Home Blog

ಮೋದಿಗೆ ಕರ್ನಾಟಕದ ಜನರ ಮತ ಕೇಳುವ ನೈತಿಕತೆ ಇಲ್ಲ

ವಿಜಯಸಾಕ್ಷಿ ಸುದ್ದಿ, ಗದಗ : ರಾಜ್ಯದ 223 ತಾಲೂಕುಗಳು ಬರದಿಂದ ತತ್ತರಿಸಿವೆ. ಬರ ಪರಿಹಾರ ಕೊಡುವಂತೆ 2023ರ ಸಪ್ಟೆಂಬರ್‌ನಲ್ಲಿ ಸರಕಾರ ಮನವಿ ಮಾಡಿತ್ತು. ಅಕ್ಟೋಬರ್ 4ರಿಂದ 9ರವರೆಗೆ ಕೇಂದ್ರ ತಂಡ ಅಧ್ಯಯನ ನಡೆಸಿ, ವರದಿ ನೀಡಿದರೂ ಪ್ರಧಾನಿ ಮೋದಿ ಪರಿಹಾರ ಕೊಡಲಿಲ್ಲ. ಅಷ್ಟೇ ಅಲ್ಲದೆ, ೨೦೧೯ರಲ್ಲಿ ಭೀಕರ ಪ್ರವಾಹ ಬಂದಾಗ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದರೂ ಆಗಲೂ ಕರ್ನಾಟಕದ ಮುಖ ನೋಡದ ಪ್ರಧಾನಿ ಮೋದಿ ಈಗ ಚುನಾವಣೆ ಪ್ರಚಾರಕ್ಕೆ ಪದೇ ಪದೇ ಕರ್ನಾಟಕ್ಕೆ ಬರುತ್ತಿದ್ದಾರೆ. ಅವರಿಗೆ ಕರ್ನಾಟಕದ ಜನರ ಮತ ಕೇಳುವ ನೈತಿಕತೆ ಇಲ್ಲ ಎಂದು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದರು.

ಜಿಲ್ಲೆಯ ಗಜೇಂದ್ರಗಡದ ಎಪಿಎಂಸಿ ಮೈದಾನದಲ್ಲಿ ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಪರ ಬಹಿರಂಗ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬರ ಪರಿಹಾರ ಕೋರಿ ನಾವು ಸುಪ್ರೀಂಕೋರ್ಟ್ ಮೊರೆ ಹೋಗದಿದ್ದಲ್ಲಿ ಕೇಂದ್ರ ಸರಕಾರ ಕರ್ನಾಟಕದತ್ತ ತಿರುಗಿಯೂ ನೋಡುತ್ತಿರಲಿಲ್ಲ ಎಂದು ಹೇಳಿದರು.

ಸುಪ್ರಿಂಕೋರ್ಟ್ ಮೊರೆ ಹೋಗಿದ್ದರಿಂದಲೇ ಇವತ್ತು ಕೇಂದ್ರದಿಂದ ಬರ ಪರಿಹಾರ ಲಭ್ಯವಾಗುವ ಭರವಸೆ ಮೂಡಿದೆ. ಕೇಂದ್ರ ಸರಕಾರದ ಪರ ವಕೀಲರು ಕೇಳಿದ್ದ ಕಾಲಾವಕಾಶ ಮುಗಿಯುತ್ತಾ ಬಂದಿದ್ದು, ಅನುದಾನ ಬರುವ ನಿರೀಕ್ಷೆಯಿದೆ. ಆದರೆ ಈವರೆಗೂ ಹಣ ಬಂದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಬರ ಪರಿಹಾರ ಮತ್ತು ಕೇಂದ್ರ ಸರಕಾರದ ಮಲತಾಯಿ ಧೋರಣೆ ವಿರುದ್ಧ ಕರ್ನಾಟಕದ 25 ಜನ ಬಿಜೆಪಿ ಸಂಸದರಿದ್ದರೂ ಸಂಸತ್‌ನಲ್ಲಿ ಕರ್ನಾಟಕಕ್ಕೆ ಆಗಿರುವ ಅನ್ಯಾಯದ ಬಗ್ಗೆ ಮಾತಾಡಲಿಲ್ಲ. ಕರ್ನಾಟಕವನ್ನು ಕಡೆಗಣಿಸಿದ ಬಿಜೆಪಿ ಮತ ಹಾಕಬೇಡಿ ಎಂದು ಸಿದ್ದರಾಮಯ್ಯ ವಿನಂತಿಸಿದರು.

ಮಹದಾಯಿ ಯೋಜನೆ ಜಾರಿಗಾಗಿ ರಕ್ತದಲ್ಲಿ ಪತ್ರ ಬರೆದ ಬಸವರಾಜ ಬೊಮ್ಮಾಯಿ, ಎರಡೂವರೆ ವರ್ಷ ಅಧಿಕಾರದಲ್ಲಿದ್ದರೂ ಮಹದಾಯಿ ಯೋಜನೆಯನ್ನು ಜಾರಿ ಮಾಡಲಿಲ್ಲ. ಸದ್ಯ ಕೇಂದ್ರ ಸರಕಾರ ಪರಿಸರ ಇಲಾಖೆ ಸದರಿ ಯೋಜನೆ ಜಾರಿಗೆ ತಡೆ ನೀಡಿದೆ. ರಾಜ್ಯ ಬಿಜೆಪಿ ನಾಯಕರು ಮತ್ತು ಕೇಂದ್ರದ ಬಿಜೆಪಿ ಸರಕಾರ ಪರಿಸರ ನಿರಪೇಕ್ಷಣಾ ದೊರಕಿಸಿಕೊಟ್ಟರೆ ನಾಳೆಯೇ ಕೆಲಸ ಆರಂಭಿಸಲಾಗುವುದು. ಅದಕ್ಕಾಗಿ ಈಗಾಗಲೇ ಟೆಂಡರ್ ಸಹ ಕರೆದಿದ್ದೇವೆ ಎಂದರು.

program

ಕಾಂಗ್ರೆಸ್ ಜಿಲ್ಲಾಧ್ಯಕ್ಷ, ರೋಣ ಶಾಸಕ ಜಿ.ಎಸ್. ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ಕಾನೂನು ಹಾಗೂ ಪ್ರವಾಸೋದ್ಯಮ ಇಲಾಖೆ ಸಚಿವ ಎಚ್.ಕೆ. ಪಾಟೀಲ, ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ, ಸರಕಾರದ ಮುಖ್ಯ ಸಚೇತಕ ಸಲೀಂ ಅಹ್ಮದ್, ಹಾವೇರಿ-ಗದಗ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ, ಆರ್.ಎಸ್. ಪಾಟೀಲ, ಶಾಸಕರಾದ ಶ್ರೀನಿವಾಸ ಮಾನೆ, ಆರ್. ಶಂಕರ್, ಯು.ಬಿ. ಬಣಕಾರ, ಮಾಜಿ ಶಾಸಕರಾದ ಡಿ.ಆರ್. ಪಾಟೀಲ, ಬಿ.ಆರ್. ಯಾವಗಲ್, ರಾಮಕೃಷ್ಣ ದೊಡ್ಡಮನಿ, ರಾಮಣ್ಣ ಲಮಾಣಿ ಸೇರಿದಂತೆ ಮುಖಂಡರು ಉಪಸ್ಥಿತರಿದ್ದರು.

ನರೇಂದ್ರ ಮೋದಿ ಕಳೆದ 10 ವರ್ಷದಿಂದ ಅಧಿಕಾರದಲ್ಲಿದ್ದಾರೆ. ಆದರೂ ಈವರೆಗೆ ಜನಸಾಮಾನ್ಯರ ಖಾತೆಗೆ 15 ಲಕ್ಷ ರೂಪಾಯಿ ಹಾಕಿಲ್ಲ. ವಾರ್ಷಿಕ 2 ಕೋಟಿ ಉದ್ಯೋಗ ಸೃಷ್ಟಿಯ ಭರವಸೆ ಈಡೇರಿಸಿಲ್ಲ. ರೈತರ ಆದಾಯ ದುಪ್ಪಟ್ಟು ಮಾಡುವ ಭರವಸೆ ನೀಡಿದರು, ಆದರೆ ರೈತರ ಖರ್ಚು ದುಪ್ಪಟ್ಟುಗೊಳಿಸಿದರು. ಅಗತ್ಯ ವಸ್ತುಗಳ ಬೆಲೆ ಏರಿಕೆ ನಿಯಂತ್ರಿಸಲಿಲ್ಲ. ಇಂಥ ಸುಳ್ಳು ಹೇಳುವ ಪಕ್ಷಕ್ಕೆ ಜನ ಮತ ಹಾಕಬಾರದು ಎಂದು ಸಿಎಂ ಸಿದ್ದರಾಮಯ್ಯ ವಿನಂತಿಸಿದರು.

ಸಂವಿಧಾನದ ಹಿತರಕ್ಷಣೆ ನಮ್ಮೆಲ್ಲರ ಕರ್ತವ್ಯ

0

ದೇಶಾದ್ಯಂತ ಚುನಾವಣಾ ಕಣ ರಂಗೇರಿದೆ. ರಾಜಕೀಯ ಪಕ್ಷಗಳ ಕಾರ್ಯಕರ್ತರ ಹುಮ್ಮಸ್ಸು ಕೂಡಾ ಹುಚ್ಚು ಹಿಡಿಸುವಷ್ಟರ ಮಟ್ಟಿಗೆ ಇದೆ. ಆದರೆ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ `ಪ್ರಜಾಪ್ರಭುತ್ವ’ ಎಂಬುದರ ಅರ್ಥವೇ ತಿಳಿಯದಷ್ಟು ಜನರು ರಾಜಕೀಯವಾಗಿ ಪ್ರಾಭಾವಿತರಾಗಿರುವುದು ಪ್ರಜಾಪ್ರಭುತ್ವಕ್ಕೆ ಆತಂಕಕಾರಿ ವಿಷಯ ಎನಿಸಿದರೂ ತಪ್ಪಾಗಲಿಕ್ಕಿಲ್ಲ. ಜಗತ್ತಿನ ಎಲ್ಲ ದೇಶಗಳ ಇತಿಹಾಸವನ್ನು ಸ್ವಲ್ಪ ಇಣುಕಿದರೂ ಭಾರತ ವಿಶಿಷ್ಠ ಮತ್ತು ವಿಶೇಷ ಎನಿಸಿದೆ. ಸ್ವಾತಂತ್ರ‍್ಯದ ನಂತರ ಭಾರತವು ಸಂವಿಧಾನದ ನಿರ್ದೇಶನದಂತೆ ನಡೆಯುತ್ತಿದೆ.

ಸಮಸ್ತ ಭಾರತೀಯರಿಗೆ ಎಲ್ಲ ಜಾತಿ, ಧರ್ಮ, ಪಂಥಗಳನ್ನು ಮೀರಿ ಸಮಾನ ಅವಕಾಶಗಳನ್ನು ಕಲ್ಪಿಸಿ ಮೂಲಭೂತ ಹಕ್ಕುಗಳನ್ನು ಒದಗಿಸಿ, ಒಬ್ಬ ಪ್ರಜೆಯಾದವನು ಪ್ರಧಾನಿಯನ್ನು ಕೂಡ ಪ್ರಶ್ನಿಸಬಹುದು ಎಂಬ ಶ್ರೇಷ್ಠ ಸಂದೇಶವನ್ನು ಸಾರಿದ ಬಲಿಷ್ಠ ಸಂವಿಧಾನ ನಮ್ಮದು.

ಆದರೆ ನಮ್ಮ ಬಲಿಷ್ಠ ಸಂವಿಧಾನ ರಾಜಕೀಯ ಪಕ್ಷಗಳ, ಅಧಿಕಾರದಾಹಿ ನಾಯಕರ ಕೈಯಲ್ಲಿ ಸಿಕ್ಕು ದಿನ ದಿನಕ್ಕೂ ನಲುಗುತ್ತಿದೆ. ಕೆಲವು ವರ್ಷಗಳಿಂದ ರಾಜಕೀಯ ನಾಯಕರು ಸಂವಿಧಾನ ಬದಲಾವಣೆಯ ಕುರಿತು ನೀಡುವ ಬಹಿರಂಗ ಹೇಳಿಕೆಗಳು ಅಕ್ಷರಶಃ ಪ್ರಜ್ಞಾವಂತ ಭಾರತೀಯರಿಗೆ ಭಯ ಹೆಚ್ಚಿಸಿದ್ದು ಸುಳ್ಳಲ್ಲ.

ಯಾಕೆಂದರೆ ಇಂದು ನಾವು ನೀವೆಲ್ಲರೂ ನಿರ್ಭಯವಾಗಿ ಯಾರ ಹಂಗಿನಲ್ಲಿಯೂ ಇರದೇ ಬದುಕುತ್ತಿದ್ದೇವೆ ಎಂದರೆ ಅದರ ಹಿಂದೆ ಸಂವಿಧಾನ ನಮಗೆ ಕೊಟ್ಟಿರುವ ಹಕ್ಕುಗಳೇ ಕಾರಣ.

ಅಂಥ ಬಲಿಷ್ಠ ಸಂವಿಧಾನವನ್ನೇ ಸಂವಿಧಾನ ಬದ್ಧ ಹುದ್ದೆಯಲ್ಲಿರುವ ನಾಯಕರುಗಳು ಬದಲಾವಣೆ ಮಾಡುತ್ತೇವೆ ಎನ್ನುತ್ತಾರೆ ಎಂದರೆ ಖಂಡಿತವಾಗಿಯೂ ಪ್ರತೀ ಭಾರತೀಯನೂ ಯೋಚಿಸಿಲೇಬೇಕು. ನಾವು ಎಡವಿದ್ದು ಎಲ್ಲಿ ಎಂಬುದನ್ನು ಅರಿತುಕೊಳ್ಳಲೇಬೇಕು. ಯಾಕೆಂದರೆ ಸಂವಿಧಾನ ಬದಲಾದರೆ ನಾವು ರಾಜಪ್ರಭುತ್ವದಲ್ಲಿ ಬದುಕಬೇಕಾಗಬಹುದು. ರಾಜ ಪ್ರಭುತ್ವ ಎಂಬುದು ಒಂದು ರೀತಿಯ ಸರ್ವಾಧಿಕಾರ.

ಅಲ್ಲಿ ಪ್ರಜೆಗಳ ಹಿತಾಸಕ್ತಿಗಿಂತ ರಾಜಕೀಯ ಹಿತಾಸಕ್ತಿಗಳು ತಾಂಡವವಾಡುತ್ತವೆ ಎಂಬುದು ಸುಳ್ಳಲ್ಲ.
ಹಾಗಾಗಿ ನಾವು ಆಗು ಹೋಗುಗಳ ಕುರಿತಾಗಿ, ಭವಿಷ್ಯದ ಆಲೋಚನೆಗಳನ್ನು ವಿಮರ್ಶಿಸಿ ಯಾವುದು ಸೂಕ್ತ ಎಂಬುದನ್ನು ಅರಿತು ಮತದಾನ ಮಾಡುವ ಜವಾಬ್ದಾರಿ ನಮ್ಮ ಮೇಲಿದೆ. ಚುನಾವಣೆ ವ್ಯಾಪಾರ ಅಲ್ಲ. ನಾನು ಮತ್ತು ನನ್ನ ಮತ ಮಾರಾಟಕ್ಕಿಲ್ಲ. ಪ್ರಜಾಪ್ರಭುತ್ವದಲ್ಲಿ ಮತದಾರರೇ ಶ್ರೇಷ್ಠ. ಮತದಾರರಿಂದ ಮಾತ್ರ ಸಮಾಜದ ಬದಲಾವಣೆ ಸಾಧ್ಯ. ಅದಕ್ಕಾಗಿ ಯಾರೂ ನಿಮ್ಮ ಮತಗಳನ್ನು ಮಾರಿಕೊಳ್ಳಬೇಡಿ. ಎಲ್ಲ ಪ್ರಜೆಗಳು ಮೊದಲು ನಾವು ಏಕೆ ಮತ ಹಾಕಬೇಕು ಎಂಬುದನ್ನು ತಿಳಿದುಕೊಳ್ಳಬೇಕು.

ನಾವು ಏಕೆ ಮತ ಹಾಕಬೇಕು?: ನಾವು ಏಕೆ ಮತ ಹಾಕಬೇಕು ಮತ್ತು ಮತ ಹಾಕಿದರೆ ನಮಗೆ ಸಿಗುವ ಅನುಕೂಲ ಅನಾನುಕೂಲಗಳು ಏನು? ನನ್ನ ಒಂದು ಮತಕ್ಕೆ ಸಮಾಜವನ್ನು ಬದಲಿಸುವ ಶಕ್ತಿ ಇದೆಯಾ?

ರಾಜಕೀಯ ವ್ಯವಸ್ಥೆ ಬಗ್ಗೆ ಜನರಿಗೆ ಇರುವ ಅಭಿಪ್ರಾಯ ಏನು? ಹೀಗೆ ಹಲವಾರು ಪ್ರಶ್ನೆಗಳು ಮತದಾರರಲ್ಲಿ ಇವೆ. ಸದೃಢ ಪ್ರಜಾಪ್ರಭುತ್ವದ ನಿರ್ಮಾಣಕ್ಕೆ ಮತದಾರರ ಸಹಭಾಗಿತ್ವ ಅತ್ಯಗತ್ಯ. ಪ್ರತಿಯೊಬ್ಬರೂ ತಪ್ಪದೇ ಮತ ಹಾಕಬೇಕು. ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕು. ಇದರಿಂದ ದೇಶ ಸದೃಢವಾಗುತ್ತದೆ ಎಂಬ ವಿಷಯ ಮತದಾರರು ತಿಳಿದುಕೊಳ್ಳಬೇಕು. ಎಲ್ಲ ಮತದಾರರು ತಮ್ಮ ಮತವನ್ನು ಮಾರಿಕೊಳ್ಳದೇ ವೈಯಕ್ತಿಕ ಹಿತಾಸಕ್ತಿ, ಆಸೆ, ಆಮಿಷಗಳನ್ನು ಬದಿಗಿಟ್ಟು ಸಂವಿಧಾನವನ್ನು ರಕ್ಷಣೆ ಮಾಡುವಂತಹ, ಸಂವಿಧಾನದ ಕುರಿತಾಗಿ ಅಭಿಮಾನವುಳ್ಳ, ಸಂವಿಧಾನದ ಆಶಯಗಳನ್ನು ತನ್ನ ಜೀವನದಲ್ಲಿ ಅಳವಡಿಸಿಕೊಂಡಿರುವ ಸೂಕ್ತ ಅಭ್ಯರ್ಥಿಗೆ ನಮ್ಮ ಅಮೂಲ್ಯ ಮತವನ್ನು ನೀಡಬೇಕು. `ದೇಶ ನಮಗೇನು ನೀಡಿದೆ ಎನ್ನುವುದಕ್ಕಿಂತ, ದೇಶಕ್ಕಾಗಿ ನಾವೇನು ನೀಡಿದ್ದೇವೆ’ ಎಂಬುದು ನಾವು ಚಿಕ್ಕಂದಿನಿಂದಲೂ ಕಲಿತ ಪಾಠ. ಆದರೆ, ನಾವು ನ್ಯಾಯಯುತವಾಗಿ ನೀಡುವ ಒಂದು ಮತ ದೇಶವನ್ನು ರಕ್ಷಿಸಬಲ್ಲದು, ಸಂವಿಧಾನವನ್ನು ಕಾಪಾಡಬಲ್ಲದು, ಪ್ರಜೆಗಳ ಹಿತಾಸಕ್ತಿಯನ್ನು ಅರಿಯಬಲ್ಲದು ಎಂಬುದನ್ನು ಅವಲೋಕಿಸಿ ಚಲಾಯಿಸಿದ ಮತ ಮಾತ್ರ ಭಾರತದ ರಾಜಕಾರಣದ ದಿಕ್ಕನ್ನು ಬದಲಿಸಲು ಸಾದ್ಯ.

ಅಧಿಕಾರ ಎಂಬುದು ಪ್ರಜಾ ಪ್ರಭುತ್ವ ವ್ಯವಸ್ಥೆಯಲ್ಲಿ ನಿಂತ ನೀರಾಗಬಾರದು, ಹರಿಯುವ ನೀರಾಗಬೇಕು. ಹರಿಯುವ ನೀರಿನಲ್ಲಿರುವ ಪರಿಶುದ್ಧತೆ ನಿಂತ ನೀರಿನಲ್ಲಿರಲು ಸಾಧ್ಯವಿಲ್ಲ. ನಿಂತ ನೀರು ಎಷ್ಟು ಮಲಿನವೋ, ಅಧಿಕಾರ ಏಕ ವ್ಯಕ್ತಿ ಒಡೆತನದಲ್ಲಿರುವುದು ಅಷ್ಟೇ ಮಲೀನವಾದುದು. ಮಲಿನತೆಯನ್ನು ಸಹಿಸಿಕೊಳ್ಳುವ ಮನೋಭಾವ ನಮ್ಮದಾಗಬಾರದು, ಶುದ್ಧತೆಯನ್ನು ಕಾಪಾಡಿಕೊಳ್ಳುವ ಮನಸ್ಥಿತಿ, ಪ್ರಜ್ಞಾವಂತಿಕೆ ನಮ್ಮದಾಗಬೇಕು. ಅದಕ್ಕಾಗಿ ಯಾವುದೇ ಮತದಾರರು ನಿಮ್ಮ ಮತವನ್ನು ಯಾವುದೇ, ಆಸೆ, ಆಮಿಷಗಳಿಗೆ, ಭಾವನಾತ್ಮಕ ವಿಷಯಗಳಿಗೆ ಬಲಿಯಾಗದೆ, ನಮ್ಮ ಸುತ್ತ ಮುತ್ತಲಿನ ಅಭಿವೃದ್ಧಿಯನ್ನು ಪರಿಗಣಿಸಿ, ಅಭಿವೃದ್ಧಿಯ ಕನಸು ಹೊತ್ತಿರುವ, ನಿಮಗೆ ಸೂಕ್ತ ಎನಿಸಿರುವ ಅಭ್ಯರ್ಥಿಗೆ ಸ್ವ ಆಲೋಚನೆಯಿಂದ ಯೋಚಿಸಿ, ಮತವನ್ನು ಮಾರಿಕೊಳ್ಳದೇ ಮತ ಚಲಾಯಿಸಿ. ನಿಮ್ಮ ಒಂದು ಮತಕ್ಕೆ ಸಂವಿಧಾನ ರಕ್ಷಿಸುವ ಶಕ್ತಿಯಿದೆ, ದೇಶದ ಹಿತಾಸಕ್ತಿಯನ್ನು ಕಾಪಾಡುವ ಶಕ್ತಿಯಿದೆ. ಜನರಿಗೆ ಸ್ಪಂದಿಸುವ ನಾಯಕನನ್ನು ನಾಡಿಗೆ ಒದಗಿಸುವ ಶಕ್ತಿಯಿದೆ ಎಂಬುದನ್ನು ಮರೆಯದೆ ಗಮನದಲ್ಲಿಟ್ಟುಕೊಂಡು ಆತ್ಮಾಭಿಮಾನದಿಂದ ಮತವನ್ನು ನೀಡಿ.
– ಪ್ರಶಾಂತ ಮಡಿವಾಳರ, ಶಿರೋಳ.

vote

ಮಂಜುನಾಥನಗರದಲ್ಲಿ ಮತದಾನ ಮಹತ್ವ ಕುರಿತು ಜಾಗೃತಿ

ವಿಜಯಸಾಕ್ಷಿ ಸುದ್ದಿ, ಗದಗ : ಗದಗ-ಬೆಟಗೇರಿ ನಗರಸಭೆ ವ್ಯಾಪ್ತಿಯಲ್ಲಿ ಕಡಿಮೆ ಮತದಾನವಾಗಿರುವ ಬೆಟಗೇರಿ ಬಳಿಯ ಮಂಜುನಾಥ ನಗರಕ್ಕೆ ಜಿ.ಪಂ ಉಪ ಕಾರ್ಯದರ್ಶಿ ಹಾಗೂ ಸ್ವೀಪ್ ಸಮಿತಿ ಜಿಲ್ಲಾ ನೋಡಲ್ ಅಧಿಕಾರಿ ಸಿ.ಬಿ. ದೇವರಮನಿ ಗುರುವಾರ ಭೇಟಿ ನೀಡಿ ಮತದಾನ ಮಹತ್ವ ಕುರಿತು ಜಾಗೃತಿ ಮೂಡಿಸಿದರು.

ಮಂಜುನಾಥ ನಗರದ ಮನೆ ಮನೆಗೆ ಭೇಟಿ ನೀಡಿ ಲೋಕಸಭಾ ಚುನಾವಣೆ ಸಂಬಂಧ ಮೇ 7ರಂದು ಮತದಾನ ನಡೆಯಲಿದ್ದು, ತಪ್ಪದೇ ಮತ ಚಲಾಯಿಸುವಂತೆ ಮತದಾರರಲ್ಲಿ ಕೋರಿದರು. ಯಾವುದೇ ಕಾರಣಕ್ಕೂ ಮತದಾನದಿಂದ ಅರ್ಹರು ವಂಚಿತರಾಗಬಾರದು. ಕಡ್ಡಾಯವಾಗಿ ಮತದಾನ ಮಾಡಿ, ಮತದಾನ ಹೆಚ್ಚಳಕ್ಕೆ ಸಹಕರಿಸಬೇಕು ಎಂದು ಸಿ.ಬಿ. ದೇವರಮನಿ ಮನವಿ ಮಾಡಿದರು.

ಮನೆ ಮನೆಗೆ ಸ್ಟಿಕರ್ ಅಂಟಿಸುವ ಮೂಲಕ ಮೇ 7ರಂದು ಮತ ಚಲಾಯಿಸುವಂತೆ ಹಿರಿಯ ನಾಗರಿಕರಲ್ಲಿ ಕೋರಿದರಲ್ಲದೆ, ಪ್ರತಿ ಬಡಾವಣೆಗೂ ಬ್ಯಾನರ್ ಅಳವಡಿಸುವ ಮೂಲಕ ಹೆಚ್ಚಿನ ಜಾಗೃತಿ ಮೂಡಿಸಲಾಗುವುದು. ಆ ನಿಟ್ಟಿನಲ್ಲಿ ಜಿಲ್ಲಾ ಸ್ವೀಪ್ ಸಮಿತಿ, ನಗರಸಭೆ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಗಳ ಮೂಲಕ ಹೆಚ್ಚಿನ ಅರಿವು ಮೂಡಿಸಲು ಕ್ರಮವಹಿಸಲಾಗುವುದು ಎಂದು ತಿಳಿಸಿದರು.

ಇದೇ ಏಪ್ರಿಲ್ 28ರಂದು ನಡೆಯುವ ‘ನಮ್ಮ ನಡೆ-ಮತಗಟ್ಟೆ ಕಡೆಗೆ’ ಸಂಬಂಧ ಜಾಗೃತಿ ಅಭಯಾನ ಹಮ್ಮಿಕೊಳ್ಳುವ ನಿಟ್ಟಿನಲ್ಲಿ ನಗರದ ಬಸವೇಶ್ವರ ವೃತ್ತಕ್ಕೆ ತೆರಳಿ ವೀಕ್ಷಿಸಲಾಯಿತು. ಜಾಥಾ ಮಾರ್ಗ ವೀರನಾರಾಯಣ ದೇವಸ್ಥಾನದ ಬಳಿಯ ಹೆಣ್ಣು ಮಕ್ಕಳ ಶಾಲೆಯಲ್ಲಿ ಮುಖ್ಯಾಪಾಧ್ಯಾಯರ ಜೊತೆಗೆ ಕಾರ್ಯಕ್ರಮ ಆಯೋಜಿಸುವ ಬಗ್ಗೆ ಚರ್ಚಿಸಲಾಯಿತು.

ಮಳೆಯಿಂದಾಗಿ ಬಳ್ಳಾರಿ ರೈಲ್ವೆ ಅಂಡರ್ ಬ್ರಿಡ್ಜ್ ಚರಂಡಿಗಳಲ್ಲಿ ಕಸ ಕಡ್ಡಿ

ವಿಜಯಸಾಕ್ಷಿ ಸುದ್ದಿ, ಗದಗ : ಕಳೆದ 5 ದಿನಗಳ ಹಿಂದೆ ಸುರಿದ ಮಳೆಯಿಂದಾಗಿ ಗದಗ ನಗರದ ಬಳ್ಳಾರಿ ರೈಲ್ವೆ ಅಂಡರ್ ಬ್ರಿಡ್ಜ್ ಬಳಿಯ ಚರಂಡಿಗಳಲ್ಲಿ ಕಸ ಕಡ್ಡಿ-ತುಂಬಿಕೊಂಡು ಅಲ್ಲಿ ಸಂಚರಿಸಲು ಸಾರ್ವಜನಿಕರಿಗೆ ತೊಂದರೆ ಉಂಟಾಗಿತ್ತು.

ಇದನ್ನು ಗಮನಿಸಿದ ನಗರಸಭೆ ಅಧಿಕಾರಿ ಎಂ.ಎಂ. ಮಕಾನದಾರ, ಆರೋಗ್ಯ ಹಾಗೂ ಪರಿಸರ ಅಭಿಯಂತರ ಅಧಿಕಾರಿ ಆನಂದ್ ಬದಿ ಅವರ ನಿರ್ದೇಶನದಲ್ಲಿ ನಗರಸಭೆಯ ಪೌರಕಾರ್ಮಿಕರು ಕಸ ಕಡ್ಡಿಗಳನ್ನು ತೆರೆವುಗೊಳಿಸಿದರು.

`ಯುವ ಚೈತನ್ಯ ಸಮಾವೇಶ’ ಏ.28ಕ್ಕೆ

0

ವಿಜಯಸಾಕ್ಷಿ ಸುದ್ದಿ, ಗದಗ : ಏಪ್ರಿಲ್ 28ರ ಸಂಜೆ 4 ಗಂಟೆಗೆ ನಗರದ ಕೆ.ಎಚ್. ಪಾಟೀಲ ಸಭಾಭವನದಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ವತಿಯಿಂದ `ಯುವ ಚೈತನ್ಯ ಸಮಾವೇಶ’ ಹಮ್ಮಿಕೊಳ್ಳಲಾಗಿದೆ ಎಂದು ಯುವ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಕೃಷ್ಣಗೌಡ ಪಾಟೀಲ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿ ಯುವಕರ ಪಾಲ್ಗೊಳ್ಳುವಿಕೆ ಅತಿ ಮುಖ್ಯವಾಗಿದೆ. ಈ ಹಿನ್ನೆಲೆಯಲ್ಲಿ ಯುವಕರನ್ನು ರಾಜಕೀಯವಾಗಿ ಜಾಗೃತಗೊಳಿಸುವುದು ಮತ್ತು ಅವರಲ್ಲಿ ನಾಯಕತ್ವ ಗುಣಗಳನ್ನು ಬೆಳೆಸುವ ಉದ್ದೇಶದೊಂದಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಬಿಜೆಪಿ ವಾರ್ಷಿಕ ಎರಡು ಕೋಟಿ ಉದ್ಯೋಗ ಸೃಷ್ಟಿಸುವ ಭರವಸೆ ನೀಡಿ ಎಡವಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಯುವಕರಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತರಲಾಗಿದೆ.

ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯುವಕರನ್ನು ಆರ್ಥಿಕವಾಗಿ ಸಬಲರನ್ನಾಗಿಸಲು `ಯುವನಿಧಿ’ ಯೋಜನೆ ಜಾರಿಗೆ ತಂದಿದ್ದಾರೆ. ಈ ಎಲ್ಲ ಯೋಜನೆಗಳನ್ನು ಯುವಕರಿಗೆ ಮುಟ್ಟಿಸುವ ಕೆಲಸ ಮಾಡಲಾಗುತ್ತದೆ ಎಂದರು.

ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಶೋಕ ಮಂದಾಲಿ, ಜಿ.ಪಂ ಮಾಜಿ ಅಧ್ಯಕ್ಷ ಸಿದ್ದು ಪಾಟೀಲ, ಶಹರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿ.ಬಿ. ಅಸೂಟಿ, ಮುಖಂಡರಾದ ಬಸವರಾಜ ಕಡೆಮನಿ, ಸರ್ಫರಾಜ ಬಬರ್ಚಿ ಇತರರು ಉಪಸ್ಥಿತರಿದ್ದರು.

ಈ ಕಾರ್ಯಕ್ರಮದಲ್ಲಿ ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ, ಕಾನೂನು ಹಾಗೂ ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ್, ಮಾಜಿ ಶಾಸಕ ಡಿ.ಆರ್. ಪಾಟೀಲ್, ರಾಷ್ಟ್ರೀಯ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಶ್ರೀನಿವಾಸ್, ರಾಜ್ಯ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮಹಮ್ಮದ್ ಹ್ಯಾರಿಸ್ ನಲಪಾಡ್ ಇನ್ನಿತರರು ಆಗಮಿಸಲಿದ್ದಾರೆ ಎಂದು ಕೃಷ್ಣಗೌಡ ಪಾಟೀಲ ಮಾಹಿತಿ ನೀಡಿದರು.

ಗುಡುಗು-ಸಿಡಿಲಿನಿಂದ ಎಚ್ಚರ ವಹಿಸಿ : ವೈಶಾಲಿ ಎಂ.ಎಲ್.

0

ವಿಜಯಸಾಕ್ಷಿ ಸುದ್ದಿ, ಗದಗ : ಜಿಲ್ಲೆಯಲ್ಲಿ ಗುಡುಗು ಮತ್ತು ಸಿಡಿಲು ಸಂದರ್ಭದಲ್ಲಿ ಸಂಭವಿಸಬಹುದಾದ ಹಾನಿಯಿಂದ ಸಂರಕ್ಷಣೆಗೆ ಅಗತ್ಯ ಕ್ರಮ ಅನುಸರಿಸಬೇಕು ಎಂದು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ತಿಳಿಸಿದ್ದಾರೆ.

ಹೊರಗೆ ಹೋಗುವ ಅನಿವಾರ್ಯವಿದ್ದಲ್ಲಿ ಹವಾಮಾನ ಮುನ್ಸೂಚನೆ ಹಾಗೂ ಕಾಮನ್ ಅಲರ್ಟಿಂಗ್ ಪ್ರೊಟೊಕಾಲ್ (ಕ್ಯಾಪ್) ಮುಖಾಂತರ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದಿಂದ ಬರುವ ಸಂದೇಶ ಗಮನಿಸಬೇಕು. ಪ್ರತಿಕೂಲ ಹವಾಮಾನದ ಸಮಯದಲ್ಲಿ ವಿಶೇಷವಾಗಿ ಕೃಷಿ ಕ್ಷೇತ್ರದಲ್ಲಿ ಕೆಲಸ ಮಾಡಲು, ಜಾನುವಾರುಗಳನ್ನು ಮೇಯಿಸಲು, ಮೀನುಗಾರಿಕೆ ಮತ್ತು ದೋಣಿಗಳನ್ನು ಓಡಿಸಲು ಅಥವಾ ಸಾಮಾನ್ಯ ಪ್ರಯಾಣಕ್ಕಾಗಿ ಮನೆಯಿಂದ ಹೊರಗೆ ಹೋಗದಿರುವುದು ಸೂಕ್ತ.

ಗುಡುಗು-ಸಿಡಿಲಿನ ಸಂದರ್ಭದಲ್ಲಿ ಲೋಹದ ತಗಡನ್ನು ಹೊದಿಸಿರುವ ಮನೆಗಳು ಸುರಕ್ಷಿತವಲ್ಲ. ಸುರಕ್ಷಿತವಾದ ಕಟ್ಟಡಗಳಾದ ಮನೆ, ಕಚೇರಿ, ಅಂಗಡಿ ಮತ್ತು ಕಿಟಕಿ ಮುಚ್ಚಿರುವ ವಾಹನಗಳಲ್ಲಿ ಆಶ್ರಯ ಪಡೆಯುವುದು. ಕೆರೆ ಮತ್ತು ನದಿಗಳು ಹಾಗೂ ಇನ್ನಿತರೆ ನೀರಿನ ಮೂಲಗಳಿಂದ ತಕ್ಷಣವೇ ದೂರವಿರುವುದು.

ವಿದ್ಯುತ್ ಉಪಕರಣ ಹಾಗೂ ವಿದ್ಯುತ್ ಸರಬರಾಜು ಮಾರ್ಗ, ದೂರವಾಣಿ ಸಂಪರ್ಕ, ಮೊಬೈಲ್ ಟವರ್, ಪವನ ವಿದ್ಯುತ್ ಗೋಪುರ ಹಾಗೂ ರೈಲು ಹಳಿಗಳಿಂದ ದೂರವಿರುವುದು.

ಗುಡುಗು-ಸಿಡಿಲಿನ ಮುನ್ಸೂಚನೆ ಅಥವಾ ಮುನ್ನೆಚ್ಚರಿಕೆ ಇದ್ದಲ್ಲಿ ಪ್ರಯಾಣ ಮುಂದೂಡುವುದು ಹಾಗೂ ಮನೆಯಲ್ಲೇ ಇರುವುದು. ವಾಹನ ಚಾಲನೆಯಲ್ಲಿದ್ದರೆ ತಕ್ಷಣವೇ ವಾಹನ ನಿಲ್ಲಿಸಿ ವಾಹನದಲ್ಲಿಯೇ ಆಶ್ರಯ ಪಡೆಯುವುದು ಅಗತ್ಯ ಎಂದು ತಿಳಿಸಿದ್ದಾರೆ.

ಮಿಂಚನ್ನು ಆಕರ್ಷಿಸುವಂತಹ ವಿದ್ಯುತ್, ಟೆಲಿಫೋನ್ ಕಂಬಗಳು ಅಥವಾ ಮರಗಳ ಕೆಳಗೆ ಆಶ್ರಯ ಪಡೆಯಬಾರದು. ಅರಣ್ಯ ಪ್ರದೇಶದಲ್ಲಿದ್ದರೆ ಸಣ್ಣ ಮರಗಳ ಕೆಳಗೆ ಆಶ್ರಯ ಪಡೆಯುವುದು. ಸಿಡಿಲು ಸಂದರ್ಭದಲ್ಲಿ ಮೊಬೈಲ್ ಫೋನ್‌ಗಳನ್ನು ಬಳಸಬಾರದು ಹಾಗೂ ವಿದ್ಯುತ್ ಸಂಪರ್ಕ ಹೊಂದಿರುವ ದೂರವಾಣಿಯನ್ನು ಬಳಸಬಾರದು.

ಮಕ್ಕಳು, ವಯೋವೃದ್ಧರು, ಜಾನುವಾರುಗಳನ್ನು ಹಾಗೂ ಸಾಕು ಪ್ರಾಣಿಗಳನ್ನು ಸುರಕ್ಷಿತ ಸ್ಥಳಗಳಲ್ಲಿ ಇರುವಂತೆ ಗಮನಹರಿಸುವುದು. ಸಿಡಿಲಿನ ಸಂದರ್ಭದಲ್ಲಿ ಕಟ್ಟಡದ ಕೊಳಾಯಿ ಮತ್ತು ಲೋಹದ ಕೊಳವೆಗಳ ಮೂಲಕ ವಿದ್ಯುತ್ ಹರಿಯುವ ಸಾಧ್ಯತೆ ಇರುವುದರಿಂದ ಈ ಸಂದರ್ಭದಲ್ಲಿ ಸ್ನಾನ ಅಥವಾ ಶವರ್ ತೆಗೆದುಕೊಳ್ಳಬಾರದು ಪಾತ್ರೆಗಳನ್ನು ತೊಳೆಯಬಾರದು, ಬಟ್ಟೆ ಒಗೆಯಬಾರದು.

ದೋಣಿ ವಿಹಾರ ಅಥವಾ ಈಜುತ್ತಿದ್ದರೆ ಸಾಧ್ಯವಾದಷ್ಟು ಸುರಕ್ಷಿತ ಸ್ಥಳದಲ್ಲಿ ಆಶ್ರಯ ಪಡೆಯುವುದು. ಅರಣ್ಯ ಪ್ರದೇಶದಿಂದ ಗಿಡ-ಗಡ್ಡೆಗಳಿಲ್ಲದ ಸ್ವಚ್ಛ ಪ್ರದೇಶದ ಕಡೆಗೆ ಚಲಿಸುವುದು. ಮಿಂಚಿನ ಹೊಡೆತದಿಂದಾಗಿ ಕಾಡ್ತಿಚ್ಚು ಸಂಭವಿಸುವ ಸಾಧ್ಯತೆಯಿದೆ. ಗುಡುಗು ಸಿಡಿಲಿನ ಸಮಯದಲ್ಲಿ ಬಯಲು ಪ್ರದೇಶದಲ್ಲಿ ಸಿಲುಕಿಕೊಂಡಿದ್ದರೆ, ತಕ್ಷಣವೇ ಹತ್ತಿರದಲ್ಲೇ ಇರುವ ಸುರಕ್ಷಿತ ಸ್ಥಳದಲ್ಲಿ ಆಶ್ರಯ ಪಡೆದು ಅಪಾಯದಿಂದ ಪಾರಾಗುವುದು.

ಮಿಂಚು ಬರುವ ಸಮಯದಲ್ಲಿ ರಬ್ಬರ್ ಸೋಲ್ ಇರುವ ಪಾದರಕ್ಷೆಗಳು ಮತ್ತು ಕಾರಿನ ಚಕ್ರಗಳು ಸುರಕ್ಷಿತವಲ್ಲದ ಕಾರಣ ಅವುಗಳಿಂದ ದೂರವಿರುವುದು. ವಿದ್ಯುತ್ ಸಂಪರ್ಕ ಹೊಂದಿರುವ ಕಂಪ್ಯೂಟರ್, ವಿಡಿಯೋ ಗೇಮ್ ಸಾಧನಗಳು, ಮೊಬೈಲ್ ಫೋನ್, ವಾಷಿಂಗ್ ಮಷಿನ್, ಸೈನ್ ಹಾಗೂ ಇತರ ವಿದ್ಯುತ್ ಉಪಕರಣಗಳ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸುವುದು.

ಆಘಾತಕ್ಕೊಳಗಾದ ವ್ಯಕ್ತಿಯಲ್ಲಿ ಉಸಿರಾಟವು ಕಂಡುಬರದಿದ್ದಲ್ಲಿ, ತಕ್ಷಣವೇ ಕೃತಕ ಉಸಿರಾಟ ಪ್ರಕ್ರಿಯೆಯನ್ನು ಪ್ರಾರಂಭಿಸಬೇಕು. ವ್ಯಕ್ತಿಯಲ್ಲಿ ಎದೆಬಡಿತವು ಕಂಡು ಬರದಿದ್ದಲ್ಲಿ ತಕ್ಷಣವೇ ಪ್ರಕ್ರಿಯೆಯನ್ನು ಪ್ರಾರಂಭಿಸಬೇಕು. ಸಿಡಿಲಿನ ಹೊಡೆತಕ್ಕೆ ಒಳಗಾದ ವ್ಯಕ್ತಿಯ ಕಣ್ಣಿನ ದೃಷ್ಟಿ, ಕಿವಿ ಕೇಳಿಸುವಿಕೆ ಹಾಗೂ ಮೂಳೆಗಳ ಮುರಿದಿವೆಯೇ ಎಂದು ಪರೀಕ್ಷಿಸಬೇಕು. ಇದರಿಂದ ಪಾರ್ಶ್ವವಾಯು/ಲಕ್ವಾ ಹೊಡೆಯುವುದನ್ನು ಮತ್ತು ಅಧಿಕ ರಕ್ತಸ್ರಾವದಿಂದ ಉಂಟಾಗುವ ಅಪಾಯಗಳನ್ನು ತಡೆಗಟ್ಟಬಹುದು.

ಸಿಡಿಲಿನ ಹೊಡೆತಕ್ಕೆ ಒಳಗಾದ ವ್ಯಕ್ತಿಯು ವಿವಿಧ ರೀತಿಯ ಸುಟ್ಟ ಗಾಯಗಳಿಂದ ಬಳಲಬಹುದು ಹಾಗೂ ಕಾಣದ ಗಾಯಗಳು/ಅಘಾತಕ್ಕೆ ಒಳಗಾಗಿರಬಹುದು. ವ್ಯಕ್ತಿಯಲ್ಲಿ ಇಂತಹ ಲಕ್ಷಣಗಳಿದ್ದಲ್ಲಿ ಸೂಕ್ತ ಚಿಕಿತ್ಸೆಗಾಗಿ ತಕ್ಷಣವೇ ಹತ್ತಿರದ ಆಸ್ಪತ್ರೆಗೆ ಕಳುಹಿಸಬೇಕು. ಸಿಡಿಲು ಬಡಿದಿರುವ ವ್ಯಕ್ತಿಯಿರುವ ಸ್ಥಳಕ್ಕೆ ತಲುಪಲು ಹಾಗೂ ಸಿಡಿಲು ಬಡಿತಕ್ಕೆ ಒಳಗಾದ ವ್ಯಕ್ತಿಯ ಆರೋಗ್ಯಸ್ಥಿತಿಯ ಬಗ್ಗೆ ನಿಖರವಾದ ಮಾಹಿತಿ ನೀಡಬೇಕು ಮತ್ತು ಸಿಡಿಲಿನ ಹೊಡೆತಕ್ಕೆ ಒಳಗಾದ ವ್ಯಕ್ತಿಯನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಬೇಕು ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಿಡಿಲು/ಮಿಂಚು ಬಡಿದ ಸಮಯದಲ್ಲಿ ಪ್ರಾಥಮಿಕವಾಗಿ 112/108 ಸಹಾಯವಾಣಿಗೆ ಕರೆ ಮಾಡಬೇಕು. ವೈದ್ಯಕೀಯ ಸಿಬ್ಬಂದಿಯು ಆಗಮಿಸುವ ಮುನ್ನವೇ ಅಗತ್ಯ ಪ್ರಥಮ ಚಿಕಿತ್ಸೆಯಿಂದ ಸಿಡಿಲು/ಮಿಂಚಿನ ಹೊಡೆತಕ್ಕೆ ಒಳಗಾದ ವ್ಯಕ್ತಿಯ ಜೀವವನ್ನು ಉಳಿಸಬಹುದಾಗಿದೆ. ಸಿಡಿಲಿನ ಹೊಡೆತಕ್ಕೆ ಒಳಗಾದ ವ್ಯಕ್ತಿಯನ್ನು ಮುಟ್ಟಿ ಉಪಚರಿಸುವದರಿಂದ ಯಾವುದೇ ಅಪಾಯವಿರುವುದಿಲ್ಲ. ಸಿಡಿಲಿನ ಹೊಡೆತಕ್ಕೆ ಒಳಗಾದ ವ್ಯಕ್ತಿಯ ಉಸಿರಾಟ ಹಾಗೂ ಎದೆ ಬಡಿತವನ್ನು ಪರೀಕ್ಷಿಸಬೇಕು. ವ್ಯಕ್ತಿಯ ದವಡೆಗೆ ನೇರವಾಗಿ ಕುತ್ತಿಗೆಯಲ್ಲಿರುವ ರಕ್ತನಾಳವನ್ನು ಪರೀಕ್ಷಿಸುವುದರಿಂದ ಸುಲಭವಾಗಿ ನಾಡಿ ಮಿಡಿತವನ್ನು ತಿಳಿಯಬಹುದು.

ಮುಳಗುಂದ ಪಟ್ಟಣದ ಅಲ್ಲಮ ಪ್ರಭುಸ್ವಾಮಿ ಜಾತ್ರಾ ಮಹೋತ್ಸವ

0

ಮುಳಗುಂದ ಪಟ್ಟಣದ ಅಲ್ಲಮ ಪ್ರಭುಸ್ವಾಮಿ ಜಾತ್ರಾ ಮಹೋತ್ಸವ ಸಕಲ ವಾದ್ಯ ಮೇಳಗಳೊಂದಿಗೆ ನೆರವೇರಿತು. ಅಲ್ಲಮ ಪ್ರಭುವಿನ ಪ್ರಭಾವಳಿ ಉತ್ಸವ, ಸಂಭ್ರಮದ ಕಡುಬಿನ ಕಾಳಗವನ್ನು ಸಿದ್ದರಾಮಯ್ಯ ಹಿರೇಮಠ ನೆರೆವೇರಿಸಿದರು.

ಬಳಿಗಾರ ಕುಟುಂಬದಿಂದ ಡಾ. ಎಚ್.ಎಲ್. ಪುಷ್ಪಾ ಅವರಿಗೆ ದತ್ತಿನಿಧಿ

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ತಾಲೂಕಿನ ಶಿಗ್ಲಿ ಗ್ರಾಮದ ನಾಡೋಜ ಡಾ.ಮನು ಬಳಿಗಾರ, ಡಾ. ಎಸ್.ಪಿ. ಬಳಿಗಾರ ಇವರು ತಮ್ಮ ಬಳಿಗಾರ ಕುಟುಂಬದಿಂದ ತಾಯಿ ಶಂಕರಮ್ಮ ಪರಮೇಶ್ವರಪ್ಪ ಬಳಿಗಾರ ಅವರ ಹೆಸರಿನಲ್ಲಿ ಕೊಡಮಾಡಿದ ದತ್ತಿನಿಧಿಯ 5 ಲಕ್ಷ ರೂ ಚೆಕ್‌ನ್ನು ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಡಾ. ಎಚ್.ಎಲ್. ಪುಷ್ಪಾ ಅವರಿಗೆ ಸಲ್ಲಿಸಲಾಯಿತು.

ಈ ಕುರಿತು ಮಾತನಾಡಿದ ಎಸ್.ಪಿ. ಬಳಿಗಾರ, ಈ ದತ್ತಿನಿಧಿಯಿಂದ ಬರುವ ಬಡ್ಡಿ ಹಣದಲ್ಲಿ ಗದ್ಯ ಸಾಹಿತ್ಯ, ಕಾವ್ಯ ಪ್ರಕಾರ ಮತ್ತು ಸಮಾಜ ಸೇವೆ ಈ ಮೂರು ಕ್ಷೇತ್ರಗಳಲ್ಲಿ ಸಲ್ಲಿಸಿದ ಸೇವೆಗೆ ಪ್ರಶಸ್ತಿಯನ್ನು ಪ್ರತಿವರ್ಷದ ಕಾರ್ಯಕ್ರಮದ ವೇಳೆ ಕೊಡಲು ಬಳಿಗಾರ ಕುಟುಂಬ ಅಪೇಕ್ಷಿಸಿದೆ. ಅನ್ನ, ಆಶ್ರಯ, ಅಕ್ಷರ ಎಲ್ಲವನ್ನೂ ನೀಡಿ ಸುಂದರ ಬದುಕು ಕಟ್ಟಿಕೊಳ್ಳಲು ಆಸರೆಯಾದ ಕನ್ನಡ ಸಾರಸ್ವತ ಲೋಕಕ್ಕೆ ಅಳಿಲು ಸೇವೆ ಮಾಡಬೇಕೆಂಬ ಉದ್ದೇಶದಿಂದ ಬಳಿಗಾರ ಕುಟುಂಬದಿಂದ ತಾಯಿಯವರ ಹೆಸರಿನಲ್ಲಿ ದತ್ತಿ ನೀಡಲಾಗಿದೆ. ನಾವು ಪಡೆದಿದ್ದರಲ್ಲಿ ಸ್ವಲ್ಪವನ್ನಾದರೂ ಸಮಾಜಕ್ಕೆ ಮರಳಿಸುವ ಮತ್ತು ಸಾಹಿತ್ಯ ಸೇವೆ ಮಾಡುವ ಮನಸ್ಥಿತಿಯನ್ನೂ ತಾಯಿ ಭುವನೇಶ್ವರಿ ನೀಡಿದ್ದಾಳೆ ಎಂದರು.

ರೋಸ್ ತಗೊಳ್ಳಿ, ಕಡ್ಡಾಯ ಮತದಾನ ಮಾಡಿ

0

ವಿಜಯಸಾಕ್ಷಿ ಸುದ್ದಿ, ನರಗುಂದ : ತಾಲೂಕು ಪಂಚಾಯಿತಿ ಮತ್ತು ತಾಲೂಕು ಸ್ವೀಪ್ ಸಮಿತಿ ವತಿಯಿಂದ ನಗರದ ಸಾರ್ವಜನಿಕರ ಸ್ಥಳಗಳಾದ ಬಸ್ ನಿಲ್ದಾಣ ಹಾಗೂ ಆಟೋ ರಿಕ್ಷಾ ನಿಲ್ದಾಣಗಳಲ್ಲಿನ ಸಾರ್ವಜನಿಕರಿಗೆ ಕಡ್ಡಾಯ ಮತದಾನ ಜಾಗೃತಿ ಮೂಡಿಸಲಾಯಿತು. ಬಸ್ ನಿಲ್ದಾಣದಲ್ಲಿನ ಮತದಾರರನ್ನು ಭೇಟಿಯಾಗಿ, ಕೈಗೆ ರೆಡ್ ರೋಸ್ ನೀಡುವುದರ ಮೂಲಕ ಮೇ.7ರಂದು ಕಡ್ಡಾಯವಾಗಿ ಮತದಾನ ಮಾಡಿ ಎಂದು ತಾ.ಪಂ ಅಧಿಕಾರಿಗಳು ಮನವಿ ಮಾಡಿದರು.

ತಾ.ಪಂ ಇ.ಓ ಮತ್ತು ತಾಲೂಕು ಸ್ವೀಪ್ ಸಮಿತಿ ಅಧ್ಯಕ್ಷ ಸೋಮಶೇಖರ್ ಬಿರಾದಾರ ಮಾತನಾಡಿ, ಪಂಚಾಯತ್ ರಾಜ್ ದಿವಸ್ ಅಂಗವಾಗಿ ಇಂದು ಸಾರ್ವಜನಿಕರ ಸ್ಥಳಗಳಲ್ಲಿ ಕಡ್ಡಾಯ ಮತದಾನ ಜಾಗೃತಿ ಮೂಡಿಸುವ ಕೆಲಸವಾಗುತ್ತಿದೆ. ಲೋಕಸಭೆ ಚುನಾವಣೆಯ ಮತದಾನದ ವೇಳೆ ನಿಮ್ಮ ನಿಮ್ಮ ಗ್ರಾಮಗಳಲ್ಲಿ ಕಡ್ಡಾಯವಾಗಿ ಎಲ್ಲರೂ ಮತ ಚಲಾಯಿಸಬೇಕೆಂದರು. ದೂರದ ಊರುಗಳಿಗೆ ತೆರಳುವ ಪ್ರಯಾಣಿಕರು ಮೇ-7ರ ಮತದಾನ ದಿನವನ್ನು ನೆನಪಿಟ್ಟುಕೊಳ್ಳಬೇಕು. ಎಲ್ಲೇ ಇದ್ದರೂ ಆ ದಿನ ಊರಿಗೆ ಬಂದು ಮತ ಚಲಾಯಿಸಬೇಕು ಎಂದರು.

ಗ್ರಾಮೀಣ ಉದ್ಯೋಗ ಸಹಾಯಕ ನಿರ್ದೇಶಕ ಸಂತೋಷಕುಮಾರ್ ಪಾಟೀಲ್ ಮಾತನಾಡಿ, ಆಟೋ ರಿಕ್ಷಾ ಮೂಲಕ ಪ್ರಯಾಣಿಕರು ಪ್ರತಿನಿತ್ಯ ಸಂಚಾರ ಮಾಡುತ್ತಾರೆ. ಆಟೋ ರಿಕ್ಷಾ ಚಲಾಯಿಸುವವರು ತಮ್ಮ ರಿಕ್ಷಾದಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಕಡ್ಡಾಯವಾಗಿ ಮತದಾನ ಮಾಡಲು ತಿಳಿಹೇಳಬೇಕು. ಈ ಮೂಲಕ ದೇಶದ ಚುನಾವಣೆಯ ಕಡ್ಡಾಯ ಮತದಾನ ಜಾಗೃತಿ ಅಭಿಯಾನದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕೆಂದರು.

ಈ ಸಂದರ್ಭದಲ್ಲಿ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಆನಂದ ಭೋವಿ, ಪಂಚಾಯತ್ ರಾಜ್ ಸಹಾಯಕ ನಿರ್ದೇಶಕರಾದ ಕೃಷ್ಣಮ್ಮ ಹಾದಿಮನಿ, ತಾಲೂಕಿನ ಗ್ರಾಮ ಪಂಚಾಯತಗಳ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು, ತಾಲೂಕಿನ ನರೇಗಾ ಸಿಬ್ಬಂದಿ ವರ್ಗ, ಬಸ್ ನಿಲ್ದಾಣದ ವ್ಯವಸ್ಥಾಪಕರು, ಸಾರಿಗೆ ಇಲಾಖೆ ಸಿಬ್ಬಂದಿ, ತಾಲೂಕು ಪಂಚಾಯತ ಸಿಬ್ಬಂದಿ ವರ್ಗದವರು ಹಾಜರಿದ್ದರು.

ನಗರದ ಬಸ್ ನಿಲ್ದಾಣದ ಮೂಲಕ ಬೇರೆ ಬೇರೆ ಗ್ರಾಮಗಳಿಗೆ, ಜಿಲ್ಲೆಗಳಿಗೆ, ರಾಜ್ಯಗಳಿಗೆ ಸಂಚರಿಸುವ ಪ್ರಯಾಣಿಕರ ಕೈಗೆ ರೆಡ್ ರೋಸ್ ನೀಡಿ ಮತದಾನ ಮಾಡುವ ಸಂಕಲ್ಪ ಮಾಡೋಣ ಎಂದು ಅಧಿಕಾರಿ ವರ್ಗ ಮತದಾನ ಅರಿವು ಮೂಡಿಸಿದರು. ಅಲ್ಲದೆ ನಿಲ್ದಾಣದ ಆಟೋ ರಿಕ್ಷಾ ಸವಾರರನ್ನು ಭೇಟಿಯಾಗಿ ಅವರಿಗೆ ರೋಸ್ ನೀಡಿ ಕಡ್ಡಾಯ ಮತದಾನ ಜಾಗೃತಿ ಅಭಿಯಾನದಲ್ಲಿ ಭಾಗಿಯಾಗಿ ಮತದಾನ ಮಾಡಿ ಮತ್ತು ಪ್ರಯಾಣಿಕರಿಗೆ ಮತದಾನ ಮಾಡುವಂತೆ ತಿಳಿಹೇಳಿ ಎಂದು ಮಾಹಿತಿ ನೀಡಲಾಯಿತು.

ಪತಂಜಲಿ ಯೋಗ ಸಮಿತಿ ಪದಾಧಿಕಾರಿಗಳ ಆಯ್ಕೆ

0

ವಿಜಯಸಾಕ್ಷಿ ಸುದ್ದಿ, ಮುಂಡರಗಿ : ಪತಂಜಲಿ ಯೋಗ ಸಮಿತಿಯ ರಾಜ್ಯ ಪ್ರಭಾರಿಗಳಾದ ಭವರಲಾಲ್ ಆರ್ಯ ಹಾಗೂ ಗದಗ ಪತಂಜಲಿ ಯೋಗ ಸಮಿತಿಯ ಸರ್ವ ಸದಸ್ಯರ ಸಮ್ಮುಖದಲ್ಲಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ತಾಲೂಕಾ ಪ್ರಭಾರಿಗಳನ್ನಾಗಿ ಮಂಜುನಾಥ ಅಳವಂಡಿ, ಮಹಿಳಾ ಪತಂಜಲಿ ಯೋಗ ಸಮಿತಿಯ ತಾಲೂಕಾ ಪ್ರಭಾರಿಗಳನ್ನಾಗಿ ಮಂಜುಳಾ ಇಟಗಿ ಅವರನ್ನು ಆಯ್ಕೆ ಮಾಡಲಾಯಿತು. ಇದೇ ಸಂದರ್ಭದಲ್ಲಿ ಪತಂಜಲಿ ಯೋಗ ವಾರಿಯರ್ ಪ್ರಶಸ್ತಿಯನ್ನು ಮಂಜುನಾಥ್ ಅಳವಂಡಿ, ಮಂಜುಳಾ ಇಟಗಿ, ರೇಣುಕಾ ಅಳವಂಡಿ, ಜಗದೀಶ್ ಸೋನಿ, ಬಿ.ಆರ್. ಕುಲಕರ್ಣಿ, ನಾರಾಯಣಪ್ಪ ಗುಬ್ಬಿ ಅವರಿಗೆ ಪ್ರದಾನ ಮಾಡಲಾಯಿತು.
ಪತಂಜಲಿ ಯೋಗ ಸಮಿತಿಯ ಅಶೋಕ್ ಸವಣೂರು, ಶಂಕರ್ ಕುಕುನೂರು, ಶ್ರೀಕಾಂತ್ ಅಳವಂಡಿ, ಶ್ವೇತಾ ಅಳವಂಡಿ, ವಿಜಯಲಕ್ಷ್ಮಿ ಕುಂಬಾರ್ ಮುಂತಾದವರಿದ್ದರು.

error: Content is protected !!