Home Blog

ಬೀಗರ ನಡುವೆ ಮಾರಾಮಾರಿ: ಕಪಾಳಕ್ಕೆ ಬಾರಿಸಿದ ಶಾಸಕ ಪ್ರಭು ಚೌಹಾಣ್!

ಬೀದರ್:- ಬೀಗರ ನಡುವೆ ನಡೆದ ಮಾರಾಮಾರಿ ಗಲಾಟೆಯಲ್ಲಿ ಶಾಸಕ ಪ್ರಭು ಚೌಹಾಣ್ ಅವರು ಓರ್ವರಿಗೆ ಕಪಾಳಕ್ಕೆ ಬಾರಿಸಿದ ವಿಡಿಯೋ ಇದೀಗ ವೈರಲ್ ಆಗಿದೆ.

ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಬೋಂತಿ ತಾಂಡದಲ್ಲಿ ಮದುವೆ ವಿಚಾರಕ್ಕೆ ಬಿಜೆಪಿ ಶಾಸಕ ಪ್ರಭು ಚೌಹಾಣ್ ಸಂಬಂಧಿಕರು ಹಾಗೂ ಭಾವಿ ಬೀಗರ ನಡುವೆ ಮಾರಾಮಾರಿ ನಡೆದಿದೆ. ಮಹಾರಾಷ್ಟ್ರದ ಉದ್ದಗೀರ್ ಯುವತಿಯೊಂದಿಗೆ ಪ್ರಭು ಚೌಹಾಣ್ ಮಗ ಪ್ರತೀಕ್ ಚೌಹಾಣ್‌ನೊಂದಿಗೆ ನಿಶ್ಚಿತಾರ್ಥವಾಗಿದೆ.

ಈಗ ಮದುವೆ ಲೇಟಾದ ವಿಚಾರಕ್ಕೆ ಎರಡು ಕಡೆಯವರ ನಡುವೆ ಮಾತಿಗೆ ಮಾತು ಬೆಳೆದು ಗಲಾಟೆಯಾಗಿದೆ. ಘಟನೆ ವಿಕೋಪಕ್ಕೆ ತಿರುಗಿ ಸಂಬಂಧಿಕರು ಹೊಡೆದಾಡಿಕೊಂಡಿದ್ದಾರೆ. ಈ ವೇಳೆ ಶಾಸಕ ಪ್ರಭು ಚೌಹಾಣ್ ಒಬ್ಬರಿಗೆ ಕಾಪಾಳಕ್ಕೆ ಬಾರಿಸಿದ್ದಾರೆ ಎನ್ನಲಾಗಿದೆ.

ಅಲ್ಲದೇ ಈ ವಿಡಿಯೋ ಸಧ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ಟಿಕೆಟ್ ದರ ಏರಿಕೆ: ನಮ್ಮ ಮೆಟ್ರೋ ವಿರುದ್ಧ ಕಾನೂನು ಸಮರಕ್ಕೆ ಮುಂದಾದ ಸಂಸದ ತೇಜಸ್ವಿ ಸೂರ್ಯ!

ಬೆಂಗಳೂರು:- ಟಿಕೆಟ್ ದರ ಏರಿಕೆ ಮಾಡಿರುವ ನಮ್ಮ ಮೆಟ್ರೋ ವಿರುದ್ಧ ಸಂಸದ ತೇಜಸ್ವಿ ಸೂರ್ಯ ಕಾನೂನು ಸಮರಕ್ಕೆ ಮುಂದಾಗಿದ್ದಾರೆ.

ಬೆಂಗಳೂರು ನಮ್ಮ ಮೆಟ್ರೋ ಟಿಕೆಟ್​ ದರ ಏರಿಕೆ ಖಂಡಿಸಿ ಸಾರ್ವಜನಿಕರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ದರ ಏರಿಕೆ ವಿಚಾರವಾಗಿ ರಾಜ್ಯ ಸರ್ಕಾರ ಕೇಂದ್ರದ ಕಡೆ ಬೊಟ್ಟು ಮಾಡಿದರೇ, ಕೇಂದ್ರ ರಾಜ್ಯ ಸರ್ಕಾರದತ್ತ ಬೊಟ್ಟು ಮಾಡಿತ್ತು. ಸರ್ಕಾರಗಳ ಆರೋಪ-ಪ್ರತ್ಯಾರೋಪದಿಂದ ಸಾರ್ವಜನಿಕರಲ್ಲಿ ಗೊಂದಲ ಮೂಡಿದ್ದು, ದರ ಏರಿಕೆ ಮಾಡಿದ್ದು ಯಾರು? ಎಂಬ ಪ್ರಶ್ನೆ ಉದ್ಭವಾಗಿದೆ.

ಹೀಗಾಗಿ ಸಂಸದ ತೇಜಸ್ವಿ ಸೂರ್ಯ ಅವರು, ಕಾನೂನು ಸಮರಕ್ಕೆ ಇಳಿದಿದ್ದು, ದರ ನಿಗದಿ ಪರಿಷ್ಕರಣೆ ಸಮಿತಿ ವರದಿ ಬಿಡುಗಡೆ ಆಗ್ರಹಿಸಿ ಹೈಕೋರ್ಟ್​ಗೆ ರಿಟ್ ಅರ್ಜಿ ಸಲ್ಲಿಸಿದ್ದಾರೆ. ದರ ನಿಗದಿ ಸಮಿತಿ ವರದಿ ತಯಾರಿಸುವ ಮುನ್ನ ವಿದೇಶ ಪ್ರವಾಸ ಮಾಡಿತ್ತು. ಬಿಎಂಆರ್​ಸಿಎಲ್​ ಶೇ.130 ರಷ್ಟು ಮೆಟ್ರೋ ರೈಲು ಟಿಕೆಟ್ ದರ ಹೆಚ್ಚಿಸಿತ್ತು. ದರ ಏರಿಕೆ ಬಳಿಕ ಮೆಟ್ರೋ ರೈಲು ಪ್ರಯಾಣಿಕರ ಸಂಖ್ಯೆ ಕುಸಿದಿತ್ತು. ಮಾಹಿತಿ ಹಕ್ಕಿನಡಿ ಅರ್ಜಿ ಸಲ್ಲಿಸಿದ್ದರೂ ಸಮಿತಿ ವರದಿ ಬಹಿರಂಗಪಡಿಸಿಲ್ಲ. ಹೀಗಾಗಿ, ಸಂಸದ ತೇಜಸ್ವಿ ಸೂರ್ಯ ಹೈಕೋರ್ಟ್​​ಗೆ ರಿಟ್ ಅರ್ಜಿ ಸಲ್ಲಿಸಿದ್ದಾರೆ. ಸೋಮವಾರ ಅಂದ್ರೆ ನಾಳೆ ಹೈಕೋರ್ಟ್​ನ ಏಕಸದಸ್ಯ ಪೀಠದಲ್ಲಿ ರಿಟ್ ಅರ್ಜಿ ವಿಚಾರಣೆ ನಡೆಯಲಿದೆ.

ಹೃದಯಾಘಾತಕ್ಕೆ ಕೋವಿಡ್‌ ಲಸಿಕೆ ಕಾರಣ ಎನ್ನುವುದು ಸಿಎಂ ಬೇಜವಾಬ್ದಾರಿ ತೋರಿಸತ್ತೆ: ಜೋಶಿ ವಾಗ್ದಾಳಿ!

ಹುಬ್ಬಳ್ಳಿ:- ಹೃದಯಾಘಾತಕ್ಕೆ ಕೋವಿಡ್‌ ಲಸಿಕೆ ಕಾರಣ ಎನ್ನುವುದು ಸಿಎಂ ಬೇಜವಾಬ್ದಾರಿ ತೋರಿಸತ್ತೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಮುಖ್ಯಮಂತ್ರಿ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಹೃದಯಾಘಾತ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸದೆ, “ಕೋವಿಡ್‌ ಲಸಿಕೆಯೇ ಇದಕ್ಕೆ ಕಾರಣ” ಎಂಬ ಸಿಎಂ ಹೇಳಿಕೆ ಬೇಜವಾಬ್ದಾರಿಯ ಪರಮಾವಧಿ. ಇದಕ್ಕಾಗಿ ಅವರು ದೇಶದ ಮತ್ತು ವಿಜ್ಞಾನಿಗಳ ಸಮೂಹದ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದರು.

ಸಿಎಂ, ಯಾವುದನ್ನೂ ಸರಿಯಾಗಿ ಪರಿಶೀಲಿಸದೆ, ತಜ್ಞರ ವರದಿ ನೋಡದೆ ಕೋವಿಡ್‌ ಲಸಿಕೆಯನ್ನೇ ಅನುಮಾನಿಸುವುದು, ಲಸಿಕೆ ಕಂಡು ಹಿಡಿದ ಸಂಶೋಧಕರು ಮತ್ತು ವಿಜ್ಞಾನಿಗಳನ್ನು ಅಪಮಾನಿಸುವುದನ್ನು ತೀವ್ರವಾಗಿ ಖಂಡಿಸುತ್ತೇನೆ. ಸಿದ್ದರಾಮಯ್ಯ ಅವರು ಕೂಡಲೇ ಟ್ವೀಟ್‌ ಮಾಡಿ ದೇಶದ ವಿಜ್ಞಾನಿಗಳ ಸಮುದಾಯದ ಕ್ಷಮೆ ಕೇಳಬೇಕು ಎಂದರು.

ಸಿದ್ದರಾಮಯ್ಯ ಅವರಿಗೀಗ 74 ವರ್ಷ. ಅವರೂ ಕೋವಿಡ್‌ ಲಸಿಕೆ ತೆಗೆದುಕೊಂಡಿದ್ದಾರೆ ಅಲ್ಲವೇ? ಅಥವಾ ವಿದೇಶಿ ಲಸಿಕೆ ತೆಗೆದುಕೊಂಡಿದ್ದಾರಾ? ಎಂದು ಮಾರ್ಮಿಕವಾಗಿ ಪ್ರಶ್ನಿಸಿದ ಸಚಿವರು, ರಾಜ್ಯ ಸರ್ಕಾರವೇ ನೇಮಿಸಿದ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕ ಡಾ.ಕೆ.ಎಸ್‌.ರವೀಂದ್ರನಾಥ್‌ ನೇತೃತ್ವದ 10 ತಜ್ಞರ ಸಮಿತಿ ಅಧ್ಯಯನ ನಡೆಸಿ” ಕೋವಿಡ್‌ ಲಸಿಕೆಗೂ ಹೃದಯಾಘಾತಕ್ಕೂ ಸಂಬಂಧವಿಲ್ಲ” ಎಂದು ಸ್ಪಷ್ಟ ವರದಿ ಸಲ್ಲಿಸಿದೆ ಇದಕ್ಕೇನು ಹೇಳುತ್ತಾರೆ ಸಿಎಂ? ಎಂದು ಪ್ರಶ್ನಿಸಿದರು.

ಕಡಿಮೆ ಬೆಲೆಯಲ್ಲಿ ನಕಲಿ ಎಲೆಕ್ಟ್ರಿಕ್ ಉತ್ಪನ್ನ ಮಾರಾಟ: ರಾಯಚೂರಿನ ಪ್ರಸಿದ್ಧ ಮಳಿಗೆಗಳ ಮೇಲೆ ದಾಳಿ!

ರಾಯಚೂರು:– ಕಡಿಮೆ ಬೆಲೆಯಲ್ಲಿ ನಕಲಿ ಎಲೆಕ್ಟ್ರಿಕ್ ಉತ್ಪನ್ನ ಮಾರಾಟ ಮಾಡುತ್ತಿದ್ದ ರಾಯಚೂರಿನ ಪ್ರಸಿದ್ಧ ಮಳಿಗೆಗಳ ಮೇಲೆ ದಾಳಿ ನಡೆದಿದೆ. ಸದರ ಬಜಾರ್ ಠಾಣೆ ಪೊಲೀಸರ ಸಹಕಾರದೊಂದಿಗೆ ಖಾಸಗಿ ಕಂಪನಿಯೊಂದರ ವಿಜಲನ್ಸ್ ತಂಡ ದಾಳಿ ಮಾಡಿ ಪರಿಶೀಲಿಸಿದೆ.

ರಾಯಚೂರು ನಗರದ ಭಗವತಿ ಇಲೆಕ್ಟ್ರಿಕಲ್ಸ್ ಹಾಗೂ ಆಶಾ ಇಲೆಕ್ಟ್ರಿಕಲ್ಸ್ ಮಳಿಗೆಗಳು ರಾಯಚೂರಿನಲ್ಲಿ ತುಂಬಾ ಪ್ರಸಿದ್ಧಿ ಪಡೆದಿವೆ. ಈ ಅಂಗಡಿಗಳಲ್ಲಿ ಎಲ್ಲ ಬಗೆಯ ವಿದ್ಯುತ್ ಉತ್ಪನ್ನಗಳು ಸಿಗುತ್ತವೆ. ಆದರೆ, ಈ ಅಂಗಡಿಗಳಲ್ಲಿ ನಕಲಿ ಎಲೆಕ್ಟ್ರಿಕ್ ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಮನೆಗಳಲ್ಲಿ ಬಳಸುವ ವಿದ್ಯುತ್ ವೈರ್​, ರೆಗ್ಯುಲೇಟರ್, ಸ್ವಿಚ್ ಬೋರ್ಡ್ ಸೇರಿದಂತೆ ವಿವಿಧ ನಕಲಿ ವಸ್ತುಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡಲಾಗುತ್ತಿತ್ತು.

ನಕಲಿ ವಸ್ತುಗಳನ್ನು ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಪಡೆದ ವಿಜಲನ್ಸ್ ತಂಡ ಸದರ ಬಜಾರ್ ಪೊಲೀಸರ ಸಹಕಾರದೊಂದಿಗೆ ರವಿವಾರ ದಾಳಿ ನಡೆಸಿತು. 1 ಲಕ್ಷ ರೂಪಾಯಿಗೆ ಮಾರಾಟವಾಗುವ ಅಸಲಿ ಉತ್ಪನ್ನಗಳು, ಈ ಮಳಿಗೆಗಳಲ್ಲಿ ಕೇವಲ 40-50 ಸಾವಿರಕ್ಕೆ ಮಾರಾಟ ಮಾಡಲಾಗುತ್ತಿತ್ತು. ಈ ಬಗ್ಗೆ ಅನುಮಾನಗೊಂಡು ವಿಜಲನ್ಸ್​ ದಾಳಿ ನಡೆಸಿದಾಗ ಕಡಿಮೆ ಬೆಲೆಗೆ ಮಾರಾಟವಾಗುತ್ತಿದ್ದ ಉತ್ಪನ್ನಗಳು ನಕಲಿ ಎಂದು ತಿಳಿದುಬಂದಿದೆ.

ಆಶಾ ಇಲೆಕ್ಟ್ರಿಕಲ್ಸ್ ಮಳಿಗೆಯಲ್ಲಿ ಖಾಸಗಿ ಕಂಪನಿಯ ರ್ಯಾಪರ್​ಗಳು, ನಕಲಿ ಉತ್ಪನ್ನಗಳು ಪತ್ತೆಯಾಗಿವೆ. ಇಲೆಕ್ಟ್ರಿಕಲ್ಸ್ ಮಳಿಗೆಯಲ್ಲೂ ನಕಲಿ ಉತ್ಪನ್ನಗಳು ಪತ್ತೆಯಾಗಿವೆ. ಈ ದಂಧೆಗೆ ಆಂಧ್ರ ಪ್ರದೇಶ, ತೆಲಂಗಾಣ ಗಡಿಯ ಜನ, ರೈತರು, ಬಡವರೇ ಟಾರ್ಗೆಟ್ ಆಗಿದ್ದರು ಎಂದು ವಿಜಲನ್ಸ್ ತಂಡದ ಅಧಿಕಾರಿ ಮಾಹಿತಿ ನೀಡಿದ್ದಾರೆ. ಘಟನೆ ಸಂಬಂಧ ಸದರ ಬಜಾರ್ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.

ರೈಲು ಡಿಕ್ಕಿ ಹೊಡೆದು 6 ದನಗಳು ಸಾವು: ಛಿದ್ರ-ಛಿದ್ರವಾದ ಮೂಕ ಜೀವಿಗಳ ದೇಹ!

ಬಾಗಲಕೋಟೆ:- ಜಿಲ್ಲೆಯ ಕಡ್ಡಿಮಟ್ಟಿ ರೈಲ್ವೇ ನಿಲ್ದಾಣದ ಸಮೀಪ ಗುಡ್ಡದ ತಿರುವಿನಲ್ಲಿ ರೈಲಿಗೆ ಸಿಲುಕಿ 6 ದನಗಳು ಮೃತಪಟ್ಟ ಘಟನೆ ಜರುಗಿದೆ.

ಹುಬ್ಬಳ್ಳಿಗೆ ತೆರಳುತ್ತಿದ್ದ ಪ್ರಯಾಣಿಕ ರೈಲು, ಹಳಿಯ ಮೇಲೆ ಹೋಗುತ್ತಿದ್ದ ಆರು ದನಗಳಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ 6 ದನಗಳ ದೇಹಗಳು ಛಿದ್ರಛಿದ್ರವಾಗಿ ಹಳಿಯಲ್ಲಿ ಬಿದ್ದಿದೆ. ಬಾಗಲಕೋಟೆ ರೈಲ್ವೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.

ಇನ್ನೂ ಘಟನೆಯಿಂದ ದನಗಳ ಮಾಲೀಕ ಕಂಗಾಲಾಗಿ ಕಣ್ಣೀರು ಹಾಕಿದ್ದು, ಎಲ್ಲರ ಮನ ಕಲಕುವಂತಿತ್ತು.

ಸಿದ್ದರಾಮಯ್ಯನವರು ಓಬಿಸಿ ಸಲಹಾ ಮಂಡಳಿ ಅಧ್ಯಕ್ಷರಾಗಿ ನೇಮಕವಾಗಿಲ್ಲ: ಸ್ಪಷ್ಟನೆ ಕೊಟ್ಟ ಸಿಎಂ ಕಚೇರಿ!

ಬೆಂಗಳೂರು:- ಸಿದ್ದರಾಮಯ್ಯನವರು ಓಬಿಸಿ ಸಲಹಾ ಮಂಡಳಿ ಅಧ್ಯಕ್ಷರಾಗಿ ನೇಮಕವಾಗಿಲ್ಲ ಎಂದು ಸಿಎಂ ಕಚೇರಿ ಸ್ಪಷ್ಟನೆ ಕೊಟ್ಟಿದೆ.

ಸಿಎಂ ಸಿದ್ದರಾಮಯ್ಯನವರನ್ನು ಎಐಸಿಸಿ ಓಬಿಸಿ ಸಲಹಾ ಸಮಿತಿ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ ಎನ್ನುವ ಸುದ್ದಿ ರಾಜ್ಯ ರಾಜಕಾರಣದಲ್ಲಿ ಹಲ್​ ಚಲ್ ಎಬ್ಬಿಸಿದೆ. ನಾಯಕತ್ವ ಬದಲಾವಣೆ ಚರ್ಚೆ ನಡುವೆ ಸಿದ್ದರಾಮಯ್ಯನವರಿಗೆ ಕಾಂಗ್ರೆಸ್ ಹೈಕಮಾಂಡ್​ ರಾಷ್ಟ್ರ ಮಟ್ಟದ ಹುದ್ದೆ ನೀಡಿದ್ದು, ಹೀಗಾಗಿ ಸಿದ್ದರಾಮಯ್ಯ ರಾಷ್ಟ್ರ ರಾಜಕಾರಣಕ್ಕೆ ಕರೆದೊಯ್ಯಲಾಗುತ್ತಿದೆ ಎನ್ನುವ ಚರ್ಚೆ ಜೋರಾಗಿದೆ.

ಈ ಬೆನ್ನಲ್ಲೇ ಸಿಎಂ ಕಚೇರಿ ಸ್ಪಷ್ಟನೆ ಕೊಟ್ಟಿದ್ದು, ಅಂತಹ ಯಾವುದೇ ನೇಮಕಾತಿಗೆ ಆಗಿಲ್ಲ. ಓಬಿಸಿ ಸಲಹಾ ಮಂಡಳಿಯ ಸದಸ್ಯರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಒಬ್ಬರಾಗಿದ್ದಾರೆ ಎಂದು ತಿಳಿಸಿದೆ. ಸಿದ್ದರಾಮಯ್ಯನವರು ಓಬಿಸಿ ಸಲಹಾ ಮಂಡಳಿಯ ಸದಸ್ಯರು. ಸಲಹಾ ಮಂಡಳಿ ಸಭೆ ಎಐಸಿಸಿ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷರಾದ ಡಾ.‌ ಅನಿಲ್ ಜೈಹಿಂದ್ ಅವರ ಅಧ್ಯಕ್ಷತೆಯಲ್ಲಿ ಜುಲೈ 15ರಂದು ಬೆಂಗಳೂರಿನಲ್ಲಿ ನಡೆಯಲಿದೆ.‌

ಈ ಸಭೆಯ ಆತಿಥ್ಯವನ್ನು ಮುಖ್ಯಮಂತ್ರಿಗಳು ವಹಿಸಿಕೊಂಡಿದ್ದಾರೆ. ಸಭೆ ಕೆಪಿಸಿಸಿ ಕಚೇರಿಯ ಭಾರತ್ ಜೋಡೋ ಭವನದಲ್ಲಿ ನಡೆಯಲಿದೆ. ವಿವಿಧ ರಾಜ್ಯಗಳ ಪಕ್ಷದ ಮಾಜಿ ಮುಖ್ಯಮಂತ್ರಿಗಳು, ಹಾಲಿ ಮತ್ತು ಮಾಜಿ ಸಂಸದರು, ಶಾಸಕರು ಸೇರಿದಂತೆ 50 ಮಂದಿ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಮಾಧ್ಯಮ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

ಸಿದ್ದರಾಮಯ್ಯಗೆ ಗೇಟ್‌ ಪಾಸ್‌ ನೀಡೋದು ಪಕ್ಕಾ: ಆರ್‌. ಅಶೋಕ್‌ ಭವಿಷ್ಯ!

ಬೆಂಗಳೂರು:- ಕಾಂಗ್ರೆಸ್ ನಲ್ಲಿ ಸಿಎಂ ಸಿದ್ದರಾಮಯ್ಯಗೆ ಗೇಟ್ ಪಾಸ್ ನೀಡೋದು ಪಕ್ಕಾ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಭವಿಷ್ಯ ನುಡಿದಿದ್ದಾರೆ.

ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಶಾಸಕರ ವಿಶ್ವಾಸ ಕಳ್ಕೊಂಡಿದ್ದಾರೆ. ಅವ್ರನ್ನ ಅತಂತ್ರ ಮಾಡಲು ಯಾರು ಕುತಂತ್ರ ಮಾಡ್ತಾರೋ ಗೊತ್ತಿಲ್ಲ. ಒಟ್ಟಿನಲ್ಲಿ ಗೇಟ್‌ ಪಾಸ್ ನೀಡೋದು ಪಕ್ಕಾ ಎಂದರು. ಶಾಸಕರೇ ಸಿಎಂ ಬದಲಾವಣೆ ಬಗ್ಗೆ ಮಾತಾಡ್ತಿದ್ದಾರೆ. ರಾಜಣ್ಣ ಕ್ರಾಂತಿ ಆಗುತ್ತೆ ಅಂದಿದ್ದಾರೆ. ಕ್ರಾಂತಿ ಆಗೋದು ಗ್ಯಾರಂಟಿ, ಸಿದ್ದರಾಮಯ್ಯ ಶಾಸಕರ ವಿಶ್ವಾಸ ಕಳ್ಕೊಂಡಿದ್ದಾರೆ. 2 ವರ್ಷದಿಂದ ಸರ್ಕಾರ ಟೇಕ್ ಆಫ್ ಆಗಿಲ್ಲ. ಕಾಗೆ ಕೂರೋದಿಕ್ಕೂ ಕೊಂಬೆ ಬೀಳೋದಕ್ಕೂ ಸರಿಯಾಗಿದೆ. ಈಗ ಸಿದ್ದರಾಮಯ್ಯ ಎಐಸಿಸಿ ಒಬಿಸಿ ಸಲಹಾ ಮಂಡಳಿ ಅಧ್ಯಕ್ಷರಾಗಿದ್ದಾರೆ. ಸಿದ್ದರಾಮಯ್ಯ ಕೇಂದ್ರಕ್ಕೆ ಹೋಗೋದು ಗ್ಯಾರಂಟಿ ಆಗಿದೆ.

ಸಿದ್ದರಾಮಯ್ಯ ದೆಹಲಿಗೆ ಹೋದರೆ ಇಲ್ಲಿಗೆ ಯಾರು ಬರ್ತಾರೆ? ಮಲ್ಲಿಕಾರ್ಜುನ ಖರ್ಗೆ ಬರ್ತಾರೋ? ಪರಮೇಶ್ವರ್ ಬರ್ತಾರೋ? ಡಿಕೆಶಿ ಬರ್ತಾರೊ? ಖರ್ಗೆಯವರಿಗೆ ಒಂದ್ಸಲ ಸಿಎಂ ಆಗೋ ಆಸೆ ಇದೆ. ಅವರೇ ಬರ್ತಾರಾ ನೋಡಬೇಕು. ಖರ್ಗೆ ಪ್ರತೀ ಸಲ ಸಿಎಂ ಹುದ್ದೆ ಹತ್ತಿರ ಬರ್ತಾರೆ, ಕೊನೇ ಕ್ಷಣಕ್ಕೆ ಕೊಕ್ ಆಗ್ತಾರೆ. ಈಗ ಖರ್ಗೆ ಅವರೇ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರು, ಈಗ ಖರ್ಗೆ ಬಂದರೂ ಬರಬಹುದು. ಡಿಕೆಶಿ ಈಗಾಗಲೇ ಸಿಎಂ ಪೋಸ್ಟ್ ಮೇಲೆ ಟವೆಲ್ ಹಾಕಿ ಕೂತಿದ್ದಾರೆ. ಇನ್ನೂ ಎರಡೂವರೆ ವರ್ಷ ಈ ಸರ್ಕಾರದಲ್ಲಿ ಅತಂತ್ರತೆ ಗ್ಯಾರಂಟಿ ಅಂತ ಲೇವಡಿ ಮಾಡಿದ್ದಾರೆ

ಡಾ. ಶ್ಯಾಮಪ್ರಸಾದ್ ಮುಖರ್ಜಿ ಅವರ ಕನಸನ್ನು ಮೋದಿ ನನಸು ಮಾಡಿದ್ದಾರೆ: ಯಡಿಯೂರಪ್ಪ

ಬೆಂಗಳೂರು – ಡಾ. ಶ್ಯಾಮಪ್ರಸಾದ್ ಮುಖರ್ಜಿ ಅವರ ಕನಸನ್ನು ಮೋದಿ ನನಸು ಮಾಡಿದ್ದಾರೆ ಎಂದು ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಭಾರತೀಯ ಜನಸಂಘದ ಸ್ಥಾಪಕರಾದ ಡಾ. ಶ್ಯಾಮಪ್ರಸಾದ್ ಮುಖರ್ಜಿ ಅವರ ಜನ್ಮದಿನದ ಪ್ರಯುಕ್ತ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು. ಡಾ. ಶ್ಯಾಮಪ್ರಸಾದ್ ಮುಖರ್ಜಿ ಅವರ ಜೀವನವೇ ಒಂದು ಸಂದೇಶ. ಅವರ ಚಿಂತನೆಗಳಿಂದ ಇಂದು ಬಿಜೆಪಿಯ ಪ್ರತಿಯೊಬ್ಬ ಕಾರ್ಯಕರ್ತನೂ ಧೈರ್ಯವಂತರಾಗಿ ದೇಶ ಮೊದಲು ಎಂಬ ಸಿದ್ಧಾಂತಕ್ಕೆ ಬದ್ಧರಾಗಿದ್ದಾರೆ. ಡಾ. ಮುಖರ್ಜಿ ಅವರು ದೇಶದ ಏಕತೆ, ಸಮಗ್ರತೆ, ಸಾಂಸ್ಕೃತಿಕ ಹಿರಿಮೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಶ್ರೇಷ್ಠ ರಾಷ್ಟ್ರೀಯ ನಾಯಕ ಎಂದು ತಿಳಿಸಿದರು.

ನಮ್ಮ ಪಕ್ಷಕ್ಕೆ ಸೈದ್ಧಾಂತಿಕ ಅಡಿಪಾಯ ಹಾಕಿ ಕೊಟ್ಟ ಭಾರತೀಯ ಜನಸಂಘದ ಸ್ಥಾಪಕರು. ದೇಶದ ರಾಜಕಾರಣದಲ್ಲಿ ಒಂದು ಬಲಿಷ್ಠ ರಾಷ್ಟ್ರೀಯವಾದಿ ಸಿದ್ಧಾಂತ ಇರುವ ರಾಜಕೀಯ ಪರಿವಾರಕ್ಕೆ ನಾಂದಿ ಹಾಡಿದವರು. 370ನೇ ವಿಧಿಯನ್ನು ವಿರೋಧಿಸಿ ಜಮ್ಮು ಮತ್ತು ಕಾಶ್ಮೀರವನ್ನು ಭಾರತದೊಂದಿಗೆ ಸಂಪೂರ್ಣವಾಗಿ ಒಗ್ಗೂಡಿಸಲು ಗಟ್ಟಿಯಾಗಿ ನಿಂತು, ಅದಕ್ಕಾಗಿ ತಮ್ಮ ಪ್ರಾಣವನ್ನೇ ಸಮರ್ಪಿಸಿದ ಧೀಮಂತ ನಾಯಕ ಎಂದು ಯಡಿಯೂರಪ್ಪ ನೆನಪಿಸಿದರು.

ಬೆಂಗಳೂರಿನಲ್ಲಿ ಅಗ್ನಿ ಅವಘಡ: ಬಟ್ಟೆ ಗೋದಾಮಿನಲ್ಲಿ ಬೆಂಕಿ, ಲಕ್ಷಾಂತರ ರೂ. ನಷ್ಟ

ಬೆಂಗಳೂರು: ನಗರದ ಲಾಲ್‌ ಬಾಗ್ ರಸ್ತೆಯಲ್ಲಿರುವ ಬಟ್ಟೆ ಗೋದಾಮೊಂದರಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಭೀಕರ ಬೆಂಕಿ ಅವಘಡ ಸಂಭವಿಸಿದೆ. ಮರುಧರ್ ಏಜೆನ್ಸೀಸ್‌ನ ಬಟ್ಟೆ ಗೋದಾಮಿನಲ್ಲಿ ಈ ಬೆಂಕಿ ಅವಘಡ ಸಂಭವಿಸಿದ್ದು, ಸಾವಿರಾರು ರೂ. ಮೌಲ್ಯದ ಬಟ್ಟೆ ಹ್ಯಾಂಗರ್‌ಗಳು ಬೆಂಕಿಗಾಹುತಿಯಾಗಿವೆ.

ಗೋದಾಮಿನ ಒಂದು ಮೂಲೆಯಲ್ಲಿ ಇಟ್ಟಿದ್ದ ಬಟ್ಟೆ ಹ್ಯಾಂಗರ್‌ಗಳಲ್ಲಿ ಬೆಳಿಗ್ಗೆ ಹೊತ್ತಿಕೊಂಡ ಬೆಂಕಿ ತಕ್ಷಣವೇ ಇಡೀ ಗೋದಾಮಿಗೆ ವಿಸ್ತರಿಸಿತು. ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಆರಂಭವಾದ ಶಂಕೆ ವ್ಯಕ್ತವಾಗಿದೆ. ಬೆಂಕಿ ಕಾಣಿಸಿಕೊಂಡ ತಕ್ಷಣ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ.

ಅಗ್ನಿಶಾಮಕ ದಳ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸಲು ಶ್ರಮಿಸಿದರು. ಹೆಚ್ಚಿನ ನಷ್ಟವಾಗುವ ಮುನ್ನವೇ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದು, ಭಾರೀ ಅನಾಹುತವನ್ನು ತಪ್ಪಿಸಿದ್ದಾರೆ.

ಪತ್ನಿಯನ್ನು ಚಾಕುವಿನಿಂದ ಹತ್ಯೆ ಮಾಡಿದ ಪತಿ: ತುಮಕೂರಿನಲ್ಲಿ ಹೃದಯವಿದ್ರಾವಕ ಘಟನೆ

ತುಮಕೂರು: ತುಮಕೂರು ಹೊರವಲಯದ ಅಂತರಸನಹಳ್ಳಿಯಲ್ಲಿ ಪತಿಯೊಬ್ಬ ತನ್ನ ಪತ್ನಿಯನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿದ ಹೃದಯವಿದ್ರಾವಕ ಘಟನೆ ಬೆಳಕಿಗೆ ಬಂದಿದೆ.

ಮೃತಳನ್ನು 20 ವರ್ಷದ ಗೀತಾ ಎನ್ನಲಾಗಿದ್ದು, ಆರೋಪಿ ಪತಿ ನವೀನ್ ಘಟನೆ ಬಳಿಕ ಪರಾರಿಯಾಗಿದ್ದಾನೆ. ಗೀತಾ ಮತ್ತು ನವೀನ್ ಎರಡು ವರ್ಷಗಳ ಹಿಂದೆ ವಿವಾಹವಾಗಿದ್ದರು. ದಂಪತಿ ಅಂತರಸನಹಳ್ಳಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರೆ, ನವೀನ್ ಎಪಿಎಂಸಿ ಮಾರುಕಟ್ಟೆಯಲ್ಲಿ ತರಕಾರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದನು. ಅವರಿಗೆ ಒಂದು ವರ್ಷದ ಗಂಡು ಮಗು ಕೂಡಾ ಇದೆ. ಗೀತಾ ಮಗುವನ್ನು ಇತ್ತೀಚೆಗಷ್ಟೇ ತವರು ಮನೆಗೆ ಕಳುಹಿಸಿದ್ದರು.

ಜುಲೈ 5ರ ರಾತ್ರಿ ಗೀತಾ ಹಾಗೂ ನವೀನ್ ನಡುವೆ ತೀವ್ರ ವಾಗ್ವಾದ ನಡೆದಿದೆ. ಈ ವೇಳೆ ನವೀನ್ ತನ್ನ ಪತ್ನಿಗೆ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿ, ಪರಾರಿಯಾಗಿದ್ದಾನೆ.

ಮನೆ ಮಾಲೀಕ ಬಾಡಿಗೆ ಪಡೆಯಲೆಂದು ಬೆಳಿಗ್ಗೆ ಮನೆ ಬಳಿ ಬಂದಿದ್ದರು. ಈ ವೇಳೆ ಗೀತಾ ರಕ್ತದ ಮಡುವಿನಲ್ಲಿ ಬಿದ್ದಿದ್ದನ್ನು ಕಂಡ ಮನೆ ಮಾಲೀಕ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಚಾರ ತಿಳಿದು ತುಮಕೂರು ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

error: Content is protected !!