HomeKarnataka Newsಅಮೆರಿಕ ಮಹಿಳೆ ಅತ್ಯಾಚಾರ ಪ್ರಕರಣ: ಅಕ್ರಮ ಬಂಧನಕ್ಕೆ ಮಾಲೀಕರಿಗೆ ₹5 ಲಕ್ಷ ಪರಿಹಾರ ನೀಡಲು ಹೈಕೋರ್ಟ್...

ಅಮೆರಿಕ ಮಹಿಳೆ ಅತ್ಯಾಚಾರ ಪ್ರಕರಣ: ಅಕ್ರಮ ಬಂಧನಕ್ಕೆ ಮಾಲೀಕರಿಗೆ ₹5 ಲಕ್ಷ ಪರಿಹಾರ ನೀಡಲು ಹೈಕೋರ್ಟ್ ಆದೇಶ

For Dai;y Updates Join Our whatsapp Group

ಬೆಂಗಳೂರು: ಕೊಡಗಿನ ಹೋಂಸ್ಟೇಯೊಂದರಲ್ಲಿ ಅಮೆರಿಕದ ಮಹಿಳಾ ಪ್ರವಾಸಿಯ ಮೇಲೆ ನಡೆದಿರುವುದಾಗಿ ಆರೋಪಿಸಲಾದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಹೋಂಸ್ಟೇ ಮಾಲೀಕರನ್ನು ಅಕ್ರಮವಾಗಿ ಬಂಧಿಸಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಕರ್ನಾಟಕ ಹೈಕೋರ್ಟ್, ಅವರಿಗೆ 5 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್ ರದ್ದುಪಡಿಸುವಂತೆ ಕೋರಿ ಹೋಂಸ್ಟೇ ಮಾಲೀಕ ಪಿ. ಪೊನ್ನಪ್ಪ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ವಿಚಾರಣೆ ನಡೆಸಿ ಈ ಆದೇಶ ನೀಡಿದೆ. ಆದರೆ, ಪ್ರಕರಣದ ತನಿಖೆ ಇನ್ನೂ ಪ್ರಗತಿಯಲ್ಲಿರುವ ಕಾರಣ ಈ ಹಂತದಲ್ಲಿ ಎಫ್‌ಐಆರ್ ರದ್ದುಪಡಿಸಲು ನ್ಯಾಯಾಲಯ ನಿರಾಕರಿಸಿದೆ.

ಪ್ರಕರಣದ ತನಿಖೆಯಲ್ಲಿ ಈಗಲೇ ಹಸ್ತಕ್ಷೇಪ ಮಾಡುವ ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟಿರುವ ನ್ಯಾಯಪೀಠ, ತನಿಖೆ ಮುಂದುವರಿಯಬೇಕೆಂದು ಸ್ಪಷ್ಟಪಡಿಸಿದೆ. ಆದರೆ, ಅರ್ಜಿದಾರರ ಬಂಧನ ಕಾನೂನುಬಾಹಿರವಾಗಿರುವುದು ಕಂಡುಬಂದ ಹಿನ್ನೆಲೆಯಲ್ಲಿ, ಅವರು ಪರಿಹಾರ ಪಡೆಯಲು ಅರ್ಹರು ಎಂದು ಹೇಳಿದೆ.

ನ್ಯಾಯಾಲಯದ ಆದೇಶದಂತೆ, ಅಕ್ರಮ ಬಂಧನಕ್ಕೆ ಪರಿಹಾರವಾಗಿ 5 ಲಕ್ಷ ರೂಪಾಯಿಯನ್ನು ನಾಲ್ಕು ವಾರಗಳೊಳಗೆ ಪಿ. ಪೊನ್ನಪ್ಪ ಅವರಿಗೆ ರಾಜ್ಯ ಸರ್ಕಾರ ಪಾವತಿಸಬೇಕು ಎಂದು ನಿರ್ದೇಶಿಸಲಾಗಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ತಮ್ಮ ಕಕ್ಷಿದಾರರು ಯಾವುದೇ ಅತ್ಯಾಚಾರ ಎಸಗಿಲ್ಲ. ಎಫ್‌ಐಆರ್‌ನಲ್ಲಿ ಅವರ ವಿರುದ್ಧ ಅಂತಹ ಆರೋಪವಿಲ್ಲದಿದ್ದರೂ, ನಂತರದ ಹಂತದಲ್ಲಿ ‘ಸಾಮಾನ್ಯ ಉದ್ದೇಶ’ ಎಂಬ ಅಂಶವನ್ನು ಸೇರಿಸಿ ಬಂಧಿಸಲಾಗಿದೆ ಎಂದು ವಾದಿಸಿದರು. ಅಲ್ಲದೆ, ಘಟನೆ ನಡೆದ ವೇಳೆ ಪೊನ್ನಪ್ಪ ಹೋಂಸ್ಟೇಯಲ್ಲೇ ಇರಲಿಲ್ಲ ಎಂಬುದಕ್ಕೆ ಸಿಸಿಟಿವಿ ದೃಶ್ಯಾವಳಿ ಸೇರಿದಂತೆ ಸಾಕ್ಷ್ಯಗಳನ್ನು ಸಲ್ಲಿಸಲಾಗುವುದು ಎಂದು ನ್ಯಾಯಾಲಯಕ್ಕೆ ತಿಳಿಸಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸರ್ಕಾರದ ಪರ ವಕೀಲರು, ಹೋಂಸ್ಟೇ ಮಾಲೀಕರು ಸಂತ್ರಸ್ತ ಮಹಿಳೆಯನ್ನು ಉದ್ದೇಶಪೂರ್ವಕವಾಗಿ ಹೆಚ್ಚು ದಿನ ಅಲ್ಲೇ ಉಳಿಯುವಂತೆ ಒತ್ತಾಯಿಸಿದ್ದು, ಹೊರಗಿನವರೊಂದಿಗೆ ಸಂಪರ್ಕ ಸಾಧಿಸದಂತೆ ನಿರ್ಬಂಧಿಸಿದ್ದರೆಂಬ ಆರೋಪಗಳಿವೆ ಎಂದು ಪೀಠದ ಗಮನಕ್ಕೆ ತಂದರು.

ಪ್ರಕರಣದ ಹಿನ್ನೆಲೆ

ಏಪ್ರಿಲ್ 12ರಂದು ಅಮೆರಿಕದ ಮಹಿಳಾ ಪ್ರವಾಸಿ ಕೊಡಗಿನ ಹೋಂಸ್ಟೇಗೆ ಬಂದಿದ್ದ ವೇಳೆ, ಪಾನೀಯದಲ್ಲಿ ಅಮಲು ಪದಾರ್ಥ ಬೆರೆಸಿ ಹೋಂಸ್ಟೇ ಸಿಬ್ಬಂದಿಯೊಬ್ಬ ಅತ್ಯಾಚಾರ ಎಸಗಿದ್ದಾನೆ ಎಂಬ ಆರೋಪದಡಿ ಪ್ರಕರಣ ದಾಖಲಾಗಿತ್ತು. ಬಳಿಕ ಹೋಂಸ್ಟೇ ಮಾಲೀಕನ ವಿರುದ್ಧವೂ ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 64(1) (ಅತ್ಯಾಚಾರ), 351(2) (ಕ್ರಿಮಿನಲ್ ಬೆದರಿಕೆ), 238 ಹಾಗೂ 239 (ಅಪರಾಧಕ್ಕೆ ಸಂಬಂಧಿಸಿದ ಮಾಹಿತಿ ಮರೆಮಾಚುವುದು ಮತ್ತು ಸುಳ್ಳು ಮಾಹಿತಿ ನೀಡುವುದು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

ಈ ಪ್ರಕರಣದಲ್ಲಿ ಏಪ್ರಿಲ್ 19ರಂದು ಪಿ. ಪೊನ್ನಪ್ಪ ಅವರನ್ನು ಬಂಧಿಸಲಾಗಿತ್ತು. ತಮ್ಮ ಬಂಧನ ಅಕ್ರಮವಾಗಿದ್ದು, ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ವಾದಿಸಿದ ಅವರು, ಎಫ್‌ಐಆರ್ ರದ್ದುಪಡಿಸುವುದರ ಜೊತೆಗೆ 15 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಕೋರಿ ಹೈಕೋರ್ಟ್ ಮೊರೆ ಹೋಗಿದ್ದರು. ಇದೀಗ ಹೈಕೋರ್ಟ್ ಅವರ ಬಂಧನವನ್ನು ಅಕ್ರಮ ಎಂದು ಘೋಷಿಸಿ, 5 ಲಕ್ಷ ರೂಪಾಯಿ ಪರಿಹಾರ ನೀಡಲು ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img