Home Blog Page 5

Gadag Breaking: ಐತಿಹಾಸಿಕ ಲಕ್ಕುಂಡಿಯಲ್ಲಿ ಉತ್ಖನನ ವೇಳೆ 3 ಹೆಡೆಯ ನಾಗರ ಕಲ್ಲು ಪತ್ತೆ!

0

ಗದಗ: ಐತಿಹಾಸಿಕ ಲಕ್ಕುಂಡಿಯಲ್ಲಿ ನಡೆಯುತ್ತಿರುವ ಉತ್ಖನನ ಕಾರ್ಯದಲ್ಲಿ ಮಹತ್ವದ ಕಲ್ಲು ಪತ್ತೆಯಾಗಿದೆ. 12ನೇ ದಿನದ ಉತ್ಖನನ ವೇಳೆ ಮೂರು ಹಡೆಯ ನಾಗರ ಕಲ್ಲು ಪತ್ತೆಯಾಗಿದ್ದು, ಕುತೂಹಲ ಮತ್ತಷ್ಟು ಹೆಚ್ಚಿಸಿದೆ.

ಲಕ್ಕುಂಡಿಯ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಉತ್ಖನನ ಕಾರ್ಯ ಮುಂದುವರಿದಿದ್ದು, ಈ ವೇಳೆ ಪ್ರಾಚೀನ ನಾಗರ ಕಲ್ಲುಗಳು ಪತ್ತೆಯಾಗಿವೆ. ಪ್ರತಿದಿನವೂ ಒಂದಿಲ್ಲೊಂದು ಪ್ರಾಚ್ಯಾವಶೇಷಗಳು ಗೋಚರವಾಗುತ್ತಿದ್ದು,

ಉತ್ಖನನ ಕಾರ್ಯ ದಿನದಿಂದ ದಿನಕ್ಕೆ ಹೆಚ್ಚಿನ ಕುತೂಹಲಕ್ಕೆ ಕಾರಣವಾಗುತ್ತಿದೆ. ಉತ್ಖನನ ಮುಂದುವರಿದಂತೆ ಇನ್ನಷ್ಟು ಮಹತ್ವದ ಐತಿಹಾಸಿಕ ವಸ್ತುಗಳು ಸಿಗುವ ನಿರೀಕ್ಷೆ ವ್ಯಕ್ತವಾಗಿದೆ.

Gold Rate: ಚಿನ್ನದ ಬೆಲೆಯಲ್ಲಿ ಭಾರೀ ಹೆಚ್ಚಳ: ಒಂದೇ ದಿನಕ್ಕೆ 11,770 ರೂಪಾಯಿ ಏರಿಕೆ ಕಂಡ ಬಂಗಾರ..!

0

ಬೆಂಗಳೂರು: ಚಿನ್ನದ ದರ ಆಕಾಶಕ್ಕೇರುತ್ತಿದ್ದು, ದಿನದಿಂದ ದಿನಕ್ಕೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಗುರುವಾರದಂದು 24 ಕ್ಯಾರೆಟ್ ಚಿನ್ನದ ಬೆಲೆ ಗ್ರಾಂಗೆ 17,885 ರೂಪಾಯಿಗೆ ಏರಿಕೆಯಾಗಿದೆ. 10 ಗ್ರಾಂ ಚಿನ್ನದ ಬೆಲೆ 1,78,850 ರೂ. ತಲುಪಿದ್ದು, ಏಕಕಾಲದಲ್ಲಿ 10 ಗ್ರಾಂಗೆ 11,770 ರೂ. ಏರಿಕೆಯಾಗಿದೆ.

ನಿನ್ನೆ 10 ಗ್ರಾಂ ಚಿನ್ನದ ಬೆಲೆ 5,000 ರೂ. ಹೆಚ್ಚಾಗಿದ್ದುದನ್ನು ಗಮನಿಸಿದರೆ, ಇಂದು ಹೆಚ್ಚಿನ ಏರಿಕೆ ದಾಖಲಾಗಿದೆ. 22 ಕ್ಯಾರೆಟ್ ಚಿನ್ನದ 1 ಗ್ರಾಂ ಬೆಲೆ 16,395 ರೂ. ಇದ್ದರೆ, 10 ಗ್ರಾಂ ಬೆಲೆ 1,63,950 ರೂ. ತಲುಪಿದೆ.

ಬೆಳ್ಳಿ ಮಾರುಕಟ್ಟೆ ಕೂಡ ಉದ್ದೀಪನಗೊಂಡಿದೆ. ಇಂದು ಬೆಳ್ಳಿ ಬೆಲೆ 30 ರೂ. ಹೆಚ್ಚಳದೊಂದಿಗೆ 1 ಗ್ರಾಂಗೆ 410 ರೂ., 1 ಕೆಜಿ ಬೆಲೆ 4,10,000 ರೂ. ಆಗಿದೆ.

ಚಿನ್ನಬೆಳ್ಳಿ ಬೆಲೆ ಏರಿಕೆಗೆ ಪ್ರಮುಖ ಕಾರಣಗಳಾಗಿ, ಚಿಲ್ಲರೆ ಬೇಡಿಕೆಯು ಹೆಚ್ಚಳ, ಡಾಲರ್ ದುರ್ಬಲತೆ ಮತ್ತು ಭೌಗೋಳಿಕ ರಾಜಕೀಯ ಅನಿಶ್ಚಿತತೆಗಳು ನೆರೆದಿವೆ. ನೋಟಿಗೆ ಸೇರಿರುವ ಜಿಎಸ್ಟಿ ಹೊರತುಪಡಿಸಿ ಬೆಲೆ ಮಳಿಗೆಗಳಲ್ಲಿ ಸ್ವಲ್ಪ ವ್ಯತ್ಯಾಸ ಕಾಣಬಹುದು.

IND vs NZ: ಮೊದಲ ಎಸೆತಗಳಲ್ಲೇ ವಿಶ್ವ ದಾಖಲೆ ಬರೆದ ಮ್ಯಾಟ್ ಹೆನ್ರಿ!

0

ವಿಶಾಖಪಟ್ಟಣ: ಭಾರತ ವಿರುದ್ಧ ನಡೆದ ನಾಲ್ಕನೇ ಟಿ20 ಪಂದ್ಯದಲ್ಲಿ ನ್ಯೂಝಿಲೆಂಡ್ ವೇಗಿ ಮ್ಯಾಟ್ ಹೆನ್ರಿ ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಪಂದ್ಯದ ಮೊದಲ ಓವರ್‌ನ ಮೊದಲ ಎಸೆತದಲ್ಲೇ ಅಭಿಷೇಕ್ ಶರ್ಮಾ ವಿಕೆಟ್ ಕಬಳಿಸುವ ಮೂಲಕ ಈ ಸಾಧನೆ ಮಾಡಿದ್ದಾರೆ.

ಟಿ20 ಕ್ರಿಕೆಟ್ ಇತಿಹಾಸದಲ್ಲೇ ಒಂದೇ ಸರಣಿಯಲ್ಲಿ ಎರಡು ಪಂದ್ಯಗಳಲ್ಲಿ, ಇನಿಂಗ್ಸ್‌ನ ಮೊದಲ ಎಸೆತದಲ್ಲೇ ಬ್ಯಾಟರ್‌ಗಳನ್ನು ಔಟ್ ಮಾಡಿದ ಮೊದಲ ಬೌಲರ್ ಎಂಬ ವಿಶ್ವ ದಾಖಲೆಯನ್ನು ಮ್ಯಾಟ್ ಹೆನ್ರಿ ತಮ್ಮದಾಗಿಸಿಕೊಂಡಿದ್ದಾರೆ. ಇದಕ್ಕೂ ಮೊದಲು, ಜನವರಿ 25ರಂದು ನಡೆದ ಮೂರನೇ ಟಿ20 ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಅವರನ್ನು ಸಹ ಮೊದಲ ಎಸೆತದಲ್ಲೇ ಔಟ್ ಮಾಡಿದ್ದರು.

ಈ ಮೂಲಕ ಒಂದೇ ಸರಣಿಯಲ್ಲಿ ಇಬ್ಬರು ಆರಂಭಿಕ ಬ್ಯಾಟರ್‌ಗಳನ್ನು ಮೊದಲ ಎಸೆತದಲ್ಲೇ ಔಟ್ ಮಾಡಿದ ಐಸಿಸಿ ಪೂರ್ಣ ಸದಸ್ಯ ರಾಷ್ಟ್ರದ ಮೊದಲ ಬೌಲರ್ ಎಂಬ ಗೌರವಕ್ಕೂ ಮ್ಯಾಟ್ ಹೆನ್ರಿ ಪಾತ್ರರಾದರು.

ಪಂದ್ಯದ ವಿಚಾರಕ್ಕೆ ಬಂದರೆ, ಮೊದಲು ಬ್ಯಾಟಿಂಗ್ ಮಾಡಿದ ನ್ಯೂಝಿಲೆಂಡ್ ತಂಡ 20 ಓವರ್‌ಗಳಲ್ಲಿ 215 ರನ್‌ಗಳನ್ನು ಕಲೆಹಾಕಿತು. ಈ ದೊಡ್ಡ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾ 165 ರನ್‌ಗಳಿಗೆ ಆಲೌಟ್ ಆಯಿತು. ಪರಿಣಾಮ ನಾಲ್ಕನೇ ಟಿ20 ಪಂದ್ಯದಲ್ಲಿ ಕಿವೀಸ್ ಪಡೆ 50 ರನ್‌ಗಳ ಭರ್ಜರಿ ಜಯ ದಾಖಲಿಸಿತು.

ಸುಳ್ವಾಡಿ ವಿಷಪ್ರಸಾದ ಆರೋಪಿ ಇಮ್ಮಡಿ ಮಹದೇವಸ್ವಾಮಿ‌ಗೆ ಮಹದೇಶ್ವರ ಬೆಟ್ಟ ಪ್ರವೇಶ ನಿಷೇಧ

0

ಚಾಮರಾಜನಗರ: ಸುಳ್ವಾಡಿ ವಿಷಪ್ರಸಾದ ದುರಂತ ಪ್ರಕರಣದ ಆರೋಪಿ ಇಮ್ಮಡಿ ಮಹದೇವಸ್ವಾಮಿ ಅವರಿಗೆ ಮಲೆ ಮಹದೇಶ್ವರ ಬೆಟ್ಟ ಪ್ರವೇಶವನ್ನು ನಿಷೇಧಿಸಿ ಆಡಳಿತ ಕಠಿಣ ಕ್ರಮ ಕೈಗೊಂಡಿದೆ. ಹನೂರು ತಹಸೀಲ್ದಾರ್ ಚೈತ್ರಾ ಈ ಕುರಿತು ಆದೇಶ ಹೊರಡಿಸಿದ್ದಾರೆ.

ಜಾಮೀನಿನ ಮೇಲೆ ಹೊರಬಂದಿರುವ ಇಮ್ಮಡಿ ಮಹದೇವಸ್ವಾಮಿ, ಸಾಲೂರು ಮಠದಲ್ಲಿ ನಡೆಯಲಿರುವ ಪಟ್ಟದ ಮಹದೇವಸ್ವಾಮೀಜಿಯ 32ನೇ ಸಂಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ಮುಂದಾಗಿದ್ದರು. ಆದರೆ, ಆರೋಪಿ ಭಾಗವಹಿಸಿದರೆ ತೀವ್ರ ಪ್ರತಿಭಟನೆ ನಡೆಸುವುದಾಗಿ ಸಂತ್ರಸ್ತರು ಹಾಗೂ ದಲಿತ ಸಂಘಟನೆಗಳು ಎಚ್ಚರಿಕೆ ನೀಡಿದ್ದವು.

ಸಾಲೂರು ಮಠದ ಆವರಣ ಪ್ರವೇಶಕ್ಕೆ ಅವಕಾಶ ನೀಡಬಾರದು ಎಂದು ಪೊನ್ನಾಚಿ ಮಹದೇವಸ್ವಾಮಿ ಮನವಿ ಸಲ್ಲಿಸಿದ್ದೂ, ಪರಿಸ್ಥಿತಿಯನ್ನು ಮತ್ತಷ್ಟು ಗಂಭೀರಗೊಳಿಸಿತು. ಇಮ್ಮಡಿ ಮಹದೇವಸ್ವಾಮಿ ಸಾಲೂರು ಮಠದ ಮಹದೇಶ್ವರಸ್ವಾಮಿ ಎಜುಕೇಶನ್ ಸೊಸೈಟಿಯ ಸದಸ್ಯರಾಗಿದ್ದರೂ, ಅವರ ಹಾಜರಾತಿಯಿಂದ ಶಾಂತಿ ಭಂಗ ಮತ್ತು ಗಲಭೆ ಉಂಟಾಗುವ ಸಾಧ್ಯತೆ ಹೆಚ್ಚಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಮುನ್ನೆಚ್ಚರಿಕಾ ಕ್ರಮವಾಗಿ ಪ್ರವೇಶ ನಿಷೇಧ ಹೇರಿದೆ.

ಇಂದಿನಿಂದ ಮುಂದಿನ ಆದೇಶದವರೆಗೆ ಇಮ್ಮಡಿ ಮಹದೇವಸ್ವಾಮಿ ಅವರಿಗೆ ಮಲೆ ಮಹದೇಶ್ವರ ಬೆಟ್ಟ ಪ್ರವೇಶ ಸಂಪೂರ್ಣ ನಿರ್ಬಂಧಿಸಲಾಗಿದೆ.

ಲಾರಿ ಹರಿದು ಪಾದಚಾರಿ ಸಾವು: 32 ವರ್ಷಗಳ ಬಳಿಕ ಚಾಲಕನ ಬಂಧನ

0

ದಾವಣಗೆರೆ: ಲಾರಿ ಹರಿದು ಪಾದಚಾರಿ ಸಾವನ್ನಪ್ಪಿದ ಪ್ರಕರಣದಲ್ಲಿ, ಅಪಘಾತಕ್ಕೆ ಕಾರಣನಾಗಿದ್ದ ಚಾಲಕನನ್ನು 32 ವರ್ಷಗಳ ಬಳಿಕ ಜಗಳೂರು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಹಾಸನ ಜಿಲ್ಲೆಯ ಅರಸೀಕೆರೆ ನಿವಾಸಿ ಗಂಗಾಧರಪ್ಪ (67) ಎಂದು ಗುರುತಿಸಲಾಗಿದೆ. ಈತ 1994ರಲ್ಲಿ ದಾವಣಗೆರೆ ಜಿಲ್ಲೆಯ ಕಲ್ಲೇದೇವಪುರ ಸಮೀಪದ ರಾಷ್ಟ್ರೀಯ ಹೆದ್ದಾರಿ–13ರಲ್ಲಿ ನಡೆದ ಅಪಘಾತದಲ್ಲಿ ಪಾದಚಾರಿಯೊಬ್ಬರ ಸಾವಿಗೆ ಕಾರಣನಾಗಿದ್ದಾನೆ.

ಅಪಘಾತದ ಬಳಿಕ ಆರೋಪಿಯು ಇಷ್ಟು ವರ್ಷಗಳ ಕಾಲ ತಲೆಮರೆಸಿಕೊಂಡಿದ್ದ. ಪ್ರಕರಣವನ್ನು ಪುನರ್ ಪರಿಶೀಲಿಸಿದ ಜಗಳೂರು ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇನ್ಸ್ಪೆಕ್ಟರ್ ಸಿದ್ದರಾಮಯ್ಯ ಹಾಗೂ ಎಸ್ಐ ವೆಂಕಟೇಶ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿ, ಜಗಳೂರು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ನ್ಯಾಯಾಲಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಶಿವಮೊಗ್ಗ: ಮಂಗನ ಕಾಯಿಲೆಗೆ ಬಲಿಯಾದ 29 ವರ್ಷದ ಯುವಕ!

0

ಶಿವಮೊಗ್ಗ: ಮಂಗನ ಕಾಯಿಲೆ ಸೋಂಕಿನಿಂದ ಬಳಲುತ್ತಿದ್ದ ತೀರ್ಥಹಳ್ಳಿ ತಾಲೂಕಿನ ಯುವಕನೊಬ್ಬ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.

ಮೃತನನ್ನು ಸಸಿ ತೋಟದ ನಿವಾಸಿ ಕಿಶೋರ್ (29) ಎಂದು ಗುರುತಿಸಲಾಗಿದೆ. ಜನವರಿ 20ರಿಂದ ಕಿಶೋರ್ ತೀವ್ರ ಜ್ವರದಿಂದ ಬಳಲುತ್ತಿದ್ದು, ಆರಂಭದಲ್ಲಿ ಸ್ಥಳೀಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ದಿನದಿಂದ ದಿನಕ್ಕೆ ಜ್ವರದ ತೀವ್ರತೆ ಹೆಚ್ಚಾಗಿತ್ತು.

ರೋಗಲಕ್ಷಣಗಳು ಗಂಭೀರಗೊಂಡ ಹಿನ್ನೆಲೆಯಲ್ಲಿ, ಜನವರಿ 25ರಂದು ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿ ಜಿಲ್ಲೆಯ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ತಜ್ಞ ವೈದ್ಯರ ತಂಡ ಸತತ ಚಿಕಿತ್ಸೆ ನೀಡಿದರೂ, ಸೋಂಕಿನ ತೀವ್ರತೆಯಿಂದಾಗಿ ಕಿಶೋರ್ ಪ್ರಾಣ ಕಳೆದುಕೊಂಡಿದ್ದಾರೆ.

ಅಧಿಕಾರಿ ಮೇಲೆ ಸಿಎಂ ಶಿಸ್ತು ಕ್ರಮದ ಎಚ್ಚರಿಕೆ: ರಾಜೀನಾಮೆಗೆ ಮುಂದಾಗಿದ್ದ ಸಚಿವ ಕೆ.ಜೆ. ಜಾರ್ಜ್?

0

ಬೆಂಗಳೂರು: ಇಂಧನ ಸಚಿವ ಕೆಜೆ ಜಾರ್ಜ್ ರಾಜೀನಾಮೆಗೆ ಮುಂದಾಗಿದ್ದ ವಿಚಾರ ಇದೀಗ ಬೆಳಕಿಗೆ ಬಂದಿದೆ. ಸುಮಾರು ಒಂದು ವಾರದ ಹಿಂದೆ ಕಾವೇರಿ ನಿವಾಸದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದ ಕೆಜೆ ಜಾರ್ಜ್, ಹಿರಿಯ ಐಎಎಸ್ ಅಧಿಕಾರಿ ಪಂಕಜ್ ಕುಮಾರ್ ಪಾಂಡೆ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ವಿಚಾರಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದರು ಎನ್ನಲಾಗಿದೆ.

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕೆಪಿಟಿಸಿಎಲ್) ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿರುವ ಪಂಕಜ್ ಕುಮಾರ್ ಪಾಂಡೆ ವಿರುದ್ಧ ಕ್ರಮ ಕೈಗೊಳ್ಳುವುದಾದರೆ, ನಾನೇ ರಾಜೀನಾಮೆ ನೀಡುತ್ತೇನೆ ಎಂದು ಜಾರ್ಜ್ ಅವರು ಸಿಎಂ ಮುಂದೆ ಹೇಳಿದ್ದರು ಎಂದು ತಿಳಿದುಬಂದಿದೆ. ಜಾರ್ಜ್ ರಾಜೀನಾಮೆ ಮಾತು ಆಡುತ್ತಿದ್ದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಮಾಧಾನ ಪಡಿಸಿ ಕಳುಹಿಸಿದ್ದರು ಎನ್ನಲಾಗಿದೆ.

ಕೆಪಿಟಿಸಿಎಲ್ ಎಂಡಿ ಜೊತೆಗೆ ಕರ್ನಾಟಕ ಸರ್ಕಾರದ ಪ್ರಧಾನ ಕಾರ್ಯದರ್ಶಿ (ಇ-ಆಡಳಿತ) ಹುದ್ದೆಯನ್ನೂ ಹೊಂದಿರುವ ಪಂಕಜ್ ಕುಮಾರ್ ಪಾಂಡೆ ವಿರುದ್ಧ ಹಲವು ದೂರುಗಳು ಸರ್ಕಾರಕ್ಕೆ ಬಂದಿದ್ದವು. ಈ ಹಿನ್ನೆಲೆಯಲ್ಲಿ ಸ್ಪಷ್ಟನೆ ಪಡೆಯಲು ಮುಖ್ಯಮಂತ್ರಿ ಕಚೇರಿಯಿಂದ ಅವರನ್ನು ಭೇಟಿಗೆ ಆಹ್ವಾನಿಸಲಾಗಿತ್ತು.

ಆದರೆ ಸಿಎಂ ಕಚೇರಿಯಿಂದ ಅಧಿಕೃತ ಮಾಹಿತಿ ತಲುಪಿದ್ದರೂ ಸಹ ಪಂಕಜ್ ಕುಮಾರ್ ಪಾಂಡೆ ಅವರು ಮುಖ್ಯಮಂತ್ರಿಗಳನ್ನು ಭೇಟಿ ಮಾಡದೇ ನಿರ್ಲಕ್ಷ್ಯ ವಹಿಸಿದ್ದರು. ಹಿರಿಯ ಅಧಿಕಾರಿಯ ಈ ನಡೆಗೆ ಮುಖ್ಯಮಂತ್ರಿ ಕಚೇರಿ ಗಂಭೀರವಾಗಿ ಪ್ರತಿಕ್ರಿಯಿಸಿ,

ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಮೂಲಕ ಪಾಂಡೆ ಅವರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿತ್ತು. ‘ನೋಟಿಸ್ ನೀಡಿದ ದಿನವೇ ಲಿಖಿತ ವಿವರಣೆ ನೀಡಬೇಕು’ ಎಂಬ ಕಟ್ಟುನಿಟ್ಟಿನ ಆದೇಶವನ್ನೂ ನೀಡಲಾಗಿತ್ತು. ಸರ್ಕಾರದ ಈ ಕ್ರಮಕ್ಕೆ ಇಂಧನ ಸಚಿವ ಕೆಜೆ ಜಾರ್ಜ್ ಅಸಮಾಧಾನಗೊಂಡಿದ್ದರು ಎನ್ನಲಾಗುತ್ತಿದೆ.

ನಮ್ಮ ಸರ್ಕಾರದ ವಿಶಿಷ್ಟ ಲಕ್ಷಣವೆಂದರೆ ಸುಧಾರಣೆ, ಕಾರ್ಯಕ್ಷಮತೆ ಮತ್ತು ಬದಲಾವಣೆ: ಪ್ರಧಾನಿ ಮೋದಿ

0

ನವದೆಹಲಿ: ಸಂಸತ್ತಿನ ಬಜೆಟ್ ಅಧಿವೇಶನ ಆರಂಭಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಗುರುವಾರ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದರು. ನಮ್ಮ ಸರ್ಕಾರದ ವಿಶಿಷ್ಟ ಲಕ್ಷಣವೇ ಸುಧಾರಣೆ, ಕಾರ್ಯಕ್ಷಮತೆ ಹಾಗೂ ಪರಿವರ್ತನೆ ಎಂದು ಹೇಳಿದ ಪ್ರಧಾನಿ, ಈಗ ದೇಶವು “ಸುಧಾರಣಾ ಎಕ್ಸ್‌ಪ್ರೆಸ್‌”ನಲ್ಲಿ ಸಾಗುತ್ತಿದೆ ಎಂದು ಅಭಿಪ್ರಾಯಪಟ್ಟರು.

ರಾಷ್ಟ್ರಪತಿ ಭಾಷಣವನ್ನು ಉಲ್ಲೇಖಿಸಿದ ಪ್ರಧಾನಿ ಮೋದಿ, ಆ ಭಾಷಣವು 140 ಕೋಟಿ ಭಾರತೀಯರ ವಿಶ್ವಾಸದ ಪ್ರತಿಬಿಂಬವಾಗಿದ್ದು, ಅವರ ಸಾಮರ್ಥ್ಯ ಮತ್ತು ಆಕಾಂಕ್ಷೆಗಳ ಸ್ಪಷ್ಟ ಚಿತ್ರಣವಾಗಿದೆ ಎಂದು ಹೇಳಿದರು. ವಿಶೇಷವಾಗಿ ಯುವಜನತೆಯ ಆಶಯಗಳಿಗೆ ಭಾಷಣದಲ್ಲಿ ಹೆಚ್ಚಿನ ಒತ್ತು ನೀಡಲಾಗಿದೆ ಎಂದು ಅವರು ಹೇಳಿದರು.

ರಾಷ್ಟ್ರಪತಿ ಸಂಸದರಿಗೆ ಮಾರ್ಗದರ್ಶನ ನೀಡುವಂತೆ ಹಲವಾರು ಪ್ರಮುಖ ವಿಷಯಗಳನ್ನು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ್ದಾರೆ. ಎಲ್ಲಾ ಸಂಸದರು ಈ ಮಾರ್ಗದರ್ಶನವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ ಎಂಬ ವಿಶ್ವಾಸ ನನಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.

ಇದರ ನಡುವೆ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಲೋಕಸಭೆಯಲ್ಲಿ ದೇಶದ ಆರ್ಥಿಕ ಸಮೀಕ್ಷೆಯನ್ನು ಮಂಡಿಸಲಿದ್ದಾರೆ. ಈ ಸಮೀಕ್ಷೆ ದೇಶದ ಆರ್ಥಿಕ ಸ್ಥಿತಿಯ ಸಮಗ್ರ ಅವಲೋಕನವನ್ನು ನೀಡುವ ಜೊತೆಗೆ, ಕೇಂದ್ರ ಬಜೆಟ್‌ಗೂ ಮುನ್ನ ಪ್ರಮುಖ ಮಾಹಿತಿಯನ್ನು ಒದಗಿಸಲಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿ 1ರಂದು ಲೋಕಸಭೆಯಲ್ಲಿ 2026ರ ಕೇಂದ್ರ ಬಜೆಟ್ ಮಂಡಿಸಲಿದ್ದಾರೆ.

ಒಂದೇ ಮಹಿಳೆಯ ಜತೆಗೆ ಇಬ್ಬರ ಅನೈತಿಕ ಸಂಬಂಧ: ಚಾಕುವಿನಿಂದ ಇರಿದು ಬರ್ಬರ ಹತ್ಯೆ

0

ಹಾಸನ, ಜ.29: ಹಾಸನದಲ್ಲಿ ಅನೈತಿಕ ಸಂಬಂಧ ವಿಚಾರವಾಗಿ ಭೀಕರ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ನಗರದ ಕೆ.ಆರ್.ಪುರಂ ಬಡಾವಣೆಯಲ್ಲಿ ಅಡುಗೆ ಗುತ್ತಿಗೆದಾರ ಆನಂದ್ (48) ಅವರನ್ನು ಧರ್ಮೇಂದ್ರ ಎಂಬ ವ್ಯಕ್ತಿ ಐದಾರು ಬಾರಿ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದಾನೆ.

ಜ.28ರ ತಡರಾತ್ರಿ ನಡೆದ ಈ ಘಟನೆ ಹಾಸನ ನಗರವನ್ನು ಬೆಚ್ಚಿಬೀಳಿಸಿದೆ. ಆನಂದ್ ಮತ್ತು ಧರ್ಮೇಂದ್ರ ಇಬ್ಬರೂ ಒಂದೇ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದರು ಎನ್ನಲಾಗಿದೆ. ಇದೇ ಕಾರಣಕ್ಕೆ ಇಬ್ಬರ ನಡುವೆ ಆಗಾಗ ಜಗಳ ನಡೆಯುತ್ತಿತ್ತು.

ಘಟನೆ ನಡೆದ ದಿನ ಇಬ್ಬರೂ ಬಾರ್‌ನಲ್ಲಿ ಭೇಟಿಯಾಗಿ ಮಹಿಳೆಯ ವಿಷಯವಾಗಿ ಮಾತಿನ ಚಕಮಕಿ ನಡೆದಿದೆ. ನಂತರ ಆನಂದ್ ಮನೆಗೆ ತೆರಳಿದ್ದರೂ, ಧರ್ಮೇಂದ್ರ ಮತ್ತೆ ಫೋನ್ ಮಾಡಿ ಕರೆಸಿಕೊಂಡಿದ್ದಾನೆ. ಆನಂದ್ ಬಂದ ಕೂಡಲೇ ಇಬ್ಬರ ನಡುವೆ ಮತ್ತೆ ಗಲಾಟೆ ಉಂಟಾಗಿದ್ದು, ಕುಡಿದ ಅಮಲಿನಲ್ಲಿ ಧರ್ಮೇಂದ್ರ ಚಾಕುವಿನಿಂದ ದಾಳಿ ನಡೆಸಿದ್ದಾನೆ.

ಧರ್ಮೇಂದ್ರ ಆ ಮಹಿಳೆಯೊಂದಿಗೆ ಕಳೆದ ಎಂಟು ವರ್ಷಗಳಿಂದ ಸಂಬಂಧ ಹೊಂದಿದ್ದನು ಎನ್ನಲಾಗಿದೆ. ಆನಂದ್ ಜೊತೆಗಿನ ಸಂಬಂಧ ಬೆಳಕಿಗೆ ಬಂದ ಬಳಿಕ ಅವರ ನಡುವೆ ವೈಷಮ್ಯ ತೀವ್ರಗೊಂಡಿತ್ತು. ಕೊನೆಗೆ ಆ ವೈಷಮ್ಯ ಕೊಲೆಯಲ್ಲಿ ಅಂತ್ಯಗೊಂಡಿದೆ.

ತೀವ್ರ ರಕ್ತಸ್ರಾವದಿಂದ ಆನಂದ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕೊಲೆ ಮಾಡಿದ ನಂತರ ಧರ್ಮೇಂದ್ರ ಸ್ಥಳದಿಂದ ಪರಾರಿಯಾಗಿದ್ದು, ಪೊಲೀಸರು ಆರೋಪಿಯ ಬಂಧನಕ್ಕಾಗಿ ಬಲೆ ಬೀಸಿದ್ದಾರೆ. ಈ ಕುರಿತು ಹಾಸನ ನಗರ ಕೆ.ಆರ್.ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಿಗರೇಟ್ ಸೇದಲು ಬೆಂಕಿಪೊಟ್ಟಣ ಕೊಟ್ಟಿಲ್ಲವೆಂದು ಕೊಲೆ: ಆರೋಪಿಗಳು ಅರೆಸ್ಟ್‌..!

0

ಬೆಂಗಳೂರು ಗ್ರಾಮಾಂತರ: ಸಿಗರೇಟ್ ಸೇದಲು ಬೆಂಕಿಪಟ್ಟಣ ನೀಡಲು ನಿರಾಕರಿಸಿದ್ದಕ್ಕೆ ಯುವಕನೊಬ್ಬನನ್ನು ಹಲ್ಲೆ ನಡೆಸಿ ಕೊಲೆ ಮಾಡಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಬಾಶೆಟ್ಟಹಳ್ಳಿಯ ವಿನಾಯಕ ನಗರದಲ್ಲಿ ನಡೆದಿದೆ.

ಹೊಸ ವರ್ಷದ ಸಂಭ್ರಮದಲ್ಲಿ ಪಾರ್ಟಿ ಮಾಡುತ್ತಿದ್ದ ವೇಳೆ ನಡೆದುಕೊಂಡು ಹೋಗುತ್ತಿದ್ದ ಸುಶಾಂತ್ ಎಂಬ ಯುವಕನ ಬಳಿ ಆರೋಪಿಗಳು ಬೆಂಕಿಪಟ್ಟಣ ಕೇಳಿದ್ದಾರೆ. ಸುಶಾಂತ್ “ಇಲ್ಲ” ಎಂದು ಹೇಳಿ ತನ್ನ ಪಾಡಿಗೆ ತಾನು ಹೋಗುತ್ತಿದ್ದಾಗ, ತಂದುಕೊಡು ಎಂದು ಕೂಗುತ್ತಾ ಅವನ ಮೇಲೆ ಹಲ್ಲೆ ನಡೆಸಿದ್ದಾರೆ.

ಆರೋಪಿಗಳು ಸುಶಾಂತ್‌ನನ್ನು ಅಟ್ಟಾಡಿಸಿಕೊಂಡು ಹಲ್ಲೆ ನಡೆಸಿ, ಎರಡನೇ ಮಹಡಿಯ ಮೇಲಿಂದ ಕೆಳಕ್ಕೆ ತಳ್ಳಿದ್ದು, ಪರಿಣಾಮವಾಗಿ ಸುಶಾಂತ್ ಮೃತಪಟ್ಟಿದ್ದಾನೆ. ಕೊಲೆ ನಡೆಸಿ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.

ಒಬ್ಬ ಅಪ್ರಾಪ್ತ ಸೇರಿದಂತೆ ಒಟ್ಟು ನಾಲ್ವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿತ ಆರೋಪಿಗಳಲ್ಲಿ ಉಜ್ಬಲ್ ಪ್ರಸಾದ್, ಪ್ರಿನ್ಸ್ ಹಾಗೂ ಸೂರಜ್ ರಾಮ್ ಸೇರಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ತನಿಖೆಯನ್ನು ಪೊಲೀಸರು ಕೈಗೊಂಡಿದ್ದಾರೆ.

error: Content is protected !!