Home Blog Page 2

ಪತ್ನಿಯನ್ನು ಚಾಕುವಿನಿಂದ ಹತ್ಯೆ ಮಾಡಿದ ಪತಿ: ತುಮಕೂರಿನಲ್ಲಿ ಹೃದಯವಿದ್ರಾವಕ ಘಟನೆ

ತುಮಕೂರು: ತುಮಕೂರು ಹೊರವಲಯದ ಅಂತರಸನಹಳ್ಳಿಯಲ್ಲಿ ಪತಿಯೊಬ್ಬ ತನ್ನ ಪತ್ನಿಯನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿದ ಹೃದಯವಿದ್ರಾವಕ ಘಟನೆ ಬೆಳಕಿಗೆ ಬಂದಿದೆ.

ಮೃತಳನ್ನು 20 ವರ್ಷದ ಗೀತಾ ಎನ್ನಲಾಗಿದ್ದು, ಆರೋಪಿ ಪತಿ ನವೀನ್ ಘಟನೆ ಬಳಿಕ ಪರಾರಿಯಾಗಿದ್ದಾನೆ. ಗೀತಾ ಮತ್ತು ನವೀನ್ ಎರಡು ವರ್ಷಗಳ ಹಿಂದೆ ವಿವಾಹವಾಗಿದ್ದರು. ದಂಪತಿ ಅಂತರಸನಹಳ್ಳಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರೆ, ನವೀನ್ ಎಪಿಎಂಸಿ ಮಾರುಕಟ್ಟೆಯಲ್ಲಿ ತರಕಾರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದನು. ಅವರಿಗೆ ಒಂದು ವರ್ಷದ ಗಂಡು ಮಗು ಕೂಡಾ ಇದೆ. ಗೀತಾ ಮಗುವನ್ನು ಇತ್ತೀಚೆಗಷ್ಟೇ ತವರು ಮನೆಗೆ ಕಳುಹಿಸಿದ್ದರು.

ಜುಲೈ 5ರ ರಾತ್ರಿ ಗೀತಾ ಹಾಗೂ ನವೀನ್ ನಡುವೆ ತೀವ್ರ ವಾಗ್ವಾದ ನಡೆದಿದೆ. ಈ ವೇಳೆ ನವೀನ್ ತನ್ನ ಪತ್ನಿಗೆ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿ, ಪರಾರಿಯಾಗಿದ್ದಾನೆ.

ಮನೆ ಮಾಲೀಕ ಬಾಡಿಗೆ ಪಡೆಯಲೆಂದು ಬೆಳಿಗ್ಗೆ ಮನೆ ಬಳಿ ಬಂದಿದ್ದರು. ಈ ವೇಳೆ ಗೀತಾ ರಕ್ತದ ಮಡುವಿನಲ್ಲಿ ಬಿದ್ದಿದ್ದನ್ನು ಕಂಡ ಮನೆ ಮಾಲೀಕ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಚಾರ ತಿಳಿದು ತುಮಕೂರು ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

₹40 ಕೋಟಿ ಚೀಟಿ ಹಣದ ಜೊತೆ ಕುಟುಂಬ ಪರಾರಿ: ಬೇಸತ್ತ ಜನರಿಂದ ಜಿ .ಪರಮೇಶ್ವರ್ ಮೊರೆ!

ಬೆಂಗಳೂರು: ನಗರದ ಜರಗನಹಳ್ಳಿಯಲ್ಲಿ ಚೀಟಿ ಹಣದ ಹೆಸರಿನಲ್ಲಿ 600ಕ್ಕೂ ಹೆಚ್ಚು ಸಾರ್ವಜನಿಕರಿಂದ ಸುಮಾರು ₹40 ಕೋಟಿ ವಂಚಿಸಿದ ದಂಪತಿಯೊಬ್ಬರು ಕುಟುಂಬ ಸಮೇತ ಪರಾರಿಯಾದ ಘಟನೆ ಬೆಳಕಿಗೆ ಬಂದಿದೆ.

ಆರೋಪಿಗಳು ಸುಧಾ ಮತ್ತು ಅವರ ಪತಿ ಸಿದ್ದಾಚಾರಿ, ಕಳೆದ 20 ವರ್ಷಗಳಿಂದ ಚೀಟಿ ಹಣದ ವ್ಯವಹಾರ ನಡೆಸುತ್ತಿದ್ದರು. ಸಾರ್ವಜನಿಕರು ₹5 ಲಕ್ಷದಿಂದ ₹10 ಲಕ್ಷದವರೆಗೆ ಹಣ ಹೂಡಿಕೆ ಮಾಡಿದ್ದು, ಆರಂಭದಲ್ಲಿ ವ್ಯವಹಾರ ಸರಿಯಾಗಿ ನಡೆದರೂ, ಕಳೆದ ಒಂದು ವರ್ಷದಿಂದ ಹಣ ಹಂಚಿಕೆ ನಿಲ್ಲಿಸು ಲ್ಪಟ್ಟಿತ್ತು.

ಜೂನ್ 3ರ ರಾತ್ರಿ, ಸುಧಾ ದಂಪತಿ ತಮ್ಮ ಮಕ್ಕಳೊಂದಿಗೆ ಮನೆ ಬಿಟ್ಟು ನಾಪತ್ತೆಯಾಗಿದ್ದಾರೆ. ಮನೆ ಬಿಟ್ಟು ಹೋಗುವ ಮುನ್ನ ಬ್ಯಾಂಕ್‌ನಲ್ಲಿದ್ದ ಚಿನ್ನವನ್ನು ತೆಗೆದುಕೊಂಡಿದ್ದು, ಮೊಬೈಲ್‌ಗಳನ್ನು ಮನೆದಲ್ಲಿಯೇ ಬಿಟ್ಟಿದ್ದಾರೆ. ಅದರೊಂದಿಗೆ ಕೆಲವೊಂದು ವಸ್ತುಗಳನ್ನೂ ತೆಗೆದುಕೊಂಡು ಹೋಗಿದ್ದಾರೆ. ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಹಲವು ಸಾರ್ವಜನಿಕರು ದೂರು ದಾಖಲಿಸಿದ್ದು,

ಈಗ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಮೂರೂ ವಿಭಿನ್ನ ತಂಡಗಳನ್ನು ರಚಿಸಿ, ಆರೋಪಿಗಳ ಪತ್ತೆಗೆ ಕ್ರಮ ಆರಂಭಿಸಿದ್ದಾರೆ. ಆದರೆ ಇನ್ನೂ ಬಂಧನವಾಗಿಲ್ಲ. ವಂಚಿತ ವ್ಯಕ್ತಿಗಳು ಗೃಹ ಸಚಿವ ಜಿ. ಪರಮೇಶ್ವರ್ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಮೊರೆ ಹೋಗಿದ್ದಾರೆ. ಅವರಿಂದ ಸ್ಪಂದನೆ ಬರುವ ನಿರೀಕ್ಷೆಯಲ್ಲಿ ಹೂಡಿಕೆದಾರರು ನಿರೀಕ್ಷೆಯಲ್ಲಿದ್ದಾರೆ.

ಕವಿ ವಿಭೂಷಣ ಪ್ರಶಸ್ತಿಗೆ ಪವಿತ್ರ ಬಡಿಗೇರ ಆಯ್ಕೆ

ಜಗಳೂರು : ಪಟ್ಟಣದ ಯುವ ಕವಯತ್ರಿ ಪವಿತ್ರ ಬಡಿಗೇರ್ ಅವರು ರಾಜ್ಯಮಟ್ಟದ “ ಕವಿ ವಿಭೂಷಣ ಪ್ರಶಸ್ತಿ” ಗೆ ಆಯ್ಕೆಯಾಗಿದ್ದಾರೆ. ಇದೇ ಜುಲೈ 27 ರಂದು ನಡೆಯುವ ಕವಿತ ಕರ್ಮಣಿ ಫೌಂಡೇಶನ್ ನಾಗರ ಮುನ್ನೋಳಿ ಉದ್ಘಾಟನಾ ಸಮಾರಂಭದಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಯುವ ಕವಯಿತ್ರಿ ಪವಿತ್ರ ಬಡಿಗೇರ್ ಅವರಿಗೆ ಈ ರಾಜ್ಯಮಟ್ಟದ ಕವಿ ವಿಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಚಿಕ್ಕೋಡಿ ನಾಗರ ಮುನ್ನೋಳಿ ಕವಿತ್ತ ಕರ್ಮಮಣಿ ಫೌಂಡೇಶನ್(ರಿ) ಅಧ್ಯಕ್ಷ ಲಾಲ್‌ಸಾಬ್ ಎಚ್ ಪೆಂಡಾರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪರಿಚಯ

ಪವಿತ್ರ ಬಡಿಗೇರ್ ಅವರ ಹುಟ್ಟೂರು ಹರಪನಹಳ್ಳಿ ತಾಲೂಕಿನ ಕಡಬಗೆರೆ. ಚಿಕ್ಕವರಿದ್ದಾಗಿನಿಂದಲೂ ಕಲೆ ಮತ್ತು ಸಾಹಿತ್ಯದಲ್ಲಿ ಆಸಕ್ತಿ ಹೊಂದಿದ್ದರು, ವೈವಾಹಿಕ ಜೀವನದ ನಂತರ ದಾವಣಗೆರೆ ಜಿಲ್ಲೆಯ ಜಗಳೂರಿನಲ್ಲಿ‌ ವಾಸವಾಗಿರುವ ಇವರು ಕಳೆದ ಐದಾರು ವರ್ಷಗಳಿಂದ ವಿದ್ಯಾಭ್ಯಾಸದ ಜೊತೆಗೆ ಸಾಹಿತ್ಯ ಕ್ಷೇತ್ರದಲ್ಲಿ ಅನೇಕ ಕವನಗಳನ್ನು ಹಾಗೂ ಅಧುನಿಕ ವಚನಗಳನ್ನು, ಗಜಲ್ ಗಳನ್ನು ರಚಿಸಿದ್ದಾರೆ.

ಈಗಾಗಲೇ ಪವಿತ್ರ ಬಡಿಗೇರ್ ಅವರಿಗೆ 2021 ರಲ್ಲಿ ನವಜ್ಯೋತಿ ಸಾಂಸ್ಕೃತಿಕ ಸೇವಾ ಸಂಸ್ಥೆಯು ವಿಶ್ವ ಮಹಿಳಾ ದಿನಾಚರಣೆಯಂದು ಆಯೋಜಿಸಿದ್ದ ವಿಜಯ ನಗರ ಜಿಲ್ಲೆಯ ಪ್ರಥಮ ಕವಿಗೋಷ್ಠಿಯಲ್ಲಿ ಭಾಗವಹಿಸಿದ್ದಕ್ಕಾಗಿ ಇವರಿಗೆ ” ಕಾವ್ಯ ಜ್ಯೋತಿ ” ಎಂಬ ಬಿರುದು ನೀಡಿ ಸನ್ಮಾನಿಸಿದ್ದಾರೆ.

ಸಿದ್ದೇಶ್ವರ ಸಾಹಿತ್ಯ ವೇದಿಕೆಯು ಚಿತ್ರದುರ್ಗ , ಕಲಾಕುಂಚ* ಸಂಸ್ಥೆಯಿಂದ ಆಯೋಜಿಸಿದ್ದ ರಾಷ್ಟ್ರೀಯ ಮಟ್ಟದ ಕವಿಗೋಷ್ಠಿ, ವಿಶ್ವ ಬಂಜಾರ ಕಲಾ ಸಾಹಿತ್ಯಿಕ ಸಂಘ ಅಮೀನಗಡ ಇತ್ಯಾದಿ ವೇದಿಕೆಗಳಲ್ಲಿ ಆಯೋಜಿಸಿದ್ದ ಅಂತರ್ಜಾಲ ಕವಿಗೋಷ್ಠಿಗಳಲ್ಲಿ ಭಾಗವಹಿಸಿ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.

ಅಥಣಿಯಲ್ಲಿ ಭೀಕರ ಅಪಘಾತ: ಮೂವರು ಸ್ಥಳದಲ್ಲೇ ದುರ್ಮರಣ

ಬೆಳಗಾವಿ: ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಮುರಗುಂಡಿ ಗ್ರಾಮ ಹೊರವಲಯದಲ್ಲಿ ಭೀಕರ ಅಪಘಾತ ಸಂಭವಿಸಿದೆ. KSRTC ಬಸ್ ಮತ್ತು ಕಾರ್ ನಡುವೆ ಸಂಭವಿಸಿದ ಭೀಕರ ಡಿಕ್ಕಿಯಿಂದ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಮೃತರೆಲ್ಲರೂ ಅಪ್ಜಲಪುರ ಮೂಲದವರು ಎಂದು ಗುರುತಿಸಲಾಗಿದೆ. ಘಟನೆ ನಡೆದ ತಕ್ಷಣ ಸ್ಥಳಕ್ಕೆ ಅಥಣಿ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಮುಂದುವರಿದಿದೆ.

ಹೃದಯಾಘಾತ ಹೆಚ್ಚಳ: ಹೈಸ್ಕೂಲ್ ಮಕ್ಕಳಿಗೆ ತಪಾಸಣೆ ಮಾಡಿಸಿ: ಸಚಿವ ಕೆ.ಎನ್. ರಾಜಣ್ಣ ಸೂಚನೆ

ಹಾಸನ: ಜಿಲ್ಲೆಯಾದ್ಯಂತ ಹೃದಯಾಘಾತದಿಂದ ಸಂಭವಿಸುವ ಸಾವುಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ ಚನ್ನರಾಯಪಟ್ಟಣದ ಪ್ರವಾಸಿ ಮಂದಿರದಲ್ಲಿ ಅಧಿಕಾರಿಗಳ ಸಭೆ ನಡೆಸಿದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣ ಅವರು,

ಹೈಸ್ಕೂಲ್ ಮಕ್ಕಳಿಗೆ 15 ದಿನದೊಳಗೆ ಹೃದಯ ತಪಾಸಣೆ ಮಾಡಿಸಿ. ಮಕ್ಕಳು ತೀವ್ರ ಅನಾರೋಗ್ಯದಿಂದ ಸಾವನ್ನಪ್ಪುವಂತಿಲ್ಲ ಎಂದು ಕಟ್ಟುನಿಟ್ಟಾಗಿ ಸೂಚನೆ ನೀಡಿದರು.

ಪ್ರತಿ ವ್ಯಕ್ತಿಗೆ ಪ್ರತಿವರ್ಷ ಹೃದಯ ತಪಾಸಣೆ ಕಡ್ಡಾಯಗೊಳಿಸುವ ಕುರಿತು ಸರ್ಕಾರ ಚಿಂತನೆ ನಡೆಸುತ್ತಿದೆ. ಇತ್ತೀಚೆಗೆ ಚಿಕ್ಕ ವಯಸ್ಸಿನವರು ತಡರಾತ್ರಿ, ಶಾಲೆ, ಆಟದ ಮೈದಾನಗಳಲ್ಲಿ ಹೃದಯಾಘಾತದಿಂದ ಅಸುನೀಗುತ್ತಿರುವುದು ದೊಡ್ಡ ಆತಂಕ ಎಂದರು.

ಈ ಬಗ್ಗೆ ನಾನು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದೇನೆ. ಅವರು ಈ ಕುರಿತು ಸರ್ಕಾರದ ದಿಕ್ಕಿನಲ್ಲಿ ನಡೆಯುತ್ತಿರುವ ಕ್ರಮಗಳ ಬಗ್ಗೆ ವಿವರಿಸಿದ್ದಾರೆ. ಶೀಘ್ರದಲ್ಲೇ ತಜ್ಞರ ಸಮಿತಿ ನೀಡಿರುವ ಸಲಹೆಗಳ ಆಧಾರದ ಮೇಲೆ ಸಭೆ ನಡೆಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಸಚಿವರು ಹೇಳಿದರು.

ಎಐಸಿಸಿ ಒಬಿಸಿ ಸಮಿತಿ ಅಧ್ಯಕ್ಷರಾಗಿ ನೇಮಕ ಬಗ್ಗೆ ನನಗೆ ಮಾಹಿತಿ ಇಲ್ಲ: ಸಿದ್ದರಾಮಯ್ಯ ಸ್ಪಷ್ಟನೆ

ಬೆಂಗಳೂರು: ನನ್ನನ್ನು ಎಐಸಿಸಿ ಒಬಿಸಿ ಸಮಿತಿ ಅಧ್ಯಕ್ಷರಾಗಿ ನೇಮಕ ಮಾಡಿದ ವಿಚಾರದಲ್ಲಿ ನನಗೆ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಿದ್ದರಾಮಯ್ಯ,

ಹುದ್ದೆಯ ಬಗ್ಗೆ ನಾನು ಮಾಧ್ಯಮಗಳಲ್ಲಿ ನೋಡಿದ್ದೇನೆ. ಯಾವ ಹುದ್ದೆ ಕೊಟ್ಟಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ಈ ಬಗ್ಗೆ ಹೈಕಮಾಂಡ್‌ನೊಂದಿಗೆ ಮಾತನಾಡುತ್ತೇನೆ ಎಂದು ಅವರು ಹೇಳಿದರು.

ಹುದ್ದೆ ಸ್ವೀಕರಿಸುವಿರಾ ಎಂಬ ಪ್ರಶ್ನೆಗೆ ತಕ್ಷಣ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಜವಾಬ್ದಾರಿ ಕೊಟ್ಟಾಗ ಬಿಟ್ಟು ಓಡಿ ಹೋಗುವುದಾ? ನಾನಿನ್ನೂ ಏನೂ ಕೇಳಿಲ್ಲ. ಅವರು ಏನಾದರೂ ಘೋಷಣೆ ಮಾಡಿದ್ದರೆ, ಹೈಕಮಾಂಡ್ ಜೊತೆ ಮಾತಾಡಿ ಸ್ಪಷ್ಟನೆ ಪಡೆದುಕೊಳ್ಳುತ್ತೇನೆ ಎಂದು ಸ್ಪಷ್ಟಪಡಿಸಿದರು.

ಸಿದ್ದರಾಮಯ್ಯ ರಾಜೀನಾಮೆ ನಿಶ್ಚಿತ, ಮುಖ್ಯಮಂತ್ರಿ ಬದಲಾವಣೆಗೆ ದಾರಿ ತೆರೆಯಲಿದೆ: ವಿಜಯೇಂದ್ರ

ಮೈಸೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು, ಸಿದ್ದರಾಮಯ್ಯ ಅವರು ಸಿಎಂ ಹುದ್ದೆಗೆ ರಾಜೀನಾಮೆ ನೀಡುವುದು ಬಹುತೇಕ ನಿಶ್ಚಿತ ಎಂದು ಭವಿಷ್ಯ ನುಡಿದಿದ್ದಾರೆ. ಮೈಸೂರಿನ ಬಿಜೆಪಿ ಕಚೇರಿಯಲ್ಲಿ ಮಾಧ್ಯಮಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯ ರಾಜಕಾರಣದಲ್ಲಿ ಮುಂದಿನ ದಿನಗಳಲ್ಲಿ ದೊಡ್ಡ ಬದಲಾವಣೆ ಕಾಣಬಹುದು” ಎಂಬುದು ತಮ್ಮ ನಂಬಿಕೆ ಎಂದು ತಿಳಿಸಿದ್ದಾರೆ.

ಕಾಂಗ್ರೆಸ್ ಹೈಕಮಾಂಡ್‌ ನಿರ್ಧಾರದಿಂದಾಗಿ ಸಿದ್ದರಾಮಯ್ಯ ರಾಜ್ಯ ರಾಜಕಾರಣದಿಂದ ಹೊರಬಂದು ರಾಷ್ಟ್ರಮಟ್ಟದ ರಾಜಕೀಯಕ್ಕೆ ಸಾಗಲಿದ್ದಾರೆ. ಸಿದ್ದರಾಮಯ್ಯನವರಿಗೆ ಎಐಸಿಸಿಯಿಂದ ಒಬಿಸಿ ಸಮಿತಿಯ ಅಧ್ಯಕ್ಷ ಸ್ಥಾನ ನೀಡಲಾಗುತ್ತಿದೆ ಎಂಬುದು ಸ್ಪಷ್ಟ ಸೂಚನೆ ಎಂದ ವಿಜಯೇಂದ್ರ ಅವರು ದೆಹಲಿಗೆ ಶಿಫ್ಟ್ ಆಗುವುದು ಖಚಿತ ಎಂದು ಹೇಳಿದರು.

ಇನ್ನೂ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ರಾಜ್ಯಕ್ಕೆ ಬಂದು ಶಾಸಕರ ಅಭಿಪ್ರಾಯ ಸಂಗ್ರಹಿಸಿರುವುದರಿಂದ, “ಮುಖ್ಯಮಂತ್ರಿ ಬದಲಾವಣೆ ಪ್ರಕ್ರಿಯೆ ಪ್ರಾರಂಭವಾಗಿದೆ ಎಂದು ಅಭಿಪ್ರಾಯಪಟ್ಟರು.

ಎಐಸಿಸಿ ಒಬಿಸಿ ಸಲಹಾ ಮಂಡಳಿ ಅಧ್ಯಕ್ಷರಾಗಿ ಸಿದ್ದರಾಮಯ್ಯ ನೇಮಕ! ರಾಜ್ಯ ರಾಜಕಾರಣಕ್ಕೆ ಬದಲಾವಣೆಯ ಸಿಗ್ನಲ್?

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಏಕಾಏಕಿ ಎಐಸಿಸಿ ಒಬಿಸಿ ರಾಷ್ಟ್ರೀಯ ಸಲಹಾ ಮಂಡಳಿಯ ಅಧ್ಯಕ್ಷರನ್ನಾಗಿ ನೇಮಿಸಿದ್ದು, ಈ ಬೆಳವಣಿಗೆ ಕರ್ನಾಟಕದ ರಾಜಕೀಯ ವಲಯದಲ್ಲಿ ಹೊಸ ಚರ್ಚೆಗಳಿಗೆ ದಾರಿ ಮಾಡಿದೆ. ಈ  ಹುದ್ದೆ ಮೂಲಕ ಸಿದ್ದರಾಮಯ್ಯ ರಾಷ್ಟ್ರಮಟ್ಟದ ರಾಜಕಾರಣದತ್ತ ಸಾಗಲಿದ್ದಾರೆ ಎಂಬ ಊಹಾಪೋಹಗಳು ಗಂಭೀರ ಸ್ವರೂಪ ಪಡೆದುಕೊಂಡಿವೆ. ಈ ನೇಮಕಾತಿಯ ಮೂಲಕ ಹೈಕಮಾಂಡ್ ಎರಡು ಉದ್ದೇಶಗಳನ್ನ ಸಾಧಿಸಲು ಯತ್ನಿಸುತ್ತಿದೆ ಎನ್ನಲಾಗುತ್ತಿದೆ,

ಒಬಿಸಿ ಸಮುದಾಯದಲ್ಲಿ ಕಾಂಗ್ರೆಸ್ ಪಕ್ಷದ ಬಡಾವಣಾ ಜತೆಗೆ ರಾಷ್ಟ್ರಮಟ್ಟದಲ್ಲಿ ಸಂಘಟನೆಯ ಬಲವರ್ಧನೆ ಮತ್ತು ರಾಜ್ಯದೊಳಗಿನ ನಾಯಕತ್ವ ಬದಲಾವಣೆಯತ್ತ ಸಿದ್ಧತೆಯಾಗಿದ್ದು,

ಜುಲೈ 15ರಂದು ಬೆಂಗಳೂರಿನ ಕ್ವೀನ್‌ಸ್ ರಸ್ತೆಯ ಕೆಪಿಸಿಸಿ ಕಚೇರಿ ಆವರಣದ ಭಾರತ್ ಜೋಡೊ ಭವನದಲ್ಲಿ ಒಬಿಸಿ ಸಲಹಾ ಮಂಡಳಿಯ ಮೊದಲ ಸಭೆ ನಡೆಯಲಿದೆ. ಸಭೆಯಲ್ಲಿ ದೇಶದ ವಿವಿಧ ಭಾಗಗಳಿಂದ 90ಕ್ಕೂ ಹೆಚ್ಚು ಒಬಿಸಿ ನಾಯಕರು ಪಾಲ್ಗೊಳ್ಳಲಿದ್ದು,

ಅವರಲ್ಲಿ 5 ಮಾಜಿ ಮುಖ್ಯಮಂತ್ರಿಗಳು ಹಾಗೂ 10ಕ್ಕೂ ಹೆಚ್ಚು ಮಾಜಿ ಕೇಂದ್ರ ಸಚಿವರು ಇರಲಿದ್ದಾರೆ. ಹೆಚ್ಚುವರಿ ಜವಾಬ್ದಾರಿ ಪಡೆದ ಸಿದ್ದರಾಮಯ್ಯನವರು ಮುಂದಿನ ದಿನಗಳಲ್ಲಿ ರಾಜ್ಯ ರಾಜಕೀಯದಿಂದ ನಿಧಾನವಾಗಿ ದೂರವಾಗುವ ಸಾಧ್ಯತೆಗಳಿವೆ ಎಂಬ ಮಾತುಗಳು ಪಕ್ಷದ ಒಳಗೆಯೇ ಕೇಳಿಬರುತ್ತಿವೆ. ಇದರ ಬೆನ್ನಲ್ಲೇ “ಆಗಸ್ಟ್–ಸೆಪ್ಟೆಂಬರ್ ಕ್ರಾಂತಿ” ಎಂಬ ಪಕ್ಷದೊಳಗಿನ ಚರ್ಚೆ ಇನ್ನಷ್ಟು ಬಲ ಪಡೆದುಕೊಂಡಿದೆ.

 

IND vs ENG: ಶುಭಮನ್ ಗಿಲ್ ಭರ್ಜರಿ ಪ್ರದರ್ಶನ: ವಿರಾಟ್ ಕೊಹ್ಲಿಯಿಂದ ವಿಶೇಷ ಶ್ಲಾಘನೆ!

ಟೆಸ್ಟ್ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿಯ ಸ್ಥಾನ ತುಂಬುವವರಾಗಬಹುದೇ ಎಂಬ ಪ್ರಶ್ನೆಗೆ ಇದೀಗ ಸ್ಪಷ್ಟ ಉತ್ತರ ಸಿಕ್ಕಿದೆ. ಭಾರತ ತಂಡದ ಯುವ ಬ್ಯಾಟರ್ ಶುಭಮ‌ನ್‌ ಗಿಲ್‌, ಎಡ್ಜ್‌ಬಾಸ್ಟನ್ ಟೆಸ್ಟ್‌ನಲ್ಲಿ ಕೊಹ್ಲಿಯ ಪರಂಪರೆಯನ್ನು ಮುಂದುವರೆಸುವ ಭರವಸೆಯ ಆಟವನ್ನಾಡಿದ್ದಾರೆ.

ಮೊದಲ ಇನಿಂಗ್ಸ್‌ನಲ್ಲಿ 269 ರನ್ಗಳ ದ್ವಿಶತಕ ಮತ್ತು ಎರಡನೇ ಇನಿಂಗ್ಸ್‌ನಲ್ಲಿ 161 ರನ್, ಒಟ್ಟು ಟೆಸ್ಟ್ ಪಂದ್ಯವೊಂದರಲ್ಲಿ 430 ರನ್ ಸಿಡಿಸಿದ ಗಿಲ್, ಇತಿಹಾಸದ ಪುಟಗಳಿಗೆ ಹೊಸ ದಾಖಲೆ ಬರೆದಿದ್ದಾರೆ. ಇದರಿಂದಾಗಿ, ಟೆಸ್ಟ್ ಪಂದ್ಯದ ಇತಿಹಾಸದಲ್ಲಿ ಎರಡನೇ ಅತ್ಯಧಿಕ ರನ್ ಬಾರಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಈ ತಾರೆ ಆಟಕ್ಕೆ ‘ಕಿಂಗ್ ಕೊಹ್ಲಿ’ ಸ್ವತಃ ತಮ್ಮ ಇನ್‌ಸ್ಟಾಗ್ರಾಮ್ ಮೂಲಕ ಶ್ಲಾಘನೆ ಸಲ್ಲಿಸಿದ್ದಾರೆ. “ಸ್ಟಾರ್ ಬಾಯ್… ಇತಿಹಾಸವನ್ನು ಪುನಃ ಬರೆಯುತ್ತೀರಿ… ನೀವು ಇದಕ್ಕೆ ಅರ್ಹರು” ಎಂಬ ಸಂದೇಶವನ್ನು ಹಂಚಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಿಂದ ಬಹುಕಾಲ ದೂರವಿದ್ದ ವಿರಾಟ್ ಕೊಹ್ಲಿಯ ಈ ಪೋಸ್ಟ್ ಇದೀಗ ವೈರಲ್ ಆಗುತ್ತಿದೆ.

ಈ ಮೂಲಕ ಚಟುವಟಿಕೆಯು ವಿಶಿಷ್ಟ ತಿರುವು ಪಡೆದುಕೊಂಡಿದ್ದು, ಗಿಲ್ ಹೊಸ ದಿಗ್ಗಜರ ಸಾಲಿನಲ್ಲಿ ತಮ್ಮ ಹೆಸರನ್ನು ಬರೆಯುತ್ತಿದ್ದಾರೆ. ಟೀಮ್ ಇಂಡಿಯಾದ ನಾಲ್ಕನೇ ಕ್ರಮಾಂಕ ಈಗ ಪುನಃ ಒತ್ತಾಯಪೂರ್ಣವಾಗಿ ಭದ್ರವಾಗಿದೆ ಎಂಬ ಆತ್ಮವಿಶ್ವಾಸ ಅಭಿಮಾನಿಗಳಲ್ಲೂ ಮೂಡಿದೆ.

ಶಿವಮೊಗ್ಗದ ವಿಗ್ರಹ ಅಪಮಾನ ಪ್ರಕರಣ: ಇಬ್ಬರು ಆರೋಪಿಗಳು ಬಂಧನ..!

ಶಿವಮೊಗ್ಗ: ಶಿವಮೊಗ್ಗದ ಬಂಗಾರಪ್ಪ ಬಡಾವಣೆಯಲ್ಲಿ ನಡೆದ ವಿಗ್ರಹ ಅವಮಾನ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ತೀವ್ರ ಕ್ರಮ ಕೈಗೊಂಡಿದ್ದಾರೆ. ಈ ಘಟನೆಯ ಸಂಬಂಧ ರೆಹಮತ್‌ವಲ್ಲಾ ಮತ್ತು ಸದ್ದಾಂ ಎಂಬ ಇಬ್ಬರು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ. ಇದೀಗ ಆರೋಪಿಗಳನ್ನು ವಿಚಾರಣೆಗೊಳಪಡಿಸಲಾಗಿದ್ದು, ಘಟನೆ ಹಿನ್ನೆಲೆ ಶಾಂತಿ ಕಾಪಾಡಲು ಬಡಾವಣೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.

ಬಂಗಾರಪ್ಪ ಬಡಾವಣೆಯ ಪಾರ್ಕ್ ನಲ್ಲಿ ಪ್ರತಿಷ್ಠಾಪಿತವಾಗಿದ್ದ ಗಣೇಶನ ಮೂರ್ತಿಗೆ ಕಾಲಿನಿಂದ ಒದ್ದು, ಅಲ್ಲೇ ಇದ್ದ ನಾಗದೇವರ ವಿಗ್ರಹವನ್ನು ಚರಂಡಿಗೆ ಎಸೆದ ಇಬ್ಬರು ಯುವಕರು ಪರಾರಿಯಾಗಿದ್ದರು. ಈ ಘಟನೆ ಸ್ಥಳೀಯರಲ್ಲಿ ಆಕ್ರೋಶ ಸೃಷ್ಟಿಸಿತ್ತು.

ಕಿಡಿಗೇಡಿಗಳ ವರ್ತನೆಯಿಂದ ಕೆಲಕಾಲ ಬಡಾವಣೆಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ ಸಮಯಕ್ಕೆ ಸರಿಯಾಗಿ ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಸದ್ಯ ಆರೋಪಿಗಳ ವಿರುದ್ಧ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

error: Content is protected !!