ವಿಜಯಸಾಕ್ಷಿ ಸುದ್ದಿ, ಗದಗ : ಇನ್ನರ್ ವೀಲ್ ಕ್ಲಬ್ ಗದಗ-ಬೆಟಗೇರಿಯು ಗದುಗಿನ ಸಂಗೊಳ್ಳಿ ರಾಯಣ್ಣ ಪ್ರೌಢಶಾಲೆಯಲ್ಲಿ ನಾಗರಿಕ ಮೌಲ್ಯಗಳ ಕುರಿತು ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಿತ್ತು.
ಕಾರ್ಯಕ್ರಮದಲ್ಲಿ ಕವಿತಾ ಬೇಲೇರಿ ಮಾತನಾಡಿ, ಮೊಬೈಲ್, ಕಂಪ್ಯೂಟರ್‌ನಂತಹ ಆಧುನಿಕ ತಂತ್ರಜ್ಞಾನಗಳ ಹಾವಳಿಯಿಂದ ನಮ್ಮ ಸಂಸ್ಕೃತಿ ಮತ್ತು ಸಂಪ್ರದಾಯ ಮರೆಯಾಗುತ್ತಿದೆ. ಆಧುನಿಕ ಯುಗದಲ್ಲಿ ಮಕ್ಕಳು ನಮ್ಮ ಸಂಸ್ಕೃತಿ, ಮೌಲ್ಯಗಳು ಮತ್ತು ಸಂಪ್ರದಾಯದಿಂದ ಹೊರಬರುತ್ತಿದ್ದಾರೆ. ಇಂದಿನ ಮಕ್ಕಳಿಗೆ ಭಾರತೀಯ ಸಂಸ್ಕೃತಿ ಮತ್ತು ಸಂಪ್ರದಾಯದೊಂದಿಗೆ ಅವರ ನಾಗರಿಕ ಮೌಲ್ಯಗಳ ಸಂಸ್ಕಾರಗಳನ್ನು ಕಲಿಸಿ ಬೆಳೆಸಬೇಕಾಗಿದೆ ಎಂದರು.
ಇನ್ನರ್ ವ್ಹೀಲ್ ಸಂಸ್ಥೆಯ ಅಧ್ಯಕ್ಷೆ ನಾಗರತ್ನ ಮಾರನಬಸರಿ ಶಾಲೆಯಲ್ಲಿ ಮಕ್ಕಳಿಗಾಗಿ ಏರ್ಪಡಿಸಿದ್ದ `ನಾವು ಮನುಜರು’ ಎಂಬ ವಿಷಯದ ಕುರಿತ ಭಾಷಣ ಸ್ಪರ್ಧೆಯಲ್ಲಿ ವಿಜೇತರಾದ ಅಶ್ವಿನಿ ಜಂಗನವಾರಿ, ಅರ್ಜುನ ಬೂದಿಕೊಪ್ಪನವರ, ಸ್ಪಂದನ ಗಗನದ ಇವರಿಗೆ ಬಹುಮಾನ ವಿತರಿಸಿದರು. ಶಾಲೆಯ ಮುಖ್ಯೋಪಾಧ್ಯಾಯೆ ಪಿ.ಟಿ. ಬಿಸನಳ್ಳಿ ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಶಿಕ್ಷಕರಾದ ಎಮ್.ಬಿ. ಹರ್ತಿ ಸ್ವಾಗತಿಸಿದರು. ಎಮ್. ಕೆ. ಬೇವಿನಕಟ್ಟಿ ವಂದಿಸಿದರು. ಕಾರ್ಯದರ್ಶಿ ವೀಣಾ ತಿರ್ಲಾಪೂರ, ಐಎಸ್‌ಓ ಪುಷ್ಪಾ ಭಂಡಾರಿ, ಮಾಜಿ ಅಧ್ಯಕ್ಷರಾದ ಆಶಾ ಪಟ್ಟಣಶೆಟ್ಟಿ, ಸಿಎಲ್‌ಸಿಸಿ ಸುಮಾ ಪಾಟೀಲ, ಮೀನಾಕ್ಷಿ ಕೊರವಣ್ಣವರ ಉಪಸ್ಥಿತರಿದ್ದರು.