್ನವೀರ ಮಹಾಸ್ವಾಮಿಗಳು ಹೇಳಿದರು.
ಅವರು ಭಾನುವಾರ ಹೂವಿನಶಿಗ್ಲಿ ಮಠದ ಗುರುಕುಲದಲ್ಲಿನ ನೂರಾರು ಅನಾಥ, ಬಡಮಕ್ಕಳ ದಾಸೋಹ ಸೇವೆಗೆ ಹಲವು ವರ್ಷದಿಂದ 6 ತಿಂಗಳಿಗೊಮ್ಮೆ ಲಕ್ಷಾಂತರ ರೂಗಳ ದಾಸೋಹ ಸೇವೆ ನೀಡುವ ಕಲಬುರ್ಗಿ ತಾಲೂಕಿನ ಸೋನಾಳ ಗ್ರಾಮದ ವಿಜಯಕುಮಾರ ಸೂರ್ಯಕಾಂತ ಬಿರಾದಾರ ಅವರಿಂದ ದಿನಸಿ ಸ್ವೀಕರಿಸಿದ ಗ್ರಾಮಸ್ಥರು ಮತ್ತು ಗುರುಕುಲ ಮಕ್ಕಳಿಂದ ಹಮ್ಮಿಕೊಳ್ಳಲಾಗಿದ್ದ ಸತ್ಕಾರ ನೆರವೇರಿಸಿ ಮಾತನಾಡುತ್ತಿದ್ದರು.
ಪ್ರಸ್ತುತ ದಿನಮಾನಗಳಲ್ಲಿ ಎಲ್ಲ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ. ಈ ಸಂದರ್ಭದಲ್ಲಿ ಸರ್ಕಾರದ ಸೌಲಭ್ಯವಿಲ್ಲದ ಮಠದ ಗುರುಕುಲದಲ್ಲಿನ 300ಕ್ಕೂ ಹೆಚ್ಚು ಮಕ್ಕಳಿಗೆ ಗ್ರಾಮಸ್ಥರ, ಭಕ್ತರ ಸಹಾಯ-ಸಹಕಾರವಿದ್ದರೂ ನಿತ್ಯ ತ್ರಿವಿಧ ದಾಸೋಹ ಸೇವೆ ಅತ್ಯಂತ ಕಷ್ಟವಾಗಿದೆ. ಹರ ಮುನಿದರೂ ಗುರು ಕಾಯುವರು ಎಂಬಂತೆ ಲಿಂ.ನಿರಂಜನ ಜಗದ್ಗುರುಗಳ ಆಶೀರ್ವಾದಿಂದ ವಿಜಯಕುಮಾರ ಅವರಂತಹ ಪರಮ ಶ್ರೇಷ್ಠ ಭಕ್ತರು, ದಾನಿಗಳಿಂದ ಈ ಮಕ್ಕಳ ಸೇವೆ ಮಾಡಲು ಸಾಧ್ಯವಾಗುತ್ತಿದೆ. ವಿಜಯಕುಮಾರ ಕಲಬುರ್ಗಿ ತಾಲೂಕಿನ ಸೋನಾಳ ಗ್ರಾಮದ ಶ್ರೀಮಠದ ಭಕ್ತರಾಗಿದ್ದು, ಸದ್ಯ ಪುಣೆಯಲ್ಲಿ ಉದ್ಯಮ ನಡೆಸುತ್ತಿದ್ದಾರೆ. ಪ್ರತಿ 6 ತಿಂಗಳಿಗೊಮ್ಮೆ ತಪ್ಪದೇ 8 ಲಕ್ಷ ರೂ ಮೊತ್ತದ ಶ್ರೇಷ್ಠ ಗುಣಮಟ್ಟದ ದಿನಸಿ ಸೇವೆ ಮಾಡುತ್ತಿದ್ದಾರೆ. ಇದರಿಂದ ನೂರಾರು ಅನಾಥ, ಬಡ ಮಕ್ಕಳು ಸಂತೃಪ್ತರಾಗಿದ್ದು ಗುರುಕುಲದ ತ್ರಿವಿಧ ದಾಸೋಹದ ಶ್ರೇಷ್ಠ ಪರಂಪರೆ ಮುಂದುವರೆಯಲೂ ಅನುಕೂಲವಾಗಿದೆ. ಅವರ ಈ ನಿಸ್ವಾರ್ಥ, ಪುಣ್ಯದ ಸೇವೆಗೆ ಶ್ರೀಮಠದ ಆಶೀರ್ವಾದ ಮತ್ತು ಮಕ್ಕಳ ಶುಭ ಹಾರೈಕೆಯಿದ್ದು ಭಗವಂತ ಅವರಿಗೆ ಇನ್ನಷ್ಟು ಶಕ್ತಿ ನೀಡಲಿ ಎಂದು ಹಾರೈಸಿದರು.
ಈ ವೇಳೆ ಡಾ. ಚಂದ್ರು ಲಮಾಣಿ ಮಾತನಾಡಿದರು. ಸರೋಜಾ ಬನ್ನೂರ, ಲಲಿತಾ ಮೆಕ್ಕಿ, ವಿಜಯಲಕ್ಷ್ಮೀ ಬಾಳಿಕಾಯಿ, ಶಾರದಾ ಮಹಾಂತಶೆಟ್ಟರ, ಅಶೋಕ ಶಿರಹಟ್ಟಿ, ನೆಹರು ಬಿರಾದಾರ, ಲೋಕೇಶ ಹನಮಶೆಟ್ಟಿ, ಸಂಜುಕುಮಾರ ಪಾಟೀಲ, ಶಿವಕುಮಾರ ಕೌಡಗಾಂವೆ, ಡಾ. ಪರಮೇಶ್ವರ ಬಿರಾದಾರ, ನಾಗಶೆಟ್ಟಿ ಕಾರಮುಂಗೆ, ರಾಜು ಲಾಂಡಗೆ, ರಾಜು ಬಿರಾದಾರ, ನಿಂಗಪ್ಪ ಹೆಬಸೂರ, ಅನ್ನದಾನಯ್ಯ ಹಿರೇಮಠ, ದೇವೇಂದ್ರಪ್ಪ ಸಣ್ಣ ಬಾಳಪ್ಪನವರ, ಆರ್.ಬಿ. ಬಡಿಗೇರ, ಪಿ.ಎಚ್. ಪಾಟೀಲ ಸೇರಿ ಶಿಕ್ಷಕ ವೃಂದ, ಸಿಬ್ಬಂದಿ, ಗುರುಕುಲದ ಮಕ್ಕಳು ಹಾಜರಿದ್ದರು.
ಶ್ರೀಮಠದ ಗೌರವ ಸ್ವೀಕರಿಸಿದ ವಿಜಯಕುಮಾರ ಎಸ್.ಬಿರಾದಾರ ಮಾತನಾಡಿ, ಮಕ್ಕಳ ಸೇವೆ ದೇವರ ಸೇವೆ ಎಂಬುದು ನನ್ನ ಹಿರಿಯರಿಂದ ಕಲಿತಿದ್ದೇನೆ. ಶ್ರೀಮಠವು ಬಡ, ಅನಾಥ ಮಕ್ಕಳಿಗಾಗಿ ಮಾಡುತ್ತಿರುವ ಸೇವೆಗೆ ತಮ್ಮದೊಂದು ಅಳಿಲು ಸೇವೆ. ಈ ಸೇವೆಗೆ ಅವಕಾಶ ಸಿಕ್ಕಿರುವುದು ನನ್ನ ಭಾಗ್ಯ ಮತ್ತು ಸಂತೃಪ್ತಿ ತಂದಿದೆ. ಈ ಸೇವೆಯನ್ನು ಇನ್ನಷ್ಟು ಹೆಚ್ಚಿಸುವ ಶಕ್ತಿ ದೇವರು ನೀಡಲೆಂದು ಧನ್ಯತಾಭಾವದಿಂದ ಪ್ರಾರ್ಥಿಸುವೆ. ಗುರುಕುಲದ ಮಕ್ಕಳು ಉತ್ತಮ ನಾಗರಿಕರಾಗಿ, ನಾಡಿಗೆ ಬೆಳಕಾಗಿ ಶ್ರೀಮಠದ ಕೀರ್ತಿಗೆ ಕಾರಣರಾಗಲಿ ಎಂಬುದು ನನ್ನ ಕೋರಿಕೆ ಎಂದರು.