HomeGadag Newsಕರ್ತವ್ಯ ಮರೆತರೆ ಕಾನೂನು ಕ್ರಮ ಅನಿವಾರ್ಯ: ನ್ಯಾ. ಕೆ.ಎನ್. ಫಣೀಂದ್ರ

ಕರ್ತವ್ಯ ಮರೆತರೆ ಕಾನೂನು ಕ್ರಮ ಅನಿವಾರ್ಯ: ನ್ಯಾ. ಕೆ.ಎನ್. ಫಣೀಂದ್ರ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಗದಗ: ಸರ್ಕಾರಿ ಕಚೇರಿಗಳಲ್ಲಿ ಬರೆಯಲಾಗಿರುವ ‘ಸರ್ಕಾರಿ ಕೆಲಸ ದೇವರ ಕೆಲಸ’ ಎಂಬ ವಾಕ್ಯ ಕೇವಲ ಗೋಡೆಯ ಮೇಲಿನ ಫಲಕಕ್ಕೆ ಸೀಮಿತವಾಗಬಾರದು. ಸಾರ್ವಜನಿಕರಿಗೆ ಸೇವೆ ಸಲ್ಲಿಸುವುದು ಹಾಗೂ ಅವರ ಸಮಸ್ಯೆಗಳಿಗೆ ಕಾನೂನುಬದ್ಧವಾಗಿ ಸ್ಪಂದಿಸುವುದು ಪ್ರತಿಯೊಬ್ಬ ಸರ್ಕಾರಿ ನೌಕರನ ಮೊದಲ ಆದ್ಯ ಕರ್ತವ್ಯವಾಗಿದೆ ಎಂದು ಕರ್ನಾಟಕ ಉಪಲೋಕಾಯುಕ್ತ ನ್ಯಾ. ಕೆ.ಎನ್. ಫಣೀಂದ್ರ ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಾರ್ವಜನಿಕರ ದೂರುಗಳ ವಿಚಾರಣೆ ಹಾಗೂ ಪ್ರಕರಣಗಳ ವಿಲೇವಾರಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದ ಸುಮಾರು 8 ಕೋಟಿ ಜನರಿಗೆ ಉತ್ತಮ ಆಡಳಿತ, ಮೂಲಸೌಕರ್ಯ ಹಾಗೂ ಸರ್ಕಾರಿ ಸೇವೆಗಳನ್ನು ಒದಗಿಸುವ ಜವಾಬ್ದಾರಿ ಕೇವಲ ಶೇ.1ರಷ್ಟು ಇರುವ ಸರ್ಕಾರಿ ಕಾರ್ಯಾಂಗದ ಮೇಲಿದೆ. ಈ ಹೊಣೆಗಾರಿಕೆಯನ್ನು ಅಧಿಕಾರಿಗಳು ಪ್ರೀತಿ, ನಿಷ್ಠೆ ಹಾಗೂ ಪ್ರಾಮಾಣಿಕತೆಯಿಂದ ನಿರ್ವಹಿಸಬೇಕು ಎಂದು ಹೇಳಿದರು.

ಕಾನೂನುಬಾಹಿರವಾಗಿ ಕಾರ್ಯನಿರ್ವಹಿಸುವುದು, ಲಂಚ ಪಡೆಯುವುದು ಹಾಗೂ ಭ್ರಷ್ಟಾಚಾರದಲ್ಲಿ ತೊಡಗುವುದು Malfeasance, ಮಾಡಬೇಕಾದ ಕೆಲಸವನ್ನು ಸಮಯಕ್ಕೆ ಮಾಡದೇ ವಿಳಂಬಿಸುವುದು Misfeasance, ಯಾವುದೇ ಕ್ರಮ ಕೈಗೊಳ್ಳದೆ ಅರ್ಜಿಗಳನ್ನು ನಿರ್ಲಕ್ಷಿಸುವುದು Nonfeasance ಆಗಿದ್ದು, ಈ ಮೂರು ರೀತಿಯ ಆಡಳಿತಾತ್ಮಕ ಲೋಪಗಳು ಸರ್ಕಾರದ ಮೇಲಿನ ಸಾರ್ವಜನಿಕರ ವಿಶ್ವಾಸವನ್ನು ಕುಗ್ಗಿಸುತ್ತವೆ. ಆದ್ದರಿಂದ ಇವುಗಳಿಗೆ ಅವಕಾಶ ನೀಡಬಾರದು ಎಂದು ಎಚ್ಚರಿಸಿದರು.

ಸ್ವಾಮಿ ವಿವೇಕಾನಂದರ “ನಾವು ಪ್ರಾಮಾಣಿಕರಾಗಿರುವುದೇ ದೇಶಕ್ಕೆ ಕೊಡುವ ದೊಡ್ಡ ಕೊಡುಗೆ” ಎಂಬ ಸಂದೇಶವನ್ನು ಪ್ರತಿಯೊಬ್ಬ ಸರ್ಕಾರಿ ನೌಕರ ತನ್ನ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸಾರ್ವಜನಿಕರ ಅರ್ಜಿಗಳನ್ನು ಕಾಲಮಿತಿಯೊಳಗೆ ವಿಲೇವಾರಿ ಮಾಡಬೇಕು. ಯಾವುದಾದರೂ ಕಾರಣದಿಂದ ವಿಳಂಬವಾದರೆ ಸೂಕ್ತ ಎಂಡಾರ್ಸ್‌ಮೆಂಟ್ ನೀಡಿ, ಮೇಲ್ಮನವಿ ಸಲ್ಲಿಸುವ ಮಾರ್ಗವನ್ನೂ ತಿಳಿಸಬೇಕು. ಯಾವುದೇ ಒತ್ತಡಕ್ಕೆ ಮಣಿಯದೆ ಸಂವಿಧಾನಬದ್ಧವಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಸೂಚಿಸಿದರು.

ಆಡಳಿತದಲ್ಲಿ ಪಾರದರ್ಶಕತೆಗೆ ಮೊದಲ ಆದ್ಯತೆ ನೀಡಬೇಕು. ಸಹಾನುಭೂತಿಯಿಂದ ಸಾರ್ವಜನಿಕರೊಂದಿಗೆ ವರ್ತಿಸಿ, ಕಾನೂನಿನ ಅನ್ವಯ ಸಮಸ್ಯೆಗಳಿಗೆ ಪರಿಹಾರ ನೀಡಬೇಕು. ವಿನಾಕಾರಣ ವಿಳಂಬ ಮಾಡುವುದೂ ದುರಾಡಳಿತವೇ ಆಗಿದ್ದು, ಅಧಿಕಾರ ದುರ್ಬಳಕೆ ಮಾಡಿಕೊಂಡು ಸಾರ್ವಜನಿಕರನ್ನು ಸತಾಯಿಸುವುದು ಗಂಭೀರ ಅಪರಾಧದ ಸ್ವರೂಪ ಹೊಂದಿದೆ ಎಂದು ಹೇಳಿದರು.

“ಪಶ್ಚಾತ್ತಾಪಕ್ಕಿಂತ ಪ್ರಾಯಶ್ಚಿತ್ತ ದೊಡ್ಡದು” ಎಂಬುದನ್ನು ಅರಿತು ಪ್ರತಿಯೊಬ್ಬ ಅಧಿಕಾರಿಯೂ ಕರ್ತವ್ಯನಿಷ್ಠೆಯಿಂದ ಕಾರ್ಯನಿರ್ವಹಿಸಬೇಕು. ದೇಹಕ್ಕೆ ಮರಣವಿದ್ದರೂ ಆತ್ಮಕ್ಕೆ ಮರಣವಿಲ್ಲ ಎಂಬ ಆಧ್ಯಾತ್ಮಿಕ ಚಿಂತನೆಯೊಂದಿಗೆ ಉತ್ತಮ ಕರ್ಮದ ಮೂಲಕ ಸಮಾಜಕ್ಕೆ ಸೇವೆ ಸಲ್ಲಿಸಬೇಕು ಎಂದು ಅವರು ಅಧಿಕಾರಿಗಳಿಗೆ ಸಲಹೆ ನೀಡಿದರು.

ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರಾಮಾಣಿಕ ಅಧಿಕಾರಿಗಳ ವಿರುದ್ಧ ಸುಳ್ಳು ದೂರುಗಳನ್ನು ನೀಡಬಾರದು. ಲೋಕಾಯುಕ್ತದ ವ್ಯಾಪ್ತಿಗೆ ಬರುವ ಪ್ರಕರಣಗಳ ಬಗ್ಗೆ ಅರಿವು ಹೊಂದಿ ದೂರು ಸಲ್ಲಿಸುವಂತೆ ಮನವಿ ಮಾಡಿದರು.

ಸಭೆಯಲ್ಲಿ ಹಿರಿಯ ನ್ಯಾಯಾಧೀಶರು ಹಾಗೂ ಆಪ್ತ ಕಾರ್ಯದರ್ಶಿ ಕಿರಣ್ ಪಿ.ಎಂ. ಪಾಟೀಲ, ಸುನೀಲಕುಮಾರ್ ಆರ್., ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಎಸ್. ಶಿವನಗೌಡರ, ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷ್ ಕೆ., ಡಿವೈಎಸ್‌ಪಿ ಮಹಾಂತೇಶ ಸಜ್ಜನ, ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಎಸ್.ಟಿ. ಸಿದ್ದಲಿಂಗಪ್ಪ, ಉಪಾಧೀಕ್ಷಕ ಲೋಕೇಶ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು. ಬಳಿಕ ಲೋಕಾಯುಕ್ತ ಕಚೇರಿಯಲ್ಲಿ ದಾಖಲಾಗಿದ್ದ ಸಾರ್ವಜನಿಕರ ದೂರುಗಳ ವಿಚಾರಣೆ ನಡೆಸಿ, ಪ್ರಕರಣಗಳ ವಿಲೇವಾರಿಗೆ ಅಗತ್ಯ ನಿರ್ದೇಶನ ನೀಡಲಾಯಿತು.

“ಸಾರ್ವಜನಿಕರ ಹಕ್ಕುಗಳನ್ನು ರಕ್ಷಿಸುವುದು ಮತ್ತು ಸರ್ಕಾರಿ ಸೌಲಭ್ಯಗಳನ್ನು ಸಮಯಕ್ಕೆ ತಲುಪಿಸುವುದು ಪ್ರತಿಯೊಬ್ಬ ಸರ್ಕಾರಿ ನೌಕರನ ಮೊದಲ ಕರ್ತವ್ಯ. ಕರ್ತವ್ಯ ನಿರ್ಲಕ್ಷ್ಯ, ಉದಾಸೀನತೆ ಹಾಗೂ ಭ್ರಷ್ಟಾಚಾರ ಸಹಿಸುವುದಿಲ್ಲ. ತಪ್ಪಿತಸ್ಥ ಅಧಿಕಾರಿಗಳು ಮತ್ತು ಸಿಬ್ಬಂದಿ ವಿರುದ್ಧ ಲೋಕಾಯುಕ್ತ ಕಾಯ್ದೆಯಡಿ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು.”
– ನ್ಯಾ. ಕೆ.ಎನ್. ಫಣೀಂದ್ರ, ಕರ್ನಾಟಕ ಉಪಲೋಕಾಯುಕ್ತ

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img