HomeBengaluru Newsಸಿಗ್ನಲ್ ಜಂಪ್, ಫುಟ್‌ಪಾತ್ ಮೇಲೆ ಸವಾರಿ: ಬೆಂಗಳೂರಿನಲ್ಲಿ ಮಿನಿ ಇ-ಬೈಕ್‌ಗಳ ಕಿರಿಕಿರಿ!

ಸಿಗ್ನಲ್ ಜಂಪ್, ಫುಟ್‌ಪಾತ್ ಮೇಲೆ ಸವಾರಿ: ಬೆಂಗಳೂರಿನಲ್ಲಿ ಮಿನಿ ಇ-ಬೈಕ್‌ಗಳ ಕಿರಿಕಿರಿ!

ಬೆಂಗಳೂರು: ಪರಿಸರ ಸ್ನೇಹಿ ವಾಹನಗಳ ಬಳಕೆಗೆ ಉತ್ತೇಜನ ಸಿಗುತ್ತಿರುವ ಬೆನ್ನಲ್ಲೇ, ಬೆಂಗಳೂರಿನಲ್ಲಿ ಮಿನಿ ಎಲೆಕ್ಟ್ರಿಕ್ ಬೈಕ್‌ಗಳ ಸವಾರರಿಂದ ಸಂಚಾರ ನಿಯಮ ಉಲ್ಲಂಘನೆಯಾಗುತ್ತಿರುವ ಆರೋಪ ಕೇಳಿಬಂದಿದೆ.

ಸಿಗ್ನಲ್ ಜಂಪ್, ಫುಟ್‌ಪಾತ್ ಮೇಲೆ ಸವಾರಿ, ನೋ ಎಂಟ್ರಿಯಲ್ಲಿ ಸಂಚಾರ ಹಾಗೂ ಹೆಲ್ಮೆಟ್ ಇಲ್ಲದೆ ವಾಹನ ಚಲಾಯಿಸುವ ಪ್ರಕರಣಗಳು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿವೆ.

ನಗರದಲ್ಲಿ ವಾಯುಮಾಲಿನ್ಯ ಕಡಿಮೆ ಮಾಡಲು ಎಲೆಕ್ಟ್ರಿಕ್ ವಾಹನಗಳು ಸಹಕಾರಿಯಾಗಿದ್ದರೂ, ಸಂಚಾರ ನಿಯಮಗಳನ್ನು ಪಾಲಿಸದ ಸವಾರರಿಂದ ಪಾದಚಾರಿಗಳಿಗೆ ತೊಂದರೆಯಾಗುತ್ತಿದೆ ಎಂಬ ದೂರುಗಳಿವೆ. ರಸ್ತೆ ಸುರಕ್ಷತೆಯ ದೃಷ್ಟಿಯಿಂದ ಇಂತಹ ವಾಹನಗಳ ಸಂಚಾರದ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯವೂ ಕೇಳಿಬಂದಿದೆ.

ಮೋಟಾರು ವಾಹನ ಕಾಯ್ದೆಯ ವ್ಯಾಪ್ತಿಗೆ ಬಾರದ ವಾಹನಗಳು!

ಮಿನಿ ಎಲೆಕ್ಟ್ರಿಕ್ ಬೈಕ್‌ಗಳ ವಿರುದ್ಧ ಕ್ರಮ ಕೈಗೊಳ್ಳುವ ವಿಚಾರದಲ್ಲಿ ಕಾನೂನಿನ ತಾಂತ್ರಿಕ ಅಂಶಗಳು ಅಡ್ಡಿಯಾಗುತ್ತಿವೆ ಎನ್ನಲಾಗಿದೆ. 250 ವ್ಯಾಟ್‌ಗಿಂತ ಕಡಿಮೆ ಮೋಟಾರ್ ಸಾಮರ್ಥ್ಯ ಹೊಂದಿದ್ದು, ಗಂಟೆಗೆ 25 ಕಿ.ಮೀ.ಗಿಂತ ಕಡಿಮೆ ವೇಗದ ಮಿತಿಯುಳ್ಳ ಕೆಲವು ಎಲೆಕ್ಟ್ರಿಕ್ ವಾಹನಗಳು ನಿಗದಿತ ಷರತ್ತುಗಳಡಿ ಮೋಟಾರು ವಾಹನ ಕಾಯ್ದೆಯ ವ್ಯಾಪ್ತಿಯಿಂದ ಹೊರಗಿರುತ್ತವೆ.

ಇದರಿಂದ ಇಂತಹ ವಾಹನಗಳ ಸವಾರರು ಸಂಚಾರ ನಿಯಮ ಉಲ್ಲಂಘಿಸಿದಾಗ ದಂಡ ವಿಧಿಸುವುದು ಅಥವಾ ಪ್ರಕರಣ ದಾಖಲಿಸುವುದು ಕಷ್ಟವಾಗುತ್ತಿದೆ ಎಂಬ ವಿಚಾರ ಮುನ್ನೆಲೆಗೆ ಬಂದಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಕಾರ್ತಿಕ್ ರೆಡ್ಡಿ, ಪ್ರಸ್ತುತ ಇಂತಹ ವಾಹನಗಳ ವಿರುದ್ಧ ಮೋಟಾರು ವಾಹನ ಕಾಯ್ದೆಯಡಿ ಪ್ರಕರಣ ದಾಖಲಿಸಲು ಅವಕಾಶವಿಲ್ಲದ ಕಾರಣ, ಸವಾರರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಅಪಘಾತವಾದರೆ ಹೊಣೆ ಯಾರು?

ಮಿನಿ ಎಲೆಕ್ಟ್ರಿಕ್ ಬೈಕ್‌ಗಳು ಸಾಮಾನ್ಯ ಬೈಕ್‌ಗಳಂತೆಯೇ ವೇಗವಾಗಿ ಚಲಿಸುತ್ತಿವೆ ಎಂಬುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ. ಈ ವಾಹನಗಳಿಂದ ಅಪಘಾತ ಸಂಭವಿಸಿದರೆ ಅಥವಾ ಪಾದಚಾರಿಗಳಿಗೆ ಗಾಯವಾದರೆ ಹೊಣೆಗಾರಿಕೆ ಯಾರದ್ದು ಎಂಬ ಪ್ರಶ್ನೆಯನ್ನೂ ಸಾರ್ವಜನಿಕರು ಎತ್ತಿದ್ದಾರೆ.

ಹೀಗಾಗಿ ಮಿನಿ ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಸ್ಪಷ್ಟ ನಿಯಮಗಳನ್ನು ರೂಪಿಸಿ, ರಸ್ತೆ ಸುರಕ್ಷತೆ ಕಾಪಾಡಲು ಅಗತ್ಯ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಹೆಚ್ಚಾಗಿದೆ. ಪರಿಸರ ಸ್ನೇಹಿ ವಾಹನಗಳ ಬಳಕೆಯ ಜೊತೆಗೆ ಪಾದಚಾರಿಗಳ ಸುರಕ್ಷತೆಗೂ ಆದ್ಯತೆ ನೀಡಬೇಕಿದೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img