HomeCrime Newsನೆನಪಿಡಿ, ಇಲ್ಲಿ ಯಾವುದೂ ಉಚಿತವಿಲ್ಲ!

ನೆನಪಿಡಿ, ಇಲ್ಲಿ ಯಾವುದೂ ಉಚಿತವಿಲ್ಲ!

Spread the love

ನಾವು ಈ ತಂತ್ರಜ್ಞಾನ ಯುಗದಲ್ಲಿ ಎಷ್ಟೆಲ್ಲ ಮುಂದುವರೆದಿದ್ದೇವೆ, ಎಂತೆಂಥಾ ಸಾಧನೆ ಮಾಡಿದ್ದೇವೆ, ಅಸಾಧ್ಯವಾದುದನ್ನೂ ಸಾಧಿಸಿ ಬೀಗುತ್ತಿದ್ದೇವೆ ಎಂಬುದು ಎಷ್ಟು ಸತ್ಯವೋ, ಇನ್ನೊಂದು ಮಗ್ಗುಲಲ್ಲಿ, ಅದೇ ತಂತ್ರಜ್ಞಾನದ ಅಪಾಯಗಳು, ಮೋಸದಾಟಗಳ ಬಗ್ಗೆ ಎಚ್ಚರಿಕೆ ಮೂಡಿಸುವಲ್ಲಿ ಹಿಂದೆ ಬಿದ್ದಿದ್ದೇವೆ ಎಂಬುದೂ ಅಷ್ಟೇ ಸತ್ಯ. ಅಸಲಿಗೆ ಇವೆರಡೂ ಒಂದೇ ನಾಣ್ಯದ ಎರಡು ಮುಖಗಳು. ಒಂದು ಮುಖ ಅಭಿವೃದ್ಧಿಯದಾದರೆ, ಎಚ್ಚರಿಕೆಯೆಂಬುದು ಇನ್ನೊಂದು ಮುಖವೆಂದುಕೊಳ್ಳಬಹುದು. ಒಂದನ್ನೊಂದು ಎಂದಿಗೂ ಮುಖಾಮುಖಿಯಾಗುವುದಿಲ್ಲ!

ಇಂತಹ ಮೋಸದಾಟಗಳ ಬಗ್ಗೆ ವಿಷಯ ತಜ್ಞರು, ಸೈಬರ್ ಕ್ರೈಂ ಇಲಾಖೆಯ ಸಿಬ್ಬಂದಿಗಳು, ಪೊಲೀಸ್ ಇಲಾಖೆ ಎಷ್ಟೇ ಮಾಹಿತಿ ನೀಡುತ್ತಿದ್ದರೂ ಎಚ್ಚರವಾಗುತ್ತಿಲ್ಲ. ಈ ಹಿಂದಿನ ಅದೆಷ್ಟೋ ಫ್ರೀ ಆಫರ್  ಸ್ಕ್ಯಾಮ್ ಗಳ ಸಾಲಿಗೆ ಇನ್ನೊಂದು ಸೇರ್ಪಡೆ `ಫ್ರೀ ರಿಚಾರ್ಜ್ ಆಫರ್!’ ಭಾರತದಲ್ಲಿ ಲೋಕಸಭಾ ಚುನಾವಣೆ ಘೋಷಣೆಯಾಗುತ್ತಲೇ ಹೀಗೊಂದು ಮೆಸೇಜ್ ವಾಟ್ಸಪ್‌ನಲ್ಲಿ ಹರಿದಾಡತೊಡಗಿತು. `ಬಿಜೆಪಿಯ ಉಚಿತ ರೀಚಾರ್ಜ್ ಯೋಜನೆ. ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲಾ ಭಾರತೀಯ ಬಳಕೆದಾರರಿಗೆ 3 ತಿಂಗಳ ಉಚಿತ ರೀಚಾರ್ಜ್ ನೀಡುತ್ತಿದ್ದಾರೆ. ಕೆಳಗೆ ನೀಡಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ ಮತ್ತು 3 ತಿಂಗಳ ಉಚಿತ ರೀಚಾರ್ಜ್ ಪಡೆಯಿರಿ’ ಎಂಬುದೇ ಆ ಮೆಸೇಜ್.

ಮೊದಲೇ ಹೇಳಿದಂತೆ, ಇದೂ ಒಂದು ಮೋಸದ ಜಾಲವಾಗಿರಬಹುದು ಎಂಬ ಅನುಮಾನ ಎಷ್ಟೋ ಜನರಿಗೆ ಬರಲಿಲ್ಲ. ಲಿಂಕ್ ಒತ್ತಿದ್ದೇ ತಡ. ವಾಟ್ಸಪ್ ಸಂಪರ್ಕದಲ್ಲಿರುವ ಎಷ್ಟೂ ನಂಬರ್‌ಗಳಿಗೆ ನಮಗೇ ಅರಿವಿಲ್ಲದಂತೆ ಇದೇ ಮೆಸೇಜ್ ಫಾರ್ವರ್ಡ್ ಆಯಿತು. ಎಷ್ಟೋ ಫೋನ್‌ಗಳು ಹ್ಯಾಕ್ ಆದವು.

ಉಚಿತವೆಂದರೆ ನನಗೊಂದು, ಮನೆಯವರಿಗೂ ಒಂದೊಂದು ಎನ್ನುವ ಕಾಲದಲ್ಲೇ ನಾವಿನ್ನೂ ನಿಂತಿದ್ದೇವೆ. ಇದರ ಬೆನ್ನಲ್ಲೇ ಚುನಾವಣೆಗೆ ಸಂಬಂಧಿಸಿ ಇಂತದೇ ಇನ್ನೂ ಹಲವು ಸೈಬರ್ ಫಿಶಿಂಗ್ ನಡೆಯುತ್ತಿದೆ. `ನಿಮ್ಮ ವೋಟರ್ ಐಡಿ ವಿವರಗಳನ್ನು ಪರಿಶೀಲಿಸದಿದ್ದರೆ ನಿಮ್ಮ ವೋಟರ್ ಐಡಿ ನಿಷ್ಕಿçಯಗೊಳ್ಳುತ್ತದೆ. ಇದನ್ನು ತಪ್ಪಿಸಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ’ ಎಂಬ ಸಂದೇಶಗಳೂ ಓಡಾಡುತ್ತವೆ. ಕ್ಲಿಕ್ ಮಾಡಿದಾಗ ನಮಗರಿವಿಲ್ಲದಂತೆ ನಮ್ಮಲ್ಲಿರುವ ಎಲ್ಲಾ ಸಂಪರ್ಕಗಳಿಗೂ ಫಾರ್ವರ್ಡ್ ಆಗುತ್ತವೆ. ಅವರಿಂದ ಫೋನ್ ಸಂಖ್ಯೆ, ಆಧಾರ್, ವೋಟರ್ ಐಡಿ ಮತ್ತು ಇತರ ಅವರ ವೈಯಕ್ತಿಕ ಮಾಹಿತಿಗಳು ಸುಲಭವಾಗಿ ಸೈಬರ್ ಕಳ್ಳರ ಪಾಲಾಗುತ್ತವೆ.

ಚುನಾವಣೆಯ ಸಮಯದಲ್ಲಿ ಇಂತಹ ಸೈಬರ್ ದಾಳಿಗಳು ಸೃಷ್ಟಿಸುವ ಸಮಸ್ಯೆ ಒಂದೆರಡಲ್ಲ. ರಾಜಕೀಯ ನಾಯಕರ ಡೀಪ್ ಫೇಕ್ ವೀಡಿಯೊಗಳು ಅಥವಾ ನಕಲಿ ಸಮೀಕ್ಷೆಯ ಫಲಿತಾಂಶಗಳನ್ನು ಮತದಾನದ ನಿರ್ಧಾರಗಳ ಮೇಲೆ ಪ್ರಭಾವ ಬೀರಲು ಅಥವಾ ಕೋಮುಗಲಭೆಯನ್ನು ಪ್ರಚೋದಿಸಲು ವೈರಲ್ ಆಗುತ್ತವೆ.

ಅರಿವಿಲ್ಲದ ಅಭಿಮಾನಿಗಳು, ಅನುಯಾಯಿಗಳನ್ನು ಲೂಟಿ ಮಾಡುವ ಅಥವಾ ವಂಚಿಸುವ ಉದ್ದೇಶದಿಂದ ಅವರಿಗೆ ರಾಜಕೀಯ ಪಕ್ಷಗಳು ಅಥವಾ ಅಭ್ಯರ್ಥಿಗಳ ಪರವಾಗಿ ಲಿಂಕ್‌ಗಳು ಅಥವಾ ಕಿಖ ಕೋಡ್‌ಗಳೊಂದಿಗೆ ನಕಲಿ ನಿಧಿ ಸಂಗ್ರಹಿಸುವ ಮೆಸೇಜ್, ಇಮೇಲ್‌ಗಳೂ ಹರಿದಾಡುತ್ತವೆ.

ಆದರೆ, ಪ್ರಜ್ಞಾವಂತರಾದ ಮತದಾರರು, ಸಾರ್ವಜನಿಕರು ಇಂತಹ ಘಟನೆಗಳು ಕಂಡುಬಂದಲ್ಲಿ ತಕ್ಷಣ ಚುನಾವಣಾ ಆಯೋಗ ರಚಿಸಿರುವ ಸಿ-ವಿಜಿಲ್ ಅಪ್ಲಿಕೇಶನ್‌ನಲ್ಲಿ ವರದಿ ಮಾಡುವ ಅವಕಾಶವಿರುತ್ತದೆ. ಇಂತಹ ಚುನಾವಣೆ ಸಂಬಂಧಿತ ವಂಚನೆಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು ಸಾಕಷ್ಟು ಮಾರ್ಗಗಳೂ ಇವೆ.

ಇಷ್ಟರ ಮೇಲೂ ನೀವು ಮೂಸ ಹೋಗಿದ್ದೀರೆಂಬ ಅನುಮಾನ ಬಂದರೆ, ತಕ್ಷಣ 1930 ಸೈಬರ್ ಕ್ರೈಂ ಸಹಾಯವಾಣಿಗೆ ಕರೆ ಮಾಡಿ, cybercrime.gov.in ವೆಬ್‌ಸೈಟ್ ಅಥವಾ ಹತ್ತಿರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ. ವಂಚನೆಯ ಬಗ್ಗೆ ಚುನಾವಣಾ ಆಯೋಗ ಮತ್ತು ಆಯಾ ಸಾಮಾಜಿಕ ಮಾಧ್ಯಮ ವೆಬ್‌ಸೈಟ್, ಆ್ಯಪ್‌ನಲ್ಲಿ ವರದಿ ಮಾಡಿ ಮತ್ತು ದೂರು ನೀಡಿ. ನಿಮಗೆ ಅರಿವಿಲ್ಲದೆ ಅಪರಿಚಿತರಿಗೆ ಹಣ ವರ್ಗಾಯಿಸಿದ್ದರೆ, ಪೊಲೀಸರ ಸಹಾಯದಿಂದ ನೀವು ವರ್ಗಾಯಿಸಿದ ಮೊತ್ತದ ಮೇಲೆ ಡೆಬಿಟ್ ಫ್ರೀಜ್ ಮಾಡಿಸಬಹುದು ಎಂಬುದೂ ಗಮನಕ್ಕಿರಲಿ.


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!