ನವದೆಹಲಿ: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವವರಿಗೆ ಪ್ರಮುಖ ಮಾಹಿತಿ ಇಲ್ಲಿದೆ.

ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಭಾರತದ ಪ್ರಮುಖ ಷೇರು ವಿನಿಮಯ ಕೇಂದ್ರಗಳಾದ ಬಾಂಬೆ ಸ್ಟಾಕ್ ಎಕ್ಸ್ಚೇಂಜ್ (BSE) ಮತ್ತು ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ (NSE)ಗೆ ರಜೆ ಘೋಷಿಸಲಾಗಿದೆ.
ದೀಪಾವಳಿ ಧನಲಕ್ಷ್ಮಿ ಪೂಜೆಯ ದಿನದಂದು ವಿಶೇಷ ಮುಹೂರ್ತ ಟ್ರೇಡಿಂಗ್ ನಡೆದಿತ್ತು. ಇದೀಗ ನವೆಂಬರ್ 10ರಂದು ದೀಪಾವಳಿ ಬಲಿಪ್ರತಿಪದ ಪ್ರಯುಕ್ತ ಷೇರುಪೇಟೆಯಲ್ಲಿ ವಹಿವಾಟು ನಡೆಯುವುದಿಲ್ಲ. ನವೆಂಬರ್ 11ರ ಬುಧವಾರದಿಂದ ಎಂದಿನಂತೆ ವಹಿವಾಟು ಪುನರಾರಂಭವಾಗಲಿದೆ.
ಇನ್ನು ನವೆಂಬರ್ ತಿಂಗಳಲ್ಲಿ ಷೇರು ಮಾರುಕಟ್ಟೆಗೆ ಮತ್ತೊಂದು ರಜೆ ಇದೆ. ನವೆಂಬರ್ 24ರಂದು ಗುರುನಾನಕ್ ಜಯಂತಿ ಪ್ರಯುಕ್ತ ಷೇರುಪೇಟೆ ಬಂದ್ ಆಗಿರಲಿದೆ. ಹಾಗೆಯೇ ಡಿಸೆಂಬರ್ 25ರಂದು ಕ್ರಿಸ್ಮಸ್ ಹಬ್ಬದ ಹಿನ್ನೆಲೆಯಲ್ಲಿ ವಹಿವಾಟು ಸ್ಥಗಿತಗೊಳ್ಳಲಿದೆ.
2026ರ ನವೆಂಬರ್ ಮತ್ತು ಡಿಸೆಂಬರ್ನಲ್ಲಿ ಷೇರುಪೇಟೆ ರಜಾದಿನಗಳು:
-
ನವೆಂಬರ್ 10, ಮಂಗಳವಾರ: ದೀಪಾವಳಿ ಬಲಿಪ್ರತಿಪದ
-
ನವೆಂಬರ್ 24, ಮಂಗಳವಾರ: ಗುರುನಾನಕ್ ಜಯಂತಿ
-
ಡಿಸೆಂಬರ್ 25, ಶುಕ್ರವಾರ: ಕ್ರಿಸ್ಮಸ್
ಒಂದು ವರ್ಷದಲ್ಲಿ ನಿಫ್ಟಿ ನೀಡಿದ ರಿಟರ್ನ್ಸ್ ಎಷ್ಟು?
ಇನ್ನು ಷೇರು ಮಾರುಕಟ್ಟೆಯ ಸಾಧನೆ ಗಮನಿಸಿದರೆ, ಕಳೆದ ಒಂದು ವರ್ಷಕ್ಕೆ ಹೋಲಿಸಿದರೆ ನಿಫ್ಟಿ ಸೂಚ್ಯಂಕ ಸುಮಾರು 530 ಅಂಕಗಳನ್ನು ಕಳೆದುಕೊಂಡಿದ್ದು, ಶೇಕಡಾ 2ಕ್ಕಿಂತ ಹೆಚ್ಚು ಕುಸಿತ ಕಂಡಿದೆ. ಈ ವರ್ಷದ ಮೊದಲ ಹತ್ತು ತಿಂಗಳಲ್ಲೇ ನಿಫ್ಟಿ 1,102 ಅಂಕಗಳಷ್ಟು ಇಳಿಕೆಯಾಗಿದೆ.
ಜನವರಿಯಲ್ಲಿ 26,373 ಅಂಕಗಳ ಗರಿಷ್ಠ ಮಟ್ಟ ತಲುಪಿದ್ದ ನಿಫ್ಟಿ, ಇದೀಗ 25,044 ಅಂಕಗಳ ಮಟ್ಟದಲ್ಲಿದೆ. ಕಳೆದ ಒಂದು ತಿಂಗಳಿಂದ ನಿಫ್ಟಿ ಮತ್ತು ಸೆನ್ಸೆಕ್ಸ್ ಸೇರಿದಂತೆ ಪ್ರಮುಖ ಸೂಚ್ಯಂಕಗಳು ಚೇತರಿಕೆ ಕಾಣುತ್ತಿವೆ. ಆದರೂ ವರ್ಷದ ಆರಂಭದಲ್ಲಿ ದಾಖಲಿಸಿದ್ದ ಗರಿಷ್ಠ ಮಟ್ಟವನ್ನು ಮತ್ತೆ ತಲುಪಲು ಮಾರುಕಟ್ಟೆ ಸಾಕಷ್ಟು ದೂರ ಸಾಗಬೇಕಿದೆ.
ಜಾಗತಿಕವಾಗಿ ಎಐ ಕ್ಷೇತ್ರದಲ್ಲಿನ ಕುಸಿತದ ಹಿನ್ನೆಲೆಯಲ್ಲಿ ಹೂಡಿಕೆದಾರರ ಬಂಡವಾಳ ಭಾರತದ ಮಾರುಕಟ್ಟೆಯತ್ತ ಹರಿದುಬರುತ್ತಿದೆ ಎನ್ನಲಾಗುತ್ತಿದೆ. ಒಂದು ವೇಳೆ ಎಐ ಕ್ಷೇತ್ರ ಮತ್ತೆ ಚೇತರಿಸಿಕೊಂಡರೆ ಭಾರತದ ಷೇರು ಮಾರುಕಟ್ಟೆಯ ಮೇಲೆ ಯಾವ ರೀತಿಯ ಪರಿಣಾಮ ಬೀರಬಹುದು ಎಂಬ ಕುತೂಹಲವೂ ಹೂಡಿಕೆದಾರರಲ್ಲಿದೆ.









