Home Blog Page 6

₹3 ಕೋಟಿ ಹೂಡಿಕೆ ಮಾಡಿ ವಂಚನೆ ಆರೋಪ: ಸಲ್ಮಾನ್ ಖಾನ್, ಸಹೋದರಿಗೆ ಕೋರ್ಟ್ ಸಮನ್ಸ್ ಜಾರಿ

ಚಂಡೀಗಢ: ಬೀಯಿಂಗ್ ಹ್ಯೂಮನ್ ಆಭರಣ ಶೋರೂಂಗೆ ಸಂಬಂಧಿಸಿದ ವಂಚನೆ ಪ್ರಕರಣದಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್, ಅವರ ಸಹೋದರಿ ಅಲ್ವಿರಾ ಖಾನ್ ಅಗ್ನಿಹೋತ್ರಿ ಹಾಗೂ ಸ್ಟೈಲ್ ಅಂಡ್ ಕಂಟೆಂಟ್ ಜ್ಯುವೆಲ್ಲರಿ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಿಗೆ ಚಂಡೀಗಢ ಜಿಲ್ಲಾ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲಾ ಆರೋಪಿಗಳು ಅಕ್ಟೋಬರ್ 5ರಂದು ನ್ಯಾಯಾಲಯಕ್ಕೆ ಖುದ್ದು ಹಾಜರಾಗಿ ತಮ್ಮ ವಿರುದ್ಧದ ಆರೋಪಗಳಿಗೆ ಉತ್ತರ ಸಲ್ಲಿಸುವಂತೆ ಕೋರ್ಟ್ ನಿರ್ದೇಶಿಸಿದೆ.

ಚಂಡೀಗಢ ಮೂಲದ ಉದ್ಯಮಿ ಅರುಣ್ ಗುಪ್ತಾ ಅವರು ದಾಖಲಿಸಿದ ದೂರಿನ ಮೇರೆಗೆ ಈ ಬೆಳವಣಿಗೆ ನಡೆದಿದೆ. ಉತ್ತಮ ವ್ಯವಹಾರ ಹಾಗೂ ಹೆಚ್ಚಿನ ಲಾಭದ ಭರವಸೆ ನೀಡಿ ಬೀಯಿಂಗ್ ಹ್ಯೂಮನ್ ಆಭರಣ ಶೋರೂಂನಲ್ಲಿ ಹೂಡಿಕೆ ಮಾಡಲು ಪ್ರೇರೇಪಿಸಲಾಗಿತ್ತು. ಆದರೆ ನಂತರ ಕಂಪನಿ ನೀಡಿದ್ದ ಭರವಸೆಗಳನ್ನು ಈಡೇರಿಸದೇ ವಂಚನೆ ನಡೆಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

ದೂರಿನ ಪ್ರಕಾರ, ಬೀಯಿಂಗ್ ಹ್ಯೂಮನ್ ಬ್ರಾಂಡ್‌ನ ಆಭರಣಗಳ ಮಾರಾಟದ ಪರವಾನಗಿ ಹೊಂದಿದ್ದ ಸ್ಟೈಲ್ ಅಂಡ್ ಕಂಟೆಂಟ್ ಜ್ಯುವೆಲ್ಲರಿ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡ ಬಳಿಕ ಅರುಣ್ ಗುಪ್ತಾ ಸುಮಾರು 3 ಕೋಟಿ ರೂಪಾಯಿ ಹೂಡಿಕೆ ಮಾಡಿದ್ದರು. ಇದಲ್ಲದೆ ಶೋರೂಂ ಸ್ಥಾಪನೆಗೆ ಸುಮಾರು 1 ಕೋಟಿ ರೂಪಾಯಿ ವೆಚ್ಚ ಮಾಡಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಒಪ್ಪಂದದ ಪ್ರಕಾರ ತಮ್ಮ ಪಾಲಿನ ಎಲ್ಲಾ ಜವಾಬ್ದಾರಿಗಳನ್ನು ಪೂರೈಸಿದ್ದರೂ, ಶೋರೂಂ ಆರಂಭವಾದ ಬಳಿಕ ಕಂಪನಿಯು ಅಗತ್ಯವಾದ ವ್ಯವಹಾರಿಕ ಬೆಂಬಲ, ಪ್ರಚಾರ ಹಾಗೂ ಕಾರ್ಯಾಚರಣೆಗೆ ಬೇಕಾದ ಸಹಕಾರ ನೀಡಲಿಲ್ಲ. ಇದರಿಂದಾಗಿ ಕೋಟ್ಯಂತರ ರೂಪಾಯಿ ಆರ್ಥಿಕ ನಷ್ಟ ಅನುಭವಿಸಬೇಕಾಯಿತು ಎಂದು ಅರುಣ್ ಗುಪ್ತಾ ಆರೋಪಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಸಲ್ಲಿಕೆಯಾಗಿದ್ದ ದೂರನ್ನು ಪರಿಗಣಿಸಿದ ಚಂಡೀಗಢ ಜಿಲ್ಲಾ ನ್ಯಾಯಾಲಯ, ಸಲ್ಮಾನ್ ಖಾನ್, ಅಲ್ವಿರಾ ಖಾನ್ ಅಗ್ನಿಹೋತ್ರಿ ಹಾಗೂ ಸಂಬಂಧಿತ ಕಂಪನಿಯ ನಿರ್ದೇಶಕರಿಗೆ ಸಮನ್ಸ್ ಜಾರಿ ಮಾಡಿದ್ದು, ಮುಂದಿನ ವಿಚಾರಣೆ ಅಕ್ಟೋಬರ್ 5ರಂದು ನಡೆಯಲಿದೆ.

ಡಾಲ್ಫಿನ್ ಚಂಡಮಾರುತ ಎಫೆಕ್ಟ್: ಕೇರಳ ಸೇರಿ ದಕ್ಷಿಣ ಕರ್ನಾಟಕದಲ್ಲೂ ಧಾರಾಕಾರ ಮಳೆಯ ಮುನ್ಸೂಚನೆ!

0

ತಿರುವನಂತಪುರಂ: ಕೇರಳದಲ್ಲಿ ಮುಂದಿನ ಮೂರು ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಭಾರತೀಯ ಹವಾಮಾನ ಇಲಾಖೆ (IMD) ಹಲವು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಿದೆ. ಪಶ್ಚಿಮ ಪೆಸಿಫಿಕ್ ಸಾಗರದಲ್ಲಿ ರೂಪುಗೊಂಡಿರುವ ಡಾಲ್ಫಿನ್ ಚಂಡಮಾರುತದ ಪರೋಕ್ಷ ಪರಿಣಾಮದಿಂದ ನೈರುತ್ಯ ಮಾನ್ಸೂನ್ ಮತ್ತಷ್ಟು ಬಲಗೊಳ್ಳಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಹವಾಮಾನ ಇಲಾಖೆ ಪ್ರಕಾರ, ಶನಿವಾರದವರೆಗೆ ಕೇರಳ ಸೇರಿದಂತೆ ದಕ್ಷಿಣ ಕರ್ನಾಟಕ, ದಕ್ಷಿಣ ತಮಿಳುನಾಡು, ಪುದುಚೇರಿ ಹಾಗೂ ಬಂಗಾಳ ಕೊಲ್ಲಿಯ ವ್ಯಾಪ್ತಿಯ ಪ್ರದೇಶಗಳಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ.

ಆಗಸ್ಟ್ ತಿಂಗಳ ಮೊದಲ ಐದು ದಿನಗಳಲ್ಲೇ ಕೇರಳದಲ್ಲಿ ವಾಡಿಕೆಗಿಂತ ಹೆಚ್ಚಿನ ಪ್ರಮಾಣದ ಮಳೆಯಾಗಿರುವುದು ದಾಖಲಾಗಿದೆ. ಭಾರತೀಯ ಹವಾಮಾನ ಇಲಾಖೆ ಬಿಡುಗಡೆ ಮಾಡಿದ ಅಂಕಿ-ಅಂಶಗಳ ಪ್ರಕಾರ, ಆಗಸ್ಟ್ 1ರಿಂದ 5ರವರೆಗೆ ರಾಜ್ಯದಲ್ಲಿ 226 ಮಿ.ಮೀ. ಮಳೆಯಾಗಿದ್ದು, ಇದೇ ಅವಧಿಯ ಸಾಮಾನ್ಯ ಮಳೆಯ ಪ್ರಮಾಣ 90.6 ಮಿ.ಮೀ. ಆಗಿದೆ. ಅಂದರೆ, ವಾಡಿಕೆಗಿಂತ ಶೇ.149ರಷ್ಟು ಅಧಿಕ ಮಳೆ ದಾಖಲಾಗಿದೆ.

ನಿರಂತರ ಮಳೆಯ ಪರಿಣಾಮ ಹಲವು ಜಿಲ್ಲೆಗಳಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಬಿಗಿಗೊಳಿಸಲಾಗಿದ್ದು, ಮುಂದಿನ ಎರಡು ದಿನಗಳಲ್ಲಿ ಮಳೆಯ ತೀವ್ರತೆ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ ಎಂದು ಇಲಾಖೆ ಎಚ್ಚರಿಕೆ ನೀಡಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಭಾರತೀಯ ಹವಾಮಾನ ಇಲಾಖೆಯ ನಿರ್ದೇಶಕಿ ನೀತಾ ಕೆ. ಗೋಪಾಲ್, ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಭೂಮಿ ಸಂಪೂರ್ಣ ತೇವಾಂಶದಿಂದ ಕೂಡಿದ್ದು, ಹಲವೆಡೆ ಸಣ್ಣ ಪ್ರಮಾಣದ ಭೂಕುಸಿತಗಳು ವರದಿಯಾಗಿವೆ ಎಂದು ತಿಳಿಸಿದ್ದಾರೆ.

ಮುಂದಿನ ದಿನಗಳಲ್ಲಿ ಸುರಿಯುವ ಭಾರೀ ಮಳೆಯು ವಿಶೇಷವಾಗಿ ಗುಡ್ಡಗಾಡು ಪ್ರದೇಶಗಳಲ್ಲಿ ಭೂಕುಸಿತದ ಅಪಾಯವನ್ನು ಮತ್ತಷ್ಟು ಹೆಚ್ಚಿಸಬಹುದು. ಆದ್ದರಿಂದ ಸಾರ್ವಜನಿಕರು ಹಾಗೂ ಸಂಬಂಧಪಟ್ಟ ಜಿಲ್ಲಾಡಳಿತಗಳು ಮುನ್ನೆಚ್ಚರಿಕೆ ವಹಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ.

30 ಕೋಟಿ ಮೌಲ್ಯದ ದೇವಸ್ಥಾನ ಜಾಗದಲ್ಲಿ ರಸ್ತೆ ಕಾಮಗಾರಿ: ಪುತ್ತೂರಿನಲ್ಲಿ ಭಕ್ತರ ಆಕ್ರೋಶ

0

ಮಂಗಳೂರು, ಆ.6: ಐತಿಹಾಸಿಕ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಆವರಣದಲ್ಲಿ ರಸ್ತೆ ನಿರ್ಮಾಣ ವಿಚಾರ ಭಾರೀ ವಿವಾದಕ್ಕೆ ಕಾರಣವಾಗಿದೆ. ದೇವಸ್ಥಾನಕ್ಕೆ ಸೇರಿದ ಸುಮಾರು 3 ಎಕರೆ, 30 ಕೋಟಿ ರೂಪಾಯಿ ಮೌಲ್ಯದ ಜಾಗದಲ್ಲಿ ಸಾರ್ವಜನಿಕ ರಸ್ತೆ ನಿರ್ಮಿಸಲು ಕೈಗೊಂಡಿರುವ ಕ್ರಮಕ್ಕೆ ಭಕ್ತರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಕ್ಷೇತ್ರ ಅಭಿವೃದ್ಧಿ ಯೋಜನೆಯಡಿ ಶಾಸಕ ಅಶೋಕ್ ಕುಮಾರ್ ರೈ ಅವರ ನೇತೃತ್ವದಲ್ಲಿ ಈ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು, ಈ ವೇಳೆ ವರ್ಷಗಳ ಇತಿಹಾಸ ಹೊಂದಿದ್ದ ‘ನಟರಾಜ ವೇದಿಕೆ’ಯನ್ನು ನೆಲಸಮಗೊಳಿಸಿರುವುದು ಮತ್ತಷ್ಟು ಅಸಮಾಧಾನಕ್ಕೆ ಕಾರಣವಾಗಿದೆ.

ಮುಜರಾಯಿ ಇಲಾಖೆಯ ನಿಯಮಾವಳಿಯಂತೆ ದೇವಸ್ಥಾನದ ಆಸ್ತಿಯಲ್ಲಿ ಕಾಮಗಾರಿ ನಡೆಸಲು ಟೆಂಡರ್ ಪ್ರಕ್ರಿಯೆ ಕಡ್ಡಾಯ. ಆದರೆ, ಯಾವುದೇ ಅಧಿಕೃತ ಟೆಂಡರ್ ಕರೆಯದೆ ಕಾಮಗಾರಿ ನಡೆಸಲಾಗುತ್ತಿದೆ ಎಂದು ಭಕ್ತರು ಗಂಭೀರ ಆರೋಪ ಮಾಡಿದ್ದಾರೆ. ದೇವಸ್ಥಾನದ ಅಮೂಲ್ಯ ಆಸ್ತಿಯನ್ನು ರಸ್ತೆಗಾಗಿ ಬಳಸುವ ಬದಲು ಬೇರೆ ಮಾರ್ಗವನ್ನು ಅಭಿವೃದ್ಧಿಪಡಿಸಬೇಕೆಂದು ಒತ್ತಾಯಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್, ದಿನದಿಂದ ದಿನಕ್ಕೆ ಭಕ್ತರ ಸಂಖ್ಯೆ ಹೆಚ್ಚುತ್ತಿರುವುದರಿಂದ ವಾಹನ ದಟ್ಟಣೆ ನಿಯಂತ್ರಿಸಲು ಅಗಲವಾದ ರಸ್ತೆ ಅನಿವಾರ್ಯವಾಗಿದೆ ಎಂದು ತಿಳಿಸಿದ್ದಾರೆ. ಭಕ್ತರ ಸುರಕ್ಷತೆ ಮತ್ತು ಸುಗಮ ಸಂಚಾರವನ್ನು ಗಮನದಲ್ಲಿಟ್ಟುಕೊಂಡೇ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ರಸ್ತೆ ನಿರ್ಮಾಣದ ವಿಚಾರ ಇದೀಗ ಪುತ್ತೂರಿನಲ್ಲಿ ಭಕ್ತರು, ಸ್ಥಳೀಯರು ಮತ್ತು ಆಡಳಿತ ಮಂಡಳಿ ನಡುವೆ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಮುಂದಿನ ಬೆಳವಣಿಗೆಗಳತ್ತ ಎಲ್ಲರ ಗಮನ ನೆಟ್ಟಿದೆ.

Young Age Grey Hair: 20ರಲ್ಲೇ ಕೂದಲು ಬಿಳಿಯಾಗಲು ಕಾರಣವೇನು?

0

ಇತ್ತೀಚಿನ ದಿನಗಳಲ್ಲಿ 20ರಿಂದ 30 ವರ್ಷದ ಯುವಕರಲ್ಲಿ ಅಕಾಲಿಕವಾಗಿ ಕೂದಲು ಬಿಳಿಯಾಗುವ ಸಮಸ್ಯೆ ಹೆಚ್ಚುತ್ತಿದೆ.

ಹಿಂದೆ ವಯಸ್ಸಾದ ನಂತರ ಕಾಣಿಸಿಕೊಳ್ಳುತ್ತಿದ್ದ ಈ ಸಮಸ್ಯೆ ಈಗ ಯುವಜನರಲ್ಲಿಯೂ ಸಾಮಾನ್ಯವಾಗುತ್ತಿದೆ.

ಒತ್ತಡ, ಅಸಮತೋಲಿತ ಆಹಾರ, ವಿಟಮಿನ್ ಕೊರತೆ, ಮಾಲಿನ್ಯ ಹಾಗೂ ಬದಲಾದ ಜೀವನಶೈಲಿ ಕೂದಲು ಬೇಗ ಬಿಳಿಯಾಗಲು ಪ್ರಮುಖ ಕಾರಣಗಳಾಗಿವೆ. ಆದರೆ ಒಮ್ಮೆ ಬಿಳಿಯಾದ ಕೂದಲು ಮತ್ತೆ ಕಪ್ಪಾಗಬಹುದೇ ಎಂಬ ಪ್ರಶ್ನೆ ಹಲವರಲ್ಲಿದೆ.

ಕೂದಲು ಬೇಗ ಬಿಳಿಯಾಗಲು ಕಾರಣವೇನು?

ಚರ್ಮರೋಗ ತಜ್ಞರ ಪ್ರಕಾರ, ಕೂದಲಿನ ಸಹಜ ಬಣ್ಣಕ್ಕೆ ಕಾರಣವಾಗಿರುವುದು ಮೆಲನಿನ್ ಎಂಬ ವರ್ಣದ್ರವ್ಯ. ದೇಹದಲ್ಲಿ ಮೆಲನಿನ್ ಉತ್ಪಾದನೆ ಕಡಿಮೆಯಾದಾಗ ಕೂದಲು ಬೂದು ಅಥವಾ ಬಿಳಿ ಬಣ್ಣಕ್ಕೆ ತಿರುಗುತ್ತದೆ.

ಅಕಾಲಿಕ ಕೂದಲು ಬಿಳಿಯಾಗಲು ಪ್ರಮುಖ ಕಾರಣಗಳು:

  • ಅನುವಂಶಿಕ ಕಾರಣಗಳು (Genetics)
  • ವಿಟಮಿನ್ ಬಿ12 ಕೊರತೆ
  • ವಿಟಮಿನ್ ಡಿ ಕೊರತೆ
  • ಐರನ್ ಕೊರತೆ
  • ಕಾಪರ್ ಮತ್ತು ಫೋಲೇಟ್ ಕೊರತೆ
  • ದೀರ್ಘಕಾಲದ ಮಾನಸಿಕ ಒತ್ತಡ
  • ಧೂಮಪಾನ
  • ವಾಯು ಮಾಲಿನ್ಯ
  • ಆಕ್ಸಿಡೇಟಿವ್ ಸ್ಟ್ರೆಸ್

ಇದಲ್ಲದೆ, ಥೈರಾಯ್ಡ್ ಸಮಸ್ಯೆ, ವಿಟಿಲಿಗೋ, ಅಲೋಪೇಶಿಯಾ ಏರಿಯಾಟಾ ಹಾಗೂ ಕೆಲವು ಆಟೋಇಮ್ಯೂನ್ ಕಾಯಿಲೆಗಳಂತಹ ಆರೋಗ್ಯ ಸಮಸ್ಯೆಗಳೂ ಕೂದಲು ಬೇಗ ಬಿಳಿಯಾಗಲು ಕಾರಣವಾಗಬಹುದು.

ಬಿಳಿಯಾದ ಕೂದಲು ಮತ್ತೆ ಕಪ್ಪಾಗುತ್ತದೆಯೇ?

ತಜ್ಞರ ಪ್ರಕಾರ, ಇದಕ್ಕೆ ನಿಖರವಾದ ಒಂದೇ ಉತ್ತರ ಇಲ್ಲ. ಪೋಷಕಾಂಶಗಳ ಕೊರತೆ ಅಥವಾ ಚಿಕಿತ್ಸೆ ಮಾಡಬಹುದಾದ ಆರೋಗ್ಯ ಸಮಸ್ಯೆಯಿಂದ ಕೂದಲು ಬಿಳಿಯಾಗಿದ್ದರೆ, ಸರಿಯಾದ ಚಿಕಿತ್ಸೆ ಹಾಗೂ ಪೌಷ್ಟಿಕ ಆಹಾರದಿಂದ ಹೊಸದಾಗಿ ಬೆಳೆಯುವ ಕೂದಲಿನಲ್ಲಿ ಮತ್ತೆ ಬಣ್ಣ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

ಆದರೆ ವಯಸ್ಸು ಅಥವಾ ಅನುವಂಶಿಕ ಕಾರಣಗಳಿಂದ ಬಿಳಿಯಾದ ಕೂದಲು ಸಂಪೂರ್ಣವಾಗಿ ಮತ್ತೆ ಕಪ್ಪಾಗುತ್ತದೆ ಎಂಬುದಕ್ಕೆ ವೈಜ್ಞಾನಿಕವಾಗಿ ದೃಢಪಟ್ಟ ಚಿಕಿತ್ಸೆ ಇನ್ನೂ ಲಭ್ಯವಿಲ್ಲ.

ಕೂದಲಿನ ಆರೋಗ್ಯಕ್ಕೆ ಸೇವಿಸಬೇಕಾದ ಆಹಾರಗಳು:

  • ಮೊಟ್ಟೆ
  • ಹಾಲು ಮತ್ತು ಹಾಲಿನ ಉತ್ಪನ್ನಗಳು
  • ಹಸಿರು ಎಲೆ ತರಕಾರಿಗಳು
  • ಬಾದಾಮಿ, ವಾಲ್ನಟ್
  • ಎಳ್ಳು
  • ಬೀನ್ಸ್ ಮತ್ತು ಬೇಳೆಕಾಳುಗಳು
  • ಮೀನು
  • ನೆಲ್ಲಿಕಾಯಿ
  • ಕಿತ್ತಳೆ, ಸೀಬೆಹಣ್ಣು ಸೇರಿದಂತೆ ವಿಟಮಿನ್ ಸಿ ಇರುವ ಹಣ್ಣುಗಳು

ಕೂದಲು ಬಿಳಿಯಾಗುವ ಸಮಸ್ಯೆ ಹೆಚ್ಚಾದರೆ ಸ್ವಯಂ ಚಿಕಿತ್ಸೆ ಮಾಡುವ ಬದಲು ತಜ್ಞ ವೈದ್ಯರನ್ನು ಸಂಪರ್ಕಿಸಿ ಮೂಲ ಕಾರಣ ಪತ್ತೆಹಚ್ಚುವುದು ಉತ್ತಮ.

ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಮಾಫಿ ಸಾಕ್ಷಿಯಾಗಲು ಆರೋಪಿ ಪ್ರದೋಷ್ ಅರ್ಜಿ

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದಿನಕ್ಕೊಂದು ಹೊಸ ಬೆಳವಣಿಗೆಗಳು ನಡೆಯುತ್ತಿವೆ.

ಇದೀಗ ಪ್ರಕರಣದ ಎ-14 ಆರೋಪಿ ಪ್ರದೋಷ್ ಅವರು ತಮ್ಮನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸುವಂತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿರುವುದು ಪ್ರಕರಣಕ್ಕೆ ಹೊಸ ತಿರುವು ನೀಡಿದೆ.

ಪ್ರಕರಣದ ಸಂಪೂರ್ಣ ಸತ್ಯವನ್ನು ನ್ಯಾಯಾಲಯದ ಮುಂದೆ ಹೇಳುವುದಾಗಿ ಪ್ರದೋಷ್ ಮನವಿ ಮಾಡಿದ್ದಾರೆ. ತಮ್ಮನ್ನು ಕ್ಷಮಿಸಿ ಮಾಫಿ ಸಾಕ್ಷಿಯನ್ನಾಗಿ ಪರಿಗಣಿಸುವಂತೆ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಪ್ರದೋಷ್ ಪರ ವಕೀಲರು 59ನೇ ಸಿಸಿಹೆಚ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ವಿಚಾರಣೆ ವೇಳೆ ನಟ ದರ್ಶನ್ ಇರುವ ಕೊಠಡಿಯಿಂದ ಪ್ರತ್ಯೇಕವಾಗಿ ಬೇರೆ ಜೈಲು ಕೊಠಡಿಯಿಂದ ಪ್ರದೋಷ್ ಅವರನ್ನು ಹಾಜರುಪಡಿಸುವಂತೆ ಮನವಿ ಮಾಡಿದ್ದಾರೆ.

ದರ್ಶನ್ ಅವರಿಂದ ಬೆದರಿಕೆ ಅಥವಾ ಪ್ರಭಾವ ಬೀರುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಭದ್ರತಾ ಕಾರಣಕ್ಕಾಗಿ ಈ ಮನವಿ ಮಾಡಲಾಗಿದೆ ಎಂದು ತಿಳಿಸಲಾಗಿದೆ.

ಪ್ರದೋಷ್ ಅವರ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, ಈ ಬಗ್ಗೆ ಪ್ರಾಸಿಕ್ಯೂಷನ್ ತನ್ನ ಅಭಿಪ್ರಾಯವನ್ನು ತಿಳಿಸುವಂತೆ ಸೂಚಿಸಿದೆ.

ಈ ಪ್ರಕರಣದಲ್ಲಿ ನಟಿ ಪವಿತ್ರಾ ಗೌಡ ಎ-1 ಆರೋಪಿಯಾಗಿದ್ದು, ನಟ ದರ್ಶನ್ ಎ-2 ಆರೋಪಿಯಾಗಿದ್ದಾರೆ. ಇದೀಗ ಎ-14 ಆರೋಪಿ ಪ್ರದೋಷ್ ಮಾಫಿ ಸಾಕ್ಷಿಯಾಗಲು ಮುಂದಾಗಿರುವುದು ಪ್ರಕರಣದ ತನಿಖೆಯಲ್ಲಿ ಮಹತ್ವದ ಬೆಳವಣಿಗೆಯಾಗಿದೆ.

ಪ್ರದೋಷ್ ನೀಡುವ ಹೇಳಿಕೆಗಳು ಪ್ರಕರಣದ ಮುಂದಿನ ತನಿಖೆ ಹಾಗೂ ನ್ಯಾಯಾಲಯದ ವಿಚಾರಣೆಯಲ್ಲಿ ಪ್ರಮುಖ ಪಾತ್ರ ವಹಿಸುವ ಸಾಧ್ಯತೆ ಇದೆ. ಅವರು ನೀಡುವ ಹೇಳಿಕೆಯಿಂದ ಪ್ರಕರಣದ ಪ್ರಮುಖ ಅಂಶಗಳು ಹೊರಬರುವ ನಿರೀಕ್ಷೆ ಮೂಡಿದೆ.

ಗದಗ: ಕಸ ನಿರ್ವಹಣಾ ಘಟಕಕ್ಕೆ ಲೋಕಾಯುಕ್ತರ ದಿಢೀರ್ ಭೇಟಿ; ನಗರಸಭೆ ಅಧಿಕಾರಿಗಳಿಗೆ ತರಾಟೆ

0

ಗದಗ: ನಗರದ ಬಳಗಾನೂರ ರಸ್ತೆಯಲ್ಲಿರುವ ಘನತ್ಯಾಜ್ಯ ನಿರ್ವಹಣಾ ಘಟಕಕ್ಕೆ ಉಪಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್. ಪಣೀಂದ್ರ ಅವರು ಗುರುವಾರ ಬೆಳಿಗ್ಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಸ್ಥಳದಲ್ಲಿನ ಅವ್ಯವಸ್ಥೆ ಕಂಡು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅವರು, ನಗರಸಭೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಸುಮಾರು 13 ವರ್ಷಗಳಿಂದ ಕಸ ನಿರ್ವಹಣಾ ಘಟಕದಲ್ಲಿ ಇದೇ ರೀತಿಯ ಅವ್ಯವಸ್ಥೆ ಮುಂದುವರಿದಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಉಪಲೋಕಾಯುಕ್ತರು, ಅಧಿಕಾರಿಗಳ ನಿರ್ಲಕ್ಷ್ಯವನ್ನು ಪ್ರಶ್ನಿಸಿದರು. ಅನುದಾನದ ಕೊರತೆಯಿದ್ದರೆ ಸರ್ಕಾರದ ಗಮನಕ್ಕೆ ತಂದು ಅಗತ್ಯ ಹಣ ಮಂಜೂರು ಮಾಡಿಸಲು ತಾವು ನೆರವಾಗುವುದಾಗಿ ತಿಳಿಸಿದ ಅವರು, ಅನುದಾನವನ್ನು ನೆಪವಾಗಿಸಿಕೊಳ್ಳದೆ ಸಮಸ್ಯೆ ಬಗೆಹರಿಸಲು ಮುಂದಾಗಬೇಕು ಎಂದು ಸೂಚಿಸಿದರು.

ಕೂಡಲೇ ಪರಿಸರ ತಜ್ಞರನ್ನು ಕರೆಸಿ ವೈಜ್ಞಾನಿಕ ರೀತಿಯಲ್ಲಿ ಕಸ ವಿಲೇವಾರಿ ವ್ಯವಸ್ಥೆಯನ್ನು ಸುಧಾರಿಸಬೇಕು. ಯುದ್ಧೋಪಾಯದಲ್ಲಿ ಕಾರ್ಯಪ್ರವೃತ್ತರಾಗಿ ಸಮಸ್ಯೆ ನಿವಾರಿಸಬೇಕು. ಇಲ್ಲವಾದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಪರಿಶೀಲನೆ ವೇಳೆ ನಗರಸಭೆಯ ಆಡಳಿತಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್, ನಗರಸಭೆ ಆಯುಕ್ತ ರಾಜಾರಾಮ ಪವಾರ, ಎಇಇ ಲಕ್ಷ್ಮಣ್ಣ ಜೋಗದಂಡಕರ್, ಪರಿಸರ ಅಭಿಯಂತರ ಆನಂದ ಬದಿ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.

ಉಪಲೋಕಾಯುಕ್ತರು ಸ್ಥಳದಲ್ಲೇ ಅಧಿಕಾರಿಗಳಿಂದ ಮಾಹಿತಿ ಪಡೆದು, ಕಸ ನಿರ್ವಹಣೆಯಲ್ಲಿ ಕಂಡುಬಂದ ಲೋಪಗಳನ್ನು ತಕ್ಷಣ ಸರಿಪಡಿಸುವಂತೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.

BREAKING: ಗದಗ ಹಾಸ್ಟೆಲ್‌ನಲ್ಲಿ ಸರ್ಕಾರಿ ವಸ್ತುಗಳ ನಾಪತ್ತೆ! 20 ಕಂಪ್ಯೂಟರ್, 6 ಎಸಿ ಮಾಯ!

0

ಗದಗ: ಜಿಲ್ಲೆಯ ಸೂರ್ಯ ನಗರದಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದಲ್ಲಿ ಸರ್ಕಾರಿ ಸ್ವತ್ತುಗಳು ನಾಪತ್ತೆಯಾಗಿರುವ ಆರೋಪ ಕೇಳಿಬಂದಿದೆ.

ಹಾಸ್ಟೆಲ್‌ನಲ್ಲಿದ್ದ 20ಕ್ಕೂ ಹೆಚ್ಚು ಕಂಪ್ಯೂಟರ್‌ಗಳು ಹಾಗೂ 6 ಏರ್‌ ಕಂಡೀಷನರ್‌ಗಳು ಕಾಣೆಯಾಗಿವೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

ಬಡ ಹಾಗೂ ದಲಿತ ವಿದ್ಯಾರ್ಥಿಗಳ ಡಿಜಿಟಲ್ ಶಿಕ್ಷಣಕ್ಕೆ ಅನುಕೂಲವಾಗಲೆಂದು ಸರ್ಕಾರ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ವಸತಿ ನಿಲಯದಲ್ಲಿ ಹೈಟೆಕ್ ಕಂಪ್ಯೂಟರ್ ಲ್ಯಾಬ್ ನಿರ್ಮಿಸಿತ್ತು. ಆದರೆ, ಇದೀಗ ಲ್ಯಾಬ್‌ನಲ್ಲಿದ್ದ ಕಂಪ್ಯೂಟರ್‌ಗಳು ಹಾಗೂ ಎಸಿಗಳು ಕಾಣೆಯಾಗಿರುವುದು ಬೆಳಕಿಗೆ ಬಂದಿದೆ.

ಕಂಪ್ಯೂಟರ್‌ಗಳು ಮತ್ತು ಎಸಿಗಳು ಉತ್ತಮ ಸ್ಥಿತಿಯಲ್ಲಿದ್ದರೂ ಅವುಗಳನ್ನು ತೆಗೆದುಕೊಂಡು ಹೋಗಲಾಗಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಈ ಬಗ್ಗೆ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳ ವಿರುದ್ಧವೂ ವಿದ್ಯಾರ್ಥಿಗಳು ಅನುಮಾನ ವ್ಯಕ್ತಪಡಿಸಿದ್ದು, ಸರ್ಕಾರಿ ಸ್ವತ್ತುಗಳ ದುರ್ಬಳಕೆಯಾಗಿದೆ ಎಂದು ದೂರಿದ್ದಾರೆ.

ಆನ್‌ಲೈನ್ ಕಲಿಕೆ ಹಾಗೂ ಅಧ್ಯಯನಕ್ಕೆ ಅನುಕೂಲವಾಗಬೇಕಿದ್ದ ಕಂಪ್ಯೂಟರ್‌ಗಳು ಇಲ್ಲದ ಕಾರಣ ವಿದ್ಯಾರ್ಥಿಗಳು ಸಮಸ್ಯೆ ಎದುರಿಸುತ್ತಿದ್ದಾರೆ. ಹಾಸ್ಟೆಲ್‌ನಲ್ಲಿರುವ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಇದರಿಂದ ತೊಂದರೆಯಾಗಿದೆ ಎಂದು ಆಕ್ರೋಶ ವ್ಯಕ್ತವಾಗಿದೆ.

ಘಟನೆ ಕುರಿತು ಸೂಕ್ತ ತನಿಖೆ ನಡೆಸಿ, ನಾಪತ್ತೆಯಾಗಿರುವ ಕಂಪ್ಯೂಟರ್‌ಗಳು ಹಾಗೂ ಎಸಿಗಳನ್ನು ಮರಳಿ ತರಬೇಕು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ವಿದ್ಯಾರ್ಥಿಗಳು ಹಾಗೂ ದಲಿತ ಸಂಘಟನೆಗಳು ಆಗ್ರಹಿಸಿವೆ.

ಈ ಆರೋಪಗಳ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಂದ ಅಧಿಕೃತ ಮಾಹಿತಿ ಲಭ್ಯವಾಗಬೇಕಿದ್ದು, ತನಿಖೆಯ ಬಳಿಕವೇ ಸಂಪೂರ್ಣ ಸತ್ಯಾಂಶ ಹೊರಬರಲಿದೆ.

ಸಚಿವ ಸ್ಥಾನ ಕೈತಪ್ಪಿದ ಆಕ್ರೋಶ: ಇಂದು ಬಂಗಾರಪೇಟೆ ಬಂದ್‌ಗೆ ಕರೆ, ಎಸ್.ಎನ್. ನಾರಾಯಣಸ್ವಾಮಿ ಬೆಂಬಲಿಗರ ಪ್ರತಿಭಟನೆ

ಕೋಲಾರ: ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಅಸಮಾಧಾನಗೊಂಡಿರುವ ಬಂಗಾರಪೇಟೆ ಶಾಸಕ ಎಸ್.ಎನ್. ನಾರಾಯಣಸ್ವಾಮಿ ಅವರ ಬೆಂಬಲಿಗರು ಇಂದು ಬಂಗಾರಪೇಟೆ ಬಂದ್‌ಗೆ ಕರೆ ನೀಡಿದ್ದಾರೆ.

ಕಾಂಗ್ರೆಸ್ ಮುಖಂಡರು ಹಾಗೂ ವಿವಿಧ ಸಂಘಟನೆಗಳ ಬೆಂಬಲದೊಂದಿಗೆ ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆವರೆಗೆ ಬಂದ್ ನಡೆಸಲು ನಿರ್ಧರಿಸಲಾಗಿದೆ.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸಚಿವ ಸಂಪುಟ ವಿಸ್ತರಣೆ ಬಳಿಕ ಸಚಿವ ಸ್ಥಾನ ಆಕಾಂಕ್ಷಿಗಳಲ್ಲಿ ಅಸಮಾಧಾನ ಹೆಚ್ಚಾಗಿದೆ. ಕೆಲ ಶಾಸಕರನ್ನು ಮನವೊಲಿಸುವ ಪ್ರಯತ್ನಗಳು ನಡೆದಿದ್ದರೂ, ಇನ್ನೂ ಕೆಲವು ಶಾಸಕರ ಅಸಮಾಧಾನ ಮುಂದುವರಿದಿದೆ.

ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಸಚಿವ ಸಂಪುಟದಲ್ಲಿ ಪ್ರಾತಿನಿಧ್ಯ ಸಿಗದಿರುವ ಬಗ್ಗೆ ಶಾಸಕರು ಹಾಗೂ ಬೆಂಬಲಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದರ ಭಾಗವಾಗಿ ಬಂಗಾರಪೇಟೆ ಶಾಸಕ ಎಸ್.ಎನ್. ನಾರಾಯಣಸ್ವಾಮಿ ಪರವಾಗಿ ಬಂದ್‌ಗೆ ಕರೆ ನೀಡಲಾಗಿದೆ.

ಬಂಗಾರಪೇಟೆ ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಮಾಜಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಾರೆಡ್ಡಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಬಂದ್ ನಿರ್ಧಾರ ಕೈಗೊಳ್ಳಲಾಗಿದೆ. ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಎಸ್.ಎನ್. ನಾರಾಯಣಸ್ವಾಮಿ ಅವರಿಗೆ ಸಚಿವ ಸ್ಥಾನ ನೀಡದೆ ಅನ್ಯಾಯ ಮಾಡಲಾಗಿದೆ ಎಂದು ಬೆಂಬಲಿಗರು ಆರೋಪಿಸಿದ್ದಾರೆ.

2013, 2018 ಹಾಗೂ 2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಎಸ್.ಎನ್. ನಾರಾಯಣಸ್ವಾಮಿ ಆಯ್ಕೆಯಾಗಿದ್ದಾರೆ. ಜಿಲ್ಲೆಯಲ್ಲಿ ನಾಲ್ವರು ಕಾಂಗ್ರೆಸ್ ಶಾಸಕರಿದ್ದರೂ ಯಾರಿಗೂ ಸಚಿವ ಸ್ಥಾನ ನೀಡದಿರುವುದು ಬೇಸರ ತಂದಿದೆ ಎಂದು ಮುಖಂಡರು ಹೇಳಿದ್ದಾರೆ.

ಬಂದ್‌ಗೆ ದಲಿತ ಸಂಘಟನೆಗಳು, ವರ್ತಕರ ಸಂಘ, ಆಟೋ ಚಾಲಕರ ಸಂಘ, ರೈತ ಸಂಘ ಸೇರಿದಂತೆ ಹಲವು ಸಂಘಟನೆಗಳು ಬೆಂಬಲ ಸೂಚಿಸಿವೆ. ಅಗತ್ಯ ಸೇವೆಗಳನ್ನು ಹೊರತುಪಡಿಸಿ ಉಳಿದ ಚಟುವಟಿಕೆಗಳನ್ನು ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ.

ಬಸ್ ಸಂಚಾರ ಹಾಗೂ ಆಟೋ ಸೇವೆಗಳ ಮೇಲೂ ಬಂದ್ ಪರಿಣಾಮ ಬೀರುವ ಸಾಧ್ಯತೆ ಇದೆ. ಶಾಲಾ-ಕಾಲೇಜುಗಳು ಹಾಗೂ ಸರ್ಕಾರಿ ಕಚೇರಿಗಳ ಕಾರ್ಯನಿರ್ವಹಣೆ ಬಗ್ಗೆ ಪರಿಸ್ಥಿತಿ ನೋಡಿಕೊಂಡು ತೀರ್ಮಾನಿಸಲಾಗುವುದು ಎಂದು ಮುಖಂಡರು ತಿಳಿಸಿದ್ದಾರೆ.

ಇಂದು ಬೆಳಗ್ಗೆ 11 ಗಂಟೆಗೆ ಬಂಗಾರಪೇಟೆಯ ಅಂಬೇಡ್ಕರ್ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ರ‍್ಯಾಲಿ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

ಮಧ್ಯರಾತ್ರಿ ಚಾಕು ಹಿಡಿದು ಬಂದವರು ಯಾರು? ಕಲಬುರಗಿ ಕೇಂದ್ರಿಯ ವಿಶ್ವವಿದ್ಯಾಲಯದಲ್ಲಿ ಆತಂಕ!

ಕಲಬುರಗಿ: ಜಿಲ್ಲೆಯ ಆಳಂದ ತಾಲೂಕಿನ ಕಡಗಂಚಿ ಬಳಿಯಿರುವ ಕರ್ನಾಟಕ ಕೇಂದ್ರಿಯ ವಿಶ್ವವಿದ್ಯಾಲಯದ ವಸತಿ ಗೃಹಗಳಿಗೆ ಆಗಂತುಕರು ನುಗ್ಗಿರುವ ಘಟನೆ ಆತಂಕ ಮೂಡಿಸಿದೆ.

ಆಗಸ್ಟ್‌ 1ರ ಮಧ್ಯರಾತ್ರಿ ಸುಮಾರು ಮೂರ್ನಾಲ್ಕು ಮಂದಿ ಅಪರಿಚಿತರು ವಿಶ್ವವಿದ್ಯಾಲಯದ ಮೂರು ವಸತಿ ಗೃಹಗಳ ಬಾಗಿಲು ಮುರಿದು ಒಳ ಪ್ರವೇಶಿಸಿದ್ದಾರೆ ಎನ್ನಲಾಗಿದೆ. ಮುಖಕ್ಕೆ ಮಾಸ್ಕ್ ಧರಿಸಿದ್ದ ಆಗಂತುಕರು ಕೈಯಲ್ಲಿ ಚಾಕು ಹಿಡಿದು ವಸತಿ ಗೃಹದೊಳಗೆ ಓಡಾಡಿರುವ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.

ಆಗಂತುಕರು ವಿಶ್ವವಿದ್ಯಾಲಯದ ಪ್ರೊಫೆಸರ್‌ಗಳಾದ ಮಹಿಮಾರಾಜ್, ಡಾ. ಸಂಗಮೇಶ್ ಹಾಗೂ ಡಾ. ಎಂ. ಶಿವಮೂರ್ತಿ ಅವರಿಗೆ ಹಂಚಿಕೆಯಾಗಿದ್ದ ವಸತಿ ಗೃಹಗಳಿಗೆ ನುಗ್ಗಿದ್ದಾರೆ ಎಂದು ತಿಳಿದುಬಂದಿದೆ.

ಘಟನೆ ನಡೆದ ವೇಳೆ ವಸತಿ ಗೃಹಗಳಲ್ಲಿ ಯಾರೂ ಇರದ ಕಾರಣ ಯಾವುದೇ ಅನಾಹುತ ಸಂಭವಿಸಿಲ್ಲ. ಆದರೆ, ಮಧ್ಯರಾತ್ರಿ ಅಪರಿಚಿತರು ಚಾಕು ಹಿಡಿದು ಪ್ರವೇಶಿಸಿರುವುದು ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಯಲ್ಲಿ ಆತಂಕಕ್ಕೆ ಕಾರಣವಾಗಿದೆ.

ಘಟನೆ ಕುರಿತು ನರೋಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ ತನಿಖೆ ಆರಂಭಿಸಿದ್ದಾರೆ.

Money Plant Vastu Tips: ಮನಿ ಪ್ಲಾಂಟ್ ಯಾವ ದಿಕ್ಕಿನಲ್ಲಿ ಇಡಬೇಕು? ಸಮೃದ್ಧಿಗಾಗಿ ಈ ಮಾಹಿತಿ ತಿಳಿಯಿರಿ

0

ಮನೆಗಳನ್ನು ಸುಂದರಗೊಳಿಸಲು ಅನೇಕರು ವಿವಿಧ ರೀತಿಯ ಗಿಡಗಳನ್ನು ಬೆಳೆಸುತ್ತಾರೆ. ಅವುಗಳಲ್ಲಿ ಮನಿ ಪ್ಲಾಂಟ್‌ ಅತ್ಯಂತ ಜನಪ್ರಿಯವಾದ ಸಸ್ಯವಾಗಿದೆ.

ಹಲವರು ಮನಿ ಪ್ಲಾಂಟ್ ಅನ್ನು ಮನೆಯಲ್ಲಿ ಸಕಾರಾತ್ಮಕ ಶಕ್ತಿ, ಸಂತೋಷ, ಸಮೃದ್ಧಿ ಹಾಗೂ ಆರ್ಥಿಕ ಪ್ರಗತಿಯ ಸಂಕೇತ ಎಂದು ನಂಬುತ್ತಾರೆ.

ವಾಸ್ತು ಶಾಸ್ತ್ರದಲ್ಲೂ ಮನಿ ಪ್ಲಾಂಟ್‌ಗೆ ವಿಶೇಷ ಸ್ಥಾನ ನೀಡಲಾಗಿದೆ. ಆದರೆ ಗಿಡವನ್ನು ಇಡುವ ಸ್ಥಳ, ಅದರ ಆರೈಕೆ ಹಾಗೂ ನಿರ್ವಹಣೆಯಲ್ಲಿ ಕೆಲವು ತಪ್ಪುಗಳನ್ನು ಮಾಡಿದರೆ ಅದರ ಶುಭ ಪರಿಣಾಮ ಕಡಿಮೆಯಾಗಬಹುದು ಎಂದು ವಾಸ್ತು ನಂಬಿಕೆಗಳು ಹೇಳುತ್ತವೆ.

ಮನಿ ಪ್ಲಾಂಟ್ ಇಡಲು ಯಾವ ದಿಕ್ಕು ಸೂಕ್ತ?

ವಾಸ್ತು ಪ್ರಕಾರ ಮನೆಯ ಆಗ್ನೇಯ ದಿಕ್ಕಿನಲ್ಲಿ ಮನಿ ಪ್ಲಾಂಟ್ ಇಡುವುದು ಶುಭ ಎಂದು ಪರಿಗಣಿಸಲಾಗುತ್ತದೆ. ಈ ದಿಕ್ಕು ಅಭಿವೃದ್ಧಿ ಮತ್ತು ಸಮೃದ್ಧಿಗೆ ಸಂಬಂಧಿಸಿದೆ ಎಂದು ನಂಬಲಾಗಿದೆ.

ಇನ್ನು ಈಶಾನ್ಯ ದಿಕ್ಕಿನಲ್ಲಿ ಮನಿ ಪ್ಲಾಂಟ್ ಇಡುವುದನ್ನು ಕೆಲವರು ತಪ್ಪಿಸುತ್ತಾರೆ. ವಾಸ್ತು ಪ್ರಕಾರ ಈ ದಿಕ್ಕಿಗೆ ವಿಶೇಷ ನಿಯಮಗಳಿವೆ ಎಂದು ಹೇಳಲಾಗುತ್ತದೆ.

ಗಿಡವನ್ನು ನೆಲದ ಮೇಲೆ ಇಡಬೇಡಿ:

ವಾಸ್ತು ನಂಬಿಕೆಗಳ ಪ್ರಕಾರ, ಮನಿ ಪ್ಲಾಂಟ್ ಅನ್ನು ನೇರವಾಗಿ ನೆಲದ ಮೇಲೆ ಇಡುವ ಬದಲು ಸ್ವಲ್ಪ ಎತ್ತರದಲ್ಲಿ ಇಡುವುದು ಉತ್ತಮ. ಗಿಡದ ಬಳ್ಳಿಗಳು ನೆಲದ ಮೇಲೆ ಹರಡುವ ಬದಲು ಮೇಲ್ಮುಖವಾಗಿ ಬೆಳೆಯುವಂತೆ ಬೆಂಬಲ ನೀಡುವುದು ಶುಭ ಎಂದು ನಂಬಲಾಗಿದೆ.

ಒಣಗಿದ ಎಲೆಗಳನ್ನು ತೆಗೆದುಹಾಕಿ

ಮನಿ ಪ್ಲಾಂಟ್‌ನ ಒಣಗಿದ ಅಥವಾ ಹಾಳಾದ ಎಲೆಗಳನ್ನು ಮನೆಯಲ್ಲೇ ಇರಿಸಬಾರದು ಎಂದು ವಾಸ್ತು ಹೇಳುತ್ತದೆ. ಇಂತಹ ಎಲೆಗಳನ್ನು ತೆಗೆದುಹಾಕಿ, ಗಿಡವನ್ನು ಸ್ವಚ್ಛವಾಗಿ ಹಾಗೂ ಆರೋಗ್ಯಕರವಾಗಿ ಇಟ್ಟುಕೊಳ್ಳುವುದು ಮುಖ್ಯ.

ಗಿಡಕ್ಕೆ ಸರಿಯಾದ ಬೆಳಕು ಹಾಗೂ ಅಗತ್ಯ ಪ್ರಮಾಣದ ನೀರು ನೀಡಿದರೆ ಅದು ಉತ್ತಮವಾಗಿ ಬೆಳೆಯುತ್ತದೆ.

ಬೇರೆಯವರ ಮನೆಯಿಂದ ಕದ್ದು ಗಿಡ ತರುವುದು ಸರಿಯೇ?

ಕೆಲವು ವಾಸ್ತು ನಂಬಿಕೆಗಳ ಪ್ರಕಾರ, ಬೇರೆಯವರ ಮನೆಯಿಂದ ಮನಿ ಪ್ಲಾಂಟ್‌ನ ಕೊಂಬೆಯನ್ನು ಕದ್ದು ತಂದು ನೆಡುವುದು ಸೂಕ್ತವಲ್ಲ ಎಂದು ಹೇಳಲಾಗುತ್ತದೆ. ಗಿಡವನ್ನು ಪ್ರೀತಿಯಿಂದ ಹಾಗೂ ಸರಿಯಾದ ರೀತಿಯಲ್ಲಿ ಪಡೆದು ಬೆಳೆಸಬೇಕು ಎಂಬ ನಂಬಿಕೆ ಇದೆ.

ಮನಿ ಪ್ಲಾಂಟ್ ಆರೈಕೆ ಹೇಗೆ ಮಾಡಬೇಕು?

ಮನಿ ಪ್ಲಾಂಟ್ ಸುಲಭವಾಗಿ ಬೆಳೆಯುವ ಸಸ್ಯವಾದರೂ ಸರಿಯಾದ ಆರೈಕೆ ಅಗತ್ಯ.

  • ಹೆಚ್ಚು ನೀರು ಹಾಕುವುದರಿಂದ ಬೇರುಗಳು ಕೊಳೆಯಬಹುದು.
  • ನೀರು ಕಡಿಮೆಯಾದರೆ ಎಲೆಗಳು ಹಳದಿ ಬಣ್ಣಕ್ಕೆ ತಿರುಗಬಹುದು.
  • ಸರಿಯಾದ ಬೆಳಕು, ನಿಯಮಿತ ನೀರು ಹಾಗೂ ಸಮಯಕ್ಕೆ ಸರಿಯಾಗಿ ಸಮರುವಿಕೆ ಮಾಡಿದರೆ ಗಿಡ ಹಸಿರಾಗಿ ಬೆಳೆಯುತ್ತದೆ.

ವಾಸ್ತು ನಂಬಿಕೆಗಳ ಜೊತೆಗೆ, ಯಾವುದೇ ಸಸ್ಯದ ಆರೋಗ್ಯಕರ ಬೆಳವಣಿಗೆಗೆ ಸರಿಯಾದ ಆರೈಕೆ ಮತ್ತು ನಿರ್ವಹಣೆಯೇ ಮುಖ್ಯವಾಗಿದೆ.