ಬೆಂಗಳೂರು: ನಗರದ ಮಡಿವಾಳ ಪೊಲೀಸ್ ಠಾಣಾ ವ್ಯಾಪ್ತಿಯ ಲಾಡ್ಜ್ೊಂದರಲ್ಲಿ ತಂಗಿದ್ದ ತಮಿಳುನಾಡು ಮೂಲದ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ನಡೆದಿದೆ. ಮುರುಗನ್ ಮಧು (35) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ.
ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಪುಳಿಯಂಪಟ್ಟಿ ನಿವಾಸಿಯಾಗಿದ್ದ ಮಧು, ಬುಧವಾರ ಮಡಿವಾಳದ ಗೋಲ್ಡನ್ ನೆಕ್ಸ್ ಲಾಡ್ಜ್‌ನಲ್ಲಿ ತಂಗಿದ್ದ ವೇಳೆ ಹೃದಯಾಘಾತಕ್ಕೊಳಗಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಬೆಂಗಳೂರಿನ ಸೆಂಟ್ ಜಾನ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಲಾಡ್ಜ್ ಮಾಲೀಕರು ನೀಡಿದ ದೂರಿನ ಮೇರೆಗೆ ಮಡಿವಾಳ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಪೊಲೀಸರ ಪ್ರಾಥಮಿಕ ಮಾಹಿತಿ ಪ್ರಕಾರ, ಮಧು ಅವಿವಾಹಿತರಾಗಿದ್ದು ತಾಯಿಯೊಂದಿಗೆ ವಾಸಿಸುತ್ತಿದ್ದರು. ಅವರು ಕಿಡ್ನಿ ಸಂಬಂಧಿತ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ಈ ಹಿಂದೆ ಎರಡು ಬಾರಿ ಲಘು ಹೃದಯಾಘಾತಕ್ಕೂ ಒಳಗಾಗಿದ್ದರು ಎನ್ನಲಾಗಿದೆ.
ಮೇ 18ರಂದು ಕೆಲಸದ ನಿಮಿತ್ತ ಬೆಂಗಳೂರಿಗೆ ತೆರಳುತ್ತಿರುವುದಾಗಿ ತಾಯಿಗೆ ತಿಳಿಸಿ ಮನೆಯಿಂದ ಹೊರಟಿದ್ದ ಮಧು, ಬಳಿಕ ಮಡಿವಾಳದ ಗೋಲ್ಡನ್ ನೆಕ್ಸ್ ಲಾಡ್ಜ್‌ಗೆ ಬಂದಿದ್ದರು ಎಂದು ತಿಳಿದುಬಂದಿದೆ.
ಫಜಿ ಉಲ್ಲಾ ಖಾನ್ ಹೆಸರಿನಲ್ಲಿ ಬುಕ್ ಮಾಡಲಾಗಿದ್ದ ಕೊಠಡಿಯಲ್ಲಿ ಮಧು ತಂಗಿದ್ದರು. ಬುಧವಾರ ಹೃದಯಾಘಾತದಿಂದ ಮೃತಪಟ್ಟಿರುವುದು ಪತ್ತೆಯಾಗಿದ್ದು, ಆರೋಗ್ಯ ಸಮಸ್ಯೆಯೇ ಸಾವಿಗೆ ಕಾರಣವಾಗಿರಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಪ್ರಕರಣ ಸಂಬಂಧ ಮಡಿವಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.



