HomePolitics Newsಸಂವಿಧಾನದ ಹಿತರಕ್ಷಣೆ ನಮ್ಮೆಲ್ಲರ ಕರ್ತವ್ಯ

ಸಂವಿಧಾನದ ಹಿತರಕ್ಷಣೆ ನಮ್ಮೆಲ್ಲರ ಕರ್ತವ್ಯ

Spread the love

ದೇಶಾದ್ಯಂತ ಚುನಾವಣಾ ಕಣ ರಂಗೇರಿದೆ. ರಾಜಕೀಯ ಪಕ್ಷಗಳ ಕಾರ್ಯಕರ್ತರ ಹುಮ್ಮಸ್ಸು ಕೂಡಾ ಹುಚ್ಚು ಹಿಡಿಸುವಷ್ಟರ ಮಟ್ಟಿಗೆ ಇದೆ. ಆದರೆ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ `ಪ್ರಜಾಪ್ರಭುತ್ವ’ ಎಂಬುದರ ಅರ್ಥವೇ ತಿಳಿಯದಷ್ಟು ಜನರು ರಾಜಕೀಯವಾಗಿ ಪ್ರಾಭಾವಿತರಾಗಿರುವುದು ಪ್ರಜಾಪ್ರಭುತ್ವಕ್ಕೆ ಆತಂಕಕಾರಿ ವಿಷಯ ಎನಿಸಿದರೂ ತಪ್ಪಾಗಲಿಕ್ಕಿಲ್ಲ. ಜಗತ್ತಿನ ಎಲ್ಲ ದೇಶಗಳ ಇತಿಹಾಸವನ್ನು ಸ್ವಲ್ಪ ಇಣುಕಿದರೂ ಭಾರತ ವಿಶಿಷ್ಠ ಮತ್ತು ವಿಶೇಷ ಎನಿಸಿದೆ. ಸ್ವಾತಂತ್ರ‍್ಯದ ನಂತರ ಭಾರತವು ಸಂವಿಧಾನದ ನಿರ್ದೇಶನದಂತೆ ನಡೆಯುತ್ತಿದೆ.

ಸಮಸ್ತ ಭಾರತೀಯರಿಗೆ ಎಲ್ಲ ಜಾತಿ, ಧರ್ಮ, ಪಂಥಗಳನ್ನು ಮೀರಿ ಸಮಾನ ಅವಕಾಶಗಳನ್ನು ಕಲ್ಪಿಸಿ ಮೂಲಭೂತ ಹಕ್ಕುಗಳನ್ನು ಒದಗಿಸಿ, ಒಬ್ಬ ಪ್ರಜೆಯಾದವನು ಪ್ರಧಾನಿಯನ್ನು ಕೂಡ ಪ್ರಶ್ನಿಸಬಹುದು ಎಂಬ ಶ್ರೇಷ್ಠ ಸಂದೇಶವನ್ನು ಸಾರಿದ ಬಲಿಷ್ಠ ಸಂವಿಧಾನ ನಮ್ಮದು.

ಆದರೆ ನಮ್ಮ ಬಲಿಷ್ಠ ಸಂವಿಧಾನ ರಾಜಕೀಯ ಪಕ್ಷಗಳ, ಅಧಿಕಾರದಾಹಿ ನಾಯಕರ ಕೈಯಲ್ಲಿ ಸಿಕ್ಕು ದಿನ ದಿನಕ್ಕೂ ನಲುಗುತ್ತಿದೆ. ಕೆಲವು ವರ್ಷಗಳಿಂದ ರಾಜಕೀಯ ನಾಯಕರು ಸಂವಿಧಾನ ಬದಲಾವಣೆಯ ಕುರಿತು ನೀಡುವ ಬಹಿರಂಗ ಹೇಳಿಕೆಗಳು ಅಕ್ಷರಶಃ ಪ್ರಜ್ಞಾವಂತ ಭಾರತೀಯರಿಗೆ ಭಯ ಹೆಚ್ಚಿಸಿದ್ದು ಸುಳ್ಳಲ್ಲ.

ಯಾಕೆಂದರೆ ಇಂದು ನಾವು ನೀವೆಲ್ಲರೂ ನಿರ್ಭಯವಾಗಿ ಯಾರ ಹಂಗಿನಲ್ಲಿಯೂ ಇರದೇ ಬದುಕುತ್ತಿದ್ದೇವೆ ಎಂದರೆ ಅದರ ಹಿಂದೆ ಸಂವಿಧಾನ ನಮಗೆ ಕೊಟ್ಟಿರುವ ಹಕ್ಕುಗಳೇ ಕಾರಣ.

ಅಂಥ ಬಲಿಷ್ಠ ಸಂವಿಧಾನವನ್ನೇ ಸಂವಿಧಾನ ಬದ್ಧ ಹುದ್ದೆಯಲ್ಲಿರುವ ನಾಯಕರುಗಳು ಬದಲಾವಣೆ ಮಾಡುತ್ತೇವೆ ಎನ್ನುತ್ತಾರೆ ಎಂದರೆ ಖಂಡಿತವಾಗಿಯೂ ಪ್ರತೀ ಭಾರತೀಯನೂ ಯೋಚಿಸಿಲೇಬೇಕು. ನಾವು ಎಡವಿದ್ದು ಎಲ್ಲಿ ಎಂಬುದನ್ನು ಅರಿತುಕೊಳ್ಳಲೇಬೇಕು. ಯಾಕೆಂದರೆ ಸಂವಿಧಾನ ಬದಲಾದರೆ ನಾವು ರಾಜಪ್ರಭುತ್ವದಲ್ಲಿ ಬದುಕಬೇಕಾಗಬಹುದು. ರಾಜ ಪ್ರಭುತ್ವ ಎಂಬುದು ಒಂದು ರೀತಿಯ ಸರ್ವಾಧಿಕಾರ.

ಅಲ್ಲಿ ಪ್ರಜೆಗಳ ಹಿತಾಸಕ್ತಿಗಿಂತ ರಾಜಕೀಯ ಹಿತಾಸಕ್ತಿಗಳು ತಾಂಡವವಾಡುತ್ತವೆ ಎಂಬುದು ಸುಳ್ಳಲ್ಲ.
ಹಾಗಾಗಿ ನಾವು ಆಗು ಹೋಗುಗಳ ಕುರಿತಾಗಿ, ಭವಿಷ್ಯದ ಆಲೋಚನೆಗಳನ್ನು ವಿಮರ್ಶಿಸಿ ಯಾವುದು ಸೂಕ್ತ ಎಂಬುದನ್ನು ಅರಿತು ಮತದಾನ ಮಾಡುವ ಜವಾಬ್ದಾರಿ ನಮ್ಮ ಮೇಲಿದೆ. ಚುನಾವಣೆ ವ್ಯಾಪಾರ ಅಲ್ಲ. ನಾನು ಮತ್ತು ನನ್ನ ಮತ ಮಾರಾಟಕ್ಕಿಲ್ಲ. ಪ್ರಜಾಪ್ರಭುತ್ವದಲ್ಲಿ ಮತದಾರರೇ ಶ್ರೇಷ್ಠ. ಮತದಾರರಿಂದ ಮಾತ್ರ ಸಮಾಜದ ಬದಲಾವಣೆ ಸಾಧ್ಯ. ಅದಕ್ಕಾಗಿ ಯಾರೂ ನಿಮ್ಮ ಮತಗಳನ್ನು ಮಾರಿಕೊಳ್ಳಬೇಡಿ. ಎಲ್ಲ ಪ್ರಜೆಗಳು ಮೊದಲು ನಾವು ಏಕೆ ಮತ ಹಾಕಬೇಕು ಎಂಬುದನ್ನು ತಿಳಿದುಕೊಳ್ಳಬೇಕು.

ನಾವು ಏಕೆ ಮತ ಹಾಕಬೇಕು?: ನಾವು ಏಕೆ ಮತ ಹಾಕಬೇಕು ಮತ್ತು ಮತ ಹಾಕಿದರೆ ನಮಗೆ ಸಿಗುವ ಅನುಕೂಲ ಅನಾನುಕೂಲಗಳು ಏನು? ನನ್ನ ಒಂದು ಮತಕ್ಕೆ ಸಮಾಜವನ್ನು ಬದಲಿಸುವ ಶಕ್ತಿ ಇದೆಯಾ?

ರಾಜಕೀಯ ವ್ಯವಸ್ಥೆ ಬಗ್ಗೆ ಜನರಿಗೆ ಇರುವ ಅಭಿಪ್ರಾಯ ಏನು? ಹೀಗೆ ಹಲವಾರು ಪ್ರಶ್ನೆಗಳು ಮತದಾರರಲ್ಲಿ ಇವೆ. ಸದೃಢ ಪ್ರಜಾಪ್ರಭುತ್ವದ ನಿರ್ಮಾಣಕ್ಕೆ ಮತದಾರರ ಸಹಭಾಗಿತ್ವ ಅತ್ಯಗತ್ಯ. ಪ್ರತಿಯೊಬ್ಬರೂ ತಪ್ಪದೇ ಮತ ಹಾಕಬೇಕು. ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕು. ಇದರಿಂದ ದೇಶ ಸದೃಢವಾಗುತ್ತದೆ ಎಂಬ ವಿಷಯ ಮತದಾರರು ತಿಳಿದುಕೊಳ್ಳಬೇಕು. ಎಲ್ಲ ಮತದಾರರು ತಮ್ಮ ಮತವನ್ನು ಮಾರಿಕೊಳ್ಳದೇ ವೈಯಕ್ತಿಕ ಹಿತಾಸಕ್ತಿ, ಆಸೆ, ಆಮಿಷಗಳನ್ನು ಬದಿಗಿಟ್ಟು ಸಂವಿಧಾನವನ್ನು ರಕ್ಷಣೆ ಮಾಡುವಂತಹ, ಸಂವಿಧಾನದ ಕುರಿತಾಗಿ ಅಭಿಮಾನವುಳ್ಳ, ಸಂವಿಧಾನದ ಆಶಯಗಳನ್ನು ತನ್ನ ಜೀವನದಲ್ಲಿ ಅಳವಡಿಸಿಕೊಂಡಿರುವ ಸೂಕ್ತ ಅಭ್ಯರ್ಥಿಗೆ ನಮ್ಮ ಅಮೂಲ್ಯ ಮತವನ್ನು ನೀಡಬೇಕು. `ದೇಶ ನಮಗೇನು ನೀಡಿದೆ ಎನ್ನುವುದಕ್ಕಿಂತ, ದೇಶಕ್ಕಾಗಿ ನಾವೇನು ನೀಡಿದ್ದೇವೆ’ ಎಂಬುದು ನಾವು ಚಿಕ್ಕಂದಿನಿಂದಲೂ ಕಲಿತ ಪಾಠ. ಆದರೆ, ನಾವು ನ್ಯಾಯಯುತವಾಗಿ ನೀಡುವ ಒಂದು ಮತ ದೇಶವನ್ನು ರಕ್ಷಿಸಬಲ್ಲದು, ಸಂವಿಧಾನವನ್ನು ಕಾಪಾಡಬಲ್ಲದು, ಪ್ರಜೆಗಳ ಹಿತಾಸಕ್ತಿಯನ್ನು ಅರಿಯಬಲ್ಲದು ಎಂಬುದನ್ನು ಅವಲೋಕಿಸಿ ಚಲಾಯಿಸಿದ ಮತ ಮಾತ್ರ ಭಾರತದ ರಾಜಕಾರಣದ ದಿಕ್ಕನ್ನು ಬದಲಿಸಲು ಸಾದ್ಯ.

ಅಧಿಕಾರ ಎಂಬುದು ಪ್ರಜಾ ಪ್ರಭುತ್ವ ವ್ಯವಸ್ಥೆಯಲ್ಲಿ ನಿಂತ ನೀರಾಗಬಾರದು, ಹರಿಯುವ ನೀರಾಗಬೇಕು. ಹರಿಯುವ ನೀರಿನಲ್ಲಿರುವ ಪರಿಶುದ್ಧತೆ ನಿಂತ ನೀರಿನಲ್ಲಿರಲು ಸಾಧ್ಯವಿಲ್ಲ. ನಿಂತ ನೀರು ಎಷ್ಟು ಮಲಿನವೋ, ಅಧಿಕಾರ ಏಕ ವ್ಯಕ್ತಿ ಒಡೆತನದಲ್ಲಿರುವುದು ಅಷ್ಟೇ ಮಲೀನವಾದುದು. ಮಲಿನತೆಯನ್ನು ಸಹಿಸಿಕೊಳ್ಳುವ ಮನೋಭಾವ ನಮ್ಮದಾಗಬಾರದು, ಶುದ್ಧತೆಯನ್ನು ಕಾಪಾಡಿಕೊಳ್ಳುವ ಮನಸ್ಥಿತಿ, ಪ್ರಜ್ಞಾವಂತಿಕೆ ನಮ್ಮದಾಗಬೇಕು. ಅದಕ್ಕಾಗಿ ಯಾವುದೇ ಮತದಾರರು ನಿಮ್ಮ ಮತವನ್ನು ಯಾವುದೇ, ಆಸೆ, ಆಮಿಷಗಳಿಗೆ, ಭಾವನಾತ್ಮಕ ವಿಷಯಗಳಿಗೆ ಬಲಿಯಾಗದೆ, ನಮ್ಮ ಸುತ್ತ ಮುತ್ತಲಿನ ಅಭಿವೃದ್ಧಿಯನ್ನು ಪರಿಗಣಿಸಿ, ಅಭಿವೃದ್ಧಿಯ ಕನಸು ಹೊತ್ತಿರುವ, ನಿಮಗೆ ಸೂಕ್ತ ಎನಿಸಿರುವ ಅಭ್ಯರ್ಥಿಗೆ ಸ್ವ ಆಲೋಚನೆಯಿಂದ ಯೋಚಿಸಿ, ಮತವನ್ನು ಮಾರಿಕೊಳ್ಳದೇ ಮತ ಚಲಾಯಿಸಿ. ನಿಮ್ಮ ಒಂದು ಮತಕ್ಕೆ ಸಂವಿಧಾನ ರಕ್ಷಿಸುವ ಶಕ್ತಿಯಿದೆ, ದೇಶದ ಹಿತಾಸಕ್ತಿಯನ್ನು ಕಾಪಾಡುವ ಶಕ್ತಿಯಿದೆ. ಜನರಿಗೆ ಸ್ಪಂದಿಸುವ ನಾಯಕನನ್ನು ನಾಡಿಗೆ ಒದಗಿಸುವ ಶಕ್ತಿಯಿದೆ ಎಂಬುದನ್ನು ಮರೆಯದೆ ಗಮನದಲ್ಲಿಟ್ಟುಕೊಂಡು ಆತ್ಮಾಭಿಮಾನದಿಂದ ಮತವನ್ನು ನೀಡಿ.
– ಪ್ರಶಾಂತ ಮಡಿವಾಳರ, ಶಿರೋಳ.

vote


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!