ಚಂಡೀಗಢ: ಬೀಯಿಂಗ್ ಹ್ಯೂಮನ್ ಆಭರಣ ಶೋರೂಂಗೆ ಸಂಬಂಧಿಸಿದ ವಂಚನೆ ಪ್ರಕರಣದಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್, ಅವರ ಸಹೋದರಿ ಅಲ್ವಿರಾ ಖಾನ್ ಅಗ್ನಿಹೋತ್ರಿ ಹಾಗೂ ಸ್ಟೈಲ್ ಅಂಡ್ ಕಂಟೆಂಟ್ ಜ್ಯುವೆಲ್ಲರಿ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಿಗೆ ಚಂಡೀಗಢ ಜಿಲ್ಲಾ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲಾ ಆರೋಪಿಗಳು ಅಕ್ಟೋಬರ್ 5ರಂದು ನ್ಯಾಯಾಲಯಕ್ಕೆ ಖುದ್ದು ಹಾಜರಾಗಿ ತಮ್ಮ ವಿರುದ್ಧದ ಆರೋಪಗಳಿಗೆ ಉತ್ತರ ಸಲ್ಲಿಸುವಂತೆ ಕೋರ್ಟ್ ನಿರ್ದೇಶಿಸಿದೆ.
ಚಂಡೀಗಢ ಮೂಲದ ಉದ್ಯಮಿ ಅರುಣ್ ಗುಪ್ತಾ ಅವರು ದಾಖಲಿಸಿದ ದೂರಿನ ಮೇರೆಗೆ ಈ ಬೆಳವಣಿಗೆ ನಡೆದಿದೆ. ಉತ್ತಮ ವ್ಯವಹಾರ ಹಾಗೂ ಹೆಚ್ಚಿನ ಲಾಭದ ಭರವಸೆ ನೀಡಿ ಬೀಯಿಂಗ್ ಹ್ಯೂಮನ್ ಆಭರಣ ಶೋರೂಂನಲ್ಲಿ ಹೂಡಿಕೆ ಮಾಡಲು ಪ್ರೇರೇಪಿಸಲಾಗಿತ್ತು. ಆದರೆ ನಂತರ ಕಂಪನಿ ನೀಡಿದ್ದ ಭರವಸೆಗಳನ್ನು ಈಡೇರಿಸದೇ ವಂಚನೆ ನಡೆಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
ದೂರಿನ ಪ್ರಕಾರ, ಬೀಯಿಂಗ್ ಹ್ಯೂಮನ್ ಬ್ರಾಂಡ್ನ ಆಭರಣಗಳ ಮಾರಾಟದ ಪರವಾನಗಿ ಹೊಂದಿದ್ದ ಸ್ಟೈಲ್ ಅಂಡ್ ಕಂಟೆಂಟ್ ಜ್ಯುವೆಲ್ಲರಿ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡ ಬಳಿಕ ಅರುಣ್ ಗುಪ್ತಾ ಸುಮಾರು 3 ಕೋಟಿ ರೂಪಾಯಿ ಹೂಡಿಕೆ ಮಾಡಿದ್ದರು. ಇದಲ್ಲದೆ ಶೋರೂಂ ಸ್ಥಾಪನೆಗೆ ಸುಮಾರು 1 ಕೋಟಿ ರೂಪಾಯಿ ವೆಚ್ಚ ಮಾಡಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಒಪ್ಪಂದದ ಪ್ರಕಾರ ತಮ್ಮ ಪಾಲಿನ ಎಲ್ಲಾ ಜವಾಬ್ದಾರಿಗಳನ್ನು ಪೂರೈಸಿದ್ದರೂ, ಶೋರೂಂ ಆರಂಭವಾದ ಬಳಿಕ ಕಂಪನಿಯು ಅಗತ್ಯವಾದ ವ್ಯವಹಾರಿಕ ಬೆಂಬಲ, ಪ್ರಚಾರ ಹಾಗೂ ಕಾರ್ಯಾಚರಣೆಗೆ ಬೇಕಾದ ಸಹಕಾರ ನೀಡಲಿಲ್ಲ. ಇದರಿಂದಾಗಿ ಕೋಟ್ಯಂತರ ರೂಪಾಯಿ ಆರ್ಥಿಕ ನಷ್ಟ ಅನುಭವಿಸಬೇಕಾಯಿತು ಎಂದು ಅರುಣ್ ಗುಪ್ತಾ ಆರೋಪಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಸಲ್ಲಿಕೆಯಾಗಿದ್ದ ದೂರನ್ನು ಪರಿಗಣಿಸಿದ ಚಂಡೀಗಢ ಜಿಲ್ಲಾ ನ್ಯಾಯಾಲಯ, ಸಲ್ಮಾನ್ ಖಾನ್, ಅಲ್ವಿರಾ ಖಾನ್ ಅಗ್ನಿಹೋತ್ರಿ ಹಾಗೂ ಸಂಬಂಧಿತ ಕಂಪನಿಯ ನಿರ್ದೇಶಕರಿಗೆ ಸಮನ್ಸ್ ಜಾರಿ ಮಾಡಿದ್ದು, ಮುಂದಿನ ವಿಚಾರಣೆ ಅಕ್ಟೋಬರ್ 5ರಂದು ನಡೆಯಲಿದೆ.



