ದಾವಣಗೆರೆ: ಮಠದ ವಿದ್ಯಾರ್ಥಿಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವ ಆರೋಪ ಸಂಬಂಧ ವಚನಾನಂದ ಶ್ರೀ ವಿರುದ್ಧದ ಪೋಕ್ಸೊ ಪ್ರಕರಣದಲ್ಲಿ ಹರಿಹರ ಗ್ರಾಮಾಂತರ ಪೊಲೀಸರು 410 ಪುಟಗಳ ವಿವರವಾದ ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ.
ಲಕ್ಷ್ಮೇಶ್ವರ ಠಾಣೆಯಲ್ಲಿ ದಾಖಲಾಗಿದ್ದ ದೂರು ಆಧಾರವಾಗಿ ಆರಂಭವಾದ ಈ ಪ್ರಕರಣ ನಂತರ ಹರಿಹರ ಗ್ರಾಮಾಂತರ ಠಾಣೆಗೆ ವರ್ಗಾಯಿಸಲಾಯಿತು. ಘಟನೆಯ ಗಂಭೀರತೆಯನ್ನು ಗಮನಿಸಿ ಶೀಘ್ರ ತನಿಖೆ ನಡೆಸಿ ಚಾರ್ಜ್‌ಶೀಟ್ ಸಲ್ಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಚಾರ್ಜ್‌ಶೀಟ್‌ನಲ್ಲಿ ಬಾಲಕರಿಗೆ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡಲಾಗಿದೆ, ಮಸಾಜ್ ಮಾಡಿಸಿಕೊಳ್ಳಲಾಗಿದೆ, ಹಲ್ಲೆ ಹಾಗೂ ಅವಾಚ್ಯ ನಿಂದನೆ ನಡೆದಿದೆ ಎಂಬ ಆರೋಪಗಳನ್ನು ದಾಖಲಿಸಲಾಗಿದೆ. ಜೊತೆಗೆ 63 ಸಾಕ್ಷ್ಯಾಧಾರಗಳು ಮತ್ತು ಹಲವು ಸಂತ್ರಸ್ತರ ಹೇಳಿಕೆಗಳನ್ನು ಒಳಗೊಂಡಿದೆ.
ಆರೋಪಿಗಳ ಪರ ವಕೀಲರು ಚಾರ್ಜ್‌ಶೀಟ್ ತರಾತುರಿಯಲ್ಲಿ ಸಲ್ಲಿಸಲಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆದರೆ ಸರ್ಕಾರಿ ಅಭಿಯೋಜಕರು ಇದು ಹೈಪ್ರೊಫೈಲ್ ಪ್ರಕರಣವಾಗಿರುವುದರಿಂದ ತ್ವರಿತ ತನಿಖೆ ಅಗತ್ಯವಾಗಿತ್ತು ಎಂದು ವಾದಿಸಿದ್ದಾರೆ. ಮುಂದಿನ ದಿನಗಳಲ್ಲಿ ಪ್ರಕರಣದಲ್ಲಿ ಇನ್ನಷ್ಟು ತನಿಖೆ ನಡೆಯುವ ಸಾಧ್ಯತೆ ಇದೆ.



