HomeGadag Newsಮಕ್ಕಳ ಕಳ್ಳಸಾಗಾಣಿಕೆ ತಡೆಗೆ ಜಾಗೃತಿ ಅತ್ಯಗತ್ಯ: ಸಿ.ಎಸ್. ಶಿವನಗೌಡ್ರ

ಮಕ್ಕಳ ಕಳ್ಳಸಾಗಾಣಿಕೆ ತಡೆಗೆ ಜಾಗೃತಿ ಅತ್ಯಗತ್ಯ: ಸಿ.ಎಸ್. ಶಿವನಗೌಡ್ರ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಗದಗ: ಮಕ್ಕಳನ್ನು ಮಾರಾಟ ಮಾಡುವುದು, ಭಿಕ್ಷಾಟನೆ, ಮಾದಕ ವಸ್ತುಗಳ ಸಾಗಾಣಿಕೆ ಹಾಗೂ ಇತರ ಅಕ್ರಮ ಚಟುವಟಿಕೆಗಳಿಗೆ ಬಳಸುವುದು ಗಂಭೀರ ಅಪರಾಧವಾಗಿದ್ದು, ಇಂತಹ ಪ್ರಕರಣಗಳನ್ನು ತಡೆಗಟ್ಟಲು ಅಧಿಕಾರಿಗಳು ಹೆಚ್ಚಿನ ಜಾಗೃತಿ ಹಾಗೂ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಎಸ್. ಶಿವನಗೌಡ್ರ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಕ್ಕಳ ರಕ್ಷಣಾ ನಿರ್ದೇಶನಾಲಯ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಂಯುಕ್ತಾಶ್ರಯದಲ್ಲಿ ಗುರುವಾರ ಆಯೋಜಿಸಿದ್ದ ‘ವಿಶ್ವ ಮಾನವ ಕಳ್ಳಸಾಗಾಣಿಕೆ ವಿರೋಧ ದಿನಾಚರಣೆ–2026’ ಅಂಗವಾಗಿ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳಿಗೆ ನಡೆದ ಸಾಮರ್ಥ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಶಾಲೆ ಬಿಟ್ಟ ಮಕ್ಕಳೇ ಹೆಚ್ಚಾಗಿ ಕಳ್ಳಸಾಗಾಣಿಕೆ ಜಾಲಕ್ಕೆ ಬಲಿಯಾಗುತ್ತಿರುವುದರಿಂದ ಪ್ರತಿಯೊಂದು ಮಗುವನ್ನು ಶಾಲೆಗೆ ಮರುದಾಖಲಾತಿ ಮಾಡುವ ಕಾರ್ಯಕ್ಕೆ ಆದ್ಯತೆ ನೀಡಬೇಕು. ಉಚಿತ ಮತ್ತು ಕಡ್ಡಾಯ ಶಿಕ್ಷಣದ ಸೌಲಭ್ಯವನ್ನು ಸಮರ್ಪಕವಾಗಿ ಬಳಸಿಕೊಂಡು ಮಕ್ಕಳನ್ನು ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಮಕ್ಕಳನ್ನು ಭಿಕ್ಷಾಟನೆ, ಮಾದಕ ವಸ್ತುಗಳ ಸಾಗಾಣಿಕೆ ಹಾಗೂ ಇತರ ದುಷ್ಕೃತ್ಯಗಳಿಗೆ ಬಳಸುವುದು ಮಾನವ ಕಳ್ಳಸಾಗಾಣಿಕೆಯ ವ್ಯಾಪ್ತಿಗೆ ಬರುತ್ತದೆ. ಇಂತಹ ಪ್ರಕರಣಗಳ ಬಗ್ಗೆ ಸಮಗ್ರ ತನಿಖೆ ನಡೆಸಿ ಕಾನೂನು ಕ್ರಮ ಜರುಗಿಸಬೇಕು. ಪೋಕ್ಸೊ ಕಾಯ್ದೆ, ಬಾಲ್ಯ ವಿವಾಹ ನಿಷೇಧ ಕಾಯ್ದೆ ಹಾಗೂ ಮಕ್ಕಳ ಮೇಲಿನ ದೌರ್ಜನ್ಯ ತಡೆ ಕುರಿತು ಅಧಿಕಾರಿಗಳು ಹೆಚ್ಚಿನ ಎಚ್ಚರಿಕೆ ವಹಿಸಬೇಕು ಎಂದರು.

ಜಿಲ್ಲಾ ಉಪ ಪೊಲೀಸ್ ವರಿಷ್ಠಾಧಿಕಾರಿ ಮುರ್ತುಜಾ ಖಾದ್ರಿ ಮಾತನಾಡಿ, ಸೈಬರ್ ಅಪರಾಧಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಕ್ಕಳು ಮತ್ತು ವಿದ್ಯಾರ್ಥಿಗಳು ಅಪರಿಚಿತರ ಸಂಪರ್ಕದಿಂದ ದೂರವಿರಬೇಕು. ಯಾವುದೇ ಅನುಮಾನಾಸ್ಪದ ಘಟನೆ ಕಂಡುಬಂದರೆ ತಕ್ಷಣ ಪೊಲೀಸ್ ಇಲಾಖೆ ಹಾಗೂ ‘ಅಕ್ಕಾ ಪಡೆ’ಯ ನೆರವು ಪಡೆಯುವಂತೆ ಕರೆ ನೀಡಿದರು.

ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಜಯದೇವಿ ಕವಲೂರು ಮಾತನಾಡಿ, ಮಕ್ಕಳ ಕಲ್ಯಾಣ ಸಮಿತಿಯ ಕಾರ್ಯವೈಖರಿ ಹಾಗೂ ಮಕ್ಕಳ ಹಕ್ಕುಗಳ ಬಗ್ಗೆ ಮಾಹಿತಿ ನೀಡಿ, ಸಮಿತಿಯ ಸೇವೆಗಳನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ರಾಧಾ ಜಿ. ಮಣ್ಣೂರು ಮಾತನಾಡಿ, 1098 (ಚೈಲ್ಡ್ ಹೆಲ್ಪ್‌ಲೈನ್), 112 (ತುರ್ತು ಸೇವೆ) ಹಾಗೂ 181 (ಮಹಿಳಾ ಸಹಾಯವಾಣಿ) ಉಚಿತ ಸೇವೆಗಳ ಬಗ್ಗೆ ಅರಿವು ಮೂಡಿಸಿ, ಯಾವುದೇ ಸಮಸ್ಯೆ ಎದುರಾದಾಗ ಸಾರ್ವಜನಿಕರು ಈ ಸಹಾಯವಾಣಿ ಸಂಖ್ಯೆಗಳ ಸದುಪಯೋಗ ಮಾಡಿಕೊಳ್ಳುವಂತೆ ತಿಳಿಸಿದರು.

ಜೀವನದಲ್ಲಿ ಸ್ಪಷ್ಟ ಗುರಿ ಇಟ್ಟುಕೊಂಡು ಸರಿಯಾದ ದಾರಿಯಲ್ಲಿ ಸಾಗಿದರೆ ಯಶಸ್ಸು ಸಾಧಿಸಲು ಸಾಧ್ಯ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಮಹಿಳಾ ಪೊಲೀಸ್ ಠಾಣೆಯ ವೃತ್ತ ಪೊಲೀಸ್ ನಿರೀಕ್ಷಕ ಎಲ್.ಕೆ. ಜೂಲಕಟ್ಟಿ ಅವರು ವಿಶ್ವ ಮಾನವ ಕಳ್ಳಸಾಗಾಣಿಕೆ ತಡೆ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಕಾರ್ಯಕ್ರಮದಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್.ಬಿ. ಮಸನಾಯಕ, ತೋಂಟದ ಸಿದ್ಧೇಶ್ವರ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎಸ್.ಎಸ್. ಪಟ್ಟಣಶೆಟ್ಟರ, ಪ್ರಾಂಶುಪಾಲ ವೈ.ಎಸ್. ಮತ್ತೂರು, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಜಯಶ್ರೀ ಆರ್., ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು. ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಜಯಶ್ರೀ ಆರ್. ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಲ್ಲಪ್ಪ ಹೊಸಳ್ಳಿ ಕಾರ್ಯಕ್ರಮ ನಿರೂಪಿಸಿದರು. ರಮೇಶ ಕಳ್ಳಿಮನಿ ವಂದಿಸಿದರು.

“ಶಾಲೆಯಿಂದ ಹೊರಗುಳಿದ ಮಕ್ಕಳು ಮಾನವ ಕಳ್ಳಸಾಗಾಣಿಕೆ ಜಾಲಕ್ಕೆ ಬಲಿಯಾಗುವ ಸಾಧ್ಯತೆ ಹೆಚ್ಚು. ಪ್ರತಿಯೊಂದು ಮಗುವನ್ನು ಶಿಕ್ಷಣದ ಮುಖ್ಯವಾಹಿನಿಗೆ ತರುವುದು ಪ್ರತಿಯೊಬ್ಬ ಅಧಿಕಾರಿಯ ಜವಾಬ್ದಾರಿಯಾಗಿದೆ.”

– ಸಿ.ಎಸ್. ಶಿವನಗೌಡ್ರ, ಸದಸ್ಯ ಕಾರ್ಯದರ್ಶಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಗದಗ

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img