ಬೆಂಗಳೂರು: ರಾಜ್ಯ ಸರ್ಕಾರ ಕನಿಷ್ಠ ವೇತನ ಪರಿಷ್ಕರಣೆ ಮಾಡಿದ ಬಳಿಕ, ಚಾಲ್ತಿಯಲ್ಲಿರುವ ಗುತ್ತಿಗೆ ಒಪ್ಪಂದವನ್ನು ನೆಪವೊಡ್ಡಿ ಕಾರ್ಮಿಕರಿಗೆ ಹೆಚ್ಚುವರಿ ವೇತನ ಪಾವತಿಸಲು ಗುತ್ತಿಗೆದಾರರಿಗೆ ಹಣ ನೀಡುವುದನ್ನು ನಿರಾಕರಿಸಲು ಸಾಧ್ಯವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ.
ಬೆಂಗಳೂರಿನ ಏಷ್ಯನ್ ಸೆಕ್ಯೂರಿಟಿ ಆ್ಯಂಡ್ ಪರ್ಸನಲ್ ಅರೇಂಜ್ಮೆಂಟ್ಸ್ ಸಂಸ್ಥೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ.
ಭದ್ರತಾ ಸಿಬ್ಬಂದಿ ಮತ್ತು ಹೌಸ್ಕೀಪಿಂಗ್ ಸಿಬ್ಬಂದಿ ಪೂರೈಸಿದ ಸಂಸ್ಥೆಗೆ ಬಾಕಿಯಾಗಿರುವ ₹3.5 ಕೋಟಿ ಮೊತ್ತವನ್ನು ಶೇ.12ರಷ್ಟು ಬಡ್ಡಿಯೊಂದಿಗೆ ಪಾವತಿಸುವಂತೆ ಕರ್ನಾಟಕ ವಿಧಾನಸಭಾ ಸಚಿವಾಲಯಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಕನಿಷ್ಠ ವೇತನವನ್ನು ಸರ್ಕಾರವೇ ಪರಿಷ್ಕರಿಸಿದ ನಂತರ, ಗುತ್ತಿಗೆದಾರರಿಗೆ ಉಂಟಾಗುವ ಹೆಚ್ಚುವರಿ ವೆಚ್ಚವನ್ನು ಭರಿಸಲು ನಿರಾಕರಿಸುವುದು ಅಸಂಬದ್ಧ, ತರ್ಕಹೀನ ಹಾಗೂ ಸಾರ್ವಜನಿಕ ನೀತಿಗೆ ವಿರುದ್ಧವಾಗಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
“ರಾಜ್ಯ ಸರ್ಕಾರ ಮಾಡಿಕೊಂಡ ಯಾವುದೇ ಖಾಸಗಿ ಅಥವಾ ವಾಣಿಜ್ಯ ಗುತ್ತಿಗೆ ಒಪ್ಪಂದಗಳು ದೇಶದ ಶಾಸನಬದ್ಧ ಕಾನೂನುಗಳನ್ನು ಮೀರುವಂತಿಲ್ಲ. ಹಳೆಯ ದರಗಳ ಆಧಾರದ ಮೇಲೆ ಒಪ್ಪಂದವಾಗಿದೆ ಎಂಬ ಕಾರಣಕ್ಕೆ ಸರ್ಕಾರ ಅಧಿಸೂಚನೆ ಮೂಲಕ ಹೆಚ್ಚಿಸಿರುವ ಕನಿಷ್ಠ ವೇತನವನ್ನು ತಪ್ಪಿಸಲು ಸಾಧ್ಯವಿಲ್ಲ” ಎಂದು ಪೀಠ ಸ್ಪಷ್ಟಪಡಿಸಿದೆ.
ಅರ್ಜಿದಾರ ಸಂಸ್ಥೆ ಹಾಗೂ ಸರ್ಕಾರದ ನಡುವೆ ನಡೆದ ಒಪ್ಪಂದದಲ್ಲಿ ವೇತನ ಪರಿಷ್ಕರಣೆ ಕುರಿತು ಯಾವುದೇ ಸ್ಪಷ್ಟ ಉಲ್ಲೇಖ ಇರಲಿಲ್ಲ. ಹೆಚ್ಚುವರಿ ವೇತನದ ಹೊರೆ ಗುತ್ತಿಗೆದಾರರೇ ಭರಿಸಬೇಕು ಎಂಬ ಷರತ್ತು ಇದ್ದರೂ, ಸಂವಿಧಾನದ ವಿಧಿ 12ರ ಅಡಿಯಲ್ಲಿ ಬರುವ ಸರ್ಕಾರ ಹಾಗೂ ಅದರ ಅಂಗ ಸಂಸ್ಥೆಗಳು ಖಾಸಗಿ ಕಂಪನಿಗಳಂತೆ ಲಾಭದ ದೃಷ್ಟಿಯಿಂದ ಮಾತ್ರ ವರ್ತಿಸಬಾರದು ಎಂದು ನ್ಯಾಯಾಲಯ ಹೇಳಿದೆ.
“ಸರ್ಕಾರವು ಮಾದರಿ ಉದ್ಯೋಗದಾತವಾಗಬೇಕು. ಗುತ್ತಿಗೆಯ ಕಟ್ಟುನಿಟ್ಟಿನ ಷರತ್ತುಗಳನ್ನು ಮುಂದಿಟ್ಟುಕೊಂಡು ಕಾರ್ಮಿಕ ಕಲ್ಯಾಣ ಕಾಯ್ದೆಗಳ ಉಲ್ಲಂಘನೆಗೆ ಪರೋಕ್ಷವಾಗಿ ಕಾರಣವಾಗಬಾರದು” ಎಂದು ಪೀಠ ಅಭಿಪ್ರಾಯಪಟ್ಟಿದೆ.
ಕನಿಷ್ಠ ವೇತನ ಪಾವತಿಸುವುದು ಕೇವಲ ಒಪ್ಪಂದದ ವಿಷಯವಲ್ಲ; ಅದು ಶಾಸನಬದ್ಧ ಹಾಗೂ ಸಾಂವಿಧಾನಿಕ ಜವಾಬ್ದಾರಿಯಾಗಿದೆ. ಕನಿಷ್ಠ ವೇತನಕ್ಕಿಂತ ಕಡಿಮೆ ಸಂಬಳ ನೀಡುವುದು ಸಂವಿಧಾನದ 23ನೇ ವಿಧಿಯ ಅಡಿಯಲ್ಲಿ ಬಲವಂತದ ದುಡಿಮೆಗೆ ಸಮಾನವಾಗುತ್ತದೆ ಎಂದು ಹೈಕೋರ್ಟ್ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ.
ಪ್ರಕರಣದ ಹಿನ್ನೆಲೆ ಕುರಿತು ಹೇಳುವುದಾದರೆ, ಅರ್ಜಿದಾರ ಸಂಸ್ಥೆ ಕರ್ನಾಟಕ ವಿಧಾನಸಭಾ ಸಚಿವಾಲಯಕ್ಕೆ ಹೌಸ್ಕೀಪಿಂಗ್ ಹಾಗೂ ಭದ್ರತಾ ಸಿಬ್ಬಂದಿ ಒದಗಿಸುತ್ತಿತ್ತು. 2016ರಲ್ಲಿ ರಾಜ್ಯ ಸರ್ಕಾರ ಕನಿಷ್ಠ ವೇತನ ಹೆಚ್ಚಿಸಿ ಅಧಿಸೂಚನೆ ಹೊರಡಿಸಿದ ಬಳಿಕ, ಸಂಸ್ಥೆ ಕಾರ್ಮಿಕರಿಗೆ ಹೆಚ್ಚಿದ ವೇತನ ಪಾವತಿಸಿತ್ತು.
ಈ ಹೆಚ್ಚುವರಿ ವೆಚ್ಚದ ₹3.5 ಕೋಟಿ ಮೊತ್ತವನ್ನು ಪಾವತಿಸುವಂತೆ ವಿಧಾನಸಭಾ ಸಚಿವಾಲಯಕ್ಕೆ ಬಿಲ್ ಸಲ್ಲಿಸಲಾಗಿತ್ತು. ಆದರೆ ಗುತ್ತಿಗೆ ಹಳೆಯ ದರಗಳ ಆಧಾರದ ಮೇಲೆ ಇರುವುದರಿಂದ ಹೆಚ್ಚುವರಿ ವೆಚ್ಚವನ್ನು ಗುತ್ತಿಗೆದಾರರೇ ಭರಿಸಬೇಕು ಎಂದು ಹೇಳಿ ಸರ್ಕಾರ 2024ರಲ್ಲಿ ಬಿಲ್ ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ಸಂಸ್ಥೆ ಹೈಕೋರ್ಟ್ ಮೊರೆ ಹೋಗಿತ್ತು.



