HomeVijaya Specialಜಾತ್ರೆಗಳ ಆಚರಣೆಗೆ ಹೊಸ ಭಾಷ್ಯ

ಜಾತ್ರೆಗಳ ಆಚರಣೆಗೆ ಹೊಸ ಭಾಷ್ಯ

For Dai;y Updates Join Our whatsapp Group

Spread the love

ತೇರಿನ ಕಳಸಕ್ಕೆ ಉತ್ತತ್ತಿ-ಬಾಳೆಹಣ್ಣು ಎಸೆದು, ಮೋಜು-ಮಸ್ತಿ ಮಾಡಿ ಮನೆಗೆ ತೆರಳುವುದೇ ನಾಡಿನ ಅನೇಕ ಜಾತ್ರೆಗಳ ಧ್ಯೇಯವಾಗಿದ್ದ ಕಾಲವೊಂದಿತ್ತು. ಜಾತ್ರೆಗಳ ಹೆಸರಿನಲ್ಲಿ ಅರ್ಥಹೀನ ಆಚರಣೆಗಳ ಪಾಲನೆ, ಕುರುಡು ನಂಬಿಕೆಗಳ ಅನುಮೋದನೆ ಅವ್ಯಾಹತವಾಗಿ ಸಾಗುತ್ತಿತ್ತು. ನಾಡಿನ ಪ್ರಖ್ಯಾತ ಮಠ-ದೇವಾಲಯಗಳಿಂದ, ಗ್ರಾಮದೇವತೆಗಳ ಜಾತ್ರೆಗಳವರೆಗೂ ಅದೇ ಸಿದ್ಧಸೂತ್ರಗಳು ಜಾರಿಯಲ್ಲಿದ್ದವು. ಕೆಲವು ಆಚರಣೆಗಳು ತರ್ಕಬದ್ಧವಲ್ಲ ಎಂದು ಗೊತ್ತಿದ್ದರೂ ಆ ಮಠದ ಸ್ವಾಮೀಜಿಗಳಾಗಲಿ, ಭಕ್ತರಾಗಲಿ ಅವುಗಳನ್ನು ಸ್ಥಗಿತಗೊಳಿಸುವ ಸಾಹಸಕ್ಕೆ ಮುಂದಾಗಿರಲಿಲ್ಲ.

ಇದೆಲ್ಲದಕ್ಕೆ ಅಪವಾದ ಎಂಬಂತೆ ಗದುಗಿನ ಲಿಂಗೈಕ್ಯ ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು ತಾವು ಪೀಠವನ್ನೇರಿದ ಕೆಲವೇ ವರ್ಷಗಳಲ್ಲಿ ತೋಂಟದಾರ್ಯ ಜಾತ್ರೆಯಿಂದ ಒಂದೊಂದೇ ಅರ್ಥಹೀನ ಆಚರಣೆಗಳನ್ನು ನೇಪಥ್ಯಕ್ಕೆ ಸರಿಸಿ ಆ ಜಾಗೆಯಲ್ಲಿ ಜನರಿಗೆ ಒಳಿತಾಗುವಂಥ ಅಪೂರ್ವ ಆಚರಣೆಗಳನ್ನು ಅಳವಡಿಸುತ್ತಾ ಸಾಗಿದ್ದು ಇತಿಹಾಸ. `ಲಿಂಗಾಯತರಿಗೆ ಮಾತ್ರ ಪ್ರವೇಶ’ ಎಂಬ ನಾಮಫಲಕವನ್ನು ತೋಂಟದಾರ್ಯ ಮಠದ ಮಹಾದ್ವಾರದಿಂದ ಕಿತ್ತೆಸೆಯುವ ಮೂಲಕ ಅದಾಗಲೇ ಮಠವನ್ನು ಸರ್ವಜನಾಂಗದ ಶಾಂತಿಯ ತೋಟವನ್ನಾಗಿಸಿದ್ದ ಶ್ರೀಗಳು, ತೋಂಟದಾರ್ಯ ಜಾತ್ರೆಗೆ ಹೊಸ ಭಾಷ್ಯ ಬರೆಯುವ ಮುಖೇನ ನಾಡಿನ ಇತರ ಜಾತ್ರೆಗಳು ತಮ್ಮನ್ನು ಆತ್ಮಾವಲೋಕನ ಮಾಡಿಕೊಳ್ಳುವಂತೆ ಮಾಡಿದ್ದರು.

ತೇರಿಗೆ ಅನ್ನ ಹಾಕುವ ಪದ್ಧತಿಗೆ ತಿಲಾಂಜಲಿ ನೀಡಿ ಭಕ್ತರ ದಾಸೋಹಕ್ಕೆ ಪ್ರಥಮ ಆದ್ಯತೆ ನೀಡಿದರು.

ಅಡ್ಡಪಲ್ಲಕ್ಕಿಯಲ್ಲಿ ಕೂರದೇ ಇರುವ ಸ್ವಾಮೀಜಿಗಳೇ ಇಲ್ಲದ ಆ ಕಾಲದಲ್ಲಿ, ತಾವು ಅಡ್ಡಪಲ್ಲಕ್ಕಿಯಲ್ಲಿ ಕೂರದೇ ವಚನದ ಕಟ್ಟುಗಳನ್ನು ಇಟ್ಟು ಮೆರೆಸಿದ್ದು ಹಾಗೂ ಕೆಳದಿ ಅರಸರು ನೀಡಿದ್ದ ಪಾದುಕೆಗಳನ್ನು ತೊಡದೇ ಭಕ್ತರೊಟ್ಟಿಗೆ ಸಾಮಾನ್ಯರಾಗಿ ಹೆಜ್ಜೆ ಹಾಕಿದ್ದು ವೈಚಾರಿಕ ಕ್ರಾಂತಿಯೇ ಆಗಿತ್ತು.

ಇಂಥ ಬದಲಾವಣೆಗಳು ಎಂಥ ಸ್ಥಿತ್ಯಂತರಕ್ಕೆ ಕಾರಣವಾದುವೆಂದರೆ, ಕೆಲವೇ ವರ್ಷಗಳಲ್ಲಿ ಅನೇಕ ಪ್ರತಿಷ್ಠಿತ ಮಠಗಳಿಂದ ಮೂಢನಂಬಿಕೆಗಳು ಕಾಲಗರ್ಭ ಸೇರಿದವು. ಅದೆಲ್ಲದಕ್ಕೂ ಗಟ್ಟಿಯಾಗಿ ಮೇಲ್ಪಂಕ್ತಿ ಹಾಕುವ ದಿಟ್ಟ ಸ್ವಾಮೀಜಿಯೊಬ್ಬರ ಅವಶ್ಯಕತೆ ಇತ್ತು. ಆ ಸ್ಥಾನವನ್ನು ಲಿಂಗೈಕ್ಯ ತೋಂಟದ ಶ್ರೀಗಳು ತಮಗರಿವಿಲ್ಲದಂತೆಯೇ ಸಮರ್ಥವಾಗಿ ನಿಭಾಯಿಸಿದರು. ೩೦೦ಕ್ಕೂ ಹೆಚ್ಚು ವರ್ಷಗಳ ಇತಿಹಾಸ ತೋಂಟದಾರ್ಯ ಜಾತ್ರೆಗೆ ಇದ್ದರೂ ಸಹ 1975ರಿಂದ ಆಚೆಗೆ ಅಂದರೆ ಸಿದ್ಧಲಿಂಗ ಶ್ರೀಗಳು ಪೀಠವನ್ನೇರಿದ ಬಳಿಕ ಜರುಗಿದ ಜಾತ್ರೆಗಳು ಕೇವಲ ಜಾತ್ರೆಗಳಾಗದೇ ಬಸವತತ್ವದ, ವೈಚಾರಿಕ ನಿಲುವಿನ ಹೆಗ್ಗುರುತುಗಳೇ ಆದವು.

ಶ್ರೀಮಠ ಆರ್ಥಿಕವಾಗಿ ಸಬಲವಾದಂತೆಲ್ಲ ಹತ್ತು-ಹಲವು ಜನೋಪಯೋಗಿ ಕಾರ್ಯಕ್ರಮಗಳನ್ನು ಜಾತ್ರೆಯಲ್ಲಿ ಹಾಕಿಕೊಳ್ಳುತ್ತಾ ಅನ್ನ-ಅಕ್ಷರ-ಆರೋಗ್ಯಗಳಿಗೆ ಜಾತ್ರೆಯಲ್ಲಿ ಸಿಂಹಪಾಲು ನೀಡಿದರು. ಜಾತ್ರೆಯು ಸಂಘಟಿತವಾಗಿ ನೆರವೇರಲು ಸಮಿತಿಯನ್ನು ರಚಿಸಿ ಆ ಸಮಿತಿಗಳಿಗೆ ಲಿಂಗಾಯತರೇತರರನ್ನೂ ಅಧ್ಯಕ್ಷರನ್ನಾಗಿಸುವ ಮೂಲಕ ಇದೊಂದು ಅಪ್ಪಟ ಜಾತ್ಯಾತೀತ, ಜನಪರ ಜಾತ್ರೆ ಎಂಬುದನ್ನು ಶ್ರೀಗಳು ನಿರೂಪಿಸಿದರು. ಪುಸ್ತಕಗಳನ್ನು ಬಿಡುಗಡೆಗೊಳಿಸಿ, ವಿಚಾರಗೋಷ್ಠಿಗಳನ್ನು ಏರ್ಪಡಿಸಿ ಹೊಟ್ಟೆಯ ಜೊತೆಗೆ ಜ್ಞಾನದ ಹಸಿವನ್ನೂ ಹಿಂಗಿಸಿದ ಶ್ರೀಗಳು, ಕೃಷಿಮೇಳ, ಆರೋಗ್ಯ ತಪಾಸಣೆ-ಚಿಕಿತ್ಸೆ, ಪರಿಸರೋತ್ಸವ, ಜಾಗೃತಿ ಕಾರ್ಯಕ್ರಮ, ರಕ್ತದಾನ-ನೇತ್ರದಾನ ಅಭಿಯಾನ, ಸಾಂಸ್ಕೃತಿಕ-ಜನಪದ ವೈಭವ, ದೇಸಿ ಕ್ರೀಡೆಗಳು ಹೀಗೆ ಹಲವಾರು ಸೃಜನಶೀಲ-ವಿಧಾಯಕ ಕಾರ್ಯಕ್ರಮಗಳನ್ನು ನಾಡಿನ ಗಮನ ಸೆಳೆಯುವಂತೆ ಯಶಸ್ವಿಯಾಗಿ ನೆರವೇರಿಸಿದರು.

ಜಾತ್ರೆ ಎಂದರೆ ತೇರಿನ ಕಳಸಕ್ಕೆ ಉತ್ತತ್ತಿ-ಬಾಳೆಹಣ್ಣು ಎಸೆಯುವುದು, ತೇರಿನ ಚಕ್ರಕ್ಕೆ ಅನ್ನ ಹಾಕುವುದು, ಬೆಂಕಿಯಲ್ಲಿ ಹಾರುವುದು, ಉರುಳು ಸೇವೆ ಮಾಡುವುದು, ಶಸ್ತç ಚುಚ್ಚಿಸಿಕೊಳ್ಳುವುದು ಎಂಬ ಕಲ್ಪನೆಯೇ ಮಾಯವಾಗುವಂತೆ ತೋಂಟದಾರ್ಯ ಜಾತ್ರೆಯನ್ನು ಶ್ರೀಗಳು ಸಂಘಟಿಸಿ ತೋರಿಸಿದರು. ಇಂಥ ಪೂಜ್ಯರು ಹಾಕಿಕೊಟ್ಟ ವೈಚಾರಿಕ ಮಾರ್ಗದಲ್ಲಿ ಡಾ.ತೋಂಟದ ಸಿದ್ಧರಾಮ ಮಹಾಸ್ವಾಮಿಗಳ ಮಾರ್ಗದರ್ಶನದೊಂದಿಗೆ ತೋಂಟದಾರ್ಯ ಮಠದ ಜಾತ್ರೆಯು ತನ್ನ ಪರಂಪರೆಯನ್ನು ಅನೂಚಾನವಾಗಿ ಮುಂದುವರೆಸುತ್ತಾ ಸಾಗಿದ್ದು, ಅದರಂತೆ ಏಪ್ರಿಲ್ 23, ಮಂಗಳವಾರ ಸಾಯಂಕಾಲ 6:30 ಗಂಟೆಗೆ ಚಿತ್ತಾ ನಕ್ಷತ್ರದಲ್ಲಿ ಮಹಾ ರಥೋತ್ಸವ ನೆರವೇರಲಿದೆ.

ಸಂಜೆ 7.30ಕ್ಕೆ ಶ್ರೀಮಠದಲ್ಲಿ ನೆರವೇರುವ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸಭಾಪತಿಗಳಾದ ಬಸವರಾಜ ಹೊರಟ್ಟಿಯವರ ಜೀವನ ಸಾಧನೆಗಳ ಕುರಿತು ಡಾ. ಎಂ.ಎಂ. ಕಲಬುರ್ಗಿ ಅಧ್ಯಯನ ಸಂಸ್ಥೆಯಿಂದ `ದಿಟ್ಟ ಹೆಜ್ಜೆ’ ಹಾಗೂ `ಮೈಲುಗಲ್ಲುಗಳೇ ಮಾತನಾಡುತ್ತವೆ’ ಎಂಬ ಎರಡು ಅಮೂಲ್ಯ ಗ್ರಂಥಗಳು ಲೋಕಾರ್ಪಣೆಗೊಳ್ಳಲಿವೆ. ಸಿದ್ಧಯ್ಯನಕೋಟೆ ವಿಜಯಮಹಾಂತೇಶ್ವರ ಶಾಖಾಮಠದ ಬಸವಲಿಂಗ ಮಹಾಸ್ವಾಮಿಗಳನ್ನು ಪೀಠಾರೋಹಣದ ನಿಮಿತ್ತ ಸಂಮಾನಿಸಲಾಗುವುದು. ಧಾರವಾಡದ ನಾಗರತ್ನ ಹಡಗಲಿಯವರ ಋತಿಕಾ ನೃತ್ಯ ಕಲಾನಿಕೇತನ ತಂಡದವರು ವಚನ ನೃತ್ಯ ವೈಭವ ಪ್ರದರ್ಶಿಸುವರು. ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಶ್ರೀಮಠದ ಸದ್ಭಕ್ತರು ಹಾಗೂ ಆಸಕ್ತರು ಪಾಲ್ಗೊಳ್ಳಲು ಬಿನ್ನಹ.
-ವೀರೇಶ ಎಂ.ಹರ್ಲಾಪೂರ.
ಜ. ತೋಂಟದಾರ್ಯ ಜಾತ್ರಾ ಪ್ರಚಾರ ಸಮಿತಿ ಅಧ್ಯಕ್ಷರು.

 


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!