HomeGadag Newsಗುಡುಗು-ಸಿಡಿಲಿನಿಂದ ಎಚ್ಚರ ವಹಿಸಿ : ವೈಶಾಲಿ ಎಂ.ಎಲ್.

ಗುಡುಗು-ಸಿಡಿಲಿನಿಂದ ಎಚ್ಚರ ವಹಿಸಿ : ವೈಶಾಲಿ ಎಂ.ಎಲ್.

Spread the love

ವಿಜಯಸಾಕ್ಷಿ ಸುದ್ದಿ, ಗದಗ : ಜಿಲ್ಲೆಯಲ್ಲಿ ಗುಡುಗು ಮತ್ತು ಸಿಡಿಲು ಸಂದರ್ಭದಲ್ಲಿ ಸಂಭವಿಸಬಹುದಾದ ಹಾನಿಯಿಂದ ಸಂರಕ್ಷಣೆಗೆ ಅಗತ್ಯ ಕ್ರಮ ಅನುಸರಿಸಬೇಕು ಎಂದು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ತಿಳಿಸಿದ್ದಾರೆ.

ಹೊರಗೆ ಹೋಗುವ ಅನಿವಾರ್ಯವಿದ್ದಲ್ಲಿ ಹವಾಮಾನ ಮುನ್ಸೂಚನೆ ಹಾಗೂ ಕಾಮನ್ ಅಲರ್ಟಿಂಗ್ ಪ್ರೊಟೊಕಾಲ್ (ಕ್ಯಾಪ್) ಮುಖಾಂತರ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದಿಂದ ಬರುವ ಸಂದೇಶ ಗಮನಿಸಬೇಕು. ಪ್ರತಿಕೂಲ ಹವಾಮಾನದ ಸಮಯದಲ್ಲಿ ವಿಶೇಷವಾಗಿ ಕೃಷಿ ಕ್ಷೇತ್ರದಲ್ಲಿ ಕೆಲಸ ಮಾಡಲು, ಜಾನುವಾರುಗಳನ್ನು ಮೇಯಿಸಲು, ಮೀನುಗಾರಿಕೆ ಮತ್ತು ದೋಣಿಗಳನ್ನು ಓಡಿಸಲು ಅಥವಾ ಸಾಮಾನ್ಯ ಪ್ರಯಾಣಕ್ಕಾಗಿ ಮನೆಯಿಂದ ಹೊರಗೆ ಹೋಗದಿರುವುದು ಸೂಕ್ತ.

ಗುಡುಗು-ಸಿಡಿಲಿನ ಸಂದರ್ಭದಲ್ಲಿ ಲೋಹದ ತಗಡನ್ನು ಹೊದಿಸಿರುವ ಮನೆಗಳು ಸುರಕ್ಷಿತವಲ್ಲ. ಸುರಕ್ಷಿತವಾದ ಕಟ್ಟಡಗಳಾದ ಮನೆ, ಕಚೇರಿ, ಅಂಗಡಿ ಮತ್ತು ಕಿಟಕಿ ಮುಚ್ಚಿರುವ ವಾಹನಗಳಲ್ಲಿ ಆಶ್ರಯ ಪಡೆಯುವುದು. ಕೆರೆ ಮತ್ತು ನದಿಗಳು ಹಾಗೂ ಇನ್ನಿತರೆ ನೀರಿನ ಮೂಲಗಳಿಂದ ತಕ್ಷಣವೇ ದೂರವಿರುವುದು.

ವಿದ್ಯುತ್ ಉಪಕರಣ ಹಾಗೂ ವಿದ್ಯುತ್ ಸರಬರಾಜು ಮಾರ್ಗ, ದೂರವಾಣಿ ಸಂಪರ್ಕ, ಮೊಬೈಲ್ ಟವರ್, ಪವನ ವಿದ್ಯುತ್ ಗೋಪುರ ಹಾಗೂ ರೈಲು ಹಳಿಗಳಿಂದ ದೂರವಿರುವುದು.

ಗುಡುಗು-ಸಿಡಿಲಿನ ಮುನ್ಸೂಚನೆ ಅಥವಾ ಮುನ್ನೆಚ್ಚರಿಕೆ ಇದ್ದಲ್ಲಿ ಪ್ರಯಾಣ ಮುಂದೂಡುವುದು ಹಾಗೂ ಮನೆಯಲ್ಲೇ ಇರುವುದು. ವಾಹನ ಚಾಲನೆಯಲ್ಲಿದ್ದರೆ ತಕ್ಷಣವೇ ವಾಹನ ನಿಲ್ಲಿಸಿ ವಾಹನದಲ್ಲಿಯೇ ಆಶ್ರಯ ಪಡೆಯುವುದು ಅಗತ್ಯ ಎಂದು ತಿಳಿಸಿದ್ದಾರೆ.

ಮಿಂಚನ್ನು ಆಕರ್ಷಿಸುವಂತಹ ವಿದ್ಯುತ್, ಟೆಲಿಫೋನ್ ಕಂಬಗಳು ಅಥವಾ ಮರಗಳ ಕೆಳಗೆ ಆಶ್ರಯ ಪಡೆಯಬಾರದು. ಅರಣ್ಯ ಪ್ರದೇಶದಲ್ಲಿದ್ದರೆ ಸಣ್ಣ ಮರಗಳ ಕೆಳಗೆ ಆಶ್ರಯ ಪಡೆಯುವುದು. ಸಿಡಿಲು ಸಂದರ್ಭದಲ್ಲಿ ಮೊಬೈಲ್ ಫೋನ್‌ಗಳನ್ನು ಬಳಸಬಾರದು ಹಾಗೂ ವಿದ್ಯುತ್ ಸಂಪರ್ಕ ಹೊಂದಿರುವ ದೂರವಾಣಿಯನ್ನು ಬಳಸಬಾರದು.

ಮಕ್ಕಳು, ವಯೋವೃದ್ಧರು, ಜಾನುವಾರುಗಳನ್ನು ಹಾಗೂ ಸಾಕು ಪ್ರಾಣಿಗಳನ್ನು ಸುರಕ್ಷಿತ ಸ್ಥಳಗಳಲ್ಲಿ ಇರುವಂತೆ ಗಮನಹರಿಸುವುದು. ಸಿಡಿಲಿನ ಸಂದರ್ಭದಲ್ಲಿ ಕಟ್ಟಡದ ಕೊಳಾಯಿ ಮತ್ತು ಲೋಹದ ಕೊಳವೆಗಳ ಮೂಲಕ ವಿದ್ಯುತ್ ಹರಿಯುವ ಸಾಧ್ಯತೆ ಇರುವುದರಿಂದ ಈ ಸಂದರ್ಭದಲ್ಲಿ ಸ್ನಾನ ಅಥವಾ ಶವರ್ ತೆಗೆದುಕೊಳ್ಳಬಾರದು ಪಾತ್ರೆಗಳನ್ನು ತೊಳೆಯಬಾರದು, ಬಟ್ಟೆ ಒಗೆಯಬಾರದು.

ದೋಣಿ ವಿಹಾರ ಅಥವಾ ಈಜುತ್ತಿದ್ದರೆ ಸಾಧ್ಯವಾದಷ್ಟು ಸುರಕ್ಷಿತ ಸ್ಥಳದಲ್ಲಿ ಆಶ್ರಯ ಪಡೆಯುವುದು. ಅರಣ್ಯ ಪ್ರದೇಶದಿಂದ ಗಿಡ-ಗಡ್ಡೆಗಳಿಲ್ಲದ ಸ್ವಚ್ಛ ಪ್ರದೇಶದ ಕಡೆಗೆ ಚಲಿಸುವುದು. ಮಿಂಚಿನ ಹೊಡೆತದಿಂದಾಗಿ ಕಾಡ್ತಿಚ್ಚು ಸಂಭವಿಸುವ ಸಾಧ್ಯತೆಯಿದೆ. ಗುಡುಗು ಸಿಡಿಲಿನ ಸಮಯದಲ್ಲಿ ಬಯಲು ಪ್ರದೇಶದಲ್ಲಿ ಸಿಲುಕಿಕೊಂಡಿದ್ದರೆ, ತಕ್ಷಣವೇ ಹತ್ತಿರದಲ್ಲೇ ಇರುವ ಸುರಕ್ಷಿತ ಸ್ಥಳದಲ್ಲಿ ಆಶ್ರಯ ಪಡೆದು ಅಪಾಯದಿಂದ ಪಾರಾಗುವುದು.

ಮಿಂಚು ಬರುವ ಸಮಯದಲ್ಲಿ ರಬ್ಬರ್ ಸೋಲ್ ಇರುವ ಪಾದರಕ್ಷೆಗಳು ಮತ್ತು ಕಾರಿನ ಚಕ್ರಗಳು ಸುರಕ್ಷಿತವಲ್ಲದ ಕಾರಣ ಅವುಗಳಿಂದ ದೂರವಿರುವುದು. ವಿದ್ಯುತ್ ಸಂಪರ್ಕ ಹೊಂದಿರುವ ಕಂಪ್ಯೂಟರ್, ವಿಡಿಯೋ ಗೇಮ್ ಸಾಧನಗಳು, ಮೊಬೈಲ್ ಫೋನ್, ವಾಷಿಂಗ್ ಮಷಿನ್, ಸೈನ್ ಹಾಗೂ ಇತರ ವಿದ್ಯುತ್ ಉಪಕರಣಗಳ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸುವುದು.

ಆಘಾತಕ್ಕೊಳಗಾದ ವ್ಯಕ್ತಿಯಲ್ಲಿ ಉಸಿರಾಟವು ಕಂಡುಬರದಿದ್ದಲ್ಲಿ, ತಕ್ಷಣವೇ ಕೃತಕ ಉಸಿರಾಟ ಪ್ರಕ್ರಿಯೆಯನ್ನು ಪ್ರಾರಂಭಿಸಬೇಕು. ವ್ಯಕ್ತಿಯಲ್ಲಿ ಎದೆಬಡಿತವು ಕಂಡು ಬರದಿದ್ದಲ್ಲಿ ತಕ್ಷಣವೇ ಪ್ರಕ್ರಿಯೆಯನ್ನು ಪ್ರಾರಂಭಿಸಬೇಕು. ಸಿಡಿಲಿನ ಹೊಡೆತಕ್ಕೆ ಒಳಗಾದ ವ್ಯಕ್ತಿಯ ಕಣ್ಣಿನ ದೃಷ್ಟಿ, ಕಿವಿ ಕೇಳಿಸುವಿಕೆ ಹಾಗೂ ಮೂಳೆಗಳ ಮುರಿದಿವೆಯೇ ಎಂದು ಪರೀಕ್ಷಿಸಬೇಕು. ಇದರಿಂದ ಪಾರ್ಶ್ವವಾಯು/ಲಕ್ವಾ ಹೊಡೆಯುವುದನ್ನು ಮತ್ತು ಅಧಿಕ ರಕ್ತಸ್ರಾವದಿಂದ ಉಂಟಾಗುವ ಅಪಾಯಗಳನ್ನು ತಡೆಗಟ್ಟಬಹುದು.

ಸಿಡಿಲಿನ ಹೊಡೆತಕ್ಕೆ ಒಳಗಾದ ವ್ಯಕ್ತಿಯು ವಿವಿಧ ರೀತಿಯ ಸುಟ್ಟ ಗಾಯಗಳಿಂದ ಬಳಲಬಹುದು ಹಾಗೂ ಕಾಣದ ಗಾಯಗಳು/ಅಘಾತಕ್ಕೆ ಒಳಗಾಗಿರಬಹುದು. ವ್ಯಕ್ತಿಯಲ್ಲಿ ಇಂತಹ ಲಕ್ಷಣಗಳಿದ್ದಲ್ಲಿ ಸೂಕ್ತ ಚಿಕಿತ್ಸೆಗಾಗಿ ತಕ್ಷಣವೇ ಹತ್ತಿರದ ಆಸ್ಪತ್ರೆಗೆ ಕಳುಹಿಸಬೇಕು. ಸಿಡಿಲು ಬಡಿದಿರುವ ವ್ಯಕ್ತಿಯಿರುವ ಸ್ಥಳಕ್ಕೆ ತಲುಪಲು ಹಾಗೂ ಸಿಡಿಲು ಬಡಿತಕ್ಕೆ ಒಳಗಾದ ವ್ಯಕ್ತಿಯ ಆರೋಗ್ಯಸ್ಥಿತಿಯ ಬಗ್ಗೆ ನಿಖರವಾದ ಮಾಹಿತಿ ನೀಡಬೇಕು ಮತ್ತು ಸಿಡಿಲಿನ ಹೊಡೆತಕ್ಕೆ ಒಳಗಾದ ವ್ಯಕ್ತಿಯನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಬೇಕು ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಿಡಿಲು/ಮಿಂಚು ಬಡಿದ ಸಮಯದಲ್ಲಿ ಪ್ರಾಥಮಿಕವಾಗಿ 112/108 ಸಹಾಯವಾಣಿಗೆ ಕರೆ ಮಾಡಬೇಕು. ವೈದ್ಯಕೀಯ ಸಿಬ್ಬಂದಿಯು ಆಗಮಿಸುವ ಮುನ್ನವೇ ಅಗತ್ಯ ಪ್ರಥಮ ಚಿಕಿತ್ಸೆಯಿಂದ ಸಿಡಿಲು/ಮಿಂಚಿನ ಹೊಡೆತಕ್ಕೆ ಒಳಗಾದ ವ್ಯಕ್ತಿಯ ಜೀವವನ್ನು ಉಳಿಸಬಹುದಾಗಿದೆ. ಸಿಡಿಲಿನ ಹೊಡೆತಕ್ಕೆ ಒಳಗಾದ ವ್ಯಕ್ತಿಯನ್ನು ಮುಟ್ಟಿ ಉಪಚರಿಸುವದರಿಂದ ಯಾವುದೇ ಅಪಾಯವಿರುವುದಿಲ್ಲ. ಸಿಡಿಲಿನ ಹೊಡೆತಕ್ಕೆ ಒಳಗಾದ ವ್ಯಕ್ತಿಯ ಉಸಿರಾಟ ಹಾಗೂ ಎದೆ ಬಡಿತವನ್ನು ಪರೀಕ್ಷಿಸಬೇಕು. ವ್ಯಕ್ತಿಯ ದವಡೆಗೆ ನೇರವಾಗಿ ಕುತ್ತಿಗೆಯಲ್ಲಿರುವ ರಕ್ತನಾಳವನ್ನು ಪರೀಕ್ಷಿಸುವುದರಿಂದ ಸುಲಭವಾಗಿ ನಾಡಿ ಮಿಡಿತವನ್ನು ತಿಳಿಯಬಹುದು.


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!