ವಿಜಯಸಾಕ್ಷಿ ಸುದ್ದಿ, ಗದಗ: ಗದಗ-ಬೆಟಗೇರಿ ನಗರದ ಕೊಳಚೆ ಪ್ರದೇಶಗಳಲ್ಲಿ ಯಾವುದೇ ನಾಗರಿಕ ಸೌಲಭ್ಯಗಳು ಇಲ್ಲದೇ ಸ್ಥಳೀಯ ಸ್ಲಂ ನಿವಾಸಿಗಳು ಪ್ರತಿನಿತ್ಯ ಸಾಕಷ್ಟು ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ನಗರದ ಶೇ.90ರಷ್ಟು ಕೊಳಗೇರಿ ಜನರು ನಗರಸಭೆಗೆ ತಮ್ಮ ಆಸ್ತಿ ತೆರಿಗೆಯನ್ನು ಕಟ್ಟುತ್ತಾರೆ. ಆದರೆ ನಗರಸಭೆಯಿಂದ ಸ್ಲಂ ಪ್ರದೇಶಗಳ ಅಭಿವೃದ್ಧಿಯಲ್ಲಿ ತಾರತಮ್ಯ ನೀತಿಯನ್ನು ಅನುಸರಿಸಲಾಗುತ್ತಿದೆ. ಈ ಬಾರಿ 2026-27ರ ಸಾಲಿನ ಬಜೆಟ್‌ನಲ್ಲಿ ಗದಗ-ಬೆಟಗೇರಿ ಅವಳಿ ನಗರದ ಕೊಳಗೇರಿ ಪ್ರದೇಶಗಳ ಅಭಿವೃದ್ಧಿಗಾಗಿ ಪ್ರತ್ಯೇಕ ಅನುದಾನ ಮೀಸಲಿಡಬೇಕೆಂದು ಗದಗ ಜಿಲ್ಲಾ ಸ್ಲಂ ಸಮಿತಿ ಅಧ್ಯಕ್ಷ ಇಮ್ತಿಯಾಜ ಆರ್.ಮಾನ್ವಿ ಒತ್ತಾಯಿಸಿದರು.
ಅವರು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಕರೆದ ನಗರಸಭೆಯ 2026-27ನೇ ಸಾಲಿನ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಕೇವಲ ಕಾಟಾಚಾರಕ್ಕಾಗಿ ಬಜೆಟ್ ಪೂರ್ವಭಾವಿ ಸಭೆ ಆಗಬಾರದು. ನಗರದ ಸರ್ವಾಂಗೀಣ ಅಭಿವೃದ್ಧಿಗಾಗಿ ಬಜೆಟ್‌ನಲ್ಲಿ ಆದ್ಯತೆ ನೀಡಬೇಕು. ಕೊಳಗೇರಿ ಪ್ರದೇಶಗಳಲ್ಲಿ ರಸ್ತೆ, ಚರಂಡಿ, ಶೌಚಾಲಯ ಹಾಗೂ ಕುಡಿಯುವ ನೀರಿನ ಪರ್ಯಾಯ ವ್ಯವಸ್ಥೆಗಾಗಿ ಅನುದಾನ ಮೀಸಲಿಡಬೇಕು. ಪ್ರತ್ಯೇಕ ಶೌಚಾಲಯಗಳನ್ನು ನಿರ್ಮಿಸಿಕೊಳ್ಳಲು ಸ್ಲಂ ಪ್ರದೇಶಗಳಿಗೆ ಆದ್ಯತೆ ನೀಡಬೇಕು. ಗದಗದಿಂದ ಬೆಟಗೇರಿ ಕಡೆಗೆ ಹೋಗುವ ಅಂಡರ್ ಬ್ರಿಡ್ಜ್ ಬದಲಾಗಿ ಮೇಲ್ಸೇತುವೆ ನಿರ್ಮಾಣ ಮಾಡುವ ಮೂಲಕ ಸಾರ್ವಜನಿಕರ ಸಂಚಾರಕ್ಕೆ ಅನುಕೂಲ ಮಾಡಲು ಕ್ರಮ ಕೈಗೊಳ್ಳಬೇಕೆಂದು ಸಭೆಯಲ್ಲಿ ಒತ್ತಾಯಿಸಿದರು.
ಸ್ಲಂ ಸಮಿತಿ ಉಪಾಧ್ಯಕ್ಷ ಅಶೋಕ ಕುಡತಿನ್ನಿ, ಕಾರ್ಯದರ್ಶಿ ಅಶೋಕ ಕುಸಬಿ, ಪರವೀನಬಾನು ಹವಾಲ್ದಾರ, ಮೌಲಾಸಾಬ ಗಚ್ಚಿ, ಇಬ್ರಾಹಿಂ ಮುಲ್ಲಾ, ಮಂಜುನಾಥ ಶ್ರೀಗಿರಿ, ಮೆಹಬೂಬಸಾಬ ಬಳ್ಳಾರಿ, ಸಲೀಂ ಹರಿಹರ, ಖಾಜಾಸಾಬ ಇಸ್ಮಾಯಿಲನವರ, ಶರಣಪ್ಪ ಸೂಡಿ, ಮಕ್ತುಮಸಾನ ಮುಲ್ಲಾನವರ ಉಪಸ್ಥಿತರಿದ್ದರು.



