ವಿಜಯಸಾಕ್ಷಿ ಸುದ್ದಿ, ಡಂಬಳ: ಹುಬ್ಬಳ್ಳಿಯಲ್ಲಿ ಅ. 9ರಂದು ನಡೆಯಲಿರುವ 32ನೇ ವಿಶ್ವ ಆದಿವಾಸಿ ದಿನಾಚರಣೆ ಕಾರ್ಯಕ್ರಮದಲ್ಲಿ ರಾಜ್ಯದ ಆದಿವಾಸಿ ಹಾಗೂ ಬುಡಕಟ್ಟು ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಂಘಟನೆಯ ಬಲವರ್ಧನೆಗೆ ಕೈಜೋಡಿಸಬೇಕು ಎಂದು ಆದಿವಾಸಿ ಹಿರಿಯ ನಾರಾಯಣ ಹರಣಶಿಕಾರಿ ಕರೆ ನೀಡಿದರು.
ಡಂಬಳ ಹೋಬಳಿಯ ಜಂತ್ಲಿ ಶಿರೂರ ಗ್ರಾಮದಲ್ಲಿ ವಿಶ್ವ ಆದಿವಾಸಿ ದಿನಾಚರಣೆ ಅಂಗವಾಗಿ ಹಕ್ಕಿಪಿಕ್ಕಿ, ಹರಣಶಿಕಾರಿ, ಪಾರದಿ ಶಿಕಾರಿ ಸೇರಿದಂತೆ ವಿವಿಧ ಸಮುದಾಯಗಳ ಸಂಘಟನೆಗಳ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಹರಣಶಿಕಾರಿ ಹಾಗೂ ಪಾರದಿ ಸಮುದಾಯಗಳ ನೇತೃತ್ವದಲ್ಲಿ ಹುಬ್ಬಳ್ಳಿಯಲ್ಲಿ ಬೃಹತ್ ಸಮಾವೇಶ ಆಯೋಜಿಸಲಾಗಿದ್ದು, ರಾಜ್ಯದ ವಿವಿಧ ಭಾಗಗಳಿಂದ 49 ಆದಿವಾಸಿ ಬುಡಕಟ್ಟು ಸಮುದಾಯಗಳು ಹಾಗೂ 32 ಅಂತರ ಸಮುದಾಯಗಳ ಮುಖಂಡರು, ಸಂಘಟನೆಗಳ ಪದಾಧಿಕಾರಿಗಳು ಮತ್ತು ಸೆಟ್ಲ್‌ಮೆಂಟ್ ಪ್ರದೇಶಗಳ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಆದಿವಾಸಿ ಸಮುದಾಯಗಳಿಗೆ ಸರ್ಕಾರದಿಂದ ದೊರೆಯಬೇಕಾದ ಹಕ್ಕು ಮತ್ತು ಸೌಲಭ್ಯಗಳನ್ನು ಪಡೆಯಲು ಸಂಘಟಿತ ಹೋರಾಟ ಅಗತ್ಯ. ಜೊತೆಗೆ ಸಮುದಾಯಗಳ ಸಾಂಪ್ರದಾಯಿಕ ಕಲೆ, ಸಂಸ್ಕೃತಿ ಹಾಗೂ ಪರಂಪರೆಯನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಸಭೆಯಲ್ಲಿ ಮಾರುತಿ ಪಗಲೆಪ್ಪ ಹರಣಶಿಕಾರಿ, ಮಾರುತಿ ಗಂಗಪ್ಪ ಹರಣಶಿಕಾರಿ, ರಾಮಣ್ಣ ಗೋವಿಂದಪ್ಪ ಹರಣಶಿಕಾರಿ, ಅರ್ಜುನ್ ಅಪ್ಪನ ಕಟ್ಟಿಮನಿ, ಶೇಖಪ್ಪ ರಾಮಪ್ಪ ಚವಾಣ್, ಅಣ್ಣಪ್ಪ ಗೋಪಾಲ್ ಹರಣಶಿಕಾರಿ, ಚಂದ್ರು ಬಸಪ್ಪ ಹರಣಶಿಕಾರಿ, ನಾಗಪ್ಪ ಜಾರಪ್ಪ ಹರಣಶಿಕಾರಿ, ಮಲ್ಲೇಶ್ ಬಸಪ್ಪ ಲಕ್ಕುಂಡಿ, ಬಸವರಾಜ ಬಾಲಪ್ಪ ಚವಾಣ, ಬಸವರಾಜ ಮಾರುತಿ ಚವಾಣ, ಮಲ್ಲಪ್ಪ ಬಸಪ್ಪ ಹರಣಶಿಕಾರಿ, ಚೆನ್ನಪ್ಪ ಬಸಪ್ಪ ಹರಣಶಿಕಾರಿ, ಬಸವರಾಜ ಗಂಗಪ್ಪ ಹರಣಶಿಕಾರಿ, ದಲ್ಲಪ್ಪ ಅಪ್ಪಣ್ಣ ಕಟ್ಟಿಮನಿ ಸೇರಿದಂತೆ ಸಮುದಾಯದ ಹಿರಿಯರು, ಯುವಕರು ಹಾಗೂ ಮಹಿಳೆಯರು ಉಪಸ್ಥಿತರಿದ್ದರು.



