ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದಲ್ಲಿ ನಡೆದ ಮನೆ ಕಳ್ಳತನ, ಅಂಗಡಿ ಕಳ್ಳತನ ಹಾಗೂ ನಕಲಿ ಬಂಗಾರ ನೀಡಿ ಹಣ ವಂಚಿಸಿದ ನಾಲ್ಕು ಪ್ರತ್ಯೇಕ ಪ್ರಕರಣಗಳನ್ನು ಭೇದಿಸುವಲ್ಲಿ ಲಕ್ಷ್ಮೇಶ್ವರ ಪೊಲೀಸರು ಯಶಸ್ವಿಯಾಗಿದ್ದು, ಮೂವರು ಆರೋಪಿಗಳನ್ನು ಬಂಧಿಸಿ ₹4.18 ಲಕ್ಷ ಮೌಲ್ಯದ ನಗದು ಹಾಗೂ ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಫೆಬ್ರವರಿ 2 ಮತ್ತು 3ರಂದು ಭಾನು ಮಾರ್ಕೆಟ್ನಲ್ಲಿರುವ ಸಂತೋಷ ಕಾಶೆಟ್ಟಿ ಹಾಗೂ ಮಹೇಶ ಹೊಗೆಸೊಪ್ಪಿನ ಅವರ ಕಿರಾಣಿ ಮತ್ತು ಸ್ಟೇಷನರಿ ಅಂಗಡಿಗಳಲ್ಲಿ ನಡೆದ ಕಳ್ಳತನ, ಜೂನ್ 8ರಂದು ಸೊಪ್ಪಿನಕೇರಿಯ ನಾಗರತ್ನ ಹೂಗಾರ ಅವರ ಮನೆಯಲ್ಲಿ ನಡೆದ ಕಳ್ಳತನ ಹಾಗೂ ಅದೇ ದಿನ ಕೆಎಸ್ಆರ್ಟಿಸಿ ಡಿಪೋ ಸಮೀಪದ ಚಹಾ ಅಂಗಡಿಯಲ್ಲಿ ನಕಲಿ ಬಂಗಾರ ನೀಡಿ ಹಣ ಪಡೆದು ವಂಚಿಸಿದ ಪ್ರಕರಣ ಸೇರಿ ಒಟ್ಟು ನಾಲ್ಕು ಪ್ರಕರಣಗಳನ್ನು ಪೊಲೀಸರು ಭೇದಿಸಿದ್ದಾರೆ.
ಜಿಲ್ಲಾ ಪೊಲೀಸ್ ಅಧೀಕ್ಷಕ ರೋಹನ್ ಜಗದೀಶ ಅವರ ಮಾರ್ಗದರ್ಶನ ಹಾಗೂ ಡಿವೈಎಸ್ಪಿ ಮುರ್ತುಜಾ ಖಾದ್ರಿ ಅವರ ಮೇಲ್ವಿಚಾರಣೆಯಲ್ಲಿ, ಶಿರಹಟ್ಟಿ ವೃತ್ತದ ಸಿಪಿಐ ಬಿ.ವಿ. ನ್ಯಾಮಗೌಡ ನೇತೃತ್ವದಲ್ಲಿ ಪಿಎಸ್ಐ ನಾಗರಾಜ ಗಡದ, ಅಪರಾಧ ವಿಭಾಗದ ಪಿಎಸ್ಐ ಟಿ.ಕೆ. ರಾಠೋಡ ಸೇರಿದಂತೆ ವಿಶೇಷ ತಂಡ ಕಾರ್ಯಾಚರಣೆ ನಡೆಸಿತು.
ಕಾರ್ಯಾಚರಣೆಯಲ್ಲಿ ಗೋವಾದಲ್ಲಿ ವಾಸವಾಗಿರುವ ಮೈನುದ್ದೀನ್ ತಂದೆ ಅಬ್ದುಲ್ ಅಜೀಂ ಕಿಲ್ಲೇದಾರ, ಒಬ್ಬ ಅಪ್ರಾಪ್ತ ಬಾಲಕ ಹಾಗೂ ಆಂಧ್ರಪ್ರದೇಶ ಮೂಲದ, ಹುಬ್ಬಳ್ಳಿಯಲ್ಲಿ ವಾಸವಾಗಿರುವ ತಮ್ಮಿಶೆಟ್ಟಿ ಲಕ್ಷ್ಮಿ ಅಲಿಯಾಸ್ ತಿರುಪತಮ್ಮ ಅವರನ್ನು ಬಂಧಿಸಲಾಗಿದೆ.
ಬಂಧಿತರಿಂದ 170 ಗ್ರಾಂ ಬೆಳ್ಳಿ ಆಭರಣ (ಅಂದಾಜು ಮೌಲ್ಯ ₹28 ಸಾವಿರ) ಹಾಗೂ ₹3.90 ಲಕ್ಷ ನಗದು ಸೇರಿದಂತೆ ಒಟ್ಟು ₹4.18 ಲಕ್ಷ ಮೌಲ್ಯದ ಆಸ್ತಿ ಜಪ್ತಿ ಮಾಡಲಾಗಿದೆ.
ಪೊಲೀಸ್ ತಂಡಕ್ಕೆ ಎಸ್ಪಿ ಶ್ಲಾಘನೆ
ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾದ ಸಿಪಿಐ ಬಿ.ವಿ. ನ್ಯಾಮಗೌಡ, ಪಿಎಸ್ಐ ನಾಗರಾಜ ಗಡದ, ಪಿಎಸ್ಐ ಟಿ.ಕೆ. ರಾಠೋಡ, ಪ್ರೊಬೇಷನರಿ ಪಿಎಸ್ಐ ಸೂರ್ಯಕಾಂತ ಗುಗ್ಗರಿ, ಲಕ್ಷ್ಮೇಶ್ವರ ಠಾಣೆಯ ಸಿಬ್ಬಂದಿ ಹಾಗೂ ಗದಗ ಟೆಕ್ನಿಕಲ್ ಸೆಲ್ನ ಗುರು ಬೂದಿಹಾಳ ಮತ್ತು ಸಂಜು ಕೊರಡೂರ ಅವರ ಕಾರ್ಯವನ್ನು ಜಿಲ್ಲಾ ಪೊಲೀಸ್ ಅಧೀಕ್ಷಕ ರೋಹನ್ ಜಗದೀಶ ಶ್ಲಾಘಿಸಿದ್ದಾರೆ.



