HomeBengaluru Newsಆಯುಧ ಪೂಜೆ, ವಿಜಯದಶಮಿ ಸಂಭ್ರಮ: ಬೆಂಗಳೂರಿನಲ್ಲಿ ಹೂವು, ಹಣ್ಣುಗಳ ಬೆಲೆ ಏರಿಕೆ!

ಆಯುಧ ಪೂಜೆ, ವಿಜಯದಶಮಿ ಸಂಭ್ರಮ: ಬೆಂಗಳೂರಿನಲ್ಲಿ ಹೂವು, ಹಣ್ಣುಗಳ ಬೆಲೆ ಏರಿಕೆ!

ಬೆಂಗಳೂರು: ನಾಡಿನಾದ್ಯಂತ ಆಯುಧ ಪೂಜೆ ಮತ್ತು ವಿಜಯದಶಮಿ ಹಬ್ಬದ ಸಂಭ್ರಮ ಮನೆಮಾಡಿದೆ.

ಹಬ್ಬದ ಪೂಜೆಗೆ ಅಗತ್ಯವಾದ ಹೂವು, ಹಣ್ಣು ಹಾಗೂ ಇತರ ಸಾಮಗ್ರಿಗಳನ್ನು ಖರೀದಿಸಲು ಬೆಂಗಳೂರಿನ ಕೆಆರ್ ಮಾರುಕಟ್ಟೆಯಲ್ಲಿ ಭಾನುವಾರ ಜನಸಾಗರವೇ ಹರಿದುಬಂದಿತ್ತು. ಆದರೆ, ಹಬ್ಬದ ಸಂಭ್ರಮದ ನಡುವೆಯೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದ್ದು, ಗ್ರಾಹಕರಿಗೆ ಹೆಚ್ಚುವರಿ ಹೊರೆ ತಂದಿದೆ.

ಹಬ್ಬದ ದಿನ ಹೂವು, ಹಣ್ಣುಗಳ ದರ ಮತ್ತಷ್ಟು ಹೆಚ್ಚಾಗಬಹುದು ಎಂಬ ನಿರೀಕ್ಷೆಯಿಂದ ಅನೇಕರು ಮುಂಚಿತವಾಗಿಯೇ ಮಾರುಕಟ್ಟೆಗೆ ಬಂದು ಖರೀದಿ ಮಾಡಿದ್ದಾರೆ. ಆದರೂ, ಹೂವುಗಳ ಬೆಲೆ ಹೆಚ್ಚಳದಿಂದ ವ್ಯಾಪಾರ ವಹಿವಾಟು ನಿರೀಕ್ಷಿತ ಮಟ್ಟದಲ್ಲಿ ನಡೆಯುತ್ತಿಲ್ಲ ಎಂದು ವ್ಯಾಪಾರಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೆಆರ್ ಮಾರುಕಟ್ಟೆಯಲ್ಲಿ ಹೂವು, ಹಾರಗಳ ದರ ಎಷ್ಟು?

ಮಾರುಕಟ್ಟೆಯಲ್ಲಿ ಸೇವಂತಿಗೆ ಒಂದು ಮಾರಿಗೆ 150 ರೂಪಾಯಿ, ಮಲ್ಲಿಗೆ ಮತ್ತು ಕನಕಾಂಬರ ತಲಾ 120 ರೂಪಾಯಿಗೆ ಮಾರಾಟವಾಗುತ್ತಿವೆ. ಮಿನಿ ರೋಸ್ ಹಾರದ ಬೆಲೆ 550 ರೂಪಾಯಿ ಇದ್ದರೆ, ದೊಡ್ಡ ರೋಸ್ ಹಾರಕ್ಕೆ 800 ರೂಪಾಯಿ ನಿಗದಿಯಾಗಿದೆ. ಸುಗಂಧರಾಜ ಹಾರ 300 ರೂಪಾಯಿ, ದೊಡ್ಡ ತೋಮಾಲೆ 2,500 ರೂಪಾಯಿ ಹಾಗೂ ಸಾಮಾನ್ಯ ಜೋಡಿ ತೋಮಾಲೆ 3,000 ರೂಪಾಯಿಗೆ ಮಾರಾಟವಾಗುತ್ತಿದೆ. ಮಿನಿ ಮಲ್ಲಿಗೆ ಹಾರದ ಬೆಲೆ 600 ರೂಪಾಯಿ ಇದ್ದರೆ, ತುಳಸಿ ಹಾರ 30ರಿಂದ 40 ರೂಪಾಯಿಗೆ ಲಭ್ಯವಿದೆ.

ಹಣ್ಣುಗಳ ಬೆಲೆಯೂ ಹೆಚ್ಚಳ:

ಹಣ್ಣುಗಳ ದರವನ್ನು ಗಮನಿಸಿದರೆ, ಕಪ್ಪು ದ್ರಾಕ್ಷಿ ಕೆಜಿಗೆ 200 ರೂಪಾಯಿ, ಹಸಿರು ದ್ರಾಕ್ಷಿ 280 ರೂಪಾಯಿ ಹಾಗೂ ಕಿತ್ತಳೆ 100 ರೂಪಾಯಿಗೆ ಮಾರಾಟವಾಗುತ್ತಿದೆ. ಸೇಬಿನ ಬೆಲೆ ಗುಣಮಟ್ಟಕ್ಕೆ ಅನುಗುಣವಾಗಿ 140ರಿಂದ 200 ರೂಪಾಯಿ ಇದೆ. ಸಪೋಟ ಕೆಜಿಗೆ 100 ರೂಪಾಯಿ, ದಾಳಿಂಬೆ 200ರಿಂದ 250 ರೂಪಾಯಿ ದರವಿದೆ. ಏಲಕ್ಕಿ ಬಾಳೆಹಣ್ಣು 80 ರೂಪಾಯಿ ಹಾಗೂ ದೊಡ್ಡ ಬಾಳೆಹಣ್ಣು 40 ರೂಪಾಯಿಗೆ ಮಾರಾಟವಾಗುತ್ತಿದೆ.

ಇನ್ನು ಅನಾನಸ್ ಜೋಡಿಗೆ 120 ರೂಪಾಯಿ, ಕುಂಬಳಕಾಯಿ ಕೆಜಿಗೆ 40 ರೂಪಾಯಿ, ಬಾಳೆಕಂದು 50ರಿಂದ 100 ರೂಪಾಯಿ ಹಾಗೂ ವೀಳ್ಯದೆಲೆ ಒಂದು ಕಟ್ಟಿಗೆ 80 ರೂಪಾಯಿ ದರವಿದೆ.

ಮಳೆಯಿಂದ ಹೂವಿನ ಪೂರೈಕೆಗೆ ಹೊಡೆತ:

ಕಳೆದ ಎರಡು ದಿನಗಳಿಂದ ಬೆಂಗಳೂರು ನಗರ ಮತ್ತು ಗ್ರಾಮಾಂತರ ಭಾಗಗಳಲ್ಲಿ ಸುರಿದ ಮಳೆಯಿಂದ ಹೂವು ಕಟಾವು ಮಾಡಲು ರೈತರಿಗೆ ತೊಂದರೆಯಾಗಿದೆ. ಮಳೆಯಿಂದ ಹೂವಿನ ಬೆಳೆಗೂ ಹಾನಿಯಾಗಿದ್ದು, ಮಾರುಕಟ್ಟೆಗೆ ಬರುವ ಹೂವುಗಳ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಇದರಿಂದ ದರ ಏರಿಕೆಯಾಗಿದ್ದು, ಗ್ರಾಹಕರು ಹೆಚ್ಚಿನ ಹಣ ನೀಡುವಂತಾಗಿದೆ.

ಜನದಟ್ಟಣೆಯಿಂದ ಟ್ರಾಫಿಕ್ ಜಾಮ್:

ಹಬ್ಬದ ಖರೀದಿಗಾಗಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರಿಂದ ಕೆಆರ್ ಮಾರುಕಟ್ಟೆ ಸುತ್ತಮುತ್ತ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಟ್ರಾಫಿಕ್ ಜಾಮ್ ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು.

ಒಟ್ಟಿನಲ್ಲಿ, ಹಬ್ಬದ ಸಿದ್ಧತೆಗಾಗಿ ಮಾರುಕಟ್ಟೆಯಲ್ಲಿ ಖರೀದಿ ಭರಾಟೆ ಜೋರಾಗಿದ್ದರೂ, ಹೂವು ಮತ್ತು ಹಣ್ಣುಗಳ ಬೆಲೆ ಏರಿಕೆ ಜನಸಾಮಾನ್ಯರ ಜೇಬಿಗೆ ಬಿಸಿ ಮುಟ್ಟಿಸಿದೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img