Home Blog Page 2

ನ. 2ರಂದು ರಿಂಪಾ ಸಿವ ತಬಲಾ ಸೋಲೋ ಕಾರ್ಯಕ್ರಮ

0

ವಿಜಯಸಾಕ್ಷಿ ಸುದ್ದಿ, ಗದಗ: ಗದುಗಿನ ಕಲಾ ವಿಕಾಸ ಪರಿಷತ್‌ನ ರಜತ ಸಂಭ್ರಮವನ್ನು ವರ್ಷ ಪೂರ್ತಿ ಆಚರಿಸಲು ಯೋಜಿಸಿದ್ದು, ನ. 2ರಂದು ಸಂಜೆ 4 ಗಂಟೆಗೆ ಗದುಗಿನ ಮುಂಡರಗಿ ರಸ್ತೆಯಲ್ಲಿರುವ ಚಿಕ್ಕಟ್ಟಿ ಸಮೂಹ ಶಿಕ್ಷಣ ಸಂಸ್ಥೆಗಳ ಆವರಣದ ಚಿಕ್ಕಟ್ಟಿ ಸಭಾ ಭವನದಲ್ಲಿ ಕಲಾ ವಿಕಾಸ ಪರಿಷತ್ ರಜತ ಮಹೋತ್ಸವ ವರ್ಷಾಚರಣೆ ಉದ್ಘಾಟನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರೊ. ಎಸ್.ವೈ. ಚಿಕ್ಕಟ್ಟಿ ವಹಿಸಿಕೊಳ್ಳುವರು. ಮಾಜಿ ಶಾಸಕ ಡಿ.ಆರ್. ಪಾಟೀಲ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪ್ರೊ. ಚಂದ್ರಶೇಖರ ವಸ್ತಾದ, ರಾಜು ಗುಡಿಮನಿ, ಡಾ. ಅನಂತ ಶಿವಪುರ, ವಿ.ಕೆ. ಗುರುಮಠ, ಜಿಲ್ಲಾ ಕಸಾಪ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ, ಡಾ. ಜಿ.ಬಿ. ಪಾಟೀಲ, ಪ್ರೊ. ಅನ್ನದಾನಿ ಹಿರೇಮಠ, ಬಸವರಾಜ ಗಣಪ್ಪನವರ, ಪ್ರೊ. ಕೆ.ಹೆಚ್. ಬೇಲೂರು, ರವಿ ಎಲ್. ಗುಂಜಿಕರ, ಅಂದಾನೆಪ್ಪ ವಿಭೂತಿ ಆಗಮಿಸಲಿದ್ದಾರೆ.

ವರ್ಷಾಚರಣೆಯ ಮೊದಲ ಕಾರ್ಯಕ್ರಮದಲ್ಲಿ ಕೋಲ್ಕತ್ತಾದ ರಿಂಪಾ ಸಿವ ಇವರ ತಬಲಾ ಸೋಲೋ, ಬೆಂಗಳೂರಿನ ಮಲ್ಲೇಶ ಹೂಗಾರ ಇವರ ಶಾಸ್ತ್ರೀಯ ಗಾಯನ, ಭವ್ಯ ಎಸ್. ಕತ್ತಿ ಕಲಾವೈಭವ ಭರತನಾಟ್ಯ ತಂಡ ಲಕ್ಷ್ಮೇಶ್ವರ ಇವರ ನೃತ್ಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಬೆಂಗಳೂರಿನ ಸತೀಶ ಕೊಳ್ಳಿ ಲೆಹರಾದಲ್ಲಿ, ರಾಮು ಕೊಡೇಕಲ್ ಹಾರ್ಮೋನಿಯಂ ಸಾಥ್, ಕನ್ನಯ್ಯ ಕೊಡೇಕಲ್ ತಬಲಾ ಸಾಥ್ ನೀಡಲಿದ್ದಾರೆ.

ಕಾರ್ಯಕ್ರಮಕ್ಕೆ ಹೋಗಿ-ಬರಲು ಗಾಂಧಿ ಸರ್ಕಲ್, ಕನ್ನಡ ಸಾಹಿತ್ಯ ಪರಿಷತ್‌ನ ತೋಂಟದ ಸಿದ್ಧಲಿಂಗ ಕನ್ನಡಭವನ ಮತ್ತು ವೀರೇಶ್ವರ ಪುಣ್ಯಾಶ್ರಮದಿಂದ ಬಸ್ ವ್ಯವಸ್ಥೆ ಮಾಡಲಾಗಿದೆ. ಉಚಿತ ಗೌರವ ಪಾಸ್ ನೀಡಲಾಗುತ್ತಿದ್ದು, ಪಾಸ್ ಹೊಂದಿದವರಿಗೆ ಮಾತ್ರ ಪ್ರವೇಶ ಇರುವುದರಿಂದ 9886717732 ಸಂಪರ್ಕಿಸಿ ಪಾಸ್ ಪಡೆದುಕೊಳ್ಳಲು ಸಂಘಟಕರು ವಿನಂತಿಸಿಕೊಂಡಿದ್ದಾರೆ.

ಕನ್ನಡ ಭಾಷೆ ಉಳಿಸುವ ಹೊಣೆ ನಮ್ಮದು

0

ವಿಜಯಸಾಕ್ಷಿ ಸುದ್ದಿ, ಮುಳಗುಂದ: ಕನ್ನಡ ನಾಡು-ನುಡಿ, ಭಾಷೆ ಉಳಿಸುವ ಹೊಣೆ ನಮ್ಮದು ಎಂದು ನ್ಯಾಯವಾದಿ ಮಂಜುಳಾ ದೇಸಾಯಿಮಠ ಹೇಳಿದರು.

ಅವರು ಮುಳಗುಂದ ಪಟ್ಟಣದ ಬಸವೇಶ್ವರ ಗುಡ್ಡದ ಮೇಲೆ ಕನ್ನಡ ರಕ್ಷಣಾ ವೇದಿಕೆ ವತಿಯಿಂದ 70ನೇ ಕರ್ನಾಟಕ ರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಕನ್ನಡ ನಮ್ಮ ಮಾತೃಭಾಷೆ, ಕನ್ನಡ ನಾಡು-ನುಡಿ, ಭಾಷೆ, ನೆಲ-ಜಲ ಉಳಿಸಲು ನೂರಾರು ಮಹನೀಯರು ಶ್ರಮಿಸಿದ್ದಾರೆ. ಅವರೆಲ್ಲರ ಹೋರಾಟದ ಫಲದಿಂದ ಇಂದು ನಾವೆಲ್ಲರೂ ಕನ್ನಡ ತಾಯಿಯೊಂದೇ ಮಕ್ಕಳಂತೆ ಜೀವನ ಸಾಗಿಸುತ್ತಿದ್ದು, ಕನ್ನಡ ಉಳಿಸಿ-ಬೆಳೆಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದರು.

ಕನ್ನಡ ಸಾಹಿತ್ಯ ಪರಿಷತ್ ಕದಳಿ ವೇದಿಕೆ ಅಧ್ಯಕ್ಷೆ ರಾಜೇಶ್ವರಿ ಬಡ್ನಿ ಭುವನೇಶ್ವರಿ ದೇವಿಯ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿ, ಸರ್ಕಾರ ಸಾಕಷ್ಟು ಆದೇಶಗಳನ್ನು ಹೊರಡಿಸುವ ಮೂಲಕ ಆಡಳಿತದಲ್ಲಿ ಕನ್ನಡ ಬಳಕೆಗೆ ಆದ್ಯತೆ ನೀಡಿ ಕಾರ್ಯಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಿದೆ. ಪೋಷಕರು ತಮ್ಮ ಮಕ್ಕಳಿಗೆ ಕನ್ನಡ ಭಾಷೆಯನ್ನು ಕಲಿಸುವ ಮತ್ತು ಕನ್ನಡ ಶಾಲೆಗೆ ಸೇರಿಸುವ ಪಣ ತೊಡಬೇಕು ಎಂದರು.ಕರವೇ ಉಪಾಧ್ಯಕ್ಷ ದಾವೂದ ಜಮಾಲಸಾಬನವರ, ಗುಳಪ್ಪ ಮಜ್ಜಿಗುಡ್ಡ, ಶರಣಪ್ಪ ಕಮಾಜಿ, ಗಿರೀಶ ಪಿರಂಗಿ, ದೇವರಾಜ ಸಂಗನಪೇಟಿ, ಬಸವರಾಜ ಕರಿಗಾರ, ಪ್ರಕಾಶ ನಡಗೇರಿ, ಸಂಗಮೇಶ ಕೆಂಭಾವಿಮಠ, ಬಸವರಾಜ ಬಂಡಿವಡ್ಡರ, ಮಹಮ್ಮದಲಿ ಶೇಖ್, ಹೈದರ ಖವಾಸ, ಇಸ್ಮಾಯಿಲ್ ಖಾಗದ, ಮುತ್ತಪ್ಪ ಸುಂಕದ, ಗುಡುಸಾಬ ಗಾಡಿ ಇದ್ದರು.

ಷೇರುದಾರ ರೈತರಿಗೆ ತಾಡಪಾಲ್ ವಿತರಣೆ

0

ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ: ಕರ್ನಾಟಕ ಸರ್ಕಾರದ ಸಂಜೀವಿನಿ ಯೋಜನೆಯಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗದಗ ತಾಲೂಕಾ ಸಂಜೀವಿನಿ ಮಹಿಳಾ ಕಿಸಾನ್ ಉತ್ಪಾದಕ ಕಂಪನಿಯಿಂದ ಉತ್ತಮ ಗುಣಮಟ್ಟದ ಹಾಗೂ ಕಡಿಮೆ ಬೆಲೆಯ ತಾಡಪಾಲುಗಳನ್ನು ಇಲ್ಲಿಯ ಷೇರುದಾರ ರೈತರಿಗೆ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಮಡೇಶ ಮಲ್ಲಿಮಾರ, ರೈತರಿಂದ ರೈತರಿಗಾಗಿ ಹುಟ್ಟಿದ ಈ ಕಂಪನಿ ರೈತರ ಕಲ್ಯಾಣಕ್ಕಾಗಿ ದುಡಿದು ಅವರನ್ನು ಉನ್ನತ ಮಟ್ಟಕ್ಕೆ ಬೆಳೆಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು ಎಂದು ಸಲಹೆ ನೀಡಿದರು.

ಕಂಪನಿಯ ನಿರ್ದೇಶಕಿ ಚಂದ್ರಕಲಾ ಮಾಡಲಗೇರಿ ಮಾತನಾಡಿ, ರೈತರಿಗೆ ಅವಶ್ಯಕವಾದ ಎಲ್ಲಾ ಕೃಷಿ ಸಲಕರಣೆಗಳು ಹಾಗೂ ವಸ್ತುಗಳನ್ನು ಉತ್ತಮ ಗುಣಮಟ್ಟದಲ್ಲಿ ಮತ್ತು ಕೈಗೆಟುಕುವ ಬೆಲೆಗೆ ಒದಗಿಸಲು ಕಂಪನಿ ಸದಾ ಮುಂದುವರಿಯಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಗದಗ ಜಿಲ್ಲಾ ವ್ಯವಸ್ಥಾಪಕ ಮಡೇಶ ಮಲ್ಲಿಮಾರ, ತಾಲೂಕಾ ವ್ಯವಸ್ಥಾಪಕ ಸಿದ್ದು ಸತ್ಯಣ್ಣವರ, ಲಕ್ಕುಂಡಿ ಗ್ರಾ.ಪಂ ಒಕ್ಕೂಟದ ಅಧ್ಯಕ್ಷೆ ಕಸ್ತೂರೆವ್ವ ಗುಂಜಾಳ, ಶೈಲಾ ಅಂಬಕ್ಕಿ, ನೀಲಮ್ಮ ಬೇಲೇರಿ, ಸುಶೀಲಾ ಉಮಚಗಿ, ರೇಣುಕಾ ಉಮಚಗಿ, ಕಂಪನಿ ಸಿಇಓ ರಮೇಶ ಭಂಡಾರಿ, ಬಸಪ್ಪ ಗಡಾದ, ರೈತ ಉತ್ಪಾದಕ ಕಂಪನಿಯ ಸಿಬ್ಬಂದಿಗಳು, ಜಿಎಫ್‌ಎಲ್ ಸಿಬ್ಬಂದಿಗಳು ಹಾಜರಿದ್ದರು.

ಲಕ್ಕುಂಡಿಯಲ್ಲಿ ಸಂಭ್ರಮದ ರಾಜ್ಯೋತ್ಸವ

0

ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ: ಇಲ್ಲಿಯ ಗ್ರಾಮ ಪಂಚಾಯಿತಿ ಆವರಣದಲ್ಲಿ ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವದರೊಂದಿಗೆ 70ನೇ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.

ಗ್ರಾ.ಪಂ ಅಧ್ಯಕ್ಷ ಕೆ.ಎಸ್. ಪೂಜಾರ, ಉಪಾಧ್ಯಕ್ಷೆ ಪುಷ್ಪಾ ಪಾಟೀಲ, ಗ್ರಾ.ಪಂ ಸದಸ್ಯರು, ಎಸ್.ಡಿ.ಇ.ಎ. ಸಿ.ಎ. ಜಾನೋಪಂಥರ ಸೇರಿದಂತೆ ಸಿಬ್ಬಂದಿಗಳು ಹಾಜರಿದ್ದರು.
ಸರಕಾರಿ ಪ್ರಾಥಮಿಕ ದ್ವಿಭಾಷಾ ಶಾಲೆ, ಬಾಲಕಿಯರ ಸರಕಾರಿ ಪ್ರೌಢಶಾಲೆ, ಸ್ವಾಮಿ ವಿವೇಕಾನಂದ ಪ್ರಾಥಮಿಕ ಹಿರಿಯ ಕನ್ನಡ ಶಾಲೆ, ಸರಕಾರಿ ಹೆಣ್ಣು ಮಕ್ಕಳ ಪ್ರಾಥಮಿಕ ಶಾಲೆ, ಸರಕಾರಿ ಪ್ರಾಥಮಿಕ ಉರ್ದು ಶಾಲೆ, ಸರಕಾರಿ ಕಿರಿಯ ಕನ್ನಡ ಪ್ರಾಥಮಿಕ ಶಾಲೆ, ಸರಕಾರಿ ಹಿರಿಯ ಡಿ.ಪಿ.ಇ.ಪಿ ಪ್ರಾಥಮಿಕ ಶಾಲೆ ಮಾರುತಿ ನಗರ, ಬಿ.ಎಚ್. ಪಾಟೀಲ ಪ್ರೌಢಶಾಲೆಯಲ್ಲಿ ಕನ್ನಡ ನುಡಿ, ನಾಡು, ಜಲ ಮತ್ತು ಭಾಷೆಯ ಕುರಿತಾದ ನೃತ್ಯ, ಭಾಷಣ, ನಾಟಕ ಜರುಗಿದವು.

ಶಾಲೆಯ ಮುಖ್ಯೋಪಾಧ್ಯಾಯರು, ಎಸ್.ಡಿ.ಎಂ.ಸಿ ಅಧ್ಯಕ್ಷರು, ಸದಸ್ಯರು, ಶಿಕ್ಷಕರು ಪಾಲ್ಗೊಂಡು ಸಡಗರ ಸಂಭ್ರಮದಿಂದ ರಾಜ್ಯೋತ್ಸವವನ್ನು ಆಚರಿಸಿದರು.

 

ಮಾರಕಾಸ್ತ್ರಗಳಿಂದ ಕೊಚ್ಚಿ ಮಂಗಳೂರಿನ ಕುಖ್ಯಾತ ರೌಡಿಶೀಟರ್​ನ ಬರ್ಬರ ಹತ್ಯೆ!

0

ಕಾಸರಗೋಡು:- ಜಿಲ್ಲೆಯ ಉಪ್ಪಳ ರೈಲ್ವೆ ಗೇಟ್ ಬಳಿ ಮಂಗಳೂರಿನ ಖ್ಯಾತ ರೌಡಿಶೀಟರ್ ಓರ್ವನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ದುಷ್ಕರ್ಮಿಗಳು ಕೊಲೆಗೈದಿದ್ದಾರೆ.

ಟೋಪಿ ನೌಫಾಲ್ ಕೊಲೆಗೀಡಾದ ರೌಡಿಶೀಟರ್. ಈ ಕುರಿತು ಉಪ್ಪಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಫೈಸಲ್ ನಗರ ಮೂಲದ ನೌಫಾಲ್, ಮಂಗಳೂರಿನ ಅನೇಕ ಕುಖ್ಯಾತ ಗ್ಯಾಂಗ್‌ಗಳೊಂದಿಗೆ ಸೇರಿ ಡ್ರಗ್ಸ್ ವಹಿವಾಟು, ವಸೂಲಿ, ಅಕ್ರಮ ಚಿನ್ನ ವ್ಯವಹಾರಗಳಲ್ಲಿ ತೊಡಗಿಸಿಕೊಂಡಿದ್ದ. 2017ರ ಫರಂಗಿಪೇಟೆ ಜೋಡಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ಆಗಿದ್ದ ಅವನ ವಿರುದ್ಧ 10ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದವು ಎನ್ನಲಾಗಿದೆ.

ಕನ್ನಡ ನಾಡು ಸರ್ವಜನಾಂಗದ ಶಾಂತಿಯ ತೋಟವಾಗಲಿ: ಸಚಿವ ಎಚ್.ಕೆ. ಪಾಟೀಲ

0

ವಿಜಯಸಾಕ್ಷಿ ಸುದ್ದಿ, ಗದಗ: ನಮ್ಮ ನಾಡಿನ ಹೆಮ್ಮೆಯ ಕನ್ನಡ ರಾಜ್ಯೋತ್ಸವ ಕನ್ನಡದ ಇತಿಹಾಸ, ಸಂಸ್ಕೃತಿ ಮತ್ತು ಅಸ್ಮಿತೆಯ ಸಂಕೇತದ ಜೊತೆಗೆ, ಕನ್ನಡಿಗರ ಏಕತೆಯ ಶಕ್ತಿಯಾಗಿದೆ ಎಂದು ರಾಜ್ಯದ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಸಚಿವರು ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲ ಹೇಳಿದರು.

ಶನಿವಾರ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತದಿಂದ ಜರುಗಿದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸಾರ್ವಜನಿಕ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ಸ್ವಾತಂತ್ರ್ಯೋತ್ತರ ಮೈಸೂರು ರಾಜ್ಯವು ಏಕೀಕರಣವಾದರೂ ಕರ್ನಾಟಕ ಎಂಬ ಹೆಸರು ನಾಮಕರಣವಾಗಲಿ ಎನ್ನುವ ಕೂಗು ಗದಗ ಸೇರಿದಂತೆ ಹಲವೆಡೆ ಪಸರಿಸಿತು. ಕರ್ನಾಟಕ ನಾಮಕರಣವಾಗಲು ಹಲವಾರು ಘಟನಾವಳಿಗಳು ಜರುಗಿದವು. ಇದಕ್ಕೆ ಪೂರಕವಾಗಿ ಗದುಗಿನ ಕಾಟನ್ ಸೇಲ್ ಸೊಸೈಟಿಯ ಆವರಣದಲ್ಲಿ ಡಿಸೆಂಬರ್ 1961ರ 27, 28 ಮತ್ತು 29ರಂದು ಜರುಗಿದ 43ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಕೆ.ಜಿ. ಕುಂದಣಗಾರ ಮತ್ತು ಸ್ವಾಗತ ಸಮಿತಿಯ ಅಧ್ಯಕ್ಷ ಕೆ.ಎಚ್. ಪಾಟೀಲರ ಆಶಯದಂತೆ ಮೈಸೂರು ರಾಜ್ಯಕ್ಕೆ ಕರ್ನಾಟಕ ರಾಜ್ಯವೆಂದು ನಾಮಕರಣವಾಗಲಿ ಎಂದು ಸಮ್ಮೇಳನದಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ವಿಧಾನಸಭೆಯಲ್ಲಿ ಮುಖ್ಯಮಂತ್ರಿ ದೇವರಾಜ ಅರಸು, ವಿಧಾನ ಪರಿಷತ್ತಿನಲ್ಲಿ ಕೃಷಿ ಸಚಿವ ಕೆ.ಎಚ್. ಪಾಟೀಲ ರಾಜ್ಯಕ್ಕೆ ಕರ್ನಾಟಕ ನಾಮಕರಣ ಠರಾವು ಮಂಡಿಸಿದರು. ಸರ್ವಾನುಮತದಿಂದ ಠರಾವು ಪಾಸಾಗಿ 1973 ನವೆಂಬರ್ 01ರಂದು ಮೈಸೂರು ರಾಜ್ಯಕ್ಕೆ ‘ಕರ್ನಾಟಕ’ ಎಂದು ನಾಮಕರಣವಾಯಿತು ಎಂದು ಹೇಳಿದರು.

ಗದುಗಿನಲ್ಲಿ 1973ರ ನವೆಂಬರ್ 2ರಂದು ಗದುಗಿನ ಕಾಟನ್ ಸೇಲ್ ಸೊಸೈಟಿಯ ಆವರಣದಲ್ಲಿ ಐತಿಹಾಸಿಕ ಸಭೆ ನಡೆಸಿ ಕರ್ನಾಟಕ ನಾಮಕರಣ ಮಹೋತ್ಸವವನ್ನು ಸಂಭ್ರಮಿಸಿದ್ದು ಕರ್ನಾಟಕ ಇತಿಹಾಸದಲ್ಲಿ ಅವಿಸ್ಮರಣೀಯ ಕ್ಷಣಗಳಾಗಿವೆ. ಅಂದು ಜರುಗಿದ ಕರ್ನಾಟಕ ನಾಮಕರಣ ಮಹೋತ್ಸವದ ಘಟನೆಗಳನ್ನು ಮರುಸೃಷ್ಟಿಸಿ, ಕರ್ನಾಟಕ ಸಂಭ್ರಮ-50ರ ಸಂಭ್ರಮಾಚರಣೆಯನ್ನು 2023ರ ನವೆಂಬರ್ 01, 02 ಮತ್ತು 03ರಂದು ಕಾಟನ್ ಸೇಲ್ ಸೊಸೈಟಿಯ ಆವರಣದಲ್ಲಿ ಐತಿಹಾಸಿಕ ಕಾರ್ಯಕ್ರಮ ಜರುಗಿದ್ದು, ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ, ವಿಧಾನಸಭೆಯ ಅಧ್ಯಕ್ಷ ಯು.ಟಿ. ಖಾದರ್ ಪ್ರಸೀದ್, ವಿ.ಪ ಸಭಾಧ್ಯಕ್ಷ ಬಸವರಾಜ ಹೊರಟ್ಟಿ, ಸಚಿವ ಸಂಪುಟದ 20ಕ್ಕೂ ಹೆಚ್ಚು ಸಚಿವರು ಹಾಗೂ ಶಾಸಕರು ಕರ್ನಾಟಕ ಸಂಭ್ರಮ-50ರ ಐತಿಹಾಸಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡರು ಎಂದರು.

ಗದುಗಿನ ವೀರನಾರಾಯಣ-ತ್ರಿಕೂಟೇಶ್ವರ ದೇವಾಲಯಗಳು, ಲಕ್ಕುಂಡಿ ಜಿನಾಲಯಗಳು, ಡಂಬಳದ ದೊಡ್ಡ ಬಸವೇಶ್ವರ ದೇವಾಲಯ, ಸೂಡಿಯ ಜೋಡು ಕಳಸದ ದೇವಾಲಯ, ದಾನ ಚಿಂತಾಮಣಿ ಅತ್ತಿಮಬ್ಬೆ ಸ್ಮಾರಕಗಳ ಶಿಲ್ಪಕಲೆ ಮೈ-ಮನಗಳನ್ನು ಮುದಗೊಳಿಸುತ್ತದೆ. ಭಾರತ ರತ್ನ ಪಂಡಿತ ಭೀಮಸೇನ ಜೋಶಿ, ಪಂ. ಪುಟ್ಟರಾಜ ಗವಾಯಿಗಳವರ ಆಶ್ರಮದ ಸಂಗೀತ ನಿನಾದ ನಮ್ಮಲ್ಲಿ ಧನ್ಯತಾ ಭಾವವನ್ನು ಜಾಗೃತಗೊಳಿಸುತ್ತದೆ. ಗದಗಿನ ಕೀರ್ತಿಯನ್ನು ರಾಷ್ಟ್ರಮಟ್ಟಕ್ಕೇರಿಸಿದ 1ನೇ ನಾಗವರ್ಮ, ಶಾಸನ ಕವಿ ಮಲ್ಲ, ದುರ್ಗಸಿಂಹ, ನಯಸೇನ, ಚಾಮರಸ, ಕುಮಾರವ್ಯಾಸ, ಶ್ರೀಧರಾಚಾರ್ಯ, ಆದಯ್ಯ, ಬಾಲಲೀಲಾ ಮಹಾಂತ ಶಿವಯೋಗಿಗಳು, ಕನ್ನಡ ಕುಲಪುರೋಹಿತ ಆಲೂರು ವೆಂಕಟರಾಯರು, ಹುಯಿಲಗೋಳ ನಾರಾಯಣರಾಯರು, ಹಿಂದೂಸ್ಥಾನಿ ಗಾಯಕ ಪಂ. ಭೀಮಸೇನ ಜೋಶಿ, ಸಂಗೀತ ದಿಗ್ಗಜರಾದ ಪಂಚಾಕ್ಷರಿ ಗವಾಯಿಗಳು ಮತ್ತು ವಿಕಲಚೇತನರ ಬಾಳಿನ ಬೆಳಕಾದ ಡಾ. ಪುಟ್ಟರಾಜ ಗವಾಯಿಗಳು ಸೇರಿದಂತೆ ಅನೇಕರನ್ನು ಸ್ಮರಿಸೋಣ ಎಂದರು.

ಈ ಸಂದರ್ಭದಲ್ಲಿ ವಿ.ಪ ಸದಸ್ಯ ಎಸ್.ವಿ. ಸಂಕನೂರ, ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಡಿ.ಆರ್. ಪಾಟೀಲ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕಬರಸಾಬ ಬಬರ್ಚಿ, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ. ಅಸೂಟಿ, ತಾಲೂಕಾಧ್ಯಕ್ಷ ಅಶೋಕ ಮಂದಾಲಿ, ಸಿದ್ದು ಪಾಟೀಲ, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್, ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್, ಎಸಿ ಗಂಗಪ್ಪ ಎಂ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಜನಪ್ರತಿನಿಧಿಗಳು, ಗಣ್ಯರು, ಸಾರ್ವಜನಿಕರು, ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಕ್ರೀಡಾ ಕ್ಷೇತ್ರದಲ್ಲಿ ಕ್ರಿಕೆಟಿಗ ಸುನೀಲ ಜೋಶಿ, ಕುಸ್ತಿ ಪಟು ಪ್ರೇಮಾ ಹುಚ್ಚಣ್ಣವರ, ಹಾಕಿ ಪಟುಗಳಾದ ಭೀನೂ ಭಾಟ್, ರಾಜು ಬಾಗಡೆ, ಹರೀಶ ಮುಟಗಾರ, ಇತ್ತೀಚೆಗೆ ಸ್ಪ್ರಿಂಗ್ ಕ್ರೀಡೆಯಲ್ಲಿ ಏಷ್ಯಾ ಮಟ್ಟದಲ್ಲಿ ಕಂಚಿನ ಪದಕ ಪಡೆದ ಮುಂಡರಗಿ ತಾಲೂಕಿನ ಮುರುಡಿ ತಾಂಡೆಯ ರಮೇಶ ಬೂದಿಹಾಳ ಹೀಗೆ ಅನೇಕ ಸಾಧಕರು ಗದಗಿನ ಹೆಮ್ಮೆಯಾಗಿದ್ದಾರೆ. ಇಂದು ನಮ್ಮ ರಾಜ್ಯವು ಶಿಕ್ಷಣದಲ್ಲಿ, ತಂತ್ರಜ್ಞಾನದಲ್ಲಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದೆ. ಕನ್ನಡ ನಾಡು ಸಮೃದ್ಧವಾಗಲಿ, ಕನ್ನಡ ಭಾಷೆ ವಿಶ್ವದ ನಾನಾ ಮೂಲೆಗಳಲ್ಲಿ ಕಂಗೊಳಿಸಲಿ, ಕನ್ನಡ ನಾಡು ಸರ್ವಜನಾಂಗದ ಶಾಂತಿಯ ತೋಟವಾಗಲಿ, ಕರ್ನಾಟಕವು ವಿಶ್ವಕ್ಕೆ ಮಾದರಿ ರಾಜ್ಯವಾಗಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಆಶಿಸಿದರು.

“ನಮ್ಮ ಕನ್ನಡ ನಾಡು ಹಲವು ಜನಾಂಗಗಳು, ಸಂಸ್ಕೃತಿಗಳು, ಧರ್ಮಗಳು, ಪಂಥಗಳು ಒಂದಾಗಿ ಬದುಕುತ್ತಿರುವ ಸೌಹಾರ್ದದ ನೆಲ. ಈ ನಾಡಿನ ಹೃದಯದಲ್ಲಿ ಸಮಾನತೆ, ಸಹಭಾವ, ಸಹಬಾಳ್ವೆ, ಭ್ರಾತೃತ್ವ ಭಾವನೆ ತುಂಬಿದೆ. ಶರಣರ ವಚನ, ದಾಸರ ಭಕ್ತಿ ಗೀತೆಗಳಿಂದ, ದ.ರಾ. ಬೇಂದ್ರೆ, ಕುವೆಂಪು ವಿಶ್ವ ಮಾನವ ಸಂದೇಶದಿಂದ ನಮ್ಮ ನಾಡು ಒಂದು ವಿಶಾಲ ಚಿಂತನೆಯ ಬೀಡಾಗಿದೆ. ಕನ್ನಡ ನಾಡು, ಕನ್ನಡಿಗರು ಎಲ್ಲ ಕ್ಷೇತ್ರಗಳಲ್ಲಿಯೂ ಅಪರಿಮಿತ ಸಾಧನೆಗೈದಿದ್ದಾರೆ”

ಎಚ್.ಕೆ. ಪಾಟೀಲ,
ಜಿಲ್ಲಾ ಉಸ್ತುವಾರಿ ಸಚಿವರು.

ಕನ್ನಡ ನಮ್ಮ ತಾಯಿ ಭಾಷೆ: ಹರ್ಷಲತಾ ದೇಶಪಾಂಡೆ

0

ವಿಜಯಸಾಕ್ಷಿ ಸುದ್ದಿ, ಮುಳಗುಂದ: ಕನ್ನಡ ಭಾಷೆ ನಮ್ಮ ತಾಯಿ ಭಾಷೆ ಎಂದು ಹರ್ಷಲತಾ ದೇಶಪಾಂಡೆ ಹೇಳಿದರು.

ಅವರು ಪಟ್ಟಣದ ಕಾಳಿಕಾ ದೇವಸ್ಥಾನದ ಬಳಿಯ ಅಂಗನವಾಡಿ ನಂ. 142ರಲ್ಲಿ 70ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಸಾಧಕರನ್ನು ಸನ್ಮಾನಿಸಿ ಮಾತನಾಡಿದರು.

ಕನ್ನಡ ಅಕ್ಷರ ಕಲಿಕೆಯ ಮೂಲ ಕೇಂದ್ರಗಳು ಅಂಗನವಾಡಿಗಳು. ಸರ್ಕಾರ ಇಂದು ಅಂಗನವಾಡಿ ಕೇಂದ್ರಗಳಿಗೆ ಸಾಕಷ್ಟು ಸೌಲಭ್ಯಗಳನ್ನು ಒದಗಿಸುವ ಮೂಲಕ ಮಕ್ಕಳ ಕಲಿಕೆಗೆ ಸಹಾಯಕವಾಗಿದ್ದು, ಪೋಷಕರು ಮಕ್ಕಳನ್ನು ನಿತ್ಯ ಅಂಗನವಾಡಿಗಳಿಗೆ ಕಳಿಸಬೇಕು. ಮಕ್ಕಳಲ್ಲಿ ಸಾಕಷ್ಟು ಪ್ರತಿಭೆಗಳಿದ್ದು, ತಾಯಂದಿರು ಮಕ್ಕಳಿಗೆ ನಿತ್ಯವೂ ತಾಯಿ ಭಾಷೆಯಾದ ಕನ್ನಡವನ್ನು ಕಲಿಸುವ ಮೂಲಕ ಕನ್ನಡ ಭಾಷೆ ಉಳಿಸಿ ಬೆಳೆಸಬೇಕು ಎಂದರು.

ಮಕ್ಕಳ ಕಲಿಕೆಗಾಗಿ ಸಾಕಷ್ಟು ಮಹನೀಯರು ಚೇರ್‌, ಪೆನ್ಸಿಲ್, ಕಲಿಕಾ ಸಾಮಗ್ರಿಗಳನ್ನು ನೀಡಿದರು. ನಿವೃತ್ತಿ ಹೊಂದಿದ ಅಂಗನವಾಡಿ ಶಿಕ್ಷಕಿ ಎಸ್.ಎಂ. ಪಟ್ಟಣಶೆಟ್ಟಿ ಅವರನ್ನು, ಅಂಗನವಾಡಿಯಲ್ಲಿ ಕಲಿತು ಸರಕಾರಿ ಹುದ್ದೆ ಅಲಂಕರಿಸಿದ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.

ಅಧ್ಯಕ್ಷತೆಯನ್ನು ಗೊಂವಿಂದ ಇಂಗಳಗಿ ವಹಿಸಿದ್ದರು. ಶ್ರೀಪಾದ ತಮ್ಮಣ್ಣವರ, ವಿ.ಡಿ. ದೇಸಾಯಿ, ಶಂಕರಪ್ಪ ತೆಂಬದಮನಿ, ಸೋಮಶೇಖರ ಬಟ್ಟೂರ, ಯೋಗರಾಜ ಹುಲಿ, ಜಿ.ಜಿ. ಗುಡಿ, ಇಸ್ಮಾಯಿಲ್ ಖಾಗದ, ವಿ.ಡಿ. ಸಿದ್ದನಗೌಡರ, ವಿದ್ಯಾ ಸೊರಟೂರ, ಹಸೀನಾ ಖಾಗದ, ನಿರ್ಮಲಾ ಬಟ್ಟೂರ, ಗೀತಾ ಕೋಳಿವಾಡ, ಸರೋಜಾ ಅರಳಿ, ಎಸ್.ಎಂ. ಪಟ್ಟಣಶೆಟ್ಟಿ, ಖುಷ್ಬು ಖಾಗದ ಇದ್ದರು.

ಉದ್ಯಮಿಗಳಿಗೆ ಗುಡ್ ನ್ಯೂಸ್: ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ ಬೆಲೆ ಇಳಿಕೆ

0

ದೆಹಲಿ: ಹೋಟೆಲ್‌, ರೆಸ್ಟೋರೆಂಟ್‌ ಹಾಗೂ ಆಹಾರೋದ್ಯಮ ವಲಯಗಳಿಗೆ ಗುಡ್ ನ್ಯೂಸ್ ಸಿಕ್ಕಿದೆ.

ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ ಇಳಿಕೆ ಮಾಡಲಾಗಿದೆ. ಇಂದು ಹೊಸ ದರಗಳು ಜಾರಿಗೆ ಬಂದಿದ್ದು, ಹೋಟೆಲ್‌ ಮತ್ತು ರೆಸ್ಟೋರೆಂಟ್‌ಗಳಲ್ಲಿ ಕೆಲಸ ಮಾಡುವವರಿಗೆ ಸ್ವಲ್ಪ ನಿರಾಳತೆ ದೊರಕಿದೆ.

ಸರ್ಕಾರಿ ಸ್ವಾಮ್ಯದ ತೈಲ ಮಾರುಕಟ್ಟೆ ಕಂಪನಿಗಳು ಈ ಬೆಲೆ ಇಳಿಕೆಯ ಘೋಷಣೆ ಮಾಡಿದ್ದು, ಪ್ರತಿ 19 ಕೆಜಿ ವಾಣಿಜ್ಯ ಸಿಲಿಂಡರ್‌ಗೆ 5 ರೂಪಾಯಿಯಷ್ಟು ಕಡಿತ ಮಾಡಲಾಗಿದೆ. ಇದರಿಂದಾಗಿ ದೆಹಲಿಯಲ್ಲಿ ಸಿಲಿಂಡರ್‌ನ ಹೊಸ ಬೆಲೆ ₹1,590.50 ಆಗಿದ್ದು, ಮೊದಲು ಅದು ₹1,595.50 ಇತ್ತು. ಕೋಲ್ಕತ್ತಾದಲ್ಲಿ 6.50 ರೂಪಾಯಿ ಇಳಿಕೆ ಆಗಿ ಹೊಸ ಬೆಲೆ ₹1,694 ಆಗಿದೆ. ಚೆನ್ನೈನಲ್ಲಿ ₹1,750 (₹4.50 ಇಳಿಕೆ) ಮತ್ತು ಮುಂಬೈನಲ್ಲಿ ₹1,542 (₹5 ಇಳಿಕೆ)ಗೆ ಮಾರಾಟವಾಗುತ್ತಿದೆ.

ಈ ಬೆಲೆ ಇಳಿಕೆಯು ಹೋಟೆಲ್‌, ಊಟಗೃಹ, ಕೇಟರಿಂಗ್‌ ಮತ್ತು ಆಹಾರೋದ್ಯಮ ವಲಯದವರಿಗೆ ಕೆಲವು ಮಟ್ಟಿಗೆ ನೆರವಾಗಲಿದೆ ಎಂದು ಉದ್ಯಮಿಗಳು ತಿಳಿಸಿದ್ದಾರೆ. ಆದರೆ ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಮನೆಗಳಲ್ಲಿ ಬಳಸುವ ಸಾಮಾನ್ಯ ಸಿಲಿಂಡರ್‌ಗಳಿಗೆ ಹಳೆಯ ದರಗಳೇ ಮುಂದುವರಿಯಲಿವೆ. ಸಾಮಾನ್ಯ ಜನರಿಗೆ ಬೆಲೆ ಇಳಿಕೆಯ ನಿರೀಕ್ಷೆ ಇದ್ದರೂ ಈ ಬಾರಿ ಇಳಿಕೆ ಕೇವಲ ವಾಣಿಜ್ಯ ಬಳಕೆಯ ಸಿಲಿಂಡರ್‌ಗಳಿಗೆ ಮಾತ್ರ ಸೀಮಿತವಾಗಿದೆ.

ಡಿಸಿಎಂ ಡಿಕೆ ಶಿವಕುಮಾರ್ ಗೆ ಸಿಎಂ ಆಗುವ ಅರ್ಹತೆ ಇದೆ: ಸಚಿವ ಎಂ.ಸಿ ಸುಧಾಕರ್

0

ಚಿಕ್ಕಬಳ್ಳಾಪುರ:- ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ರಾಜ್ಯದ ಮುಖ್ಯಮಂತ್ರಿ ಆಗುವ ಎಲ್ಲಾ ಅರ್ಹತೆ ಇದೆ ಎಂದು ಸಚಿವ ಎಂ.ಸಿ ಸುಧಾಕರ್ ಹೇಳಿಕೆ ನೀಡಿದ್ದಾರೆ.

ನವೆಂಬರ್‌ನಲ್ಲಿ ಕ್ರಾಂತಿ ಚರ್ಚೆ ವಿಚಾರಕ್ಕೆ ನಗರದಲ್ಲಿ ಮಾತನಾಡಿದ ಅವರು, ಯಾವ ಕ್ರಾಂತಿಯೂ ಇಲ್ಲ ಬರೀ ಭ್ರಾಂತಿ ಅಷ್ಟೆ. ಕಾಂಗ್ರೆಸ್ ಹೈಕಮಾಂಡ್ ಪ್ರಸ್ತುತ ಬಿಹಾರ ಚುನಾವಣೆ ಕಡೆ ಗಮನ ಇದೆ. ಕ್ರಾಂತಿಯ ಬಗ್ಗೆ ನಮಗ್ಯಾರಿಗೂ ಮಾಹಿತಿ ಇಲ್ಲ. ಕಾಂಗ್ರೆಸ್ ಹೈಕಮಾಂಡ್, ಸಿಎಂ, ಡಿಸಿಎಂ ತೀರ್ಮಾನಕ್ಕೆ ನಾವು ಬದ್ಧರಾಗಿರುತ್ತೇವೆ ಎಂದರು.

ಡಿಸಿಎಂ ಡಿಕೆ ಶಿವಕುಮಾರ್ ಸಿಎಂ ಆಗುವ ಇಂಗಿತದ ಬಗ್ಗೆ ಮಾತನಾಡಿದ ಸಚಿವರು, ಮುಖ್ಯಮಂತ್ರಿ ಅವಕಾಶ ಇದೆ ಅಂದ್ರೆ ಯಾರಾದ್ರೂ ಬೇಡ ಅಂತಾರಾ? ಡಿಕೆಶಿಗೆ ಮುಖ್ಯಮಂತ್ರಿಯಾಗುವ ಅರ್ಹತೆ ಇದೆ. ಸಿದ್ದರಾಮಯ್ಯ ಹಾಗೂ ಡಿಕೆಶಿ ಜೋಡೆತ್ತುಗಳಾಗಿ ಕೆಲಸ ಮಾಡಿದ್ದಾರೆ. ಹೈಕಮಾಂಡ್ ತೆಗೆದುಕೊಳ್ಳೊ ತಿರ್ಮಾನಕ್ಕೆ ನಾವು ಬದ್ಧ ಎಂದರು.

ಜಿಲ್ಲೆಯನ್ನು ರಾಜ್ಯದಲ್ಲೇ ನಂ.1 ಮಾಡುವ ಗುರಿ: ಡಾ. ಎಚ್.ಕೆ. ಪಾಟೀಲ

0

ವಿಜಯಸಾಕ್ಷಿ ಸುದ್ದಿ, ಗದಗ: 2025ರ ಕನ್ನಡ ರಾಜ್ಯೋತ್ಸವ ಗದಗ ಜಿಲ್ಲೆಯಲ್ಲಿ ಶಿಸ್ತುಬದ್ಧವಾಗಿ, ವಿಜೃಂಭಣೆಯಿಂದ ನಡೆದಿದೆ. ನಾಡಿನ ಗತವೈಭವ ಸ್ಮರಿಸುತ್ತಾ ನಾಡಹಬ್ಬ ಆಚರಿಸಿದ್ದೇವೆ. 2023 ನವೆಂಬರ್ ತಿಂಗಳಲ್ಲಿ ಗದುಗಿನ ಇತಿಹಾಸದಲ್ಲಿ ಸುವರ್ಣ ಅಕ್ಷರಗಳಿಂದ ಬರೆದಿಡುವ ಕಾರ್ಯಕ್ರಮ ಮಾಡಲಾಗಿತ್ತು. 1961ರಲ್ಲಿ ಮೈಸೂರು ರಾಜ್ಯಕ್ಕೆ ಕರ್ನಾಟಕ ಹೆಸರು ನಾಮಕರಣ ಮಾಡಬೇಕೆಂದು ಸರ್ವಾನುಮತದಿಂದ ನಿರ್ಣಯ ಕೈಗೊಂಡು ಸಾರ್ವಜನಿಕ ಸಭೆಯ ಮೂಲಕ ಕರ್ನಾಟಕ ಎಂದು ನಾಮಕರಣ ಮಾಡಲಾಯಿತು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲ ಹೇಳಿದರು.

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹಿಂದಿನ ಗತವೈಭವ ಮರುಕಳಿಸುವಂತೆ 2023ರಲ್ಲಿ ವೀರನಾರಾಯಣ ದೇವಸ್ಥಾನದಿಂದ 20ಕ್ಕೂ ಹೆಚ್ಚು ಸಚಿವ ಸಂಪುಟದ ಸದಸ್ಯರು, ಶಾಸಕರು, ಜನಪ್ರತಿನಿಧಿಗಳು ಹಾಗೂ ಸಹಸ್ರ ಸಂಖ್ಯೆಯ ಜನರ ಸಮ್ಮುಖದಲ್ಲಿ ಮತ್ತೊಮ್ಮೆ ದೊಡ್ಡ ಕಾರ್ಯಕ್ರಮ ನಡೆಸಿ, ಕರ್ನಾಟಕ ಸಂಭ್ರಮ 50 ಹೆಸರಿನಲ್ಲಿ ಗತವೈಭವ ಮರುಸೃಷ್ಟಿ ಮಾಡಿದ್ದೇವೆ ಎಂದರು.

ನಮ್ಮ ಕನ್ನಡ ನಾಡಿನಲ್ಲಿ ಬಡತನವನ್ನು ಸಂಪೂರ್ಣ ನಿರ್ಮೂಲನೆ ಮಾಡಿದ್ದೇವೆ. ಕನ್ನಡದ ಪ್ರತಿ ಅರ್ಹ ಕುಟುಂಬಗಳಿಗೆ ಗ್ಯಾರಂಟಿ ಯೋಜನೆ ನೀಡಿದ್ದೇವೆ. ಇದಕ್ಕಾಗಿ ಪ್ರತಿ ವರ್ಷ 60 ಸಾವಿರ ಕೋಟಿ ರೂ ಹಣ ಖರ್ಚು ಮಾಡಿ ಜನರ ಬದುಕು ಹಸನುಗೊಳಿಸಿ ಬಡತನ ದೂರ ಮಾಡಿದ್ದೇವೆ. ಜಿಲ್ಲೆಯಲ್ಲಿ ಶೇ. 99.4ರಷ್ಟು ಜನರಿಗೆ ಗ್ಯಾರಂಟಿ ಯೋಜನೆಗಳು ತಲುಪಿವೆ ಎಂದರು.

ಮಳೆಯಿಂದ ರೈತರು ತತ್ತರಿಸಿ ಹೋಗಿದ್ದಾರೆ. ಬಹಳಷ್ಟು ಬೆಳೆಗಳು ಮಳೆಯಿಂದ ಹಾನಿಯಾಗಿವೆ. ಭಾನುವಾರ ಒಂದು ಲಕ್ಷಕ್ಕೂ ಹೆಚ್ಚು ಜನರಿಗೆ ಹೆಬ್ಬೆಟ್ಟು ಒತ್ತುವ ಮೂಲಕ ಪರಿಹಾರದ ಹಣ ನೀಡಲಿದ್ದೇವೆ. ಅಭಿವೃದ್ಧಿ ವಿಚಾರದಲ್ಲಿ ರಾಜ್ಯದಲ್ಲಿ ಸಮೀಕ್ಷೆಯಲ್ಲಿ 7ನೇ ಸ್ಥಾನವನ್ನು ಗದಗ ಜಿಲ್ಲೆ ಪಡೆದುಕೊಂಡಿದ್ದು, ಇದು ನಾವೆಲ್ಲರೂ ಸಂತೋಷಪಡುವ ಸಂಗತಿಯಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲೇ ನಂಬರ್ ಒನ್ ಜಿಲ್ಲೆ ಮಾಡುವ ಗುರಿ ಹೊಂದಲಾಗಿದೆ ಎಂದರು.

ಈ ವೇಳೆ ಜಿಲ್ಲಾಧಿಕಾರಿ ಸಿ.ಎನ್ ಶ್ರೀಧರ್, ಪೊಲೀಸ್ ಅಧೀಕ್ಷಕ ರೋಹನ್ ಜಗದೀಶ್, ಅಪರ ಜಿಲ್ಲಾಧಿಕಾರಿ ಡಾ. ದುರಗೇಶ ಕೆ.ಆರ್, ಜಿಲ್ಲಾ ಗ್ಯಾರಂಟಿ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ ಅಸೂಟಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರ್ ಸಾಬ್ ಬಬರ್ಚಿ, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಅಶೋಕ ಮಂದಾಲಿ, ಜಿ.ಪಂ ಮಾಜಿ ಅಧ್ಯಕ್ಷ ಸಿದ್ದಲಿಂಗೇಶ ಪಾಟೀಲ ಉಪಸ್ಥಿತರಿದ್ದರು.

ನಗರದಲ್ಲಿ ರಾಜ್ಯದಲ್ಲೇ ಮೊದಲ ಬಾರಿಗೆ ಪ್ರಭುವಿನೆಡೆಗೆ ಪ್ರಭುತ್ವ ಯೋಜನೆ, ರಾಜ್ಯದಲ್ಲೇ ಮೊದಲ ಬಾರಿಗೆ ಥರ್ಡ್ ಐ, ಶಾಲಾ ಶಿಕ್ಷಕರಿಗೆ ಮೊಬೈಲ್ ಮೂಲಕ ಹಾಜರಾತಿ ಕಲ್ಪಿಸಿ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದ್ದೇವೆ. ಈ ಮೂಲಕ ರಾಜ್ಯದಲ್ಲಿ ಗದಗ ಜಿಲ್ಲೆ ಅಭಿವೃದ್ಧಿ ಪಥದತ್ತ ಸಾಗುತ್ತಿದೆ. ಇದಕ್ಕೆ ಅಧಿಕಾರಿಗಳು ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ ಎಂದು ಸಚಿವ ಎಚ್.ಕೆ. ಪಾಟೀಲ ಹೆಮ್ಮೆ ವ್ಯಕ್ತಪಡಿಸಿದರು.

error: Content is protected !!