ವಿಜಯಸಾಕ್ಷಿ ಸುದ್ದಿ, ಗದಗ : ನಾಡಿನ ಜಾತ್ರೆಗಳಲ್ಲಿಯೇ ಮಾದರಿಯ ಜಾತ್ರೆಯೆನಿಸಿದ ಐತಿಹಾಸಿಕ ಗದುಗಿನ ತೋಂಟದಾರ್ಯ ಮಹಾರಥೋತ್ಸವವು ಪೂಜ್ಯ ಜಗದ್ಗುರು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳವರ ಸಾನ್ನಿಧ್ಯದಲ್ಲಿ ಮಂಗಳವಾರ ಸಂಜೆ 6.30ಕ್ಕೆ ಅಸಂಖ್ಯಾತ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.
ಅಡ್ಡಪಲ್ಲಕ್ಕಿಯಲ್ಲಿ ಬಸವಣ್ಣನವರ ಹಾಗೂ ಸಿದ್ಧಲಿಂಗೇಶ್ವರರ ಭಾವಚಿತ್ರಗಳನ್ನು, ವಚನದ ಕಟ್ಟುಗಳನ್ನು ಇಟ್ಟು ಮೆರವಣಿಗೆ ಮಾಡಲಾಯಿತು. ಡಾ.ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಸಾವಿರಾರು ಭಕ್ತರೊಂದಿಗೆ ಎರಡು ಕಿ.ಮಿ ಉದ್ದದ ಮೆರವಣಿಗೆಯೊಂದಿಗೆ ನಡೆದು ಸಾಗಿದರು. ಪೂಜ್ಯ ಶ್ರೀ ಜಗದ್ಗುರು ಡಾ. ಸಾರಂಗಧರ ದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು, ಸಾರಂಗಮಠ ಶ್ರೀಶೈಲ ಹಾಗೂ ಸುಲಫಲಮಠ, ಕಲಬುರ್ಗಿ, ಪೂಜ್ಯ ಶ್ರೀ ಮ.ನಿ.ಪ್ರ. ಗುರುಮಹಾಂತ ಮಹಾಸ್ವಾಮಿಗಳು ವಿಜಯಮಹಾಂತೇಶ್ವರ ಮಠ, ಚಿತ್ತರಗಿ-ಇಲಕಲ್ಲ, ಪೂಜ್ಯ ಶ್ರೀ ಮ.ನಿ.ಪ್ರ. ಡಾ. ಶಿವಾನಂದ ಮಹಾಸ್ವಾಮಿಗಳು ವಿರಕ್ತಮಠ, ಸೊನ್ನ ಭೈರನಟ್ಟಿ, ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಮಹಾಸ್ವಾಮಿಗಳು, ಕೆಂಚಬಸವ ಶಿವಾಚಾರ್ಯ ಸ್ವಾಮಿಗಳು ರೋಜಾ ಹಿರೇಮಠ, ರೇವಣಸಿದ್ಧ ಶಿವಾಚಾರ್ಯ ಸ್ವಾಮಿಗಳು, ಶಿವಾನಂದ ಶಿವಾಚಾರ್ಯ ಮಹಾಸ್ವಾಮಿಗಳು, ಹರ್ಲಾಪೂರದೇವರು ಮುಂತಾದ ಹರಗುರುಚರಮೂರ್ತಿಗಳು ಭಾಗವಹಿಸಿದ್ದರು.
10ಕ್ಕೂ ಹೆಚ್ಚು ಸಾಂಸ್ಕೃತಿಕ ಕಲಾತಂಡಗಳು ಮೆರವಣಿಗೆಯುದ್ದಕ್ಕೂ ಪಾಲ್ಗೊಂಡವು.
ರಥೋತ್ಸವಕ್ಕೆ ಮುನ್ನ ಪರಂಪರೆಯಂತೆ ಶ್ರೀ ವೀರನಾರಾಯಣ ರಸ್ತೆಯಲ್ಲಿರುವ ಎಸ್.ಎಸ್. ಕಳಸಾಪೂರಶೆಟ್ರ ನಿವಾಸದಿಂದ ಮೆರವಣಿಗೆಯಲ್ಲಿ ಕಾಲ್ನಡಿಗೆಯ ಮೂಲಕ ಡಾ.ತೋಂಟದ ಸಿದ್ಧರಾಮ ಶ್ರೀಗಳು ಶ್ರೀಮಠಕ್ಕೆ ಆಗಮಿಸಿದರು.
ತೋಂಟದಾರ್ಯ ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ಪ್ರೊ. ಕೆ.ಎಚ್ ಬೇಲೂರ, ಉಪಾಧ್ಯಕ್ಷ ಅಮರೇಶ ಚಾಗಿ, ಶ್ರೀದೇವಿ ಶೆಟ್ಟರ್, ಶಿವಯ್ಯ ನಾಲತ್ವಾಡಮಠ, ಕಾರ್ಯದರ್ಶಿ ಪ್ರವೀಣ ವಾರಕರ, ಸಹ ಕಾರ್ಯದರ್ಶಿ ಗವಿಸಿದ್ಧಪ್ಪ ಗಾಣಿಗೇರ, ಬರಕತಲಿ ಮುಲ್ಲಾ, ಚಂದ್ರಶೇಖರ ಇಟಗಿ, ಸಂಘಟನಾ ಕಾರ್ಯದರ್ಶಿ ತಿಮ್ಮರೆಡ್ಡಿ ಕೋನರಡ್ಡಿ, ಕೋಶಾಧ್ಯಕ್ಷ ವಿಶ್ವನಾಥ ಹಳ್ಳಿಕೇರಿ, ಸಹ ಕೋಶಾಧ್ಯಕ್ಷ ಅಜಯ ಮುನವಳ್ಳಿ, ಶ್ರೀಮಠದ ಆಡಳಿತಾಧಿಕಾರಿ ಶಿವಾನಂದ ಪಟ್ಟಣಶೆಟ್ಟರ, ಎಸ್.ಎಸ್. ಪಟ್ಟಣಶೆಟ್ಟಿ, ವ್ಯವಸ್ಥಾಪಕರಾದ ಎಂ.ಎಸ್. ಅಂಗಡಿ, ಅಮರೇಶ ಅಂಗಡಿ, ರಾಜು ಕುರಡಗಿ, ಶೇಖಣ್ಣ ಕವಳಿಕಾಯಿ, ಸದು ಮದರಿಮಠ ಸೇರಿದಂತೆ ಶ್ರೀಮಠದ ಸದ್ಭಕ್ತರು ಉಪಸ್ಥಿತರಿದ್ದರು.
ರಸ್ತೆಯುದ್ದಕ್ಕೂ ಹಿಂದೂ, ಮುಸ್ಲಿಂ ಸೇರಿದಂತೆ ಎಲ್ಲಾ ಸಮುದಾಯದವರು ಬಸವೇಶ್ವರ ಮತ್ತು ಸಿದ್ಧಲಿಂಗೇಶ್ವರ ವಚನ ಕಟ್ಟುಗಳಿಗೆ ಹಾಗೂ ಪೂಜ್ಯರಿಗೆ ಗೌರವ ಸಲ್ಲಿಸಿದರು. ಮೆರವಣಿಗೆಯಲ್ಲಿ ಪಾಲ್ಗೊಂಡ ಭಕ್ತರಿಗೆ ಮತ್ತು ಮೆರವಣಿಗೆ ತಂಡಗಳಿಗೆ ವರ್ತಕರು ಕುಡಿಯಲು ತಂಪು ಪಾನೀಯಗಳನ್ನು ವಿತರಿಸಿದ್ದು ಐಕ್ಯತೆಯ ಸಂದೇಶವನ್ನು ಸಾರಿತು.