ನವದೆಹಲಿ: ವಿಮಾನ ಇಂಧನದ (ATF) ಬೆಲೆ ಏರಿಕೆಯಿಂದಾಗಿ ದೇಶದ ಪ್ರಮುಖ ವಿಮಾನಯಾನ ಸಂಸ್ಥೆ ಇಂಡಿಗೋ ವಿಮಾನ ಟಿಕೆಟ್ ದರಗಳನ್ನು ಹೆಚ್ಚಿಸುವ ಸಾಧ್ಯತೆಯಿದೆ.
ಇಂಧನ ವೆಚ್ಚ ಗಣನೀಯವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಟಿಕೆಟ್ ದರ ಏರಿಕೆಯನ್ನು ಪರಿಗಣಿಸುವುದು ಅನಿವಾರ್ಯವಾಗಿದೆ ಎಂದು ಸಂಸ್ಥೆಯ ಸಿಇಒ ವಿಲ್ಲೀ ವಾಲ್ಷ್ ತಿಳಿಸಿದ್ದಾರೆ.
ವಿಮಾನಯಾನ ಸಂಸ್ಥೆಗಳ ಒಟ್ಟು ಕಾರ್ಯಾಚರಣಾ ವೆಚ್ಚದಲ್ಲಿ ವಿಮಾನ ಇಂಧನದ ಪಾಲು ಸುಮಾರು ಶೇ. 40ರಷ್ಟಿದೆ. ಹೀಗಾಗಿ ಇಂಧನ ಬೆಲೆ ಏರಿಕೆಯು ಸಂಸ್ಥೆಗಳ ಲಾಭದ ಮೇಲೆ ಪರಿಣಾಮ ಬೀರುತ್ತಿದೆ. ಇದರ ಜತೆಗೆ ರೂಪಾಯಿ ಮೌಲ್ಯ ಕುಸಿತವೂ ಇಂಡಿಗೋ ಸಂಸ್ಥೆಯ ಆರ್ಥಿಕ ಒತ್ತಡವನ್ನು ಹೆಚ್ಚಿಸಿದೆ ಎಂದು ವರದಿಯಾಗಿದೆ.
ಇಂಧನ ವೆಚ್ಚ ಹೆಚ್ಚಳದಿಂದ ಕಾರ್ಯಾಚರಣಾ ವೆಚ್ಚವನ್ನು ಸರಿದೂಗಿಸುವುದು ಸವಾಲಾಗಿದೆ. ಈ ಹಿನ್ನೆಲೆಯಲ್ಲಿ ಟಿಕೆಟ್ ದರ ಹೆಚ್ಚಳದ ಬಗ್ಗೆ ಸಂಸ್ಥೆ ಚಿಂತನೆ ನಡೆಸುತ್ತಿದೆ ಎಂದು ಸಿಇಒ ಹೇಳಿದ್ದಾರೆ.
ಈಗಾಗಲೇ ಇಂಡಿಗೋ ದೇಶೀಯ ಹಾಗೂ ಅಂತಾರಾಷ್ಟ್ರೀಯ ವಿಮಾನ ಮಾರ್ಗಗಳಲ್ಲಿ ಇಂಧನ ಸರ್ಚಾರ್ಜ್ಗಳನ್ನು ಪರಿಷ್ಕರಿಸಿದೆ. ಮುಂದಿನ ದಿನಗಳಲ್ಲಿ ಟಿಕೆಟ್ ದರಗಳು ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆಯಿದ್ದು, ವಿಮಾನ ಪ್ರಯಾಣಕ್ಕೆ ಯೋಜನೆ ರೂಪಿಸಿರುವ ಪ್ರಯಾಣಿಕರು ಹೆಚ್ಚುವರಿ ಹಣ ಪಾವತಿಸಬೇಕಾಗಬಹುದು.









