ರಾಮನಗರ: ಖಾಸಗಿ ರೆಸಾರ್ಟ್ನ ಸ್ವಿಮ್ಮಿಂಗ್ ಪೂಲ್ನಲ್ಲಿ ಮುಳುಗಿ ಮೂರೂವರೆ ವರ್ಷದ ಮಗು ದಾರುಣವಾಗಿ ಮೃತಪಟ್ಟಿರುವ ಘಟನೆ ರಾಮನಗರ ತಾಲೂಕಿನ ಹರಿಸಂದ್ರ ಗ್ರಾಮದ ಬಳಿ ನಡೆದಿದೆ.

ಮೃತ ಮಗುವನ್ನು ಮಣಿಪುರ ಮೂಲದ ಲೀನ್ ಮತ್ತು ಟ್ರೇಸಿ ದಂಪತಿಯ ಪುತ್ರ ಇವಾನ್ ಎಂದು ಗುರುತಿಸಲಾಗಿದೆ. ಬೆಂಗಳೂರಿನ ಕೊತ್ತನೂರು ಬಳಿ ವಾಸವಾಗಿದ್ದ ದಂಪತಿ, ಸುಮಾರು 40 ಜನರೊಂದಿಗೆ ರೆಸಾರ್ಟ್ಗೆ ಪ್ರವಾಸಕ್ಕೆ ಬಂದಿದ್ದರು. ಈ ವೇಳೆ ದಂಪತಿ ಪ್ರತ್ಯೇಕ ಸ್ವಿಮ್ಮಿಂಗ್ ಪೂಲ್ ಸೌಲಭ್ಯವಿರುವ ಕೊಠಡಿಯಲ್ಲಿ ತಂಗಿದ್ದರು ಎನ್ನಲಾಗಿದೆ.
ಕುಟುಂಬದವರು ರೆಸಾರ್ಟ್ನಲ್ಲಿ ಸಮಯ ಕಳೆಯುತ್ತಿದ್ದ ಸಂದರ್ಭದಲ್ಲಿ ಮಗು ಖಾಸಗಿ ಸ್ವಿಮ್ಮಿಂಗ್ ಪೂಲ್ನಲ್ಲಿ ಆಟವಾಡುವಾಗ ನೀರಿನಲ್ಲಿ ಮುಳುಗಿ ಮೃತಪಟ್ಟಿದೆ. ಮುದ್ದಾದ ಮಗುವನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ಘಟನೆಗೆ ಸಂಬಂಧಿಸಿದಂತೆ ರಾಮನಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.










