ಮುಂಬೈ: ಮುಂಬೈನ ಉಪನಗರ ರೈಲು ಸೇವೆಯಲ್ಲಿ ಬೆಚ್ಚಿಬೀಳಿಸುವ ಘಟನೆ ನಡೆದಿದ್ದು, ರೈಲಿನ ಬಾಗಿಲು ಮುಚ್ಚುವ ವಿಚಾರಕ್ಕೆ ಆರಂಭವಾದ ವಾಗ್ವಾದ ಕೊಲೆಯಲ್ಲಿ ಅಂತ್ಯಗೊಂಡಿದೆ.
ಚಲಿಸುತ್ತಿದ್ದ ಲೋಕಲ್ ರೈಲಿನಲ್ಲೇ 21 ವರ್ಷದ ಯುವಕನಿಗೆ ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿದ್ದು, ಘಟನೆ ಪ್ರಯಾಣಿಕರಲ್ಲಿ ಆತಂಕ ಮೂಡಿಸಿದೆ.
ಮೃತ ಯುವಕನನ್ನು ಮಯಾಂಕ್ ಲೋಹರ್ ಎಂದು ಗುರುತಿಸಲಾಗಿದೆ. ಮಂಗಳವಾರ ರಾತ್ರಿ ಚರ್ಚ್‌ಗೇಟ್–ನಲಾಸೋಪಾರಾ ಫಾಸ್ಟ್ ಲೋಕಲ್ ರೈಲಿನ ಪ್ರಥಮ ದರ್ಜೆ ಬೋಗಿಯಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಗೋರೆಗಾಂವ್ ಮತ್ತು ಕಂಡಿವಲಿ ರೈಲು ನಿಲ್ದಾಣಗಳ ನಡುವಿನ ಮಾರ್ಗದಲ್ಲಿ ಘಟನೆ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಭಾರೀ ಮಳೆಯ ಹಿನ್ನೆಲೆಯಲ್ಲಿ ರೈಲಿನ ಬಾಗಿಲು ಮುಚ್ಚುವ ವಿಚಾರಕ್ಕೆ ಕೆಲ ಪ್ರಯಾಣಿಕರ ನಡುವೆ ವಾಗ್ವಾದ ಆರಂಭವಾಗಿತ್ತು. ಮಾತಿನ ಚಕಮಕಿ ತೀವ್ರ ಸ್ವರೂಪ ಪಡೆದುಕೊಂಡು ಗಲಾಟೆಗೆ ತಿರುಗಿದೆ. ಈ ವೇಳೆ ಕೆಲ ಪ್ರಯಾಣಿಕರು ಆರೋಪಿ ರೋಷನ್ ಸುವರ್ಣ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಇದರಿಂದ ಆಕ್ರೋಶಗೊಂಡ ಆರೋಪಿ ತನ್ನ ಬ್ಯಾಗ್‌ನಲ್ಲಿದ್ದ ಚಾಕುವನ್ನು ತೆಗೆದು ಮಯಾಂಕ್ ಲೋಹರ್ ಮೇಲೆ ಹಲ್ಲೆ ನಡೆಸಿದ್ದಾನೆ.
ಚಾಕು ಇರಿತದಿಂದ ಗಂಭೀರವಾಗಿ ಗಾಯಗೊಂಡ ಮಯಾಂಕ್ ರೈಲಿನಲ್ಲೇ ಕುಸಿದು ಬಿದ್ದಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಘಟನೆ ಬಳಿಕ ಆರೋಪಿ ರೈಲಿನಿಂದ ಪರಾರಿಯಾಗಿದ್ದಾನೆ.
ಈ ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಚಾಕು ಹಿಡಿದುಕೊಂಡು ಆರೋಪಿ ರೈಲಿನೊಳಗೆ ಓಡಾಡುತ್ತಿರುವ ದೃಶ್ಯಗಳು ಅದರಲ್ಲಿ ಸೆರೆಯಾಗಿವೆ. ಘಟನೆಯಿಂದ ಭಯಭೀತರಾದ ಪ್ರಯಾಣಿಕರು ಆತನಿಂದ ದೂರ ಸರಿಯುತ್ತಿರುವುದು ವಿಡಿಯೊದಲ್ಲಿ ಕಂಡುಬಂದಿದೆ.
ಮಾಹಿತಿ ತಿಳಿದ ತಕ್ಷಣ ರೈಲ್ವೆ ಪೊಲೀಸರು ಸ್ಥಳಕ್ಕೆ ಧಾವಿಸಿ ಮೃತದೇಹವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಬಳಿಕ ವಿಶೇಷ ಕಾರ್ಯಾಚರಣೆ ನಡೆಸಿದ ಪೊಲೀಸರು ಕುರ್ಲಾ ಪ್ರದೇಶದಲ್ಲಿ ಆರೋಪಿ ರೋಷನ್ ಸುವರ್ಣನನ್ನು ಬಂಧಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ರೈಲ್ವೆ ಪೊಲೀಸರು ಕೊಲೆಯ ನಿಖರ ಕಾರಣ ಹಾಗೂ ಘಟನೆಯ ಹಿನ್ನೆಲೆ ಕುರಿತು ತನಿಖೆ ಮುಂದುವರಿಸಿದ್ದಾರೆ.
ಮಗನ ಸಾವಿನಿಂದ ಕುಟುಂಬಸ್ಥರು ಕಣ್ಣೀರಿನಲ್ಲಿ ಮುಳುಗಿದ್ದಾರೆ. “ನನ್ನ ಮಗ ಯಾರೊಂದಿಗೂ ಜಗಳ ಮಾಡುತ್ತಿರಲಿಲ್ಲ. ಅವನಿಗೆ ನ್ಯಾಯ ದೊರಕಬೇಕು” ಎಂದು ಮೃತನ ತಾಯಿ ಕಣ್ಣೀರಿಟ್ಟಿದ್ದಾರೆ. “ಆರೋಪಿಗೆ ಕಠಿಣ ಶಿಕ್ಷೆಯಾಗಬೇಕು. ಇಂದು ಶಿಕ್ಷೆಯಾಗದಿದ್ದರೆ ನಾಳೆ ಮತ್ತೊಬ್ಬರ ಜೀವ ಹೋಗಬಹುದು” ಎಂದು ಮೃತನ ಸಹೋದರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.



