ಬೆಂಗಳೂರು: ನಗರದ ಪ್ರತಿಷ್ಠಿತ ಎಚ್‌ಸಿಜಿ ಕ್ಯಾನ್ಸರ್ ಆಸ್ಪತ್ರೆಗೆ ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ (ಸಿಡಿಎಸ್‌ಸಿಒ) ಕಠಿಣ ಕ್ರಮ ಕೈಗೊಂಡಿದೆ. ಮಾನವ ಕ್ಲಿನಿಕಲ್ ಪ್ರಯೋಗಗಳಲ್ಲಿ ಗಂಭೀರ ಲೋಪಗಳು ಹಾಗೂ ನಿಯಮ ಉಲ್ಲಂಘನೆಗಳು ಕಂಡುಬಂದ ಹಿನ್ನೆಲೆಯಲ್ಲಿ, ಆಸ್ಪತ್ರೆಯ ನೈತಿಕ ಸಮಿತಿಗೆ ಮುಂದಿನ 24 ತಿಂಗಳ ಕಾಲ ಯಾವುದೇ ಹೊಸ ಕ್ಲಿನಿಕಲ್ ಟ್ರಯಲ್‌ಗಳನ್ನು ನಡೆಸದಂತೆ ನಿರ್ಬಂಧ ಹೇರಲಾಗಿದೆ.
ಆಸ್ಪತ್ರೆಯ ನೈತಿಕ ಸಮಿತಿಯ ಮಾಜಿ ಅಧ್ಯಕ್ಷ ಹಾಗೂ ನಿವೃತ್ತ ನ್ಯಾಯಮೂರ್ತಿ ಪಿ. ಕೃಷ್ಣಭಟ್ ಸಲ್ಲಿಸಿದ್ದ ಲಿಖಿತ ದೂರಿನ ಆಧಾರದ ಮೇಲೆ ಪ್ರಕರಣ ಬೆಳಕಿಗೆ ಬಂದಿತ್ತು. ಬಳಿಕ ಕೇಂದ್ರ ಹಾಗೂ ರಾಜ್ಯ ಔಷಧ ನಿಯಂತ್ರಣ ಸಂಸ್ಥೆಗಳು ನಡೆಸಿದ ಜಂಟಿ ತನಿಖೆಯಲ್ಲಿ ಹಲವು ಮಾರ್ಗಸೂಚಿಗಳ ಉಲ್ಲಂಘನೆ ನಡೆದಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ನಿಷೇಧಕ್ಕೆ ಕಾರಣವೇನು?
ತನಿಖೆಯಲ್ಲಿ, ಔಷಧ ಪ್ರಯೋಗಗಳ ವೇಳೆ ಮೃತಪಟ್ಟ ಕೆಲವು ರೋಗಿಗಳ ಮಾಹಿತಿಯನ್ನು ನಿಯಮಾನುಸಾರ ನಿಗದಿತ ಅವಧಿಯಲ್ಲಿ ನಿಯಂತ್ರಕ ಸಂಸ್ಥೆಗೆ ಸಲ್ಲಿಸದಿರುವುದು ಪತ್ತೆಯಾಗಿದೆ. ಕೆಲ ಪ್ರಕರಣಗಳಲ್ಲಿ ಸಾವಿನ ವರದಿಗಳನ್ನೇ ದಾಖಲಿಸದೇ ಮುಚ್ಚಿಡಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ.
ಇದಲ್ಲದೆ, ಕ್ಲಿನಿಕಲ್ ಪ್ರಯೋಗದ ವೇಳೆ ತೊಂದರೆ ಅನುಭವಿಸಿದ ಅಥವಾ ಮೃತಪಟ್ಟ ರೋಗಿಗಳ ಕುಟುಂಬಗಳಿಗೆ ನೀಡಬೇಕಾದ ಪರಿಹಾರ ಧನ ಪಾವತಿಸಿರುವುದಕ್ಕೆ ಸಂಬಂಧಿಸಿದ ಯಾವುದೇ ಸಮರ್ಪಕ ದಾಖಲೆಗಳು ಆಸ್ಪತ್ರೆಯ ಬಳಿ ಲಭ್ಯವಿಲ್ಲ ಎಂದು ತನಿಖೆಯಲ್ಲಿ ಉಲ್ಲೇಖಿಸಲಾಗಿದೆ.
ಹೊಸ ಔಷಧಗಳ ಪ್ರಯೋಗಕ್ಕೆ ಒಳಗಾಗುವ ರೋಗಿಗಳಿಗೆ ಅಗತ್ಯ ವೈದ್ಯಕೀಯ ಆರೈಕೆ ಹಾಗೂ ಸುರಕ್ಷತಾ ಕ್ರಮಗಳನ್ನು ಸಮರ್ಪಕವಾಗಿ ಒದಗಿಸುವಲ್ಲಿಯೂ ಆಸ್ಪತ್ರೆ ವಿಫಲವಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
24 ತಿಂಗಳು ಹೊಸ ಪ್ರಯೋಗಗಳಿಗೆ ಅವಕಾಶವಿಲ್ಲ
ಸಿಡಿಎಸ್‌ಸಿಒ ಆದೇಶದ ಪ್ರಕಾರ, ಮುಂದಿನ 24 ತಿಂಗಳವರೆಗೆ ಆಸ್ಪತ್ರೆ ಯಾವುದೇ ಹೊಸ ಕ್ಲಿನಿಕಲ್ ಟ್ರಯಲ್ ಅಥವಾ ಔಷಧ ಸಂಶೋಧನಾ ಯೋಜನೆಗಳನ್ನು ಆರಂಭಿಸುವಂತಿಲ್ಲ. ಆದರೆ ಈಗಾಗಲೇ ನಡೆಯುತ್ತಿರುವ ಕ್ಲಿನಿಕಲ್ ಪ್ರಯೋಗಗಳನ್ನು ಮುಂದುವರಿಸಲು ಅವಕಾಶ ನೀಡಲಾಗಿದೆ. ಅದರೊಂದಿಗೆ ಪ್ರತಿ ತಿಂಗಳು ರೋಗಿಗಳ ಸುರಕ್ಷತೆಗೆ ಸಂಬಂಧಿಸಿದ ಪ್ರಗತಿ ವರದಿಯನ್ನು ಸರ್ಕಾರಕ್ಕೆ ಕಡ್ಡಾಯವಾಗಿ ಸಲ್ಲಿಸಬೇಕು ಎಂದು ಸೂಚಿಸಲಾಗಿದೆ.
ಚಿಕಿತ್ಸೆಗೆ ಯಾವುದೇ ತೊಂದರೆ ಇಲ್ಲ
ಈ ನಿರ್ಬಂಧವು ಕೇವಲ ಹೊಸ ಕ್ಲಿನಿಕಲ್ ಟ್ರಯಲ್‌ಗಳಿಗೆ ಮಾತ್ರ ಅನ್ವಯಿಸುತ್ತದೆ. ಆಸ್ಪತ್ರೆಯ ದೈನಂದಿನ ಕಾರ್ಯಚಟುವಟಿಕೆಗಳು, ಕ್ಯಾನ್ಸರ್ ರೋಗಿಗಳ ತಪಾಸಣೆ ಹಾಗೂ ಚಿಕಿತ್ಸಾ ಸೇವೆಗಳು ಎಂದಿನಂತೆ ಯಾವುದೇ ಅಡಚಣೆಯಿಲ್ಲದೆ ಮುಂದುವರಿಯಲಿವೆ.
ಇದೇ ವೇಳೆ, ಸಿಡಿಎಸ್‌ಸಿಒ ಹೊರಡಿಸಿರುವ ಆದೇಶವನ್ನು ಎಚ್‌ಸಿಜಿ ಆಸ್ಪತ್ರೆಯ ಆಡಳಿತ ಮಂಡಳಿ ಪರಿಶೀಲಿಸುತ್ತಿದ್ದು, ಈ ಆದೇಶದ ವಿರುದ್ಧ ಕಾನೂನು ಹೋರಾಟ ನಡೆಸುವ ಕುರಿತು ತಜ್ಞರೊಂದಿಗೆ ಸಮಾಲೋಚನೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.





