ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ1 ಆರೋಪಿ ಪವಿತ್ರಾ ಗೌಡ ಅವರನ್ನು ಪರಪ್ಪನ ಅಗ್ರಹಾರ ಜೈಲಿನಲ್ಲಿ ಐವರು ಸಜಾಬಂಧಿಗಳು ಇರುವ ಬ್ಯಾರಕ್‌ಗೆ ಶಿಫ್ಟ್ ಮಾಡಲಾಗಿದೆ.
ಸೆಷನ್ಸ್ ಕೋರ್ಟ್ ಸೂಚನೆಯಂತೆ ಜೈಲು ಅಧಿಕಾರಿಗಳು ಈ ಕ್ರಮ ಕೈಗೊಂಡಿದ್ದಾರೆ.
ಈ ಹಿಂದೆ ಪವಿತ್ರಾ ಗೌಡ ಅವರನ್ನು ಹಲವು ಸಜಾಬಂಧಿಗಳು ಇರುವ ಬ್ಯಾರಕ್‌ನಲ್ಲಿ ಇರಿಸಲಾಗಿತ್ತು. ಅತ್ಯಾಚಾರ ಪ್ರಕರಣದ ಆರೋಪಿ ಪ್ರಜ್ವಲ್ ರೇವಣ್ಣ ಇದ್ದ ಬ್ಯಾರಕ್‌ನಲ್ಲಿ ಮೊಬೈಲ್ ಪತ್ತೆಯಾದ ಹಿನ್ನೆಲೆಯಲ್ಲಿ ಭದ್ರತಾ ಕಾರಣಗಳಿಂದ ಅವರನ್ನು ಈ ಬ್ಯಾರಕ್‌ಗೆ ಸ್ಥಳಾಂತರಿಸಲಾಗಿತ್ತು.
ಆದರೆ ಬ್ಯಾರಕ್‌ನಲ್ಲಿ ಹಲವು ಕೈದಿಗಳೊಂದಿಗೆ ಒಂದೇ ಶೌಚಾಲಯ ಬಳಸಬೇಕಾಗಿದ್ದು, ಸ್ವಚ್ಛತೆ ಹಾಗೂ ಸೌಲಭ್ಯಗಳ ಕೊರತೆಯಿದೆ ಎಂದು ಪವಿತ್ರಾ ಗೌಡ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಜೈಲಿನಲ್ಲಿ ಇನ್ಸ್‌ಪೆಕ್ಷನ್ ನಡೆಯುತ್ತಿರುವ ಸಂದರ್ಭದಲ್ಲಿ ಕೈದಿಗಳಿಂದ ಮಾನಸಿಕ ಹಿಂಸೆ ಆಗುತ್ತಿದೆ ಎಂದೂ ಅರ್ಜಿಯಲ್ಲಿ ತಿಳಿಸಿದ್ದರು.
ಹೀಗಾಗಿ ಸೌಲಭ್ಯ ಹಾಗೂ ಸ್ವಚ್ಛತೆ ಇರುವ ಬ್ಯಾರಕ್‌ಗೆ ವರ್ಗಾವಣೆ ಮಾಡುವಂತೆ ಪವಿತ್ರಾ ಗೌಡ ಕೋರ್ಟ್‌ಗೆ ಮನವಿ ಮಾಡಿದ್ದರು. ಅರ್ಜಿಯನ್ನು ಪರಿಗಣಿಸಿದ ಕೋರ್ಟ್, ಸೌಲಭ್ಯ ಇರುವ ಬ್ಯಾರಕ್‌ಗೆ ವರ್ಗಾವಣೆ ಮಾಡುವಂತೆ ಜೈಲು ಅಧಿಕಾರಿಗಳಿಗೆ ಸೂಚಿಸಿತ್ತು. ಇದರಂತೆ ಇದೀಗ ಜೈಲು ಮ್ಯಾನ್ಯುವಲ್ ಪ್ರಕಾರ ಐವರು ಸಜಾಬಂಧಿಗಳು ಇರುವ ಬ್ಯಾರಕ್‌ಗೆ ಪವಿತ್ರಾ ಗೌಡ ಅವರನ್ನು ಶಿಫ್ಟ್ ಮಾಡಲಾಗಿದೆ.
ಇನ್ನು ಪವಿತ್ರಾ ಗೌಡ ಅವರಿಗೆ ಇಂದು ಜಾಮೀನು ಸಿಗುತ್ತಾ ಎಂಬ ಕುತೂಹಲ ಮೂಡಿದೆ. ಸಿಸಿಎಚ್ 59ರ ಕೋರ್ಟ್‌ನಲ್ಲಿ ಇಂದು ಅವರ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ. ಸುಪ್ರೀಂ ಕೋರ್ಟ್ ಆದೇಶದ ಬಳಿಕ ಇದೇ ಮೊದಲ ಬಾರಿಗೆ ಪವಿತ್ರಾ ಗೌಡ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದಾರೆ.
ಪವಿತ್ರಾ ಗೌಡ ಅವರ ಜೊತೆಗೆ ಪ್ರಕರಣದ ಮತ್ತಿಬ್ಬರು ಆರೋಪಿಗಳ ಜಾಮೀನು ಅರ್ಜಿಯೂ ಇಂದು ವಿಚಾರಣೆಗೆ ಬರಲಿದೆ.

