ಬೆಂಗಳೂರು: ನಗರದ ಪರಪ್ಪನ ಅಗ್ರಹಾರ ಜೈಲುನಲ್ಲಿ ಕೈದಿಗಳ ಅಕ್ರಮ ಚಟುವಟಿಕೆಗಳು ಮತ್ತೊಮ್ಮೆ ಬಹಿರಂಗವಾಗಿವೆ. ವಿಚಾರಣಾಧೀನ ಕೈದಿ ಅಕ್ಬರ್ ಸೆಲ್‌ನಲ್ಲೇ ಕುಳಿತು ತನ್ನ ಪತ್ನಿಗೆ ವಿಡಿಯೋ ಕಾಲ್ ಮಾಡಿದ ಘಟನೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವರದಿಗಳ ಪ್ರಕಾರ, ಅಕ್ಬರ್ ಜೈಲಿನ ಅಧಿಕಾರಿಗಳ ಕಣ್ಣು ತಪ್ಪಿಸಿ ಮೊಬೈಲ್ ಬಳಸುತ್ತಿದ್ದಾನೆ ಎನ್ನಲಾಗಿದೆ. ಈ ವೇಳೆ ಸೆಲ್‌ನೊಳಗಿಂದಲೇ ಪತ್ನಿಗೆ ವಿಡಿಯೋ ಕಾಲ್ ಮಾಡಿದ್ದು, ಆಕೆ ಅದನ್ನು ಸ್ಕ್ರೀನ್ ರೆಕಾರ್ಡ್ ಮಾಡಿ ಏಪ್ರಿಲ್ 9ರಂದು ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾಳೆ. ಏಪ್ರಿಲ್ 28ರಂದು ಅಕ್ಬರ್ ಜೈಲಿನಿಂದ ಬಿಡುಗಡೆಗೊಂಡ ಬಳಿಕ ಆ ಕ್ಷಣದ ವಿಡಿಯೋವನ್ನು ಸಹ ಪತ್ನಿ ಮತ್ತೊಮ್ಮೆ ಹಂಚಿಕೊಂಡಿದ್ದಳು. ನಂತರ ವಿಡಿಯೋ ಡಿಲೀಟ್ ಮಾಡಿದರೂ ಅದು ಈಗಾಗಲೇ ವೈರಲ್ ಆಗಿದೆ.
ಇದು ಮೊದಲ ಪ್ರಕರಣವಲ್ಲ. ಜೈಲಿನಲ್ಲಿ ಕೈದಿಗಳು ಐಷಾರಾಮಿ ಜೀವನ ನಡೆಸುತ್ತಿರುವುದು, ಗಾಂಜಾ–ತಂಬಾಕು ಸಾಗಾಟ, ಸಿಮ್ ಕಾರ್ಡ್ ಬಳಕೆ, ಮೊಬೈಲ್ ಚಟುವಟಿಕೆಗಳು ಸೇರಿದಂತೆ ಹಲವು ಅಕ್ರಮಗಳು ಹಿಂದೆಯೂ ಬೆಳಕಿಗೆ ಬಂದಿವೆ.
ಹಿಂದೆ ಜೈಲಿನೊಳಗಿನ ಹೈಫೈ ಜೀವನದ ವಿಡಿಯೋಗಳು ಬಹಿರಂಗವಾದ ನಂತರ ಮೂವರು ಅಧಿಕಾರಿಗಳು ಅಮಾನತುಗೊಂಡಿದ್ದರು. ಬಳಿಕ ವಿಶೇಷ ಅಧಿಕಾರಿಯಾಗಿ ಅಂಶುಕುಮಾರ್ ನೇಮಕವಾಗಿದ್ದರೂ ಪರಿಸ್ಥಿತಿ ಸುಧಾರಿಸಿಲ್ಲ ಎಂಬ ಆರೋಪಗಳು ಕೇಳಿಬರುತ್ತಿವೆ.
ಈ ಹಿಂದೆ ಟವರ್–1ರ 6ನೇ ಬ್ಯಾರಕ್ ಮೇಲೆ ದಾಳಿ ನಡೆಸಿದಾಗ 8 ಮೊಬೈಲ್‌ಗಳು, ಸಿಮ್ ಕಾರ್ಡ್ ಮತ್ತು ಚಾರ್ಜರ್‌ಗಳು ವಶಪಡಿಸಿಕೊಳ್ಳಲಾಗಿತ್ತು. ಕೇವಲ ಎರಡು ತಿಂಗಳಲ್ಲಿ 200ಕ್ಕೂ ಹೆಚ್ಚು ಮೊಬೈಲ್‌ಗಳು ಸೀಜ್ ಆಗಿದ್ದವು.
ಜನವರಿ 23ರಂದು ಕೈದಿಗೆ ಹಣ ನೀಡಲು ಬಂದ ಮಹಿಳೆ ಸಿಕ್ಕಿಬಿದ್ದಿದ್ದಳು. ಮಾರ್ಚ್ 26ರಂದು ಮತ್ತೊಂದು ಪ್ರಕರಣದಲ್ಲಿ ಮಹಿಳೆಯೊಬ್ಬಳು ತನ್ನ ಖಾಸಗಿ ಭಾಗದಲ್ಲಿ ತಂಬಾಕು ಮತ್ತು 5G ಸಿಮ್ ಅಡಗಿಸಿಕೊಂಡು ಜೈಲಿಗೆ ಪ್ರವೇಶಿಸಲು ಯತ್ನಿಸಿದ್ದಳು ಎಂಬ ಘಟನೆಗಳೂ ಬೆಳಕಿಗೆ ಬಂದಿವೆ.
ಈ ಎಲ್ಲಾ ಸರಣಿ ಘಟನೆಗಳ ನಡುವೆ ಈಗ ಮತ್ತೆ ವಿಡಿಯೋ ಕಾಲ್ ಪ್ರಕರಣ ಬೆಳಕಿಗೆ ಬಂದಿರುವುದು ಜೈಲು ಭದ್ರತಾ ವ್ಯವಸ್ಥೆಯ ಮೇಲಿನ ಗಂಭೀರ ಪ್ರಶ್ನೆಗಳನ್ನು ಎತ್ತಿದೆ.



