Home Blog Page 3

ಸಾಮರಸ್ಯದ ಕನ್ನಡ ರಾಜ್ಯೋತ್ಸವ ಆಚರಣೆ

0

ವಿಜಯಸಾಕ್ಷಿ ಸುದ್ದಿ, ಗದಗ: ಕರ್ನಾಟಕ ರಕ್ಷಣಾ ವೇದಿಕೆಯ ಶಿವರಾಮೇಗೌಡ್ರ ಬಣ ಗದಗ ಜಿಲ್ಲಾ ಘಟಕದ ನೇತೃತ್ವದಲ್ಲಿ ದಲಿತಪರ, ಕನ್ನಡಪರ, ಹಿಂದೂಪರ, ವಿವಿಧ ಜನಪರ ಹೋರಾಟಗಾರರ ಮುಂದಾಳತ್ವದಲ್ಲಿ ನಗರದ ಗಾಂಧಿ ವೃತ್ತದಲ್ಲಿ ಕನ್ನಡ ಧ್ವಜಾರೋಹಣ ಮಾಡುವ ಮೂಲಕ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗದಗ ಜಿಲ್ಲಾಧ್ಯಕ್ಷ ಮಂಜುನಾಥ ಪರ್ವತಗೌಡ್ರ ಮಾತನಾಡಿ, ಕರ್ನಾಟಕದ ಏಕೀಕರಣದ ಸ್ಮರಣಾರ್ಥವಾಗಿ ಇಂದು ಕರ್ನಾಟಕ ರಾಜ್ಯೋತ್ಸವವನ್ನು ನಾವೆಲ್ಲರೂ ವಿಜೃಂಭಣೆಯಿಂದ ಆಚರಿಸುತ್ತಿದ್ದೇವೆ. ಈ ನಾಡು ಸಾಧು-ಸಂತರು, ದಾಸರು, ಶಿವಶರಣರು, ಕವಿಗಳಿಂದ ಕಂಗೊಳಿಸುವ ಹೆಮ್ಮೆಯ ಬೀಡಾಗಿದ್ದು, ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ನಾಡಾಗಿದೆ ಎಂದರು.

ವಕೀಲರ ಸಂಘದ ಉಪಾಧ್ಯಕ್ಷ ಎಂ.ಎಸ್. ಸಂಗನಾಳ ಮಾತನಾಡಿ, ಕರ್ನಾಟಕ ರಾಜ್ಯವು ಇಡೀ ದೇಶದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದೆ. ಅದರಲ್ಲೂ ಮಾಹಿತಿ ತಂತ್ರಜ್ಞಾನದಲ್ಲಿ, ಕಾಯ್ದೆ-ಕಾನೂನುಗಳ ವಿಷಯದಲ್ಲಿ ಐತಿಹಾಸಿಕ ಕೊಡುಗೆಯನ್ನು ನೀಡಿದೆ ಎಂದರು.

ಶ್ರೀರಾಮ ಸೇನೆ ಗದಗ ಜಿಲ್ಲಾಧ್ಯಕ್ಷ ರಾಜು ಖಾನಪ್ಪನವರ ಮಾತನಾಡಿ, ನಮ್ಮ ಸಮಾಜಗಳ ಶ್ರೀರಕ್ಷೆಯ ಜೊತೆಗೆ ಈ ನಾಡಿನ ರಕ್ಷಣೆಯೂ ಬಹುಮುಖ್ಯವಾಗಿದೆ. ನಾಡಿನ ವಿಷಯ ಬಂದಾಗ ನಾವೆಲ್ಲರೂ ಕಟಿಬದ್ಧರಾಗಿ ಈ ನಾಡಿಗಾಗಿ ಹೋರಾಡೋಣ ಎಂದರು.

ಇದೇ ಸಂದರ್ಭದಲ್ಲಿ ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ರಾಜು ಖಾನಪ್ಪನವರ, ವಕೀಲರ ಸಂಘದ ಉಪಾಧ್ಯಕ್ಷ ಎಂ.ಎಸ್. ಸಂಗನಾಳ, ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ರಾಜು ಹೆಬ್ಬಳ್ಳಿ, ಶ್ರೀರಾಮ ಸೇನೆ ಮುಖಂಡರಾದ ಶಿವರಾಜ ಪೂಜಾರ, ನಗರಸಭಾ ಸದಸ್ಯ ಅನಿಲ ಅಬ್ಬಿಗೇರಿ, ಮಲ್ಲಿಕಾರ್ಜುನ ಕಿರೇಸೂರ ಸೇರಿದಂತೆ ಕರ್ನಾಟಕ ಮಾಜಿ ಸೈನಿಕರ ಸಂಘದ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು.

ಕರವೇ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವರಾಜ ಮುಳ್ಳಾಳ, ಗೌರವಾಧ್ಯಕ್ಷ ಗುರುರಾಜ ಕಲಕೇರಿ, ಉತ್ತರ ಕರ್ನಾಟಕ ರೈತ ಜಿಲ್ಲಾಧ್ಯಕ್ಷ ಬಸಯ್ಯ ಗುಡ್ಡಿಮಠ, ಪರಶುರಾಮ ಬನ್ನೂರ, ವಾದಿರಾಜ ಕೌಜಲಗಿ, ಬಸವರಾಜ ದೇಸಾಯಿ, ಅಪ್ಪಣ್ಣ ಕಾಳೆ, ಬಸೀರ ಮುಳಗುಂದ, ಉದಯ ದಳವಾಯಿ, ಕರವೇ ಮಹಿಳಾ ಘಟಕದ ಪಾರ್ವತಿ ಪಾಟೀಲ, ಲಕ್ಷ್ಮೀ ಶಿವಶಿಂಪಿ, ಜ್ಯೋತಿ ರಾಮಣ್ಣವರ, ಗಾಂಧಿ ವೃತ್ತದ ಅಟೋ ಸ್ಟ್ಯಾಂಡಿನ ಚಾಲಕರು-ಮಾಲಕರು ಸೇರಿದಂತೆ ಕರವೇ ಕಾರ್ಯಕರ್ತರು ಉಪಸ್ಥಿತರಿದ್ದರು.

ಕನ್ನಡಾಭಿಮಾನ ಮೂಡಿಸುವ ಕಾರ್ಯವಾಗಲಿ

0

ವಿಜಯಸಾಕ್ಷಿ ಸುದ್ದಿ, ಗದಗ: ಕರ್ನಾಟಕ ರಕ್ಷಣಾ ವೇದಿಕೆ ಗದಗ ಜಿಲ್ಲಾ ಘಟಕದ ವತಿಯಿಂದ 70ನೇ ವರ್ಷದ ಕರ್ನಾಟಕ ರಾಜ್ಯೋತ್ಸವವನ್ನು ತಾಯಿ ಭುವನೇಶ್ವರಿಗೆ ಪೂಜೆ ಹಾಗೂ ಕನ್ನಡದ ಧ್ವಜಾರೋಹಣ ಮಾಡುವುದರ ಮೂಲಕ ಆಚರಿಸಲಾಯಿತು.

ಗದುಗಿನ ಗಾಂಧಿ ವೃತದಲ್ಲಿ ಕನ್ನಡದ ಧ್ವಜಾರೋಹಣವನ್ನು ನೆರವೇರಿಸಿದ ಹನಮಂತಪ್ಪ ಹೆಚ್. ಅಬ್ಬಿಗೇರಿ ಮಾತನಾಡಿ, ಗದಗ ಜಿಲ್ಲೆಯ ಕಪ್ಪತಗುಡ್ಡವು ಸುಮಾರು 80 ಸಾವಿರ ಎಕರೆ ಸಂರಕ್ಷಿತ ಅರಣ್ಯ ಪ್ರದೇಶವಾಗಬೇಕು. ಮುಂದಿನ ನಾಗರಿಕರಾಗುವ ಇಂದು ಶಾಲಾ, ಕಾಲೇಜುಗಳಲ್ಲಿ ಓದುತ್ತಿರುವ ಮಕ್ಕಳಿಗೆ, ವಿದ್ಯಾರ್ಥಿಗಳಿಗೆ ಕನ್ನಡ ಭಾಷೆಯ ಅಭಿಮಾನ ಮೂಡಿಸುವ ಕೆಲಸವಾಗಬೇಕಾಗಿದೆ. ಅದಕ್ಕಾಗಿ ಶಾಲಾ–ಕಾಲೇಜುಗಳಲ್ಲಿ ಕನ್ನಡ ಭಾಷೆಯ ಬಗ್ಗೆ ತಿಳುವಳಿಕೆ ಮೂಡಿಸುವ, ಕನ್ನಡ ಭಾಷೆಯ ಬಗ್ಗೆ ಅಭಿಮಾನ ಮೂಡಿಸುವ ಕಾರ್ಯಕ್ರಮಗಳು ಸರ್ಕಾರ, ಕನ್ನಡದ ಸಾಹಿತಿಗಳು, ಕಲಾವಿದರು, ಕನ್ನಡ ಪರ ಚಿಂತಕರಿಂದ ಆಗಬೇಕಿದೆ ಎಂದರು.

ಈ ಸಂದರ್ಭದಲ್ಲಿ ಮುತ್ತಣ್ಣ ಚೌಡಣ್ಣವರ, ಬಸವರಾಜ್ ಮೇಟಿ, ಲಕ್ಷ್ಮೀ ಮುತ್ತಲಮನೆ, ನಿಂಗನಗೌಡ, ಮಾರುತಿ ಎಂಗ್ಲೆ, ಕುಮಾರ್ ರೇವಣ್ಣವರ್, ಎಂ. ಎಂ. ತಹಸೀಲ್ದಾರ್, ರವಿ ಮಲ್ನಾಡ, ಯಶೋಧ ಬಾಲಾಜಿ, ಗಂಗಮ್ಮ, ಶುಭ ಕಲಾಲ್, ಹುಸೇನ, ಸಲೀಂ ಬೋದ್ಲೆಖಾನ್ ಸೇರಿದಂತೆ ಕರವೇ ಕಾರ್ಯಕರ್ತರು ಉಪಸ್ಥಿತರಿದ್ದರು.

ಕನ್ನಡ ಕಟ್ಟವ ಕೆಲಸಕ್ಕೆ ಮುಂದಾಗಿ: ಮಂಜುಳಾ ದೇಗಿನಾಳ

0

ವಿಜಯಸಾಕ್ಷಿ ಸುದ್ದಿ, ಗದಗ: ಕರ್ನಾಟಕ ಏಕೀಕರಣಗೊಂಡು 69 ವರ್ಷಗಳು ಪೂರ್ಣಗೊಂಡಿದ್ದು, ಎಲ್ಲೆಡೆ ಸುಖ, ಶಾಂತಿ ನೆಲೆಸುವಂತಾಗಲಿ. ಆಲೂರು ವೆಂಕಟರಾಯರು, ಬಿ.ಎಂ. ಶ್ರೀಕಂಠಯ್ಯ, ಮಾಸ್ತಿ ವೆಂಕಟೇಶ ಅಯ್ಯಂಗಾರ್, ಕುವೆಂಪು, ಶಿವರಾಂ ಕಾರಂತ, ಮಾಸ್ತಿ ವೆಂಕಟೇಶ ಅಯ್ಯಂಗಾರ್ ಹೀಗೆ ಅನೇಕರು ಕನ್ನಡದ ಬೆಳವಣಿಗೆಗೆ ಶ್ರಮಿಸಿದ್ದಾರೆ ಎಂದು ಪ್ರಧಾನ ಅಂಚೆ ಪಾಲಕರಾದ ಮಂಜುಳಾ ದೇಗಿನಾಳ ಹೇಳಿದರು.

ನಗರದ ಪ್ರಧಾನ ಅಂಚೆ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ 70ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರತಿಯೊಬ್ಬರೂ ದಿನನಿತ್ಯ ವ್ಯವಹಾರ ಮತ್ತು ಚಟುವಟಿಕೆಗಳಲ್ಲಿ ಹೆಚ್ಚೆಚ್ಚು ಕನ್ನಡ ಬಳಸುವುದರೊಂದಿಗೆ ಜನಸಾಮಾನ್ಯರೂ ಕನ್ನಡ ಕಟ್ಟುವ ಕೆಲಸವನ್ನು ಮಾಡಬೇಕು ಎಂದರು.

ಉಪ ಅಂಚೆ ಪಾಲಕರಾದ ದೊಡ್ಡಪ್ಪ ಇಟಗಿ, ವೀರಣ್ಣ ಅಂಗಡಿ, ವೆಂಕಟೇಶ ಆಕಳವಾಡಿ, ಸಾವಿತ್ರಿ ಮಲ್ಲಾಡದ, ಸೌಮ್ಯ, ಯಂಕಪ್ಪ ಗುಗ್ಗರಿ, ಸಿದ್ಧಲಿಂಗೇಶ ಯಂಡಿಗೇರಿ, ಮಂಜುನಾಥ ಪಾಮೇನಹಳ್ಳಿ, ವಾಣಿ ಮಾಂಡ್ರೆ, ಸರೋಜ ಪಟ್ಟಣಶೆಟ್ಟಿ, ವಿದ್ಯಾ ಗದಗ, ಶ್ರೀದೇವಿ ಕಲಕೇರಿ, ಬಸವರಾಜ ಮೊರಬದ, ಜಾಫರ್ ನದಾಫ್, ಉಮೇಶ ಸಂದಿಮನಿ, ರವಿ ಜಾದವ, ಶಿವಕುಮಾರ ಸುಳ್ಳದ, ಶಿವರಾಜ ಕ್ಷತ್ರಿಯವರ, ಕುಮಾರ ಅರಿಸಿದ್ಧಿ ಮತ್ತಿತರರು ಪಾಲ್ಗೊಂಡಿದ್ದರು.

ನನಗೂ ಸಚಿವನಾಗಬೇಕೆನ್ನುವ ಆಸೆ ಇದೆ; ಮನದ ಆಸೆ ಹೊರಹಾಕಿದ ಪ್ರದೀಪ್ ಈಶ್ವರ್

0

ಚಿಕ್ಕಬಳ್ಳಾಪುರ:-ನನಗೂ ಸಚಿವನಾಗಬೇಕೆನ್ನುವ ಆಸೆ ಇದೆ ಎಂದು ಸಚಿವ ಪ್ರದೀಪ್ ಈಶ್ವರ್ ಹೇಳಿದ್ದಾರೆ.

ನವೆಂಬರ್‌ನಲ್ಲಿ ಕ್ರಾಂತಿ ಚರ್ಚೆ ವಿಚಾರಕ್ಕೆ ಸಂಬಂಧಿಸಿದಂತೆ. ನಗರದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಅದೇನು ಕ್ರಾಂತಿ ಆಗುತ್ತೊ ಗೊತ್ತಿಲ್ಲ. ಒಟ್ಟಿನಲ್ಲಿ ಸಿಎಂ, ಡಿಸಿಎಂ, ಹೈಕಮಾಂಡ್ ನಿರ್ಧಾರಕ್ಕೆ ನಾವು ಬದ್ಧ ಎಂದರು.

ಇದೇ ವೇಳೆ ಸಚಿವ ಸಂಪುಟ ವಿಸ್ತರಣೆಯಲ್ಲಿ ನನಗೂ ಒಂದು ಅವಕಾಶ ಸಿಗಲಿ. ನಾನು ಯಾವುದೋ ಒಂದು ರೂಪದಲ್ಲಿ ರಾಜಭವನಕ್ಕೆ ಹೋಗ್ತೇನೆ. ಬಲಿಜ ಸಮುದಾಯದಲ್ಲಿ ನಾನೊಬ್ಬನೇ ಶಾಸಕ ಎಂದು ಸಚಿವನಾಗುವ ಆಸೆ ವ್ಯಕ್ತಪಡಿಸಿದರು.

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಹಾಲಿ ಸಚಿವ ಡಾ ಎಂ ಸಿ ಸುಧಾಕರ್ ರನ್ನ ಮುಂದುವರೆಸಲು ತಕರಾರು ಇಲ್ಲ, ಬಾಗೇಪಲ್ಲಿ ಹಿರಿಯ ಶಾಸಕ ಎಸ್.ಎನ್ ಸುಬ್ಬಾರೆಡ್ಡಿಗೆ ಕೊಟ್ಟರೂ ತಕರಾರಿಲ್ಲ. ನಾನೇನೂ ಸನ್ಯಾಸಿಯಲ್ಲ. ನನಗೂ ಸಚಿವ ಆಗೋ ಆಸೆ ಇದೆ ಎಂದರು.

ಗುಂಡಿಗಳ ಬಗ್ಗೆ ಡಿಸಿಎಂ ಅವರನ್ನು ಕೇಳಿ ಎಂದ ಸಿಎಂಗೆ ಹೆಚ್.ಡಿ. ಕುಮಾರಸ್ವಾಮಿ ತರಾಟೆ

0

ಬೆಂಗಳೂರು: ನಗರದಲ್ಲಿ ಗುಂಡಿ ಮುಚ್ಚಲು ವಿಧಿಸಿರುವ ಡೆಡ್ ಲೈನ್ ಮುಗಿದಿದ್ದರೂ ಇನ್ನು ಗುಂಡಿಗಳು ಹಾಗೆಯೇ ಇವೆ. ಆ ಬಗ್ಗೆ ಮಾಧ್ಯಮಗಳು ಕೇಳಿದ್ದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಡಿಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ಕೇಳಿ ಎಂದಿರುವುದು ಬೇಜವಾಬ್ದಾರಿಯ ಪರಮಾವಧಿ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಕಟುವಾಗಿ ಟೀಕಿಸಿದರು. ಸಪ್ನ ಪುಸ್ತಕ ಮಳಿಗೆ ಪುಸ್ತಕ ಜಾತ್ರೆಯಲ್ಲಿ ಪಾಲ್ಗೊಂಡ ನಂತರ ಸಚಿವರು ಮಾಧ್ಯಮಗಳ ಜತೆ ಮಾತನಾಡಿದರು.

ಶುಕ್ರವಾರದ ದಿನ ಮುಖ್ಯಮಂತ್ರಿಗಳ ಹೇಳಿಕೆ ಗಮನಿಸಿದ್ದೇನೆ. ಅವರ ಹೇಳಿಕೆ ಬೇಜವಾಬ್ದಾರಿತನದ್ದು ಎಂಬುದು ನನ್ನ ಅಭಿಪ್ರಾಯ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಾ? ಅಥವಾ ಡಿ.ಕೆ. ಶಿವಕುಮಾರ್ ಅವರಾ? ಎನ್ನುವ ಪ್ರಶ್ನೆ ಬರುತ್ತೆ.

ಮುಖ್ಯಮಂತ್ರಿಗಳೇ ಸಭೆ ಮಾಡಿ ಗುಂಡಿ ಮುಚ್ಚಲು ಡೆಡ್ ಲೈನ್ ಕೊಟ್ಟಿದ್ದರು. ಆದರೆ ರಸ್ತೆಗಳಲ್ಲಿ ಗುಂಡಿಗಳು ಹಾಗೆಯೇ ಇವೆ. ಮುಖ್ಯಮಂತ್ರಿಗಳ ಮಾತಿಗೂ ಸಹ ಎಷ್ಟು ಬೆಲೆ ಅಧಿಕಾರಿಗಳು ಕೊಡುತ್ತಿದ್ದಾರೆ ಎನ್ನುವುದು ಇದರಿಂದ ಗೊತ್ತಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು. ಮುಖ್ಯಮಂತ್ರಿಗಳ ಹೇಳಿಕೆ ನೋಡಿದಾಗ ಅವರು ಈ ರಾಜ್ಯದ ಸಿಎಂ ಆಗಿ ಕಾರ್ಯ ನಿರ್ವಹಣೆ ಮಾಡುವುದಕ್ಕೆ ಅಸಮರ್ಥ ಆಗಿದ್ದೇನೆ ಎಂದು ಹೇಳಿದ ರೀತಿ ಇದೆ. ಅವರು ಇಂಥ ಹೇಳಿಕೆ ನೀಡಬಾರದು ಎಂದು ಅವರು ಹೇಳಿದರು.

ನವೆಂಬರ್ ಕ್ರಾಂತಿ ಕಾಂಗ್ರೆಸ್ ಪಕ್ಷಕ್ಕೆ ಬಿಟ್ಟಿದ್ದು:

ನವೆಂಬರ್ 21ಕ್ಕೆ ಡಿಕೆ ಶಿವಕುಮಾರ್ ಸಿಎಂ ಆಗಿ ಪದಗ್ರಹಣ ಮಾಡುತ್ತಾರೆ ಎಂಬ ಚರ್ಚೆ ಬಗ್ಗೆ ಗಮನ ಸೆಳೆದಾಗ, ಅದು ಅವರ ಪಕ್ಷದಲ್ಲಿನ ತೀರ್ಮಾನಗಳು. ಅವರಿಗೆ ಬಿಟ್ಟಿರೋದು, ನಾನು ಈ ವಿಷಯದಲ್ಲಿ ಮಾತಮಾಡುವುದು ಸಣ್ಣತನ ಆಗುತ್ತದೆ. ಅವರ ಪಕ್ಷದಲ್ಲಿ ಏನು ತೀರ್ಮಾನ ಮಾಡುತ್ತಾರೋ ಮಾಡಿಕೊಳ್ಳಲಿ ಎಂದರು ಕುಮಾರಸ್ವಾಮಿ ಅವರು.

ಸರ್ಕಾರದ ಅವಧಿ ಇನ್ನು ಎರಡೂವರೆ ವರ್ಷ ಇದೆ. ಆದರೆ ಎರಡೂವರೆ ವರ್ಷ ಸರ್ಕಾರ ನಡೆಸುವಲ್ಲಿ ಕಾಂಗ್ರೆಸ್ ನವರೇ ಪ್ರತಿನಿತ್ಯ ನಗೆಪಾಟಿಗೆ ಒಳಗಾಗುತ್ತಿದ್ದಾರೆ. ವಿರೋಧ ಪಕ್ಷಗಳು ಮಾತಾಡುವ ಅವಶ್ಯಕತೆ ಇಲ್ಲ. ಮಂತ್ರಿಗಳು, ಜವಾಬ್ದಾರಿ ಸ್ಥಾನದಲ್ಲಿ ಇರುವವರು ಅವರವರೇ ಮಾತನಾಡುತ್ತಿರುವಾಗ ನಾವು ಯಾವ ದೃಷ್ಟಿಯಿಂದ ನೋಡೋದು? ಅವರ ಭಿನ್ನಮತ ನೋಡುವ ಅಗತ್ಯ ಎನ್ಡಿಎ ಮೈತ್ರಿಕೂಟಕ್ಕೆ ಇಲ್ಲ. ಅವರ ಪಕ್ಷದಲ್ಲಿರುವ ಶಾಸಕರು, ಮಂತ್ರಿಗಳೇ ದೊಡ್ಡ ಮಟ್ಟದಲ್ಲಿ ನೋಡ್ತಾ ಇದ್ದಾರೆ ಎಂದು ಕೇಂದ್ರ ಸಚಿವರು ವ್ಯಂಗ್ಯವಾಡಿದರು.

ಮನೆಗಳ ಮುಂದೆ ಕಸ; ಸರ್ಕಾರದ ಹೊಸ ಕಾರ್ಯಕ್ರಮ ಎಂದು ಲೇವಡಿ

ಬಿಬಿಎಂಪಿ ಸಿಬ್ಬಂದಿ ಮನೆಗಳ ಮುಂದೆ ಕಸ ಸುರಿಯುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವರು; ಮನೆಗಳ ಮುಂದೆ ಕಸ ಹಾಕುವುದನ್ನು ನಾನು ಮಾಧ್ಯಮಗಳಲ್ಲಿ ಗಮನಿಸಿದೆ. ಜನರು ಕಸ ಬೀದಿಯಲ್ಲಿ ಹಾಕಿದರು ಎಂದು ಬೀದಿಯಲ್ಲಿರೋ ಕಸ ತಂದು ಜನರ ಮನೆ ಮುಂದೆ ಹಾಕಿದರೆ ಅರ್ಥ ಇದೀಯಾ? ಅದರಿಂದ ಏನು ಸಾಧನೆ ಮಾಡುತ್ತಾರೆ. ಸರಕಾರ ಸರಿಯಾದ ರೀತಿಯಲ್ಲಿ ಕಸ ವಿಲೇವಾರಿ ಮಾಡುವ ಜವಾಬ್ದಾರಿ ಮಾಡುವಲ್ಲಿ ವೈಜ್ಞಾನಿಕ ತೀರ್ಮಾನ ಮಾಡಬೇಕು.

ಅದು ಬಿಟ್ಟು ಲಾರಿಯಲ್ಲಿ ಕಸ ತುಂಬಿಕೊಂಡು ಒಂದು ಮನೆ ಮುಂದೆ ಹೊರಗಡೆ ಹಾಕುವುದು ಎಷ್ಟು ಸರಿ? ಸರ್ಕಾರಕ್ಕೆ ಸಮಸ್ಯೆ ಇದೆ, ಅವರಿಗೆ ಕಸ ವಿಲೇವಾರಿ ಮಾಡುವುದಕ್ಕೆ ಜಾಗ ಇಲ್ಲ. ಅದಕ್ಕೆ ಮನೆಗಳ ಮುಂದೆ ತಂದು ಹಾಕಿದರೆ ಜನರೇ ಕಸ ವಿಲೇವಾರಿ ಮಾಡಿಕೊಳ್ಳುತ್ತಾರೆ ಎನ್ನುವ ಭಾವನೆ ಇರಬಹುದು. ಆ ಉದ್ದೇಶದಿಂದ ಸರ್ಕಾರ ಮನೆಗಳ ಮುಂದೆ ಕಸ ಸುರಿಯುವ ಹೊಸ ವಿನೂತನ ಕಾರ್ಯಕ್ರಮ ಮಾಡಿದೆ ಎಂದು ಹೆಚ್ಡಿಕೆ ಕಿಡಿಕಾರಿದರು.

ಸುರಂಗ ರಸ್ತೆ ಬಗ್ಗೆ ಪ್ರತಿಕ್ರಿಯೆ:

ಸುರಂಗ ಯೋಜನೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಕುಮಾರಸ್ವಾಮಿ ಅವರು, ನೋಡೋಣ.. ಇವರು ಟನಲ್ ರಸ್ತೆ ಕೆಲಸ ಯಾವಾಗ ಪ್ರಾರಂಭ ಮಾಡುತ್ತಾರೆ ಎಂದು. ನುರಿತ ತಜ್ಞರು ಅಭಿಪ್ರಾಯ ಪಡೆದು ಕೆಲಸ ಆರಂಭ ಮಾಡುತ್ತಾರೋ ಅಥವಾ ಹಾಗೆಯೇ ಕಾಮಗಾರಿ ಆರಂಭ ಮಾಡುತ್ತಾರೋ ನೋಡೋಣ.

ನಾನು ಹೇಳೋದು ಬೆಂಗಳೂರು ಜನರ ಪ್ರತಿನಿತ್ಯ ಜನರ ಸಮಸ್ಯೆ ಬಗ್ಗೆ. ಅದು ಬಗೆಹರಿಯಬೇಕು. ಇಲ್ಲಿ ಟನಲ್ ರೋಡ್ ಮಾಡ್ತಾರೋ, ಎಲಿವೆಟೆಡ್ ರಸ್ತೆ ಮಾಡುತ್ತಾರೋ ಅದು ಸರ್ಕಾರಕ್ಕೆ ಬಿಟ್ಟಿದ್ದು. ಜನರು ಪ್ರತಿನಿತ್ಯ ಜನಪ್ರತಿನಿಧಿಗಳು ಮತ್ತು ಸರ್ಕಾರದ ವೈಫಲ್ಯಗಳ ಬಗ್ಗೆ ಆಕ್ರೋಶ ಹೊರ ಹಾಕುತ್ತಿದ್ದಾರೆ. ಜನರ ಬದುಕಿನಲ್ಲಿ ಚಲ್ಲಾಟ ಆಡಬೇಡಿ ಎಂದು ಕುಮಾರಸ್ವಾಮಿ ಅವರು ಕಿವಿಮಾತು ಹೇಳಿದರು.

ಕನ್ನಡಿಗರ ರಕ್ಷಣೆಗೆ ರಾಜ್ಯ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ: ಸಚಿವ ಎನ್. ಚಲುವರಾಯಸ್ವಾಮಿ

0

ಮಂಡ್ಯ: ರಾಜ್ಯ ಸರ್ಕಾರ ಕನ್ನಡಿಗರ ರಕ್ಷಣೆಗೆ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದ್ದಾರೆ. ಬೆಳಗಾವಿಯಲ್ಲಿ ಕನ್ನಡಿಗರ ಮೇಲೆ ಎಂಇಎಸ್ ಪುಂಡಾಟಿಕೆ ನಡೆದಿರುವ ವಿಚಾರವಾಗಿ ಮಾತನಾಡಿದ ಅವರು,

ಭಾಷೆ, ನೆಲ, ಜಲದ ವಿಚಾರದಲ್ಲಿ ನಿರಂತರವಾಗಿ ನಡೆಯುತ್ತಿರುವ ದಬ್ಬಾಳಿಕೆ ಖಂಡನೀಯ ಎಂದು ಹೇಳಿದರು. “ಈ ರೀತಿಯ ಆಕ್ರಮಣವನ್ನು ತಡೆಯಲು ನಮ್ಮ ಸರ್ಕಾರ ಅಗತ್ಯವಿದ್ದರೆ ಕಠಿಣ ಕ್ರಮಕ್ಕೂ ಹಿಂಜರಿಯುವುದಿಲ್ಲ,” ಎಂದು ಸಚಿವರು ಸ್ಪಷ್ಟಪಡಿಸಿದರು.

“ಭಾಷೆ, ನೆಲ, ಜಲದ ಸಮಸ್ಯೆ ಬಗೆಹರಿಸಲು ತಿಲಾಂಜಲಿ ಹೇಳುವ ಅಧಿಕಾರ ಕೇಂದ್ರ ಸರ್ಕಾರಕ್ಕಷ್ಟೆ ಇದೆ. ಕೇಂದ್ರ ಸರ್ಕಾರವೇ ಸಂಬಂಧಿತ ರಾಜ್ಯಗಳನ್ನು ಕರೆದು ಮಾತನಾಡಬೇಕು. ಪರಿಸ್ಥಿತಿ ವಿಶ್ಲೇಷಿಸಿ ತೀರ್ಮಾನ ತೆಗೆದುಕೊಂಡರೆ ಮಾತ್ರ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುತ್ತದೆ,” ಎಂದರು.

ತಮಿಳುನಾಡು–ಕರ್ನಾಟಕ ನೀರು ವಿವಾದದ ಕುರಿತು ಮಾತನಾಡಿದ ಸಚಿವರು, “ತಮಿಳುನಾಡು ಸಮಸ್ಯೆ ಎಂದೇನಿಲ್ಲ. ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಅಪೀಲ್ ಸಲ್ಲಿಸಿದರೆ ಒಂದು ದಿನದಲ್ಲೇ ವಿಷಯ ಬಗೆಹರಿಯುತ್ತದೆ. ನೀರು ಇದ್ದಾಗ ಬಿಡುತ್ತೇವೆ, ಇಲ್ಲದಾಗ ಮಾತ್ರ ಸಮಸ್ಯೆ ಬರುವುದು. ಇದು ರಾಜಕೀಯ ಹಿತಾಸಕ್ತಿಯಿಂದ ನಡೆಯುತ್ತಿದೆ,” ಎಂದು ಹೇಳಿದರು.

“ಮಹಾರಾಷ್ಟ್ರದಲ್ಲಿಯೂ ಕನ್ನಡಿಗರಿದ್ದಾರೆ. ಅವರಿಗೂ ನಮ್ಮ ಸಹಕಾರ ಬೇಕು, ನಮಗೂ ಅವರ ಸಹಕಾರ ಅಗತ್ಯ. ಎಲ್ಲ ಅಂಶಗಳನ್ನು ಅವಲೋಕಿಸಿ ನಮ್ಮ ಸರ್ಕಾರ ಸೂಕ್ತ ತೀರ್ಮಾನ ಕೈಗೊಳ್ಳಲಿದೆ. ಕನ್ನಡಿಗರ ಹಿತಾಸಕ್ತಿಯೇ ನಮ್ಮ ಸರ್ಕಾರದ ಆದ್ಯತೆ,” ಎಂದು ಸಚಿವ ಚಲುವರಾಯಸ್ವಾಮಿ ಹೇಳಿದರು.

ದೆಹಲಿ ಹೆಸರು ‘ಇಂದ್ರಪ್ರಸ್ಥ’ ಎಂದು ಬದಲಾಯಿಸಲು ಗೃಹ ಸಚಿವ ಅಮಿತ್ ಶಾಗೆ ಪತ್ರ: ಪ್ರಮುಖ ಬೇಡಿಕೆಗಳೇನು?

0

ನವದೆಹಲಿ: ಭಾರತದ ರಾಜಧಾನಿ ದೆಹಲಿ ಹೆಸರನ್ನು ‘ಇಂದ್ರಪ್ರಸ್ಥ’ ಎಂದು ಬದಲಾಯಿಸುವಂತೆ ಬೇಡಿಕೆಯೊಂದು ಮತ್ತೆ ಕೇಳಿಬಂದಿದೆ. ದೆಹಲಿಯ ಚಾಂದಿನಿ ಚೌಕ್ ಕ್ಷೇತ್ರದ ಬಿಜೆಪಿ ಸಂಸದ ಪ್ರವೀಣ್ ಖಂಡೇಲ್ವಾಲ್ ಅವರು ಕೇಂದ್ರ ಗೃಹಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದು ಈ ಕುರಿತು ಮನವಿ ಮಾಡಿದ್ದಾರೆ.

ಪ್ರವೀಣ್ ಖಂಡೇಲ್ವಾಲ್ ತಮ್ಮ ಪತ್ರದಲ್ಲಿ, “ದೆಹಲಿ ಎಂಬ ಹೆಸರು ಬದಲಾಯಿಸುವುದು ಭಾರತದ ಆತ್ಮ, ಐತಿಹಾಸಿಕ ಸಂಪ್ರದಾಯ ಮತ್ತು ಪರಂಪರೆಯ ಪುನರುಜ್ಜೀವನದ ಸಂಕೇತವಾಗುತ್ತದೆ” ಎಂದು ತಿಳಿಸಿದ್ದಾರೆ. ಅವರು ಪತ್ರದಲ್ಲಿ ಉಲ್ಲೇಖಿಸಿರುವಂತೆ, ಮಹಾಭಾರತದ ಕಾಲದಲ್ಲಿ ಪಾಂಡವರು ಯಮುನಾ ನದಿಯ ದಡದಲ್ಲಿ ಇಂದ್ರಪ್ರಸ್ಥ ಎಂಬ ರಾಜಧಾನಿಯನ್ನು ಸ್ಥಾಪಿಸಿದ್ದರು ಎಂಬ ಐತಿಹಾಸಿಕ ದಾಖಲೆಗಳಿವೆ.

ನಂತರ ಈ ನಗರ ವ್ಯಾಪಾರ, ಸಂಸ್ಕೃತಿ ಮತ್ತು ಆಡಳಿತದ ಕೇಂದ್ರವಾಯಿತು. ಸುಲ್ತಾನರು ಹಾಗೂ ಮೊಘಲ್‌ಗಳ ಕಾಲದಲ್ಲಿ ಈ ಹೆಸರನ್ನು ‘ದೆಹಲಿ’ ಎಂದು ಬದಲಾಯಿಸಲಾಯಿತು. ನಂತರ 1911ರಲ್ಲಿ ಬ್ರಿಟಿಷರು ನವದೆಹಲಿಯನ್ನು ರಾಜಧಾನಿಯಾಗಿ ಘೋಷಿಸಿದರು.

ಪ್ರವೀಣ್ ಖಂಡೇಲ್ವಾಲ್ ಅವರ ಪತ್ರದ ನಾಲ್ಕು ಬೇಡಿಕೆಗಳು:

1. ಭಾರತದ ರಾಜಧಾನಿ ದೆಹಲಿಯ ಹೆಸರನ್ನು ‘ಇಂದ್ರಪ್ರಸ್ಥ’ ಎಂದು ಬದಲಾಯಿಸಬೇಕು.

2. ಹಳೆ ದೆಹಲಿ ರೈಲು ನಿಲ್ದಾಣವನ್ನು ‘ಇಂದ್ರಪ್ರಸ್ಥ ಜಂಕ್ಷನ್’ ಎಂದು ಮರುನಾಮಕರಣ ಮಾಡಬೇಕು.

3. ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ‘ಇಂದ್ರಪ್ರಸ್ಥ ವಿಮಾನ ನಿಲ್ದಾಣ’ ಎಂದು ಮರುನಾಮಕರಣ ಮಾಡಬೇಕು.

4. ದೆಹಲಿಯ ಪ್ರಮುಖ ಸ್ಥಳವೊಂದರಲ್ಲಿ ಪಾಂಡವರ ಭವ್ಯ ಪ್ರತಿಮೆಗಳನ್ನು ಸ್ಥಾಪಿಸಬೇಕು.

ಅಯೋಧ್ಯೆ, ಕಾಶಿ ಮತ್ತು ಪ್ರಯಾಗ್‌ರಾಜ್ ನಗರಗಳು ತಮ್ಮ ಪ್ರಾಚೀನ ಗುರುತನ್ನು ಮರಳಿ ಪಡೆದಂತೆ, ದೆಹಲಿಯು ತನ್ನ ಮೂಲ ಹೆಸರಿಗೆ ಮರಳುವುದರಿಂದ ಸಂಸ್ಕೃತಿ ಶ್ರೀಮಂತವಾಗುತ್ತದೆ. ಇದರಿಂದ ರಾಜಧಾನಿಯ ಪ್ರವಾಸೋದ್ಯಮವೂ ಉತ್ತೇಜನ ಪಡೆಯುತ್ತದೆ” ಎಂದು ಹೇಳಿದ್ದಾರೆ.

ಸಾರ್ವಜನಿಕವಾಗಿ ಚರ್ಚೆ ಮಾಡಿದ ಕೊಡಲೇ ಸಿಎಂ ಬದಲಾಗಲ್ಲ: ಸಚಿವ ಕೆ .ಜೆ. ಜಾರ್ಜ್

0

ಚಿಕ್ಕಮಗಳೂರು: ಕಾಂಗ್ರೆಸ್ ಮನೆಯಿಂದ ದಿನಕ್ಕೊಂದು ಬೆಳವಣಿಗೆಗಳು ವರದಿಯಾಗುತ್ತಿದ್ದು ಕ್ರಾಂತಿ ಕಿಚ್ಚನ್ನು ಹೆಚ್ಚಿಸುತ್ತಿವೆ. ನವೆಂಬರ್ ಶುರುವಾಗಿದ್ದು, ಆರಂಭದಲ್ಲೇ ಪದಗ್ರಹಣ ಮತ್ತು ಡೆಡ್ ಲೈನ್ ಎಂಬ ವಿಚಾರ ಭಾರೀ ಸದ್ದು ಮಾಡುತ್ತಿದೆ.

ಇದೇ ವಿಚಾರಕ್ಕೆ ಸಂಬಂಧಿಸಿದಂತೆ  ಸಾರ್ವಜನಿಕವಾಗಿ ಚರ್ಚೆ ಮಾಡಿದ ಕೊಡಲೇ ಸಿಎಂ ಬದಲಾಗಲ್ಲ ಎಂದು  ಸಚಿವ ಕೆ .ಜೆ. ಜಾರ್ಜ್ ಹೇಳಿದ್ದಾರೆ. ಚಿಕ್ಕಮಗಳೂರಿನಲ್ಲಿ  ಮಾತನಾಡಿದ ಅವರು, ಸಾರ್ವಜನಿಕವಾಗಿ ಕೆಲವರು ಚರ್ಚೆ ಮಾಡಿದ ಕೊಡಲೇ ಮುಖ್ಯಮಂತ್ರಿ ಬದಲಾವಣೆ ಆಗಲ್ಲ.

ಈಗಾಗಲೇ ಹೈಕಮಾಂಡ್, ಶಾಸಕರು ಒಬ್ಬರನ್ನು ಒಪ್ಪಿ ಮುಖ್ಯಮಂತ್ರಿ ಮಾಡಿದ್ದಾರೆ. ಕರ್ನಾಟಕದಲ್ಲಿ ಮುಖ್ಯಮಂತ್ರಿ ಕುರ್ಚಿ ಖಾಲಿ ಇಲ್ಲ, ಖಾಲಿ ಇದ್ದಾಗ ಅದರ ಬಗ್ಗೆ ಚರ್ಚೆ. ಮುಖ್ಯಮಂತ್ರಿ ಬದಲಾವಣೆ ವಿಚಾರದ ಬಗ್ಗೆ ಯಾರೂ ಚರ್ಚೆ ಮಾಡಬಾರದೆಂದು ಹೈಕಮಾಂಡ್ ಹೇಳಿದೆ ಎಂದು ಹೇಳಿದರು.

ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಮಾಧ್ಯಮದವರಿಗೆ ಸುದ್ದಿ ಸಿಗುತ್ತಿಲ್ಲ. ರಚನಾತ್ಮಕವಾಗಿ ಒಳ್ಳೆಯ ಕಾರ್ಯಕ್ರಮಗಳು ಜಾರಿಯಾಗುತ್ತಿವೆ. ನಿಮಗೆ ಸುದ್ದಿ ಸಿಗುತ್ತಿಲ್ಲ, ಅದಕ್ಕೆ ನೀವು ಸುದ್ದಿಯನ್ನು ಹುಟ್ಟುಹಾಕಲು ಪ್ರಯತ್ನ ಮಾಡುತ್ತಿದ್ದೀರಿ. ದಯವಿಟ್ಟು ರಾಜ್ಯ ರಾಜಕೀಯದ ಬಗ್ಗೆ ಏನೂ ಕೇಳಬೇಡಿ, ಹೇಳೋಕೆ ಕಷ್ಟ ಆಗುತ್ತೆ. ನನಗೆ ಹಾಗೂ ಚಿಕ್ಕಮಗಳೂರು ಜಿಲ್ಲೆಗೆ ಸಂಬಂಧಿಸಿದ್ದು ಮಾತ್ರ ಕೇಳಿ ಎಂದರು.

ಕಳ್ಳತನ ಪ್ರಕರಣ ವಿಚಾರಣೆ ವೇಳೆ ಪೊಲೀಸ್ ಹಿಂಸೆ ಆರೋಪ: ಆತ್ಮಹತ್ಯೆಗೆ ಯತ್ನಿಸಿದ ಯುವಕನ ಸ್ಥಿತಿ ಗಂಭೀರ

0

ದಾವಣಗೆರೆ: ಕಳ್ಳತನ ಪ್ರಕರಣ ವಿಚಾರಣೆ ವೇಳೆ ಪೊಲೀಸ್ ಹಿಂಸೆ ಆರೋಪ ಕೇಳಿಬಂದಿದ್ದು, ಆತ್ಮಹತ್ಯೆಗೆ ಯತ್ನಿಸಿದ ಯುವಕನ ಸ್ಥಿತಿ ಗಂಭೀರವಾಗಿದೆ. ಈ ಘಟನೆ ಚನ್ನಗಿರಿ ತಾಲೂಕಿನ ಚಿಕ್ಕಬೆನ್ನೂರು ಗ್ರಾಮದಲ್ಲಿ ನಡೆದಿದೆ. ಗ್ರಾಮದ ಕಿರಣ್ (24) ಅತ್ಮಹತ್ಯೆಗೆ ಯತ್ನಿಸಿದ ಯುವಕ.

ಒಂದು ತಿಂಗಳ ಹಿಂದೆ ಸಂತೆಬೆನ್ನೂರು ಠಾಣೆ ವ್ಯಾಪ್ತಿಯ ಕಾಕನೂರು ಗ್ರಾಮದ ಒಂಟಿ ಮನೆಯಲ್ಲಿ ಕಳ್ಳತನವಾಗಿತ್ತು. ಕಳ್ಳತನವನ್ನು ಕಿರಣ್ ಮಾಡಿದ್ದಾನೆ ಎಂದು ಅರೋಪಿಸಿ ಅ.27 ರಂದು ಮಫ್ತಿಯಲ್ಲಿ ಬಂದ ಪೊಲೀಸರು ಕರೆದೊಯ್ದಿದ್ದರು. ಈ ವೇಳೆ ಪೊಲೀಸರು ಟಾರ್ಚರ್ ನೀಡಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಕಳ್ಳತನ ಮಾಡಿದವರು ಯಾರು ಎಂದು ಹೇಳಬೇಕು. ಇಲ್ಲ ನೀನೇ ಒಪ್ಪಿಕೊಳ್ಳಬೇಕು ಎಂದು ಪೊಲೀಸರು ಹೇಳಿ ಕಳುಹಿಸಿದ್ದರಂತೆ. ಮತ್ತೆ ಪೊಲೀಸ್ ಠಾಣೆಗೆ ಹೋಗಬೇಕಾಗುತ್ತದೆ ಎಂದು ಹೆದರಿ ನೇಣುಬಿಗಿದುಕೊಂಡು ಅತ್ಮಹತ್ಯೆಗೆ ಯತ್ನಿಸಿದ್ದಾನೆ.

ಕುಟುಂಬಸ್ಥರು ಆತನನ್ನು ರಕ್ಷಿಸಿ ದಾವಣಗೆರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆತನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ. ಟಾರ್ಚರ್ ನೀಡಿದ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕುಟುಂಬಸ್ಥರು ಆಗ್ರಹಿಸಿದ್ದಾರೆ.

ಟನಲ್ ರಸ್ತೆ; ವಿಪಕ್ಷ ನಾಯಕ ಆರ್. ಅಶೋಕ್ ನೇತೃತ್ವದಲ್ಲಿ ಟನಲ್ ರಸ್ತೆ ಸಮಿತಿ ರಚನೆಗೆ ಸಿದ್ಧ: ಡಿ.ಕೆ. ಶಿವಕುಮಾರ್

0

ಬೆಂಗಳೂರು: ಟನಲ್ ರಸ್ತೆ ವಿಚಾರವಾಗಿ ವಿಪಕ್ಷ ಪಕ್ಷದ ನಾಯಕ ಆರ್. ಅಶೋಕ್ ಅವರ ನೇತೃತ್ವದಲ್ಲಿಯೇ ಸಮಿತಿ ರಚನೆ ಮಾಡಲು ನಾನು ತಯಾರಿದ್ದೇನೆ. ಅವರು ಸೂಚಿಸಿದ ಕಡೆಯೇ ಲಾಲ್ ಬಾಗ್ ಬಳಿ ಪ್ರವೇಶ- ನಿರ್ಗಮನ ತಾಣ ರೂಪಿಸಲಾಗುವುದು.” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದ್ದಾರೆ. ನಗರದ ಕಂಠೀರವ ಕ್ರೀಡಾಂಗಣದ‌ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಶನಿವಾರ ಪ್ರತಿಕ್ರಿಯೆ ನೀಡಿದರು.

“ಅಶೋಕ್ ಅವರು ಧರಣಿ ಕೂರುವ ಅವಶ್ಯಕತೆಯಿಲ್ಲ. ಏಕೆಂದರೆ ಅವರು ಬೆಂಗಳೂರಿನವರು. ಇಲ್ಲಿಂದ ಏಳೆಂಟು ಬಾರಿ ಗೆದ್ದಿದ್ದಾರೆ. ಅವರಿಗೂ ಜವಾಬ್ದಾರಿಯಿದೆ. ಅವರ ನೇತೃತ್ವದಲ್ಲಿ ರಚಿಸಿದ ಸಮಿತಿಯೇ ಸರ್ಕಾರಕ್ಕೆ ಸಲಹೆ, ನಿರ್ದೇಶನ ನೀಡಲಿ. ಟನಲ್ ಯೋಜನೆಯನ್ನು ಅವರೂ ಗಮನಿಸಲಿ. ಅಶ್ವಥ ನಾರಾಯಣ್ ಸೇರಿ ಬೇರೆ ಯಾರ ಹೆಸರನ್ನು ಸೂಚಿಸಿದರು ಅವರನ್ನು ಈ ಸಮಿತಿಗೆ ಸೇರ್ಪಡೆ ಮಾಡಲಾಗುವುದು.‌ ನಾವೆಲ್ಲರೂ ಒಟ್ಟಿಗೆ ಸೇರಿ ಕೆಲಸ ಮಾಡಬೇಕು, ಮಾಡೋಣ” ಎಂದರು.

“ನಾನು ಶುಕ್ರವಾರ ರಾತ್ರಿ ಲಾಲ್ ಬಾಗ್ ಬಳಿ ತೆರಳಿ ಎಲ್ಲೆಲ್ಲಿ ಟನಲ್ ರಸ್ತೆಗೆ ಪ್ರವೇಶ ಕಲ್ಪಿಸಬಹುದು ಎಂದು ಪರಿಶೀಲನೆ ಮಾಡಿದ್ದೇನೆ. ಪರ್ಯಾಯ ಮಾರ್ಗಗಳ ಬಗ್ಗೆ ಆಲೋಚನೆ ನಡೆಸುತ್ತಿದ್ದೇನೆ. ಯಾವುದೇ ಆತಂಕ ಪಡಬೇಕಾದ ಅವಶ್ಯಕತೆ ಇಲ್ಲ” ಎಂದರು.

ಮಿಕ್ಕ ಯಾರ ಮಾತಿಗೂ ಕಿಮ್ಮತ್ತಿಲ್ಲ

ನವೆಂಬರ್ ಕ್ರಾಂತಿಯ ಬಗ್ಗೆ ಕೇಳಿದಾಗ, “ನಾನು ಹಾಗೂ ಮುಖ್ಯಮಂತ್ರಿಯವರು ಏನು ಮಾತನಾಡಿದ್ದೇವೆಯೋ ಅದು ಮಾತ್ರ ಮಾತು. ಮಿಕ್ಕ ಯಾರ ಮಾತಿಗೂ ಕಿಮ್ಮತ್ತು ಇಲ್ಲ” ಎಂದರು. ನೀವು ಒಮ್ಮತದಲ್ಲಿ ಇದ್ದೀರಾ ಎಂದು ಕೇಳಿದಾಗ, ” ಒಮ್ಮತದಲ್ಲಿ ಇರುವ ಕಾರಣಕ್ಕೇ 136 ಕ್ಷೇತ್ರ ಗೆದ್ದು 140 ಕ್ಕೆ ನಮ್ಮ ಬಲ‌ ಹೆಚ್ಚಿರುವುದು” ಎಂದರು.ಮುಂದೆ ರಾಜ್ಯೋತ್ಸವದ ಧ್ವಜಾರೋಹಣವನ್ನು ನೀವು ಮಾಡುವ ಸನ್ನಿವೇಶ ಬರಲಿದೆಯೇ ಎಂದು ಕೇಳಿದಾಗ,‌ “ಈಗ ಸ್ಟೇಡಿಯಂ ನಲ್ಲಿ ಮಾಡಿದ್ದು ಏನನ್ನು?” ಎಂದು ಮರು ಪ್ರಶ್ನಿಸಿದರು.

error: Content is protected !!