HomeGadag Newsಕಸ ನಿರ್ವಹಣೆಯಲ್ಲಿ ಎಡವಿದ ನಗರಸಭೆ

ಕಸ ನಿರ್ವಹಣೆಯಲ್ಲಿ ಎಡವಿದ ನಗರಸಭೆ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಬಳಗಾನೂರ ರಸ್ತೆಯಲ್ಲಿರುವ ಘನ ತ್ಯಾಜ್ಯ (ಕಸ) ನಿರ್ವಹಣಾ ಕೇಂದ್ರಕ್ಕೆ ಗುರುವಾರ ದಿಢೀರ್ ಭೇಟಿ ನೀಡಿದ ಕರ್ನಾಟಕ ಉಪಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ ಅವರು, ಕಸ ನಿರ್ವಹಣೆಯಲ್ಲಿನ ಅವ್ಯವಸ್ಥೆ ಕಂಡು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು, ವೈಜ್ಞಾನಿಕ ಹಾಗೂ ಕಾನೂನುಬದ್ಧ ರೀತಿಯಲ್ಲಿ ತ್ಯಾಜ್ಯ ನಿರ್ವಹಣೆ ನಡೆಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಕೇಂದ್ರದಲ್ಲಿ ಕಸ ಸಂಗ್ರಹ, ವಿಂಗಡಣೆ ಹಾಗೂ ವಿಲೇವಾರಿ ವ್ಯವಸ್ಥೆಯನ್ನು ಪರಿಶೀಲಿಸಿದ ಅವರು, ನಗರದ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಬೇಕು. ಮನೆಮನೆಗಳಿಂದ ಸಂಗ್ರಹವಾಗುವ ಕಸವನ್ನು ಸಮರ್ಪಕವಾಗಿ ವಿಂಗಡಿಸಿ ವೈಜ್ಞಾನಿಕ ರೀತಿಯಲ್ಲಿ ವಿಲೇವಾರಿ ಮಾಡುವ ವ್ಯವಸ್ಥೆಯನ್ನು ಕಡ್ಡಾಯವಾಗಿ ಜಾರಿಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಕಸ ನಿರ್ವಹಣೆಯಲ್ಲಿರುವ ಲೋಪದೋಷಗಳನ್ನು ತಕ್ಷಣ ಸರಿಪಡಿಸಿ, ಸುಧಾರಿತ ವ್ಯವಸ್ಥೆ ರೂಪಿಸಬೇಕು. ಉತ್ತಮ ತ್ಯಾಜ್ಯ ನಿರ್ವಹಣಾ ಪದ್ಧತಿಗಳನ್ನು ಅಳವಡಿಸಿಕೊಳ್ಳಲು ನಗರಸಭೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಮೈಸೂರಿಗೆ ಕಳುಹಿಸಿ ತರಬೇತಿ ನೀಡಬೇಕು. ಅಲ್ಲಿನ ಯಶಸ್ವಿ ಮಾದರಿಯನ್ನು ಅಧ್ಯಯನ ಮಾಡಿ ಗದಗದಲ್ಲೂ ಅನುಷ್ಠಾನಗೊಳಿಸುವಂತೆ ನಿರ್ದೇಶಿಸಿದರು.

ಕಸ ವಿಲೇವಾರಿ ಕೇಂದ್ರದ ಸುತ್ತಮುತ್ತ ಹೊಸ ಬಡಾವಣೆಗಳಿಗೆ ಅವಕಾಶ ನೀಡಬಾರದು. ದುರ್ವಾಸನೆ, ಧೂಳು ಹಾಗೂ ಇತರ ತೊಂದರೆಗಳಿಂದ ರೈತರು, ಸಾರ್ವಜನಿಕರು ಮತ್ತು ರಸ್ತೆ ಸಂಚಾರಿಗಳಿಗೆ ಯಾವುದೇ ಸಮಸ್ಯೆಯಾಗದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಕೇಂದ್ರದಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಗುಣಮಟ್ಟದ ಮಾಸ್ಕ್, ಬೂಟ್, ಕೈಗವಸು ಸೇರಿದಂತೆ ಅಗತ್ಯ ಸುರಕ್ಷತಾ ಸಾಮಗ್ರಿಗಳನ್ನು ಕಡ್ಡಾಯವಾಗಿ ಒದಗಿಸಬೇಕು. ಅವರ ಆರೋಗ್ಯ ತಪಾಸಣೆ ಹಾಗೂ ಆರೋಗ್ಯ ರಕ್ಷಣೆಗೆ ಕೈಗೊಂಡಿರುವ ಕ್ರಮಗಳ ಕುರಿತು ಮಾಹಿತಿ ಪಡೆದು, ಇನ್ನಷ್ಟು ಪರಿಣಾಮಕಾರಿ ವ್ಯವಸ್ಥೆ ರೂಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಪರಿಶೀಲನೆ ವೇಳೆ ಕಳೆದ ಆರು ವರ್ಷಗಳಿಂದ ಕಸ ವಿಲೇವಾರಿ ಯಂತ್ರ ಕೆಟ್ಟು ನಿಂತಿರುವುದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಉಪಲೋಕಾಯುಕ್ತರು, ಇಷ್ಟು ವರ್ಷಗಳಾದರೂ ಯಂತ್ರ ದುರಸ್ತಿಗೊಳಿಸದಿರುವ ಬಗ್ಗೆ ಅಧಿಕಾರಿಗಳನ್ನು ಪ್ರಶ್ನಿಸಿದರು. ತಕ್ಷಣವೇ ಆಧುನಿಕ ತಂತ್ರಜ್ಞಾನ ಹೊಂದಿರುವ ಹೊಸ ಯಂತ್ರ ಖರೀದಿಸಿ ಕಾರ್ಯಾರಂಭ ಮಾಡುವಂತೆ ಸೂಚನೆ ನೀಡಿದರು.

ಕಸ ನಿರ್ವಹಣೆ ಸಂಪೂರ್ಣವಾಗಿ ಪರಿಸರ ಸ್ನೇಹಿ ಹಾಗೂ ಕಾನೂನುಬದ್ಧ ರೀತಿಯಲ್ಲಿ ನಡೆಯಬೇಕು. ಸಾರ್ವಜನಿಕ ಆರೋಗ್ಯ ಮತ್ತು ಪರಿಸರ ಸಂರಕ್ಷಣೆಗೆ ಯಾವುದೇ ಧಕ್ಕೆಯಾಗದಂತೆ ವ್ಯವಸ್ಥೆ ರೂಪಿಸುವುದು ನಗರಸಭೆಯ ಜವಾಬ್ದಾರಿಯಾಗಿದೆ ಎಂದು ಹೇಳಿದರು.

ಪರಿಶೀಲನೆ ವೇಳೆ ಹಿರಿಯ ನ್ಯಾಯಾಧೀಶರು ಹಾಗೂ ಆಪ್ತ ಕಾರ್ಯದರ್ಶಿ ಕಿರಣ್ ಪಿ.ಎಂ. ಪಾಟೀಲ, ಸುನೀಲಕುಮಾರ ಆರ್. ಉಪಸ್ಥಿತರಿದ್ದರು.

ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಎಸ್. ಶಿವನಗೌಡರ, ಉಪವಿಭಾಗಾಧಿಕಾರಿ ಗಂಗಪ್ಪ ಎಂ., ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಸಿದ್ದಲಿಂಗಪ್ಪ, ಉಪಾಧೀಕ್ಷಕ ಲೋಕೆಶ್, ಡಿಯುಡಿಸಿ ಯೋಜನಾ ನಿರ್ದೇಶಕ ಬಸನಗೌಡ ಕೊಟೂರ, ಪರಿಸರ ಅಭಿಯಂತರ ಆನಂದ ಬದಿ, ನಗರಸಭೆ ಆಯುಕ್ತ ರಾಜಾರಾಮ ಪವಾರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

“ಕಸ ನಿರ್ವಹಣೆ ನಿರ್ಲಕ್ಷ್ಯದ ವಿಷಯವಲ್ಲ. ವೈಜ್ಞಾನಿಕ ಹಾಗೂ ಪರಿಸರ ಸ್ನೇಹಿ ವ್ಯವಸ್ಥೆ ಜಾರಿಯಾಗಬೇಕು. ಸಾರ್ವಜನಿಕ ಆರೋಗ್ಯಕ್ಕೆ ಧಕ್ಕೆ ಉಂಟುಮಾಡುವ ಯಾವುದೇ ಲೋಪ ಸಹಿಸಲಾಗುವುದಿಲ್ಲ.”
– ನ್ಯಾ. ಕೆ.ಎನ್. ಫಣೀಂದ್ರ, ಕರ್ನಾಟಕ ಉಪಲೋಕಾಯುಕ್ತ

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img