Home Blog Page 3

Mangalore University: ಖ್ಯಾತ ಪತ್ರಿಕೋದ್ಯಮ ಪ್ರಾಧ್ಯಾಪಕಿ ಡಾ. ವಹೀದಾ ಸುಲ್ತಾನಾ ಹೃದಯಾಘಾತಕ್ಕೆ ಬಲಿ

ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ನಿವೃತ್ತ ಪ್ರಾಧ್ಯಾಪಕಿ ಡಾ. ವಹೀದಾ ಸುಲ್ತಾನಾ (70) ನಿಧನರಾಗಿದ್ದಾರೆ.

ಮೈಸೂರು ಕಲ್ಯಾಣಗಿರಿ ನಿವಾಸಿಯಾಗಿದ್ದ ಡಾ. ವಹೀದಾ ಸುಲ್ತಾನಾ ಅವರಿಗೆ ಇಂದು ಹೃದಯಾಘಾತವಾಗಿದ್ದು, ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

ಡಾ. ವಹೀದಾ ಸುಲ್ತಾನಾ ಅವರು ಸುಮಾರು ಮೂರು ದಶಕಗಳ ಕಾಲ ಮಂಗಳೂರು ವಿಶ್ವವಿದ್ಯಾನಿಲಯದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು. ಬಳಿಕ ವಿಭಾಗದ ಮುಖ್ಯಸ್ಥರಾಗಿ ನಿವೃತ್ತಿ ಹೊಂದಿದ್ದರು.

ಶಿಕ್ಷಣ ಕ್ಷೇತ್ರದ ಜೊತೆಗೆ ಸಾಮಾಜಿಕ ಸೇವೆಯಲ್ಲೂ ತೊಡಗಿಸಿಕೊಂಡಿದ್ದ ಅವರು, ಮಂಗಳೂರು ವಿವಿ ಮಹಿಳಾ ಹಾಸ್ಟೆಲ್ ವಾರ್ಡನ್ ಆಗಿ ಹಾಗೂ ಅಲ್ಪಸಂಖ್ಯಾತರು ಮತ್ತು ಇತರೆ ಹಿಂದುಳಿದ ವರ್ಗದ ವಿದ್ಯಾರ್ಥಿಗಳ ಐಎಎಸ್, ಕೆಎಎಸ್ ತರಬೇತಿ ಕಾರ್ಯಕ್ರಮಗಳ ಸಂಯೋಜಕರಾಗಿಯೂ ಕಾರ್ಯನಿರ್ವಹಿಸಿದ್ದರು.

ಮಾಧ್ಯಮ, ಆರೋಗ್ಯ, ತಂತ್ರಜ್ಞಾನ, ಮಹಿಳಾ ವಿಚಾರಗಳು ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಲೇಖನಗಳನ್ನು ಬರೆದಿದ್ದ ಅವರು, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ನಿಯತಕಾಲಿಕಗಳಲ್ಲಿ ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದ್ದರು.

ಬಾಂಗ್ಲಾದೇಶ, ಮಲೇಷ್ಯಾ, ಶ್ರೀಲಂಕಾ, ಹಾಂಗ್‌ಕಾಂಗ್ ಸೇರಿದಂತೆ ವಿವಿಧ ದೇಶಗಳಲ್ಲಿ ನಡೆದ ಅಂತಾರಾಷ್ಟ್ರೀಯ ಸಮ್ಮೇಳನಗಳಲ್ಲಿ ಭಾಗವಹಿಸಿ ತಮ್ಮ ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದ್ದರು.

ಕಾರ್ಪೊರೇಟ್ ಕಮ್ಯುನಿಕೇಶನ್ಸ್, ಮಹಿಳೆ ಮತ್ತು ಮಾಧ್ಯಮ, ಆರೋಗ್ಯ ಸಂವಹನ ಸೇರಿದಂತೆ ಹಲವು ವಿಷಯಗಳಲ್ಲಿ ವಿಶೇಷ ಆಸಕ್ತಿ ಹೊಂದಿದ್ದ ಅವರು, ಏಷ್ಯನ್ ಕಾಂಗ್ರೆಸ್ ಫಾರ್ ಮೀಡಿಯಾ ಆ್ಯಂಡ್ ಕಮ್ಯುನಿಕೇಶನ್‌ನ ರಾಷ್ಟ್ರೀಯ ಸಮಿತಿಯ ಉಪ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದರು.

ಡಾ. ವಹೀದಾ ಸುಲ್ತಾನಾ ಅವರ ನಿಧನಕ್ಕೆ ಮಂಗಳೂರು ವಿಶ್ವವಿದ್ಯಾನಿಲಯದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಹಳೆ ವಿದ್ಯಾರ್ಥಿಗಳ ಸಂಘ (MAM) ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ.

ಅವರ ಅಂತ್ಯಕ್ರಿಯೆ ಆಗಸ್ಟ್ 7ರಂದು ಅಪರಾಹ್ನ ಮೈಸೂರಿನಲ್ಲಿ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

 

ಹೊಲದಲ್ಲೇ ರೈತರ ನೋವು ಆಲಿಸಿದ ಸಚಿವ ಲಾಡ್

0

ವಿಜಯಸಾಕ್ಷಿ ಸುದ್ದಿ, ಧಾರವಾಡ: ಮಳೆ ಬಂದರೂ ಸಮಯಕ್ಕೆ ಬರಲಿಲ್ಲ… ಹೊಲಗಳು ಹಸಿರಾಗಿ ಕಾಣುತ್ತಿದ್ದರೂ ರೈತರ ಕೈಗೆ ಬೆಳೆ ಬಂದಿಲ್ಲ… ಇಂತಹ ಸಂಕಷ್ಟದ ಪರಿಸ್ಥಿತಿಯನ್ನು ಸ್ವತಃ ಹೊಲಗಳಿಗೆ ತೆರಳಿ ವೀಕ್ಷಿಸಿದ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಅವರು, ರೈತರ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತಂದು ಅಗತ್ಯ ಪರಿಹಾರ ಕಲ್ಪಿಸುವುದಾಗಿ ಭರವಸೆ ನೀಡಿದರು.

ಮುಖ್ಯಮಂತ್ರಿಗಳ ಸೂಚನೆಯಂತೆ ಧಾರವಾಡ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಬೆಳೆ ಹಾನಿ ಪರಿಶೀಲನೆ ನಡೆಸಿದ ಸಚಿವರು, ರೈತರು, ರೈತ ಮುಖಂಡರು ಹಾಗೂ ಕೃಷಿ ತಜ್ಞರೊಂದಿಗೆ ಚರ್ಚಿಸಿ ಬೆಳೆಗಳ ವಾಸ್ತವ ಸ್ಥಿತಿಯ ಕುರಿತು ಮಾಹಿತಿ ಸಂಗ್ರಹಿಸಿದರು.

ಜಿಲ್ಲೆಯ ಸುಮಾರು 2.90 ಲಕ್ಷ ಹೆಕ್ಟೇರ್ ಕೃಷಿಯೋಗ್ಯ ಭೂಮಿಯಲ್ಲಿ ಶೇ.96ರಷ್ಟು, ಅಂದರೆ 2.80 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ನಡೆದಿದ್ದು, ಸುಮಾರು 45 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಹೆಸರು ಹಾಗೂ ಉದ್ದು, 40 ಸಾವಿರ ಹೆಕ್ಟೇರ್‌ನಲ್ಲಿ ಮೆಕ್ಕೆಜೋಳ ಬೆಳೆಯಲಾಗಿದೆ. ಇದರ ಜೊತೆಗೆ ಸೋಯಾಬೀನ್, ಹತ್ತಿ, ಕಡಲೆಕಾಯಿ, ಕಬ್ಬು, ಈರುಳ್ಳಿ ಸೇರಿದಂತೆ ಹಲವು ಬೆಳೆಗಳು ಮಳೆಯ ವೈಪರೀತ್ಯದಿಂದ ಸಂಕಷ್ಟಕ್ಕೆ ಸಿಲುಕಿವೆ.

ಸಾಮಾನ್ಯವಾಗಿ ಹೊಲಗಳು ಹಸಿರಾಗಿ ಕಾಣುತ್ತಿದ್ದರೂ ಬೆಳೆಗಳ ಬೆಳವಣಿಗೆ ನಿರೀಕ್ಷಿತ ಮಟ್ಟದಲ್ಲಿಲ್ಲ. ಅಗತ್ಯ ಸಮಯದಲ್ಲಿ ಮಳೆಯಾಗದ ಪರಿಣಾಮ ಬೆಳೆಗಳು ಕುಂಠಿತಗೊಂಡಿದ್ದು, ರೈತರು ಭಾರೀ ನಷ್ಟ ಅನುಭವಿಸುವಂತಾಗಿದೆ. ಕೆಲವೆಡೆ ಹೆಚ್ಚು ಮಳೆಯಾದರೂ ಅದು ಸರಿಯಾದ ಸಮಯದಲ್ಲಿ ಮತ್ತು ಸಮರ್ಪಕ ಪ್ರಮಾಣದಲ್ಲಿ ಸುರಿಯದ ಕಾರಣ ಬೆಳೆಗಳಿಗೆ ಯಾವುದೇ ಪ್ರಯೋಜನವಾಗಿಲ್ಲ ಎಂದು ಸಚಿವರು ಹೇಳಿದರು.

ರೈತರ ಸಮಸ್ಯೆಗಳಿಗೆ ಶೀಘ್ರ ಸ್ಪಂದಿಸುವ ಉದ್ದೇಶದಿಂದ ಬೆಳೆ ವಿಮೆ ಸೇರಿದಂತೆ ಸರ್ಕಾರ ಹಾಗೂ ವಿಮಾ ಸಂಸ್ಥೆಗಳ ಮೂಲಕ ದೊರೆಯಬಹುದಾದ ಎಲ್ಲ ಸೌಲಭ್ಯಗಳನ್ನು ರೈತರಿಗೆ ತಲುಪಿಸಲು ಕ್ರಮ ಕೈಗೊಳ್ಳಲಾಗುವುದು. ಸ್ಥಳೀಯ ಶಾಸಕರು ಹಾಗೂ ರೈತ ಮುಖಂಡರ ಸಲಹೆಗಳನ್ನೂ ಕ್ರೋಡೀಕರಿಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಬರ ಘೋಷಣೆಗೆ ಕೇಂದ್ರ ಸರ್ಕಾರದ ನಿಗದಿತ ತಾಂತ್ರಿಕ ಮಾನದಂಡಗಳಿದ್ದು, ಅವುಗಳ ಅನ್ವಯವೇ ನಿರ್ಧಾರ ಕೈಗೊಳ್ಳಬೇಕಾಗುತ್ತದೆ. ಆದರೆ ಜಿಲ್ಲೆಯ ವಾಸ್ತವ ಸ್ಥಿತಿಯನ್ನು ರಾಜ್ಯ ಸರ್ಕಾರದ ಮೂಲಕ ಕೇಂದ್ರ ಸರ್ಕಾರದ ಗಮನಕ್ಕೆ ತಂದು ರೈತರಿಗೆ ಅಗತ್ಯ ನೆರವು ದೊರಕಿಸಲು ಪ್ರಯತ್ನಿಸಲಾಗುವುದು ಎಂದರು.

ನವಲಗುಂದ ಶಾಸಕ ಎನ್.ಎಚ್. ಕೋನರೆಡ್ಡಿ ಮಾತನಾಡಿ, ಅಲ್ಪ ಪ್ರಮಾಣದ ಮಳೆಯಾದ ಕಾರಣ ಹೆಸರು ಮತ್ತು ಹತ್ತಿ ಬೆಳೆಗಳು ಹೊರನೋಟಕ್ಕೆ ಹಸಿರಾಗಿದ್ದರೂ ಒಳಗೆ ಬೆಳೆ ಇಲ್ಲದಂತಾಗಿದೆ. ಹೆಸರು ಬೆಳೆ ಹೂ ಬಿಡದೆ ಒಣಗುವ ಸ್ಥಿತಿಗೆ ತಲುಪಿದ್ದು, ಹತ್ತಿ ಬೆಳೆಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಕಾಯಿ ಬರುತ್ತಿಲ್ಲ. ಆದ್ದರಿಂದ ಪರಿಹಾರ ವಿತರಣೆಯ ಸಂದರ್ಭದಲ್ಲಿ ಸರ್ಕಾರ ಮಾನದಂಡಗಳನ್ನು ಸಡಿಲಿಸಿ ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ಅಂಕಿ-ಅಂಶಗಳನ್ನು ಪರಿಗಣಿಸಬೇಕು ಎಂದು ಒತ್ತಾಯಿಸಿದರು.

ಕಳೆದ ಎರಡು ವರ್ಷಗಳಿಂದ ರೈತರಿಗೆ ಬೆಳೆ ವಿಮೆ ಸಮರ್ಪಕವಾಗಿ ದೊರೆಯದಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ ಅವರು, ಖಾಸಗಿ ವಿಮಾ ಕಂಪನಿಗಳಿಗಿಂತ ರೈತರ ಹಿತಾಸಕ್ತಿಗೆ ಆದ್ಯತೆ ನೀಡುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು. ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹಾಗೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಗಮನಕ್ಕೂ ವಿಷಯವನ್ನು ತಂದು ರೈತರಿಗೆ ಪರಿಹಾರ ದೊರಕಿಸಲು ಪ್ರಯತ್ನಿಸಲಾಗುವುದು ಎಂದರು.

ಸಚಿವ ಸಂತೋಷ್ ಲಾಡ್ ಅವರು ಧಾರವಾಡ ತಾಲೂಕಿನ ಹಾರೋಬೆಳವಡಿ ಹಾಗೂ ನವಲಗುಂದ ತಾಲೂಕಿನ ಶಿರೂರ, ಶಿರಕೋಳ, ಮೊರಬ ಮತ್ತು ತಿರ್ಲಾಪುರ ಗ್ರಾಮಗಳಿಗೆ ಭೇಟಿ ನೀಡಿ ರೈತರ ಹೊಲಗಳಲ್ಲಿ ಬೆಳೆಗಳ ಸ್ಥಿತಿಯನ್ನು ಪರಿಶೀಲಿಸಿದರು.

ಈ ವೇಳೆ ಜಿಲ್ಲಾಧಿಕಾರಿ ಸ್ನೇಹಲ್ ಆರ್., ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭುವನೇಶ ಪಾಟೀಲ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ, ಪ್ರೊಬೇಷನರಿ ಐಎಎಸ್ ಅಧಿಕಾರಿ ಅನುಪ್ರಿಯಾ ಸಾಕ್ಯಾ, ಉಪವಿಭಾಗಾಧಿಕಾರಿ ಪ್ರಭಾವತಿ ಫಕೀರಪುರ, ನವಲಗುಂದ ತಹಶೀಲ್ದಾರ್ ಸುಧೀರ ಸಾಹುಕಾರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

“ಹೊಲಗಳಲ್ಲಿ ಹಸಿರು ಕಾಣುತ್ತಿದ್ದರೂ ಬೆಳೆಗಳ ಬೆಳವಣಿಗೆ ಸಮರ್ಪಕವಾಗಿಲ್ಲ. ರೈತರ ವಾಸ್ತವ ಸಮಸ್ಯೆಯನ್ನು ಸರ್ಕಾರದ ಗಮನಕ್ಕೆ ತಂದು, ಬೆಳೆ ವಿಮೆ ಸೇರಿದಂತೆ ಎಲ್ಲ ರೀತಿಯ ನೆರವು ದೊರಕಿಸುವ ಪ್ರಯತ್ನ ಮಾಡಲಾಗುವುದು.”

ಸಂತೋಷ್ ಲಾಡ್, ಜಿಲ್ಲಾ ಉಸ್ತುವಾರಿ ಸಚಿವ

ಪ್ರಜಾಪ್ರಭುತ್ವದ ಪಾಠಕ್ಕೆ ಶಾಲೆಯಲ್ಲೇ ಪ್ರಾಯೋಗಿಕ ವೇದಿಕೆ

0

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಪಟ್ಟಣದ ಪಿ.ಎಸ್.ಎಸ್. ಡಾ. ಕೆ.ಬಿ. ಧನ್ನೂರ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಶಾಲಾ ಸಂಸತ್ ರಚನೆಗಾಗಿ ನೈಜ ಚುನಾವಣೆಯ ಮಾದರಿಯಲ್ಲಿ ಶಾಲಾ ಸಂಸತ್ ಚುನಾವಣೆ ಯಶಸ್ವಿಯಾಗಿ ನಡೆಯಿತು.

ವಿದ್ಯಾರ್ಥಿಗಳಿಗೆ ಪ್ರಜಾಪ್ರಭುತ್ವ ವ್ಯವಸ್ಥೆ, ಶಾಸಕಾಂಗದ ರಚನೆ ಹಾಗೂ ಮತದಾನದ ಮಹತ್ವವನ್ನು ಪರಿಚಯಿಸುವ ಉದ್ದೇಶದಿಂದ ಆಯೋಜಿಸಿದ್ದ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಕೆ, ಪರಿಶೀಲನೆ, ಪ್ರಚಾರ, ಮತದಾನ ಹಾಗೂ ಮತ ಎಣಿಕೆ ಸೇರಿದಂತೆ ಎಲ್ಲ ಪ್ರಕ್ರಿಯೆಗಳನ್ನು ಚುನಾವಣಾ ಆಯೋಗದ ಮಾದರಿಯಲ್ಲೇ ನಡೆಸಲಾಯಿತು.

ಮತಗಟ್ಟೆ ಅಧಿಕಾರಿ, ಗುರುತಿನ ಪರಿಶೀಲನಾ ಅಧಿಕಾರಿ ಹಾಗೂ ಮತದಾನ ಅಧಿಕಾರಿಗಳ ಜವಾಬ್ದಾರಿಗಳನ್ನು ವಿದ್ಯಾರ್ಥಿಗಳೇ ನಿರ್ವಹಿಸಿ ನೈಜ ಚುನಾವಣೆಯ ಅನುಭವ ಪಡೆದರು.

ಶಾಲೆಯ ಮುಖ್ಯಶಿಕ್ಷಕ ಮಂಜುನಾಥ ಗ್ರಾಮಪುರೋಹಿತ, ಪ್ರಾಥಮಿಕ ವಿಭಾಗದ ಮುಖ್ಯಶಿಕ್ಷಕ ಸುರೇಶ ಮಲ್ಲನಗೌಡ್ರ ಹಾಗೂ ಶಿಕ್ಷಕರು ಚುನಾವಣಾ ಪ್ರಕ್ರಿಯೆಗೆ ಮಾರ್ಗದರ್ಶನ ನೀಡಿದರು. ವಿದ್ಯಾರ್ಥಿಗಳಲ್ಲಿ ನಾಯಕತ್ವ, ಶಿಸ್ತು, ಜವಾಬ್ದಾರಿ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಬೆಳೆಸುವ ಉದ್ದೇಶವನ್ನು ವಿವರಿಸಿದರು.

ಚುನಾವಣೆಯಲ್ಲಿ ಐಶ್ವರ್ಯ ಪೂಜೇರ ಶಾಲಾ ಪ್ರಧಾನಿಯಾಗಿ, ಚಂದ್ರಿಕಾ ಸೂರಪ್ಪಗೌಡ್ರ ಉಪಪ್ರಧಾನಿಯಾಗಿ ಆಯ್ಕೆಯಾಗಿದ್ದು, ಇತರ 10 ವಿದ್ಯಾರ್ಥಿಗಳು ಶಾಲಾ ಸಚಿವ ಸಂಪುಟದ ವಿವಿಧ ಖಾತೆಗಳ ಜವಾಬ್ದಾರಿ ವಹಿಸಿಕೊಂಡರು.

ಸಚಿವ ಸಂಪುಟವೋ… ಭ್ರಷ್ಟರ ಸಂಪುಟವೋ: ರಾಜು ಕುರುಡಗಿ ವಾಗ್ದಾಳಿ

0

ವಿಜಯಸಾಕ್ಷಿ ಸುದ್ದಿ, ಗದಗ: ಕರ್ನಾಟಕ ಸರ್ಕಾರದ ನೂತನ ಸಚಿವ ಸಂಪುಟದಲ್ಲಿ ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವವರಿಗೆ ಸಚಿವ ಸ್ಥಾನ ನೀಡಿರುವುದನ್ನು ಖಂಡಿಸಿರುವ ಬಿಜೆಪಿ ಗದಗ ಜಿಲ್ಲಾ ಘಟಕದ ಅಧ್ಯಕ್ಷ ತೋಟಪ್ಪ (ರಾಜು) ಕುರುಡಗಿ, “ಇದು ಸಚಿವ ಸಂಪುಟವಲ್ಲ, ಭ್ರಷ್ಟರ ಸಂಪುಟ” ಎಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಗುರುವಾರ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ ಅವರು, ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ದುರುಪಯೋಗ ಪ್ರಕರಣದಲ್ಲಿ ಆರೋಪ ಎದುರಿಸಿದ್ದ ಬಳ್ಳಾರಿ ಗ್ರಾಮಾಂತರ ಶಾಸಕ ಬಿ. ನಾಗೇಂದ್ರ ಅವರಿಗೆ ಮತ್ತೆ ಸಚಿವ ಸ್ಥಾನ ನೀಡಿರುವುದು ದುರದೃಷ್ಟಕರ ಬೆಳವಣಿಗೆ ಎಂದು ಆರೋಪಿಸಿದರು.

ಭ್ರಷ್ಟಾಚಾರ, ತನಿಖೆ ಹಾಗೂ ನ್ಯಾಯಾಂಗ ಪ್ರಕ್ರಿಯೆಗಳಿಗೆ ಸಂಬಂಧಿಸಿದ ಆರೋಪಗಳಿರುವ ವ್ಯಕ್ತಿಗಳಿಗೆ ಸಚಿವ ಸ್ಥಾನ ನೀಡಿರುವುದು ಉತ್ತಮ ಆಡಳಿತ ಹಾಗೂ ಸಾರ್ವಜನಿಕ ಜೀವನದ ನೈತಿಕ ಮೌಲ್ಯಗಳಿಗೆ ವಿರುದ್ಧವಾಗಿದೆ ಎಂದು ಅವರು ಟೀಕಿಸಿದರು.

ವಾಲ್ಮೀಕಿ ಅಭಿವೃದ್ಧಿ ನಿಗಮದ ಸುಮಾರು ₹187 ಕೋಟಿ ಹಣ ದುರುಪಯೋಗ ಪ್ರಕರಣ ಗಂಭೀರವಾಗಿದ್ದು, ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗೆ ಮೀಸಲಾದ ಸಾರ್ವಜನಿಕ ಹಣ ದುರ್ಬಳಕೆಯಾಗಿರುವ ಆರೋಪದ ಕುರಿತು ಸರ್ಕಾರ ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದರು.

ಸಚಿವ ಸ್ಥಾನಗಳು ಯಾವುದೇ ಅನುಮಾನ ಅಥವಾ ವಿವಾದಗಳಿಗೆ ಎಡೆಮಾಡಿಕೊಡುವಂತಿರಬಾರದು. ಭ್ರಷ್ಟಾಚಾರವು ಕೇವಲ ಹಣದ ದುರುಪಯೋಗವಲ್ಲ, ಬಡವರು, ರೈತರು, ಮಹಿಳೆಯರು, ವಿದ್ಯಾರ್ಥಿಗಳು, ಯುವಕರು ಹಾಗೂ ಪರಿಶಿಷ್ಟ ಜಾತಿ-ಪಂಗಡದ ಜನರ ಹಕ್ಕುಗಳಿಗೆ ಆಗುವ ಅನ್ಯಾಯವಾಗಿದೆ ಎಂದು ಹೇಳಿದರು.

ಸಾರ್ವಜನಿಕರ ತೆರಿಗೆ ಹಣವನ್ನು ಶಿಕ್ಷಣ, ಆರೋಗ್ಯ, ಉದ್ಯೋಗ, ಕೌಶಲಾಭಿವೃದ್ಧಿ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಬಳಸಬೇಕು. ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ಸಚಿವರನ್ನು ಸಂಪುಟದಿಂದ ಕೈಬಿಡಬೇಕು. ಇಲ್ಲದಿದ್ದರೆ ಬಿಜೆಪಿ ರಾಜ್ಯಾದ್ಯಂತ ಹೋರಾಟ ಮತ್ತು ಪ್ರತಿಭಟನೆ ನಡೆಸಲಿದೆ ಎಂದು ರಾಜು ಕುರುಡಗಿ ಎಚ್ಚರಿಕೆ ನೀಡಿದರು.

ಗದಗ–ಸಿಂಗಾಪುರ ಶಾಲೆಗಳ ವಿದ್ಯಾರ್ಥಿಗಳ ಅಂತರರಾಷ್ಟ್ರೀಯ ಸಂವಾದ

0

ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಬಾಲ ವಿನಾಯಕ ವಿದ್ಯಾನಿಕೇತನ (ಬಿವಿವಿ) ಶಾಲೆ ಹಾಗೂ ಸಿಂಗಾಪುರದ ಬೆಂಡೆಮಿಯರ್ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳ ನಡುವೆ ಆನ್‌ಲೈನ್ ಮೂಲಕ ಅಂತರರಾಷ್ಟ್ರೀಯ ವಿದ್ಯಾರ್ಥಿ ವಿನಿಮಯ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.

ಕಾರ್ಯಕ್ರಮದಲ್ಲಿ ಬಿವಿವಿ ಶಾಲೆಯ ವಿದ್ಯಾರ್ಥಿಗಳು ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ ವಿದ್ಯಾರ್ಥಿಗಳೇ ಶಿಕ್ಷಕರಾಗಿ ಹಾಗೂ ಶಾಲಾ ಆಡಳಿತ ನಿರ್ವಹಿಸುವ ಪದ್ಧತಿ, ‘ಸಂಗಮ’ ಚಟುವಟಿಕೆಗಳ ಮೂಲಕ ನಾಯಕತ್ವ ಕೌಶಲ ಬೆಳೆಸುವ ವಿಧಾನವನ್ನು ಪರಿಚಯಿಸಿದರು. ಈ ಕಾರ್ಯಕ್ರಮಗಳನ್ನು ತಮ್ಮ ಶಾಲೆಯಲ್ಲೂ ಅಳವಡಿಸಿಕೊಳ್ಳುವುದಾಗಿ ಸಿಂಗಾಪುರ ಶಾಲೆಯ ಪ್ರಾಚಾರ್ಯೆ ಟಾನ್ ಲಿಂ ಹಾಗೂ ಶಿಕ್ಷಕರು ಸಂತಸ ವ್ಯಕ್ತಪಡಿಸಿದರು.

ಸಿಂಗಾಪುರದ ವಿದ್ಯಾರ್ಥಿಗಳು ತಮ್ಮ ಶಾಲೆಯ ‘ಬಡಿ ಪೇರಿಂಗ್’ ಪದ್ಧತಿಯ ಕುರಿತು ವಿವರಿಸಿ, ಹಿರಿಯ ವಿದ್ಯಾರ್ಥಿಗಳು ಕಿರಿಯ ವಿದ್ಯಾರ್ಥಿಗಳಿಗೆ ಶಾಲಾ ಶಿಸ್ತು ಮತ್ತು ಹೊಂದಾಣಿಕೆಯ ಕುರಿತು ಮಾರ್ಗದರ್ಶನ ನೀಡುವ ವಿಧಾನವನ್ನು ಹಂಚಿಕೊಂಡರು.

ಬಿವಿವಿ ಶಾಲೆಯ ನಿರ್ದೇಶಕ ವಿನಾಯಕ ಆರ್. ಕಾರ್ಯಕ್ರಮವನ್ನು ಶ್ಲಾಘಿಸಿದರು.

ಕಾರ್ಯಕ್ರಮದಲ್ಲಿ ಉಭಯ ಶಾಲೆಗಳ ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸಿ, ಕೊನೆಯಲ್ಲಿ ಪರಸ್ಪರ ಶಾಲಾ ಗೀತೆಗಳಿಗೆ ಗೌರವ ಸಲ್ಲಿಸಿದರು.

ಶಾಲೆಯ ಕಾರ್ಯದರ್ಶಿ ರವಿ ಎಸ್., ಇಎಲ್‌ಸಿ ಅಧ್ಯಕ್ಷೆ ಮಲ್ಲಿಕಾ ಆರ್., ಉಪನಿರ್ದೇಶಕಿ ಗಾಯತ್ರಿ ವಿ., ಪ್ರಾಚಾರ್ಯ ವಿ.ಎಂ. ಅಡ್ನೂರ, ಉಪಪ್ರಾಚಾರ್ಯ ಪಿ.ಜಿ. ಬ್ಯಾಳಿ ಸೇರಿದಂತೆ ಶಿಕ್ಷಕ ವೃಂದ ಕಾರ್ಯಕ್ರಮಕ್ಕೆ ಅಭಿನಂದನೆ ಸಲ್ಲಿಸಿದರು.

ಮಂಕಾಳ ವೈದ್ಯರಿಗೆ ಸಚಿವ ಸ್ಥಾನ ತಪ್ಪಿಸಿದ್ದು ಸಮಾಜಕ್ಕೆ ಅನ್ಯಾಯ

0

ವಿಜಯಸಾಕ್ಷಿ ಸುದ್ದಿ, ಹಗರಿಬೊಮ್ಮನಹಳ್ಳಿ: ರಾಜ್ಯ ಸಚಿವ ಸಂಪುಟದಲ್ಲಿ ಗಂಗಾಮತ, ಬೆಸ್ತ, ಕೋಲಿ, ಕಬ್ಬಲಿಗ, ಅಂಬಿಗ, ಮೊಗವೀರ ಸೇರಿದಂತೆ 39ಕ್ಕೂ ಹೆಚ್ಚು ಉಪಸಮುದಾಯಗಳ ಏಕೈಕ ಶಾಸಕ ಮಂಕಾಳ ವೈದ್ಯ ಅವರಿಗೆ ಸಚಿವ ಸ್ಥಾನ ಕೈತಪ್ಪಿರುವುದು ಸಮಾಜಕ್ಕೆ ಮಾಡಿರುವ ಅನ್ಯಾಯ ಹಾಗೂ ಅಗೌರವವಾಗಿದೆ ಎಂದು ಮಾಜಿ ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗದ ರಾಜ್ಯ ಉಪಾಧ್ಯಕ್ಷ ಹಾಗೂ ವಿಜಯನಗರ ಜಿಲ್ಲಾ ಗಂಗಾಮತ-ಬೆಸ್ತ ಸಮಾಜದ ಮಾಜಿ ಅಧ್ಯಕ್ಷ ಅಂಬಾಡಿ ನಾಗರಾಜ್ ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದ ಗಂಗಾಮತ-ಬೆಸ್ತ ಸಮಾಜ ಭವನದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಹೈಕಮಾಂಡ್‌ನ ಆರಂಭಿಕ ಪಟ್ಟಿಯಲ್ಲಿ ಮಂಕಾಳ ವೈದ್ಯ ಅವರ ಹೆಸರು ಇದ್ದರೂ, ಕೊನೆಯ ಕ್ಷಣದಲ್ಲಿ ಕೈಬಿಡಲಾಗಿದೆ ಎಂದು ಆರೋಪಿಸಿದರು.

ಹಿಂದಿನ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಮಂಕಾಳ ವೈದ್ಯ ಅವರು ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಈ ಬಾರಿಯೂ ಅವರಿಗೆ ಅವಕಾಶ ಸಿಗುವ ವಿಶ್ವಾಸ ಸಮಾಜಕ್ಕಿತ್ತು. ಆದರೆ ಸಚಿವ ಸಂಪುಟದಲ್ಲಿ ನಮ್ಮ ಸಮಾಜಕ್ಕೆ ಯಾವುದೇ ಪ್ರಾತಿನಿಧ್ಯ ಸಿಗದಿರುವುದು ತೀವ್ರ ನಿರಾಸೆ ಉಂಟುಮಾಡಿದೆ ಎಂದು ಹೇಳಿದರು.

ರಾಜ್ಯದ ನಾಯಕತ್ವ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಧ್ಯಪ್ರವೇಶಿಸಿ ಮಂಕಾಳ ವೈದ್ಯ ಅಥವಾ ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣ ಕಮಕನೂರ ಅವರಲ್ಲಿ ಒಬ್ಬರಿಗಾದರೂ ಸಚಿವ ಸ್ಥಾನ ನೀಡುವ ಮೂಲಕ ಸಮಾಜಕ್ಕೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ತಾಲೂಕು ಗಂಗಾಮತ-ಬೆಸ್ತ ಸಮಾಜದ ನಿಕಟಪೂರ್ವ ಅಧ್ಯಕ್ಷ ಅಂಬಾಡಿ ಮಹೇಶ್, ಮಾಜಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸರ್ದಾರ್ ಯಮನೂರಪ್ಪ, ವೈ. ಯಮುನೇಶ್, ಗೋಣಿಬಸಪ್ಪ, ಸುರೇಶ್, ಯರಿಸ್ವಾಮಿ, ಪ್ರಕಾಶ್, ನಾಗಲಿಂಗಪ್ಪ, ಬಿ. ಸೂರ್ಯನಾರಾಯಣ, ಸರ್ದಾರ್ ಜೀವಪ್ಪ, ಸರ್ದಾರ್ ಸಿದ್ದಪ್ಪ, ಪರಶುರಾಮ ಬಾರಿಕರ, ವೆಂಕಟೇಶ್ ವಲ್ಲಭಾಪುರ, ವಿರೂಪಾಕ್ಷಿ ಮೊರಗೇರಿ, ಅಂಬಿಗರ ಮಂಜುನಾಥ್ ಸೇರಿದಂತೆ ಸಮಾಜದ ಮುಖಂಡರು ಹಾಗೂ ಸದಸ್ಯರು ಉಪಸ್ಥಿತರಿದ್ದರು.

ಸರ್ಕಾರಿ ಪದವಿಪೂರ್ವ ಕಾಲೇಜಿಗೆ ಒತ್ತಾಯ

0

ವಿಜಯಸಾಕ್ಷಿ ಸುದ್ದಿ, ಹಗರಿಬೊಮ್ಮನಹಳ್ಳಿ: ತಾಲೂಕಿನ ಹಂಪಾಪಟ್ಟಣ ಗ್ರಾಮಕ್ಕೆ ಸರ್ಕಾರಿ ಪದವಿಪೂರ್ವ ಕಾಲೇಜು ಮಂಜೂರು ಮಾಡುವಂತೆ ಆಗ್ರಹಿಸಿ ಹಂಪಾಪಟ್ಟಣ ಪದವಿಪೂರ್ವ ಕಾಲೇಜು ಹೋರಾಟ ಸಮಿತಿ ಸದಸ್ಯರು ಕ್ಷೇತ್ರದ ಶಾಸಕ ಕೆ. ನೇಮಿರಾಜನಾಯ್ಕ ಅವರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಹೋರಾಟ ಸಮಿತಿ ಸಂಚಾಲಕ ಬುಡ್ಡಿ ಬಸವರಾಜ್ ಮಾತನಾಡಿ, ಹಂಪಾಪಟ್ಟಣ ಗ್ರಾಮವು ಸುತ್ತಮುತ್ತಲಿನ 12ಕ್ಕೂ ಹೆಚ್ಚು ಗ್ರಾಮಗಳಿಗೆ ಕೇಂದ್ರ ಸ್ಥಾನವಾಗಿದ್ದು, ಈ ಭಾಗದ ವಿದ್ಯಾರ್ಥಿಗಳು ಪದವಿಪೂರ್ವ ಶಿಕ್ಷಣಕ್ಕಾಗಿ ದೂರದ ಪಟ್ಟಣಗಳಿಗೆ ತೆರಳಬೇಕಾದ ಅನಿವಾರ್ಯತೆ ಎದುರಿಸುತ್ತಿದ್ದಾರೆ. ರೈತರು, ಕೃಷಿ ಕೂಲಿ ಕಾರ್ಮಿಕರು ಹಾಗೂ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಹಂಪಾಪಟ್ಟಣದಲ್ಲಿ ಸರ್ಕಾರಿ ಪದವಿಪೂರ್ವ ಕಾಲೇಜು ಆರಂಭಿಸುವುದು ಅಗತ್ಯವಾಗಿದೆ ಎಂದು ಒತ್ತಾಯಿಸಿದರು.

ಆಗಸ್ಟ್ 13ರಿಂದ ಆರಂಭವಾಗಲಿರುವ ವಿಧಾನಸಭಾ ಅಧಿವೇಶನದಲ್ಲಿ ಹಂಪಾಪಟ್ಟಣಕ್ಕೆ ಸರ್ಕಾರಿ ಪದವಿಪೂರ್ವ ಕಾಲೇಜು ಮಂಜೂರು ಮಾಡುವ ಕುರಿತು ಪ್ರಸ್ತಾವನೆ ಮಂಡಿಸಿ, ಸರ್ಕಾರದಿಂದ ಶೀಘ್ರ ಅನುಮೋದನೆ ದೊರಕುವಂತೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ಮನವಿ ಸ್ವೀಕರಿಸಿದ ಶಾಸಕ ಕೆ. ನೇಮಿರಾಜನಾಯ್ಕ ಅವರು, ಹಂಪಾಪಟ್ಟಣದ ವಿದ್ಯಾರ್ಥಿಗಳ ಬೇಡಿಕೆ ನ್ಯಾಯಸಮ್ಮತವಾಗಿದ್ದು, ಸರ್ಕಾರದ ಗಮನಕ್ಕೆ ವಿಷಯವನ್ನು ತಂದು ವಿಧಾನಸಭಾ ಅಧಿವೇಶನದಲ್ಲಿ ಪ್ರಸ್ತಾಪಿಸಿ ಕಾಲೇಜು ಮಂಜೂರು ಮಾಡಿಸಲು ಅಗತ್ಯ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ ಪತ್ರಿ ಎಲ್ಲಪ್ಪ, ಉಪಾಧ್ಯಕ್ಷ ಟಿ. ಮಂಜುನಾಥ, ಗ್ರಾಮ ಪಂಚಾಯಿತಿ ಸದಸ್ಯರು, ವಿಎಸ್‌ಎಸ್‌ಎನ್ ಅಧ್ಯಕ್ಷ ಕೆ. ಹುಲುಗಪ್ಪ, ವಿವಿಧ ಮುಖಂಡರು, ಗ್ರಾಮಸ್ಥರು, ಶಿಕ್ಷಣ ಪ್ರೇಮಿಗಳು ಹಾಗೂ ಪದವಿಪೂರ್ವ ಕಾಲೇಜು ಹೋರಾಟ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

ವ್ಯಸನ ತೊರೆದು ಮೌಲ್ಯಯುತ ಬದುಕು ಕಟ್ಟಿಕೊಳ್ಳಿ: ರಮೇಶ ಹುಲಕುಂದ

0

ವಿಜಯಸಾಕ್ಷಿ ಸುದ್ದಿ, ಹುಲಕೋಟಿ: ವ್ಯಸನಮುಕ್ತ ಜೀವನವೇ ನಿಜವಾದ ಸಾಧನೆಯಾಗಿದ್ದು, ಇಲಕಲ್ಲದ ಚಿತ್ತರಗಿ ವಿಜಯಮಹಾಂತೇಶ್ವರ ಸಂಸ್ಥಾನ ಮಠದ ಲಿಂಗೈಕ್ಯ ಡಾ. ಮಹಾಂತ ಶಿವಯೋಗಿ ಸ್ವಾಮೀಜಿಯವರು ‘ಮಹಾಂತ ಜೋಳಿಗೆ’ ಆಂದೋಲನದ ಮೂಲಕ ದುಶ್ಚಟಗಳಿಂದ ಹಾಳಾಗುತ್ತಿದ್ದ ಕುಟುಂಬಗಳನ್ನು ರಕ್ಷಿಸಿ ಸಮಾಜದಲ್ಲಿ ಕ್ರಾಂತಿಕಾರಿ ಜಾಗೃತಿ ಮೂಡಿಸಿದ ಮಹಾನ್ ಸಂತರು ಎಂದು ಸಾಂಸ್ಕೃತಿಕ ಘಟಕದ ಸಂಯೋಜಕ ರಮೇಶ ಹುಲಕುಂದ ಹೇಳಿದರು.

ಹುಲಕೋಟಿಯ ಶ್ರೀ ಕೆ.ಎಚ್. ಪಾಟೀಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಡಾ. ಮಹಾಂತ ಶಿವಯೋಗಿಗಳ ಜನ್ಮದಿನಾಚರಣೆ ಅಂಗವಾಗಿ ಆಯೋಜಿಸಿದ್ದ ‘ವ್ಯಸನಮುಕ್ತ ದಿನಾಚರಣೆ ಹಾಗೂ ವ್ಯಸನಮುಕ್ತ ಪ್ರತಿಜ್ಞಾವಿಧಿ’ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿ ಅವರು ಮಾತನಾಡಿದರು.

ಸ್ವಾಮೀಜಿಯವರು ಸಾರಿದ ವ್ಯಸನಮುಕ್ತ ಹಾಗೂ ನೈತಿಕ ಸಮಾಜ ನಿರ್ಮಾಣದ ಸಂದೇಶ ಇಂದಿಗೂ ಪ್ರಸ್ತುತವಾಗಿದ್ದು, ಪ್ರತಿಯೊಬ್ಬರೂ ಅವರ ಜೀವನ ಮೌಲ್ಯಗಳನ್ನು ಅಳವಡಿಸಿಕೊಂಡು ನೆಮ್ಮದಿಯ ಬದುಕಿನೊಂದಿಗೆ ಸದೃಢ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಅಪ್ಪಣ್ಣ ಹಂಜೆ ಮಾತನಾಡಿ, ವಿದ್ಯಾರ್ಥಿಗಳು ಮಾದಕ ವಸ್ತುಗಳು, ಧೂಮಪಾನ, ಮದ್ಯಪಾನ ಹಾಗೂ ಮೊಬೈಲ್ ವ್ಯಸನದಿಂದ ದೂರವಿರಬೇಕು. ದುಶ್ಚಟಗಳು ಆರೋಗ್ಯ, ಶಿಕ್ಷಣ ಹಾಗೂ ಭವಿಷ್ಯವನ್ನು ಹಾಳುಮಾಡುತ್ತವೆ.

ಯುವಜನತೆ ವ್ಯಸನಮುಕ್ತ ಸಮಾಜ ನಿರ್ಮಾಣದ ಜವಾಬ್ದಾರಿಯನ್ನು ಹೊತ್ತು ಜಾಗೃತಿ ಮೂಡಿಸಬೇಕು ಎಂದು ಸಲಹೆ ನೀಡಿದರು.
ಎನ್‌ಎಸ್‌ಎಸ್ ಘಟಕದ ಸಂಯೋಜಕ ವಿಜಯಕುಮಾರ ಎಸ್. ವಂದಿಸಿದರು.

ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ವ್ಯಸನಮುಕ್ತ ಪ್ರತಿಜ್ಞೆ ಸ್ವೀಕರಿಸಿದರು.

ಬೆಂಗಳೂರು ಮೆಟ್ರೋ ಪ್ರಯಾಣಿಕರಿಗೆ ಮುಖ್ಯ ಮಾಹಿತಿ: ಶುಕ್ರವಾರ ರಾತ್ರಿ ಗ್ರೀನ್ ಲೈನ್‌ನಲ್ಲಿ ಬದಲಾವಣೆ!

ಬೆಂಗಳೂರು: ನಮ್ಮ ಮೆಟ್ರೋ ಹಸಿರು ಮಾರ್ಗದ ಪ್ರಯಾಣಿಕರಿಗೆ ಮಹತ್ವದ ಮಾಹಿತಿ.

ನಾಳೆ ಹಸಿರು ಮಾರ್ಗದ ರೈಲು ಸಂಚಾರದಲ್ಲಿ ತಾತ್ಕಾಲಿಕ ಬದಲಾವಣೆ ಮಾಡಲಾಗುತ್ತಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ತಿಳಿಸಿದೆ.

ಹಸಿರು ಮಾರ್ಗಕ್ಕೆ ಹೊಸ ಸಿಆರ್‌ಆರ್‌ಸಿ ಸಂಸ್ಥೆಯ ಮೆಟ್ರೋ ರೈಲುಗಳನ್ನು ಸೇರ್ಪಡೆಗೊಳಿಸುವ ಹಿನ್ನೆಲೆಯಲ್ಲಿ ಹಾಗೂ ಮೆಟ್ರೋ ರೈಲು ಸುರಕ್ಷತಾ ಆಯುಕ್ತರ ತಪಾಸಣೆಗೆ ಪೂರ್ವಭಾವಿಯಾಗಿ ರೈಲು ಸಂಚಾರದಲ್ಲಿ ಬದಲಾವಣೆ ಮಾಡಲಾಗುತ್ತಿದೆ.

ಯಶವಂತಪುರದಿಂದ ಮಾದಾವರದವರೆಗಿನ (ಅಪ್ ಲೈನ್) ರೈಲು ಸೇವೆಗಳು ಶುಕ್ರವಾರ ರಾತ್ರಿ 10.30ರಿಂದ 11 ಗಂಟೆಯವರೆಗೆ ಪ್ರತಿ 10 ನಿಮಿಷಗಳ ಬದಲಿಗೆ 20 ನಿಮಿಷಗಳ ಅಂತರದಲ್ಲಿ ಸಂಚರಿಸಲಿವೆ.

ಇನ್ನು ಮಾದಾವರದಿಂದ ರೇಷ್ಮೆ ಸಂಸ್ಥೆಯವರೆಗಿನ (ಡೌನ್ ಲೈನ್) ರೈಲು ಸೇವೆಗಳು ಯಾವುದೇ ಬದಲಾವಣೆ ಇಲ್ಲದೆ ಸಾಮಾನ್ಯ ವೇಳಾಪಟ್ಟಿಯಂತೆ ಮುಂದುವರಿಯಲಿವೆ.

ಬೆಂಗಳೂರು ಮೆಟ್ರೋ ಜಾಲ 96 ಕಿಲೋ ಮೀಟರ್‌ವರೆಗೆ ವಿಸ್ತರಿಸಿದ್ದು, ಪ್ರತಿದಿನ ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹೊಸ ರೈಲುಗಳ ಅಗತ್ಯ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಚೀನಾದಲ್ಲಿ ತಯಾರಿಸಲಾದ ಸುಮಾರು 21 ಹೊಸ ಮೆಟ್ರೋ ರೈಲುಗಳು ಹಂತ ಹಂತವಾಗಿ ಸೇರ್ಪಡೆಯಾಗಲಿವೆ.

ಇದರಲ್ಲಿ ಮೂರು ರೈಲುಗಳನ್ನು ಹಸಿರು ಮಾರ್ಗಕ್ಕೆ ಬಳಸಲಾಗುತ್ತಿದ್ದು, ಅದಕ್ಕೂ ಮುನ್ನ ಅಗತ್ಯ ತಪಾಸಣೆಗಳನ್ನು ನಡೆಸಲಾಗುತ್ತಿದೆ. ತಾತ್ಕಾಲಿಕ ಬದಲಾವಣೆಗೆ ಪ್ರಯಾಣಿಕರು ಸಹಕರಿಸುವಂತೆ ಬಿಎಂಆರ್‌ಸಿಎಲ್ ಮನವಿ ಮಾಡಿದೆ.

 

ಆ. 9ರಂದು ಚಿಕ್ಕಟ್ಟಿ ಗುರುಗಳ ‘ಶಿವರಾಯ’ ಅಭಿನಂದನಾ ಗ್ರಂಥ ಬಿಡುಗಡೆ

0

ವಿಜಯಸಾಕ್ಷಿ ಸುದ್ದಿ, ಗದಗ: ಗ್ರಾಮೀಣ ಹಿನ್ನೆಲೆಯಿಂದ ಬಂದು ಗದಗದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ವಿಶಿಷ್ಟ ಕೊಡುಗೆ ನೀಡಿರುವ ಶಿಕ್ಷಣ ತಜ್ಞ ಪ್ರೊ. ಎಸ್.ವೈ. ಚಿಕ್ಕಟ್ಟಿ ಅವರ ಜೀವನ ಸಾಧನೆಯನ್ನು ದಾಖಲಿಸುವ ‘ಶಿವರಾಯ’ ಅಭಿನಂದನಾ ಗ್ರಂಥ ಬಿಡುಗಡೆ ಸಮಾರಂಭವು ಆಗಸ್ಟ್ 9ರಂದು ನಗರದ ಮುಂಡರಗಿ ರಸ್ತೆಯ ಚಿಕ್ಕಟ್ಟಿ ಶಿಕ್ಷಣ ಸಂಸ್ಥೆಯ ಸಭಾಭವನದಲ್ಲಿ ನಡೆಯಲಿದೆ.

ಈ ಕುರಿತು ಗುರುವಾರ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಾಹಿತಿ ಐ.ಕೆ. ಕಮ್ಮಾರ, ಸಮಾರಂಭದ ಅಧ್ಯಕ್ಷತೆಯನ್ನು ಮಾಜಿ ಶಾಸಕ ಡಿ.ಆರ್. ಪಾಟೀಲ ವಹಿಸಲಿದ್ದು, ಶಾಸಕ ಎಚ್.ಕೆ. ಪಾಟೀಲ ಉದ್ಘಾಟಿಸಲಿದ್ದಾರೆ. ಬಿಜ್ಜರಗಿಯ ಸೋಮಲಿಂಗ ಪಾಟೀಲ ಅವರು ಅಭಿನಂದನಾ ಗ್ರಂಥವನ್ನು ಬಿಡುಗಡೆ ಮಾಡಲಿದ್ದಾರೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರು, ಪತ್ರಕರ್ತ ರವಿ ಎಸ್., ಸಂತಸಾಯಿ ಶಿಕ್ಷಣ ಸಂಸ್ಥೆ (ಪುಣೆ) ಸಂಸ್ಥಾಪಕ ಎಸ್.ಎನ್. ಢವಳೇಶ್ವರ, ವಿದ್ಯಾದಾನ ಸಮಿತಿಯ ಅಧ್ಯಕ್ಷ ಶ್ರೀನಿವಾಸ್ ಹುಯಿಲಗೋಳ, ವಿಶ್ರಾಂತ ಪ್ರಾಚಾರ್ಯ ಕೆ.ಎಚ್. ಬೇಲೂರು, ಅಡಹಳಟ್ಟಿಯ ಪಿಕೆಪಿಎಸ್ ಅಧ್ಯಕ್ಷ ಘಟಿವಾಳಪ್ಪ ಗುಡ್ಡಾಪುರ, ಅಥಣಿಯ ಬಸವರಾಜ ಉಮ್ರಾಣಿ ಸೇರಿದಂತೆ ಶಿಕ್ಷಣ ಕ್ಷೇತ್ರದ ಅನೇಕ ಗಣ್ಯರು ಭಾಗವಹಿಸಲಿದ್ದಾರೆ.

ಪ್ರೊ. ಎಸ್.ವೈ. ಚಿಕ್ಕಟ್ಟಿ ಅವರು ತಮ್ಮ ಪರಿಶ್ರಮದಿಂದ ಶಿಕ್ಷಣ ಸಂಸ್ಥೆಗಳನ್ನು ಬೆಳೆಸಿ ಈ ಭಾಗದ ಶಿಕ್ಷಣ ಕ್ಷೇತ್ರವನ್ನು ಶ್ರೀಮಂತಗೊಳಿಸಿದ್ದಾರೆ. ಅವರ ಶೈಕ್ಷಣಿಕ ಸಾಧನೆ, ಸೇವೆ ಹಾಗೂ ಸಮಾಜಮುಖಿ ಕಾರ್ಯಗಳನ್ನು ದಾಖಲಿಸಿ ಮುಂದಿನ ಪೀಳಿಗೆಗೆ ತಲುಪಿಸುವ ಉದ್ದೇಶದಿಂದ ಅವರ ಶಿಷ್ಯರು ಮತ್ತು ಅಭಿಮಾನಿಗಳು ‘ಶಿವರಾಯ’ ಅಭಿನಂದನಾ ಗ್ರಂಥವನ್ನು ಪ್ರಕಟಿಸಿದ್ದಾರೆ ಎಂದು ಐ.ಕೆ. ಕಮ್ಮಾರ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಪ್ರೊ. ಶ್ರೀಶೈಲ ಬಡಿಗೇರ, ಕೆ.ಎಚ್. ಬೇಲೂರು, ಎಸ್.ಎಲ್. ಹುಯಿಲಗೋಳ, ವಿ.ಎಂ. ಮುಂದಿನಮನಿ, ಶೋಭಾ ಭಟ್, ಶೋಭಾ ಸ್ಥಾವರಮಠ, ರಿಯಾನಾ ಮುಲ್ಲಾ ಹಾಗೂ ಪುಷ್ಪಲತಾ ಬೆಲೇರಿ ಉಪಸ್ಥಿತರಿದ್ದರು.