ನವದೆಹಲಿ: ರಾಜಿ ಮಾಡಿಕೊಂಡಿರುವ ಪ್ರಧಾನಿಯಿಂದ ದೇಶವನ್ನು ಸಮರ್ಥವಾಗಿ ಮುನ್ನಡೆಸಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೈದರಾಬಾದ್ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪ್ರಧಾನಿ ಮೋದಿ ಅವರು ಚಿನ್ನ ಖರೀದಿಸಬೇಡಿ, ವಿದೇಶ ಪ್ರವಾಸ ಕಡಿಮೆ ಮಾಡಿ ಹಾಗೂ ಪೆಟ್ರೋಲ್ ಬಳಕೆಯನ್ನು ನಿಯಂತ್ರಿಸಿ ಎಂದು ಜನರಿಗೆ ಸಲಹೆ ನೀಡಿದ್ದನ್ನು ಉಲ್ಲೇಖಿಸಿ ರಾಹುಲ್ ಗಾಂಧಿ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಈ ಕುರಿತು ಪೋಸ್ಟ್ ಮಾಡಿರುವ ಅವರು, “ರಸಗೊಬ್ಬರ ಹಾಗೂ ಅಡುಗೆ ಎಣ್ಣೆ ಬಳಕೆಯನ್ನು ಕಡಿಮೆ ಮಾಡಿ, ಮೆಟ್ರೋದಲ್ಲಿ ಪ್ರಯಾಣಿಸಿ, ಮನೆಯಿಂದಲೇ ಕೆಲಸ ಮಾಡಿ ಎಂಬ ರೀತಿಯಲ್ಲಿ ಜನರಿಗೆ ಧರ್ಮೋಪದೇಶ ನೀಡಲಾಗುತ್ತಿದೆ. ಇದು ಕೇವಲ ಸಲಹೆಗಳಲ್ಲ, ಕೇಂದ್ರ ಸರ್ಕಾರದ ವೈಫಲ್ಯದ ಸ್ಪಷ್ಟ ಉದಾಹರಣೆಗಳಾಗಿವೆ” ಎಂದು ಆರೋಪಿಸಿದ್ದಾರೆ.
ಕಳೆದ 12 ವರ್ಷಗಳಲ್ಲಿ ದೇಶವನ್ನು ಯಾವ ಸ್ಥಿತಿಗೆ ತಂದಿದ್ದಾರೆ ಎಂಬುದು ಈಗ ಸ್ಪಷ್ಟವಾಗುತ್ತಿದೆ. ಪ್ರತೀ ಬಾರಿ ತಮ್ಮ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲು ಕೇಂದ್ರ ಸರ್ಕಾರ ಜನರ ಮೇಲೆಯೇ ಹೊಣೆ ಹೊರಿಸುತ್ತಿದೆ ಎಂದು ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.



