Home Blog Page 4

ಇರಾನ್–ಇಸ್ರೇಲ್ ಸಂಘರ್ಷ: ಮಾ.28ರವರೆಗೆ 9 ಗಲ್ಫ್ ರಾಷ್ಟ್ರಗಳ ಏರ್‌ಸ್ಪೇಸ್ ಪ್ರವೇಶಿಸದಂತೆ ನಿರ್ಬಂಧ!

0

ನವದೆಹಲಿ: ಮಧ್ಯಪ್ರಾಚ್ಯದಲ್ಲಿ ಉಲ್ಬಣಗೊಂಡಿರುವ ಉದ್ವಿಗ್ನತೆ ಹಿನ್ನೆಲೆ, ನಾಗರಿಕ ವಿಮಾನಯಾನ ಸಚಿವಾಲಯ ಮಹತ್ವದ ನಿರ್ಧಾರ ಕೈಗೊಂಡಿದ್ದು, ಮಾರ್ಚ್ 28ರವರೆಗೆ 9 ಗಲ್ಫ್ ರಾಷ್ಟ್ರಗಳ ವಾಯುಪ್ರದೇಶ ಪ್ರವೇಶಿಸದಂತೆ ವಿಮಾನಯಾನ ಕಂಪನಿಗಳಿಗೆ ಸೂಚನೆ ನೀಡಿದೆ.

ಡಿಜಿಸಿಎ ಮಾರ್ಗಸೂಚಿಯಂತೆ, ಬಹ್ರೇನ್, ಇರಾನ್, ಇರಾಕ್, ಇಸ್ರೇಲ್, ಜೋರ್ಡಾನ್, ಕುವೈತ್, ಲೆಬನಾನ್, ಕತಾರ್ ಹಾಗೂ ಯುನೈಟೆಡ್ ಅರಬ್ ಎಮಿರೇಟ್ಸ್ ವಾಯುಪ್ರದೇಶಗಳನ್ನು ತಾತ್ಕಾಲಿಕವಾಗಿ ತಪ್ಪಿಸುವಂತೆ ಸೂಚಿಸಲಾಗಿದೆ.

ಇರಾನ್–ಇಸ್ರೇಲ್ ನಡುವಿನ ಸಂಘರ್ಷ ಹಾಗೂ ಅಮೆರಿಕದ ಭಾಗವಹಿಸುವಿಕೆಯಿಂದ ಹೆಚ್ಚುತ್ತಿರುವ ಉದ್ವಿಗ್ನತೆ ಹಿನ್ನೆಲೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ. ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಈ ಪ್ರದೇಶಗಳನ್ನು ಹೈರಿಸ್ಕ್ ವಲಯವಾಗಿ ಗುರುತಿಸಲಾಗಿದೆ.

ಇದಲ್ಲದೆ, ಇರಾನ್, ಇಸ್ರೇಲ್, ಲೆಬನಾನ್, ಇರಾಕ್, ಸೌದಿ ಅರೇಬಿಯಾ, ಯುಎಇ, ಕತಾರ್, ಬಹ್ರೇನ್, ಕುವೈತ್, ಓಮನ್ ಮತ್ತು ಜೋರ್ಡಾನ್ ಸೇರಿದಂತೆ 11 ರಾಷ್ಟ್ರಗಳಲ್ಲಿ 32,000 ಅಡಿ ಎತ್ತರಕ್ಕಿಂತ ಕಡಿಮೆ ಹಾರಾಟಗಳನ್ನು ತಪ್ಪಿಸಲು ಸೂಚಿಸಲಾಗಿದೆ.

ಈ ಸೂಚನೆಯ ಪರಿಣಾಮವಾಗಿ ಭಾರತೀಯ ವಿಮಾನಯಾನ ಸಂಸ್ಥೆಗಳ ಕಾರ್ಯಾಚರಣೆಯಲ್ಲಿ ವ್ಯತ್ಯಯ ಉಂಟಾಗಿದೆ. ಈಗಾಗಲೇ ಹಲವು ವಿಮಾನಗಳು ರದ್ದಾಗಿದ್ದು, ಇನ್ನೂ ಕೆಲವು ವಿಮಾನಗಳ ಮಾರ್ಗ ಬದಲಾವಣೆ ಮಾಡಲಾಗಿದೆ. ಇದರಿಂದ ಭಾರತದಿಂದ ಯುರೋಪ್, ಉತ್ತರ ಅಮೆರಿಕಾ ಹಾಗೂ ಮಧ್ಯಪ್ರಾಚ್ಯದ ಕಡೆ ಪ್ರಯಾಣಿಸುವ ಪ್ರಯಾಣಿಕರ ಪ್ರಯಾಣ ಸಮಯ ಹೆಚ್ಚಾಗುವ ಸಾಧ್ಯತೆ ಇದೆ.

ಪ್ರಸ್ತುತ ಪರಿಸ್ಥಿತಿಯನ್ನು ಅವಲೋಕಿಸಿ ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

15 ದಿನದ ಹಸುಗೂಸು ಸಾವು ಪ್ರಕರಣ: ವಿಷ ನೀಡಿ ಕೊಂದ ತಂದೆ ಬಂಧನ!

ಬೆಳಗಾವಿ: ಹೆಣ್ಣುಮಗು ಜನಿಸಿದ ಕಾರಣಕ್ಕೆ 15 ದಿನದ ಹಸುಗೂಸಿಗೆ ವಿಷವುಣಿಸಿ ಹತ್ಯೆ ಮಾಡಿದ ಆರೋಪದಡಿ ತಂದೆಯನ್ನು ಪೊಲೀಸರು ಬಂಧಿಸಿರುವ ದುರ್ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ.

ಬೆಳಗಾವಿ ತಾಲೂಕಿನ ಉಕ್ಕಡ ಗ್ರಾಮದಲ್ಲಿ ಮಾರ್ಚ್ 17ರಂದು ಈ ಘಟನೆ ನಡೆದಿದ್ದು, ಭೀಮರಾಯ ಚಿಪ್ಪಾಡೆ ಎಂಬಾತ ಬಂಧಿತ ಆರೋಪಿಯಾಗಿದ್ದಾನೆ. ಈ ಕುರಿತು ಮಗುವಿನ ತಾಯಿ ಶೀಲಾ ಕಾಕತಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

ಮಾಹಿತಿಯ ಪ್ರಕಾರ, ಒಂದು ವರ್ಷದ ಹಿಂದೆ ಭೀಮರಾಯ ಮತ್ತು ಶೀಲಾ ವಿವಾಹವಾಗಿದ್ದು, ಇತ್ತೀಚೆಗೆ ಅವರಿಗೆ ಹೆಣ್ಣುಮಗು ಜನಿಸಿತ್ತು. ಆದರೆ ಗಂಡು ಮಗುವಿನ ಆಸೆ ಹೊಂದಿದ್ದ ಭೀಮರಾಯ, ಹೆಣ್ಣುಮಗು ಜನಿಸಿದ ಕಾರಣ ಅಸಮಾಧಾನಗೊಂಡಿದ್ದನು ಎನ್ನಲಾಗಿದೆ.

ಘಟನೆ ದಿನ ಪತ್ನಿಯ ತವರಿನಲ್ಲಿ ಇದ್ದ ಭೀಮರಾಯ, ಮಗುವನ್ನು ನೋಡಿ ತೆರಳಿದ ಕೆಲವೇ ಸಮಯದಲ್ಲಿ ಮಗು ಅಸ್ವಸ್ಥಗೊಂಡಿತ್ತು. ತಕ್ಷಣವೇ ಮಗುವನ್ನು ಬೆಳಗಾವಿಯ ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮಗು ಮೃತಪಟ್ಟಿದೆ.

ಪ್ರಾಥಮಿಕವಾಗಿ ಹತ್ತಿ ಬೆಳೆಗಳಿಗೆ ಬಳಸುವ ಕೀಟನಾಶಕವನ್ನು ಮಗುವಿಗೆ ನೀಡಲಾಗಿದೆ ಎಂಬ ಅನುಮಾನ ವ್ಯಕ್ತವಾಗಿತ್ತು. ಮರಣೋತ್ತರ ಪರೀಕ್ಷೆಯ ವರದಿ ಬಳಿಕ ಸಾವಿನ ನಿಖರ ಕಾರಣ ತಿಳಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದರು.

ಘಟನೆ ತಿಳಿಯುತ್ತಿದ್ದಂತೆಯೇ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಆರೋಪ ಎದುರಿಸುತ್ತಿದ್ದ ಭೀಮರಾಯ ಘಟನೆಯ ನಂತರ ಪರಾರಿಯಾಗಿದ್ದನು. ಬಳಿಕ ಪೊಲೀಸರು ಬಲೆ ಬೀಸಿ ಆರೋಪಿಯನ್ನು ಬಂಧಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಕಾಕತಿ ಪೊಲೀಸರು ಮುಂದಿನ ತನಿಖೆ ಮುಂದುವರಿಸಿದ್ದಾರೆ.

ರಸ್ತೆಯಲ್ಲಿ ಹಳೆಯ ವಾಹನ ಬಿಟ್ಟರೆ ಟೋಯಿಂಗ್ ಖಚಿತ: ಡಿಸಿಎಂ ಡಿಕೆ ಶಿವಕುಮಾರ್ ವಾರ್ನಿಂಗ್

ಬೆಂಗಳೂರು: ನಗರದಲ್ಲಿ ಎಲ್ಲೆಂದರಲ್ಲಿ ಹಳೆಯ ವಾಹನಗಳನ್ನು ನಿಲ್ಲಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಖಡಕ್ ಎಚ್ಚರಿಕೆ ನೀಡಿದ್ದಾರೆ.

ವಿಧಾನಸೌಧದಲ್ಲಿ ಜಿಬಿಎ ಐದು ನಗರ ಪಾಲಿಕೆಗಳ 2026-27ನೇ ಸಾಲಿನ ಬಜೆಟ್ ಸಿದ್ಧತೆ ಕುರಿತು ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ರಸ್ತೆಗಳಲ್ಲಿ ಹೆಚ್ಚು ಕಾಲ ನಿಲ್ಲಿಸಿರುವ ಹಳೆಯ ವಾಹನಗಳನ್ನು ಟೋಯಿಂಗ್ ಮಾಡಿ ನಿರ್ದಿಷ್ಟ ಸ್ಥಳಗಳಿಗೆ ಕೊಂಡೊಯ್ಯಲಾಗುವುದು. ಈ ಕಾರ್ಯಕ್ಕಾಗಿ ಬೆಳ್ಳಳ್ಳಿ, ಮಿಟಗಾನಹಳ್ಳಿ, ಸೊಂಡೆಕೊಪ್ಪ ಹಾಗೂ ಗಿಡ್ಡೇನಹಳ್ಳಿ ಪ್ರದೇಶಗಳಲ್ಲಿ ಜಾಗಗಳನ್ನು ಈಗಾಗಲೇ ಗುರುತಿಸಲಾಗಿದೆ. ನಗರದಲ್ಲಿ ಟ್ರಾಫಿಕ್ ನಿಯಂತ್ರಣಕ್ಕೆ ಇದು ಮಹತ್ವದ ಹೆಜ್ಜೆಯಾಗಲಿದೆ ಎಂದರು.

ಇನ್ನು ಮುಂದೆ ನಾನ್-ಪಾರ್ಕಿಂಗ್ ಪ್ರದೇಶಗಳಲ್ಲಿ ವಾಹನ ನಿಲ್ಲಿಸಿದರೂ ಕೂಡ ಟೋಯಿಂಗ್ ಕ್ರಮ ಜರುಗಲಿದೆ. ಪ್ರತಿಯೊಂದು ಕಾರ್ಪೊರೇಷನ್‌ಗೆ ಎರಡು ಟೋಯಿಂಗ್ ವಾಹನಗಳನ್ನು ಒದಗಿಸಲಾಗಿದ್ದು, ಈಗಾಗಲೇ ಅಗತ್ಯ ಸೂಚನೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಬೀದಿ ಬದಿ ವ್ಯಾಪಾರ ಸಂಬಂಧ ಮಾತನಾಡಿದ ಅವರು, ವ್ಯಾಪಾರ ನಡೆಸಲು ನಿಗದಿತ ಸ್ಥಳಗಳನ್ನು ಗುರುತಿಸಲಾಗುವುದು. ನೋಂದಣಿ ಮಾಡಿಕೊಂಡವರಿಗೆ ಮಾತ್ರ ವ್ಯಾಪಾರ ಮಾಡಲು ಅವಕಾಶ ನೀಡಲಾಗುವುದು. ಐಡೆಂಟಿಟಿ ಕಾರ್ಡ್ ಹೊಂದಿರುವವರಿಗೆ ಮಾತ್ರ ಮಾರಾಟಕ್ಕೆ ಅನುಮತಿ ನೀಡುವ ಕ್ರಮ ಜಾರಿಯಾಗಲಿದೆ ಎಂದರು.

ಅದೇ ರೀತಿ, ನಗರದಲ್ಲಿ ಅನಧಿಕೃತವಾಗಿ ಫ್ಲೆಕ್ಸ್ ಅಳವಡಿಸುವವರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಲಾಗುವುದು. ಫ್ಲೆಕ್ಸ್ ಹಾಕುವವರಿಗೆ 50 ಸಾವಿರದಿಂದ 1 ಲಕ್ಷ ರೂಪಾಯಿ ವರೆಗೆ ದಂಡ ವಿಧಿಸಲಾಗುವುದು ಎಂದು ಎಚ್ಚರಿಸಿದರು.

ಬೀದಿ ಬದಿ ವ್ಯಾಪಾರ ಹಾಗೂ ಫುಟ್‌ಪಾತ್ ಸಮಸ್ಯೆ ನಿವಾರಣೆಗೆ ಹೊಸ ಪಾಲಿಸಿ ತರಲು ಯೋಚನೆ ನಡೆಯುತ್ತಿದೆ. ಪಾರ್ಕ್‌ಗಳಲ್ಲಿ ನಡೆಯುತ್ತಿರುವ ಅನಧಿಕೃತ ಚಟುವಟಿಕೆಗಳನ್ನು ತಡೆಗಟ್ಟಲು ಪಾರ್ಕ್ ಸಮಯ ನಿಗದಿ ಮಾಡುವುದಾಗಿ ತಿಳಿಸಿದರು.

ಒಟ್ಟಾರೆ, ಬೆಂಗಳೂರು ನಗರದಲ್ಲಿ ಟ್ರಾಫಿಕ್, ವ್ಯಾಪಾರ ಮತ್ತು ಸಾರ್ವಜನಿಕ ಶಿಸ್ತಿನ ನಿಯಂತ್ರಣಕ್ಕಾಗಿ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದೆ.

ಕೆಂಪೇಗೌಡ ಏರ್‌ಪೋರ್ಟ್‌ಗೆ ಜಾಗತಿಕ ಮನ್ನಣೆ: ಸತತ 3ನೇ ಬಾರಿ ಪ್ರಶಸ್ತಿ!

ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿಯಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತೊಂದು ಮಹತ್ವದ ಸಾಧನೆ ಮಾಡಿದೆ.

‘ಸ್ಕೈಟ್ರಾಕ್ಸ್ ವರ್ಲ್ಡ್ ಏರ್‌ಪೋರ್ಟ್ ಅವಾರ್ಡ್ಸ್ 2026’ರಲ್ಲಿ ಸತತ ಮೂರನೇ ಬಾರಿಗೆ ‘ಭಾರತ ಮತ್ತು ದಕ್ಷಿಣ ಏಷ್ಯಾದ ಅತ್ಯುತ್ತಮ ಪ್ರಾದೇಶಿಕ ವಿಮಾನ ನಿಲ್ದಾಣ’ ಎಂಬ ಗೌರವಕ್ಕೆ ಪಾತ್ರವಾಗಿದೆ.

ಈ ಪ್ರಶಸ್ತಿ ಕೆಂಪೇಗೌಡ ಏರ್‌ಪೋರ್ಟ್‌ನ್ನು ಪ್ರಮುಖ ಜಾಗತಿಕ ಪ್ರಯಾಣ ಕೇಂದ್ರಗಳಲ್ಲಿ ಒಂದಾಗಿ ಮತ್ತೊಮ್ಮೆ ಗುರುತಿಸಿದೆ. ವಿಶ್ವದ ವಿಮಾನ ನಿಲ್ದಾಣಗಳ ಶ್ರೇಯಾಂಕದಲ್ಲೂ ಗಮನಾರ್ಹ ಪ್ರಗತಿ ಸಾಧಿಸಿರುವ ಇದು, 48ನೇ ಸ್ಥಾನದಿಂದ 41ನೇ ಸ್ಥಾನಕ್ಕೆ ಏರಿಕೆ ಕಂಡಿದೆ. ಇದರೊಂದಿಗೆ ಅಗ್ರ 50 ವಿಮಾನ ನಿಲ್ದಾಣಗಳ ಪಟ್ಟಿಯಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ.

ವಿಮಾನ ನಿಲ್ದಾಣಗಳ ಶ್ರೇಷ್ಠತೆಯನ್ನು ಅಳೆಯುವ ಜಾಗತಿಕ ಮಾನದಂಡವಾಗಿರುವ ಸ್ಕೈಟ್ರಾಕ್ಸ್ ಅವಾರ್ಡ್ಸ್, ಚೆಕ್-ಇನ್, ಭದ್ರತೆ, ವಲಸೆ, ಚಿಲ್ಲರೆ ಸೇವೆಗಳು ಸೇರಿದಂತೆ ಹಲವು ಅಂಶಗಳಲ್ಲಿ ಗ್ರಾಹಕ ಅನುಭವವನ್ನು ಪರಿಗಣಿಸಿ ನೀಡಲಾಗುತ್ತದೆ. ಈ ಎಲ್ಲಾ ಕ್ಷೇತ್ರಗಳಲ್ಲಿ ಸ್ಥಿರ ಸಾಧನೆ ತೋರಿದ ಹಿನ್ನೆಲೆಯಲ್ಲಿ ಈ ಗೌರವ ಲಭಿಸಿದೆ.

ಇದರ ಜೊತೆಗೆ, ಕೆಂಪೇಗೌಡ ಏರ್‌ಪೋರ್ಟ್ ನಾಲ್ಕನೇ ಬಾರಿಗೆ ‘ವಿಶ್ವದ ಅತ್ಯುತ್ತಮ ಆಗಮನದ ವಿಮಾನ ನಿಲ್ದಾಣ’ ಎಂಬ ಮನ್ನಣೆಯನ್ನೂ ಪಡೆದುಕೊಂಡಿದೆ. ಟರ್ಮಿನಲ್ 2ಗೆ ಸ್ಕೈಟ್ರಾಕ್ಸ್‌ನಿಂದ ‘5-ಸ್ಟಾರ್’ ರೇಟಿಂಗ್ ದೊರೆತಿದ್ದು, ಇದು ಭಾರತದ ಮೊದಲ ಟರ್ಮಿನಲ್ ಎಂಬ ದಾಖಲೆ ನಿರ್ಮಿಸಿದೆ.

ಹಾಗೆಯೇ, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳ ಮಂಡಳಿಯ ಕಾರ್ಬನ್ ಮಾನ್ಯತೆ ಕಾರ್ಯಕ್ರಮದಡಿ 5ನೇ ಹಂತ ಹಾಗೂ ಪ್ರವೇಶ ಸಾಧ್ಯತೆ ಮಾನ್ಯತೆಯಡಿ 3ನೇ ಹಂತವನ್ನು ಸಾಧಿಸಿರುವುದು ಈ ವಿಮಾನ ನಿಲ್ದಾಣದ ಜಾಗತಿಕ ಮಟ್ಟದ ಗುಣಮಟ್ಟವನ್ನು ಮತ್ತಷ್ಟು ಎತ್ತಿಹಿಡಿದಿದೆ.

ಒಟ್ಟಾರೆ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಸತತ ಸಾಧನೆಗಳ ಮೂಲಕ ವಿಶ್ವ ಮಟ್ಟದಲ್ಲಿ ತನ್ನ ಪ್ರತಿಷ್ಠೆಯನ್ನು ಬಲಪಡಿಸಿಕೊಂಡಿದೆ.

ಕಳಪೆ ಕ್ರೆಡಿಟ್ ಇದ್ದರೆ ಬ್ಯಾಂಕ್ ಕೆಲಸ ಕಷ್ಟ: ಹೊಸ ನಿಯಮ ಜಾರಿ, CIBIL ಸ್ಕೋರ್ ಕಡ್ಡಾಯ!

0

ನವದೆಹಲಿ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸರ್ಕಾರಿ ಬ್ಯಾಂಕ್ ಉದ್ಯೋಗ ಪಡೆಯುವುದು ಇನ್ನಷ್ಟು ಕಠಿಣವಾಗುತ್ತಿದ್ದು, ನೇಮಕಾತಿ ಪ್ರಕ್ರಿಯೆಯಲ್ಲಿ ಮಹತ್ವದ ಬದಲಾವಣೆ ಜಾರಿಗೆ ಬಂದಿದೆ.

ಇದೀಗ ಅಭ್ಯರ್ಥಿಗಳ ಕ್ರೆಡಿಟ್ ಸ್ಕೋರ್  ಪರಿಶೀಲನೆ ಕಡ್ಡಾಯಗೊಳಿಸಲಾಗಿದೆ. ಇದುವರೆಗೆ ಅಭ್ಯರ್ಥಿಗಳು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೇಲೆ ಹೆಚ್ಚು ಗಮನ ಹರಿಸುತ್ತಿದ್ದರು. ಆದರೆ, ಬ್ಯಾಂಕಿಂಗ್ ವಲಯದಲ್ಲಿ ಪಾರದರ್ಶಕತೆ ಮತ್ತು ಜವಾಬ್ದಾರಿತನ ಹೆಚ್ಚಿಸಲು ಹೊಸ ನಿಯಮಗಳನ್ನು ಜಾರಿಗೆ ತರಲಾಗಿದೆ. ಸಾರ್ವಜನಿಕರ ಹಣವನ್ನು ನಿರ್ವಹಿಸುವ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳು ಶುದ್ಧ ಹಣಕಾಸು ದಾಖಲೆ ಹೊಂದಿರಬೇಕು ಎಂಬುದು ಬ್ಯಾಂಕುಗಳ ಉದ್ದೇಶವಾಗಿದೆ.

ಸಾಲ ಮರುಪಾವತಿಯಲ್ಲಿ ವಿಳಂಬ ಮಾಡಿರುವವರು ಅಥವಾ ಕ್ರೆಡಿಟ್ ಕಾರ್ಡ್ ಬಾಕಿಗಳನ್ನು ಸರಿಯಾದ ಸಮಯಕ್ಕೆ ಪಾವತಿಸದವರ ವಿಶ್ವಾಸಾರ್ಹತೆಯ ಮೇಲೆ ಬ್ಯಾಂಕುಗಳು ಸಂಶಯ ವ್ಯಕ್ತಪಡಿಸುತ್ತವೆ. ಈ ಹಿನ್ನೆಲೆಯಲ್ಲಿ ಕಳಪೆ ಕ್ರೆಡಿಟ್ ದಾಖಲೆ ಹೊಂದಿರುವವರಿಗೆ ಉದ್ಯೋಗ ಸಿಗುವುದು ಕಷ್ಟವಾಗಬಹುದು.

ಈ ನಿಯಮ ಎಲ್ಲಾ ಬ್ಯಾಂಕಿಂಗ್ ಉದ್ಯೋಗಾಕಾಂಕ್ಷಿಗಳಿಗೆ ಅನ್ವಯವಾಗಲಿದೆ. ವಿಶೇಷವಾಗಿ ಇಎಂಐ ಪಾವತಿಸದೇ ಇರುವವರು ಅಥವಾ ಬಾಕಿ ಉಳಿಸಿಕೊಂಡಿರುವವರು ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ. ಆಯ್ಕೆ ಪ್ರಕ್ರಿಯೆ ವೇಳೆ ಅಭ್ಯರ್ಥಿಗಳು ತಮ್ಮ ಸಿಬಿಲ್ ವರದಿಯನ್ನು ಸಲ್ಲಿಸಬೇಕಾಗುತ್ತದೆ. ದಾಖಲೆಗಳಲ್ಲಿ ವ್ಯತ್ಯಾಸ ಕಂಡುಬಂದರೆ ಅಥವಾ ಸಮರ್ಪಕ ವಿವರಣೆ ನೀಡಲು ವಿಫಲರಾದರೆ, ಅಂತಿಮವಾಗಿ ಆಯ್ಕೆಯಾಗಿದ್ದರೂ ಉದ್ಯೋಗ ಕಳೆದುಕೊಳ್ಳುವ ಸಾಧ್ಯತೆ ಇದೆ.

ಆದರೆ, ಶಿಕ್ಷಣ ಸಾಲ ಪಡೆದ ವಿದ್ಯಾರ್ಥಿಗಳಿಗೆ ಕೆಲವು ಸಡಿಲಿಕೆ ನೀಡಲಾಗಿದೆ. ಹಣಕಾಸಿನ ಅಡಚಣೆಯಿಂದಾಗಿ ಶಿಕ್ಷಣ ಸಾಲದ ಮರುಪಾವತಿ ವಿಳಂಬವಾಗಿದ್ದರೆ, ಅದನ್ನು ಮಾನವೀಯ ನೆಲೆಯಲ್ಲಿ ಪರಿಗಣಿಸಲಾಗುತ್ತದೆ ಎಂದು ಬ್ಯಾಂಕುಗಳು ತಿಳಿಸಿವೆ.

ತಜ್ಞರ ಪ್ರಕಾರ, ಬ್ಯಾಂಕಿಂಗ್ ಉದ್ಯೋಗಾಕಾಂಕ್ಷಿಗಳು ತಮ್ಮ ಕ್ರೆಡಿಟ್ ಸ್ಕೋರ್‌ನ್ನು ನಿಯಮಿತವಾಗಿ ಪರಿಶೀಲಿಸಿ, ಬಾಕಿ ಇರುವ ಸಾಲಗಳನ್ನು ತಕ್ಷಣ ತೀರಿಸುವುದು ಉತ್ತಮ. ಜೊತೆಗೆ ಬ್ಯಾಂಕಿನಿಂದ ‘ನೋ ಒಬ್ಜೆಕ್ಷನ್ ಸರ್ಟಿಫಿಕೆಟ್’ ಪಡೆದುಕೊಳ್ಳುವುದರಿಂದ ಭವಿಷ್ಯದಲ್ಲಿ ಉದ್ಯೋಗದ ವೇಳೆ ಎದುರಾಗುವ ಸಮಸ್ಯೆಗಳನ್ನು ತಪ್ಪಿಸಬಹುದು.

ಕೋಲ್ಕತ್ತಾ ಆಸ್ಪತ್ರೆಯಲ್ಲಿ ನಿರ್ಲಕ್ಷ್ಯ ಆರೋಪ: ಲಿಫ್ಟ್‌ನಲ್ಲಿ ಸಿಲುಕಿ ವ್ಯಕ್ತಿ ಸಾವು

ಕೋಲ್ಕತ್ತಾ: ಕೋಲ್ಕತ್ತಾದ ಆರ್ಜಿ ಕರ್ ಆಸ್ಪತ್ರೆಗೆ ಸಂಬಂಧಿಸಿದಂತೆ ಮತ್ತೊಂದು ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಲಿಫ್ಟ್‌ನಲ್ಲಿ ಸಿಲುಕಿಕೊಂಡ ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಘಟನೆ ತೀವ್ರ ಚರ್ಚೆಗೆ ಕಾರಣವಾಗಿದೆ.

ಅರೂಪ್ ಬಂಡೋಪಾಧ್ಯಾಯ ಎಂದು ಗುರುತಿಸಲ್ಪಟ್ಟ ಮೃತರು, ತಮ್ಮ ಮಗನ ಚಿಕಿತ್ಸೆಗೆ ಆಸ್ಪತ್ರೆಗೆ ಬಂದಿದ್ದರು. ಮಗನ ಕಾಲಿನ ಶಸ್ತ್ರಚಿಕಿತ್ಸೆಯ ನಂತರ ಅವರು ಲಿಫ್ಟ್ ಮೂಲಕ ಕೆಳಕ್ಕೆ ಬರುತ್ತಿದ್ದ ವೇಳೆ, ಲಿಫ್ಟ್ ಅಚಾನಕ್ ಸ್ಥಗಿತಗೊಂಡು ಮೂವರು ಒಳಗೆ ಸಿಲುಕಿಕೊಂಡಿದ್ದರು.

ಬಹಳ ಹೊತ್ತಿನವರೆಗೆ ಅವರು ಹಿಂದಿರುಗದಿದ್ದರಿಂದ ಆತಂಕಗೊಂಡ ಕುಟುಂಬ ಸದಸ್ಯರು ಹುಡುಕಾಟ ಆರಂಭಿಸಿದ್ದು, ಕೊನೆಗೆ ಲಿಫ್ಟ್ ಒಳಗೇ ಅವರ ಶವ ಪತ್ತೆಯಾಗಿದೆ.

ಆಸ್ಪತ್ರೆಯಲ್ಲಿ ತುರ್ತು ಪರಿಸ್ಥಿತಿಗೆ ಸ್ಪಂದಿಸಲು ಲಿಫ್ಟ್‌ಮ್ಯಾನ್ ಇಲ್ಲದಿರುವುದು ಹಾಗೂ ಲಿಫ್ಟ್ ದುರಸ್ತಿ ಮಾಡದಿರುವುದು ಗಂಭೀರ ನಿರ್ಲಕ್ಷ್ಯ ಎಂದು ಆರೋಪಗಳು ಕೇಳಿಬಂದಿವೆ. ಪೊಲೀಸರು ಅಸ್ವಾಭಾವಿಕ ಸಾವಿನ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರೆದಿದೆ.

ಪ್ರೀಮಿಯಮ್ ಪೆಟ್ರೋಲ್ ದರ ಏರಿಕೆ: ಲೀಟರ್‌ಗೆ ₹2.30 ಹೆಚ್ಚಳ

ನವದೆಹಲಿ: ದೇಶದಲ್ಲಿ ಪ್ರೀಮಿಯಮ್ ಪೆಟ್ರೋಲ್ ದರವನ್ನು ಲೀಟರ್‌ಗೆ ₹2.30ರಷ್ಟು ಹೆಚ್ಚಳ ಮಾಡಲಾಗಿದೆ. ಜಾಗತಿಕ ತೈಲ ಸರಬರಾಜಿನಲ್ಲಿ ವ್ಯತ್ಯಯ ಉಂಟಾದ ಪರಿಣಾಮ ಈ ಏರಿಕೆ ಆಗಿರಬಹುದು ಎಂದು ಅಂದಾಜಿಸಲಾಗುತ್ತಿದೆ.

ತೈಲ ಮಾರುಕಟ್ಟೆ ಕಂಪನಿಗಳಾದ ಐಒಸಿಎಲ್, ಬಿಪಿಸಿಎಲ್ ಹಾಗೂ ಎಚ್ಪಿಸಿಎಲ್ ಈ ದರ ಪರಿಷ್ಕರಣೆ ಮಾಡಿವೆ. ಆದರೆ ಸಾಮಾನ್ಯ ಪೆಟ್ರೋಲ್ ಹಾಗೂ ಡೀಸಲ್ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.

ಹೈ ಆಕ್ಟೇನ್ ಗುಣಮಟ್ಟ ಹೊಂದಿರುವ ಪ್ರೀಮಿಯಮ್ ಪೆಟ್ರೋಲ್ ಎಂಜಿನ್ ಕಾರ್ಯಕ್ಷಮತೆ ಹೆಚ್ಚಿಸುವುದರಿಂದಾಗಿ ಸಾಮಾನ್ಯ ಪೆಟ್ರೋಲಿಗಿಂತ ಹೆಚ್ಚಿನ ದರದಲ್ಲಿರುತ್ತದೆ.

ಬೆಂಗಳೂರು ಸೇರಿದಂತೆ ಹಲವು ನಗರಗಳಲ್ಲಿ ಸಾಮಾನ್ಯ ಪೆಟ್ರೋಲ್ ದರ ಸ್ಥಿರವಾಗಿದ್ದು, ಪ್ರೀಮಿಯಮ್ ಪೆಟ್ರೋಲ್ ಮಾತ್ರ ₹2.09ರಿಂದ ₹2.35ರವರೆಗೆ ಏರಿಕೆ ಕಂಡಿದೆ.

ಹಿಡನ್ ಕ್ಯಾಮೆರಾ ಬಳಸಿ 58 ಮಹಿಳೆಯರ ಅಶ್ಲೀಲ ವಿಡಿಯೋ: ಸಂಖ್ಯಾಶಾಸ್ತ್ರಜ್ಞ ಬಂಧನ

ಮುಂಬೈ/ನಾಸಿಕ್: ಮಹಾರಾಷ್ಟ್ರದ ನಾಸಿಕ್‌ನಲ್ಲಿ ಆಧ್ಯಾತ್ಮಿಕತೆಯ ಹೆಸರಿನಲ್ಲಿ ಮಹಿಳೆಯರನ್ನು ಮೋಸಗೊಳಿಸಿ ಲೈಂಗಿಕ ಶೋಷಣೆ ನಡೆಸಿದ ಆರೋಪದ ಮೇಲೆ ಪ್ರಭಾವಿ ಸಂಖ್ಯಾಶಾಸ್ತ್ರಜ್ಞ ಅಶೋಕ್ ಖರತ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.

67 ವರ್ಷದ ಖರತ್, ತನ್ನನ್ನು ‘ಕ್ಯಾಪ್ಟನ್’ ಎಂದು ಪರಿಚಯಿಸಿಕೊಂಡು ಮಹಿಳೆಯರ ವೈಯಕ್ತಿಕ ಸಮಸ್ಯೆಗಳನ್ನು ಪರಿಹರಿಸುವ ಭರವಸೆ ನೀಡಿ ಅವರನ್ನು ತನ್ನ ಸಂಪರ್ಕಕ್ಕೆ ಕರೆಸಿಕೊಳ್ಳುತ್ತಿದ್ದರೆಂದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಪೊಲೀಸರ ಪ್ರಕಾರ, ಮಹಿಳೆಯರಿಗೆ ಮಾದಕ ದ್ರವ್ಯ ನೀಡಿ ವಶಪಡಿಸಿಕೊಂಡು, ಭಯಭೀತಿಗೊಳಿಸಿ ಲೈಂಗಿಕ ದೌರ್ಜನ್ಯ ನಡೆಸಲಾಗುತ್ತಿತ್ತು. ದಾಳಿ ವೇಳೆ ಅವರ ಕಚೇರಿಯಿಂದ ಗುಪ್ತವಾಗಿ ಚಿತ್ರೀಕರಿಸಲಾದ ಅಶ್ಲೀಲ ವಿಡಿಯೋಗಳನ್ನು ಒಳಗೊಂಡ ಪೆನ್‌ಡ್ರೈವ್ ವಶಪಡಿಸಿಕೊಳ್ಳಲಾಗಿದೆ.

ಈ ಪ್ರಕರಣದಲ್ಲಿ ಒಬ್ಬ ಮಹಿಳೆಯ ದೂರಿನ ಆಧಾರದ ಮೇಲೆ ತನಿಖೆ ಆರಂಭವಾದರೂ, ನಂತರ ಇದು ಹಲವು ಮಹಿಳೆಯರನ್ನು ಒಳಗೊಂಡ ದೊಡ್ಡ ಜಾಲವಿರುವುದು ಬಹಿರಂಗವಾಗಿದೆ.

ಮಹಾರಾಷ್ಟ್ರ ಸರ್ಕಾರ ಈ ಪ್ರಕರಣದ ಸಮಗ್ರ ತನಿಖೆಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿದ್ದು, ಐಪಿಎಸ್ ಅಧಿಕಾರಿ ತೇಜಸ್ವಿನಿ ಸತ್ಪುಟೆ ನೇತೃತ್ವದಲ್ಲಿ ವಿಚಾರಣೆ ಮುಂದುವರಿದಿದೆ.

2027 ವಿಶ್ವಕಪ್‌ಗೆ ಟೀಂ ಇಂಡಿಯಾ ಸಿದ್ಧತೆ: 20 ಆಟಗಾರರ ಪಟ್ಟಿ ಸಿದ್ಧಪಡಿಸಿದ ಬಿಸಿಸಿಐ!

0

ಕಳೆದ ಮೂರು ವರ್ಷಗಳಲ್ಲಿ ಐಸಿಸಿ ಟೂರ್ನಿಗಳಲ್ಲಿ ಸತತ ಯಶಸ್ಸು ಸಾಧಿಸಿರುವ ಟೀಂ ಇಂಡಿಯಾ ಇದೀಗ 2027ರ ಏಕದಿನ ವಿಶ್ವಕಪ್‌ಗೆ ಕಣ್ಣಿಟ್ಟಿದ್ದು, ಬಿಸಿಸಿಐ ಈಗಿನಿಂದಲೇ ಸಿದ್ಧತೆ ಆರಂಭಿಸಿದೆ.

2024ರಲ್ಲಿ ಟಿ20 ವಿಶ್ವಕಪ್ ಗೆದ್ದ ಭಾರತ, 2025ರಲ್ಲಿ ಚಾಂಪಿಯನ್ಸ್ ಟ್ರೋಫಿಯನ್ನು ತನ್ನದಾಗಿಸಿಕೊಂಡಿತ್ತು. ಅದಾದ ಬಳಿಕ 2026ರಲ್ಲಿ ಮತ್ತೊಮ್ಮೆ ಟಿ20 ವಿಶ್ವಕಪ್ ಜಯಿಸಿ ಐಸಿಸಿ ಟ್ರೋಫಿಗಳಲ್ಲಿ ಹ್ಯಾಟ್ರಿಕ್ ಸಾಧಿಸಿದೆ. ಇದೀಗ ಮುಂದಿನ ಗುರಿಯಾಗಿ 2027ರ ಏಕದಿನ ವಿಶ್ವಕಪ್‌ನ್ನು ಗೆಲ್ಲುವತ್ತ ಗಮನ ಹರಿಸಲಾಗಿದೆ.

2027ರ ಏಕದಿನ ವಿಶ್ವಕಪ್ ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಹಾಗೂ ನಮೀಬಿಯಾದಲ್ಲಿ ಅಕ್ಟೋಬರ್-ನವೆಂಬರ್ ತಿಂಗಳಲ್ಲಿ ನಡೆಯಲಿದೆ. 2023ರ ಫೈನಲ್‌ನಲ್ಲಿ ಸೋತಿದ್ದ ಟೀಂ ಇಂಡಿಯಾ ಈ ಬಾರಿ ಟ್ರೋಫಿ ಗೆಲ್ಲುವ ದೃಢನಿಶ್ಚಯ ಹೊಂದಿದೆ.

ಈ ಹಿನ್ನೆಲೆ ಬಿಸಿಸಿಐ ಈಗಾಗಲೇ 20 ಆಟಗಾರರ ಪಟ್ಟಿಯನ್ನು ಸಿದ್ಧಪಡಿಸಿದೆ ಎಂದು ವರದಿಯಾಗಿದೆ. ಆಯ್ಕೆ ಮಂಡಳಿ ಈ ಆಟಗಾರರ ಪ್ರದರ್ಶನದ ಮೇಲೆ ಮಾತ್ರ ಗಮನ ಹರಿಸಲಿದ್ದು, ಐಪಿಎಲ್ ಸೇರಿದಂತೆ ವಿವಿಧ ಟೂರ್ನಿಗಳಲ್ಲಿ ಅವರ ಆಟವನ್ನು ನಿಕಟವಾಗಿ ಅವಲೋಕಿಸಲಿದೆ.

ಐಪಿಎಲ್ ನಡೆಯುವ ವೇಳೆ ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್ ನೇತೃತ್ವದ ತಂಡದ ಸದಸ್ಯರಾದ ಶಿವಸುಂದರ್ ದಾಸ್, ಆರ್.ಪಿ. ಸಿಂಗ್, ಅಜಯ್ ರಾತ್ರ ಮತ್ತು ಪ್ರಗ್ಯಾನ್ ಓಜಾ ವಿವಿಧ ನಗರಗಳಲ್ಲಿ ನಡೆಯುವ ಪಂದ್ಯಗಳನ್ನು ವೀಕ್ಷಿಸಲಿದ್ದಾರೆ. ಪ್ರತಿ ಆಯ್ಕೆದಾರರು ವಾರಕ್ಕೆ ಕನಿಷ್ಠ ಒಂದು ಪಂದ್ಯ ವೀಕ್ಷಿಸುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿದುಬಂದಿದೆ.

ಮುಂಬೈ, ಕೊಲ್ಕತ್ತಾ, ದೆಹಲಿ, ಬೆಂಗಳೂರು ಹಾಗೂ ಹೈದರಾಬಾದ್‌ನಲ್ಲಿ ನಡೆಯುವ ಪಂದ್ಯಗಳಲ್ಲಿ ಆಯ್ಕೆದಾರರು ಹಾಜರಿದ್ದು ಆಟಗಾರರ ಪ್ರದರ್ಶನವನ್ನು ಸೂಕ್ಷ್ಮವಾಗಿ ಪರಿಶೀಲಿಸಲಿದ್ದಾರೆ.

ಇದರ ಜೊತೆಗೆ 2028ರ ಟಿ20 ವಿಶ್ವಕಪ್ ಹಾಗೂ ಒಲಿಂಪಿಕ್ ಕ್ರೀಡಾಕೂಟವನ್ನು ಗಮನದಲ್ಲಿಟ್ಟುಕೊಂಡು ಈ ಪಟ್ಟಿಯನ್ನು ರೂಪಿಸಲಾಗಿದೆ ಎಂದು ಹೇಳಲಾಗಿದೆ. ಹೀಗಾಗಿ ಈಗಾಗಲೇ ಆಯ್ಕೆಯಾದ 20 ಆಟಗಾರರ ಹೊರತಾಗಿ ಇತರರಿಗೆ ವಿಶ್ವಕಪ್ ತಂಡದಲ್ಲಿ ಅವಕಾಶ ಸಿಗುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ.

ಗದಗದಲ್ಲಿ ಕಾಡುಹಂದಿ ದಾಳಿ: ಕುರಿ ಕಾಯುತ್ತಿದ್ದವನ ಮೇಲೆ ಅಟ್ಯಾಕ್, ಸ್ಥಿತಿ ಗಂಭೀರ!

0

ಗದಗ: ಜಿಲ್ಲೆಯ ಶಿರಹಟ್ಟಿ ತಾಲೂಕಿನ ಜಲ್ಲಿಗೇರಿ ತಾಂಡಾ ಬಳಿ ಕುರಿ ಮೇಯಿಸುತ್ತಿದ್ದ ವೇಳೆ ಕುರಿಗಾಯಿಯ ಮೇಲೆ ಕಾಡುಹಂದಿ ದಾಳಿ ನಡೆಸಿದ ಘಟನೆ ನಡೆದಿದೆ.

ಜಲ್ಲಿಗೇರಿ ತಾಂಡಾದ ನಿವಾಸಿ ಮಹಾಂತೇಶ್ ಚವ್ಹಾನ್ ಅವರು ಕಪ್ಪತ್ತಗುಡ್ಡ ಅರಣ್ಯದ ಅಂಚಿನ ಜಮೀನಿನಲ್ಲಿ ಕುರಿಗಳನ್ನು ಮೇಯಿಸುತ್ತಿದ್ದಾಗ ಕಾಡುಹಂದಿ ಏಕಾಏಕಿ ದಾಳಿ ನಡೆಸಿದೆ. ದಾಳಿಯಲ್ಲಿ ಮಹಾಂತೇಶ್ ಅವರಿಗೆ ಮೊಣಕಾಲು, ಮೊಣಕೈ ಹಾಗೂ ಮುಖ ಭಾಗದಲ್ಲಿ ಗಂಭೀರ ಗಾಯಗಳಾಗಿವೆ.

ಕಾಡುಹಂದಿಯನ್ನು ನಾಯಿಗಳು ಬೆನ್ನಟ್ಟಿದ್ದರಿಂದ ಅದು ಆತಂಕಗೊಂಡು ಕುರಿಗಾಯಿಯ ಮೇಲೆ ದಾಳಿ ನಡೆಸಿರಬಹುದು ಎಂದು ಸ್ಥಳೀಯರು ಶಂಕಿಸಿದ್ದಾರೆ.

ಗಾಯಾಳುವನ್ನು ತಕ್ಷಣ ಶಿರಹಟ್ಟಿ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಘಟನಾ ಸ್ಥಳಕ್ಕೆ ಶಿರಹಟ್ಟಿ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ಕುರಿತು ಮಾಹಿತಿ ಸಂಗ್ರಹಿಸಿದ್ದಾರೆ.

error: Content is protected !!