ಇತ್ತ ಸೋಷಿಯಲ್ ಮೀಡಿಯಾದಲ್ಲಿ ನಟ ದರ್ಶನ್ ಅಭಿಮಾನಿಗಳು ಹಾಗೂ ನಟಿ ರಮ್ಯಾ ಮತ್ತು ನಟ ಪ್ರಥಮ್ ವಾಕ್ ಸಮರ ದಿನೇ ದಿನೇ ತಾರಕ್ಕಕೇರುತ್ತಿದೆ. ಈ ಬಗ್ಗೆ ನಟಿ ರಮ್ಯಾ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ. ಇನ್ನೂ ತಮ್ಮ ಮೇಲೆ ದರ್ಶನ್ ಅಭಿಮಾನಿಗಳು ಹಲ್ಲೆಗೆ ಯತ್ನಿಸಿದ್ದಾರೆ ಎಂದು ನಟ ಪ್ರಥಮ್ ಕೂಡ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಮಧ್ಯೆ ನಟ ದರ್ಶನ್ ಕುಟುಂಬ ಸಮೇತ ಅಸ್ಸಾಂನ ಗುವಾಹಟಿಯಲ್ಲಿರುವ ಪ್ರಸಿದ್ಧ ಕಾಮಾಕ್ಯ ದೇವಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದುಕೊಂಡಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲು ಸೇರಿದ್ದು ಈ ವೇಳೆ ದರ್ಶನ್ ಬಿಡುಗಡೆಗಾಗಿ ಪತ್ನಿ ವಿಜಯಲಕ್ಷ್ಮೀ ಇದೇ ಕಾಮಾಕ್ಯ ದೇವಿ ದೇವಸ್ಥಾನಕ್ಕೆ ತೆರಳಿ ಹರಕೆ ಹೊತ್ತಿದ್ದರು. ಹರಕೆ ಹೊತ್ತ ಕೆಲವೇ ದಿನಗಳಲ್ಲಿ ನಟ ದರ್ಶನ್ ಜಾಮೀನಿನ ಮೇಲೆ ಹೊರ ಬಂದಿದ್ದರು. ಇದೀಗ ಕೆಲವೇ ದಿನಗಳಲ್ಲಿ ಸುಪ್ರೀಂ ಕೋರ್ಟ್ ತೀರ್ಪು ಬರುವ ಸಾಧ್ಯತೆಯಿದ್ದು ಹೀಗಾಗಿ ದರ್ಶನ್ ಮತ್ತೆ ಕುಟುಂಬ ಸಮೇತ ಕಾಮಾಕ್ಯ ದೇವಿಯ ಮೊರೆ ಹೋಗಿದ್ದಾರೆ.
ಅಸ್ಸಾಂ ರಾಜ್ಯದಲ್ಲಿರುವ ಗುವಾಹಟಿ ನಗರದ ಪಶ್ಚಿಮ ಭಾಗದಲ್ಲಿರುವ ನೀಲಾಚಲ ಬೆಟ್ಟದ ಮೇಲೆ ನೆಲಸಿರುವ ಶಕ್ತಿ ದೇವಾಲಯವಿದು. ಇದು ಭುವನೇಶ್ವರಿ, ಬಗಲಾಮುಖಿ , ಚಿನ್ನಮಸ್ತ, ತ್ರಿಪುರ ಸುಂದರಿ ಮತ್ತು ತಾರ ಅವರನ್ನು ಒಳಗೊಂಡು ಮಹಾಶಕ್ತಿ ಪೀಠ. ಇದು ತಾಂತ್ರಿಕ ಚಟಿವಟಿಕೆಗಳಿಗೂ ಇದು ಹೆಸರುವಾಸಿ. ತಂತ್ರವಿದ್ಯೆಯ ಸಾಧಕರು ಈ ದೇವಿಯನ್ನು ಶ್ರದ್ಧಾ ಭಕ್ತಿಯಿಂದ ಆರಾಧಿಸುತ್ತಾರೆ.
ಮಾಟ ಮಂತ್ರಗಳನ್ನು ತೊಡೆದು ಹಾಕಲು, ದುಷ್ಟ ಶಕ್ತಿಗಳಿಂದ ಮುಕ್ತಿ ಪಡೆಯಲು ಸಾಕಷ್ಟು ಮಂದಿ ಈ ದೇವಸ್ಥಾನಕ್ಕೆ ಬರುತ್ತಾರೆ. ಈ ಹಿಂದೆಯೂ ದರ್ಶನ್ ಹಲವು ಭಾರಿ ಈ ದೇವಸ್ಥಾನಕ್ಕೆ ಭೇಟಿ ನೀಡಿದ್ದು ಇದೀಗ ಮತ್ತೊಮ್ಮೆ ಶಕ್ತಿ ದೇವಿಯ ದರ್ಶನ ಮಾಡಿದ್ದಾರೆ.