ಗದಗ;- ಮಳೆಯಿಲ್ಲದೇ ಜಿಲ್ಲೆಯಲ್ಲಿ ಬರ ತಾಂಡವವಾಡುತ್ತಿದೆ. ಆದರೆ ಮಳೆಗಾಗಿ ನಡೆಯುತ್ತಿರುವ ಪ್ರಾರ್ಥನೆ ಮಾತ್ರ ಇನ್ನೂ ನಿಂತಿಲ್ಲ. ರೈತರು ಹಿಂಗಾರು ಮಳೆಗಾಗಿ ವಿವಿಧ ಸಾಂಪ್ರದಾಯಿಕ ಆಚರಣೆಗಳ ಮೊರೆ ಹೋಗುತ್ತಿದ್ದಾರೆ. ಈಗ ಕತ್ತೆಗಳ ಮದುವೆ ಮಾಡಿದರೆ ಮಳೆರಾಯ ನಗುಬೀರಿ ಮಳೆ ಸುರಿಸಿ ತಂಪೆರೆಯುತ್ತಾನೆ ಎಂಬ ರೈತರ ನಂಬಿಕೆ ಇನ್ನೂ ಜೀವಂತವಾಗಿದೆ.
ಅಂದಹಾಗೆ ಗದಗ ತಾಲ್ಲೂಕು ತಿಮ್ಮಾಪೂರ ಗ್ರಾಮದಲ್ಲಿ ಮಳೆರಾಯನ ಕೃಪೆಗಾಗಿ ಹಾಗೂ ದಸರಾ ಹಬ್ಬದ ಪ್ರಯುಕ್ತ ಹುಡೇದ ಲಕ್ಷ್ಮಿ ದೇವಸ್ಥಾನದಲ್ಲಿ ಕತ್ತೆಯ ಮದುವೆಯನ್ನು ಅದ್ದೂರಿಯಾಗಿ ನೆರವೇರಿಸಿದರು.
ಮದುವೆಯ ಹಿನ್ನೆಲೆಯಲ್ಲಿ ಸಾಂಪ್ರದಾಯದ ಪ್ರಕಾರ ಬಾಸಿಂಗವನ್ನು ಮಹಿಳೆಯರು ಹೂಗಾರರ ಮನೆಯಿಂದ ತಂದರೆ. ಪುರುಷರು ಅರಿಶಿಣ ಶಾಸ್ತ್ರವನ್ನು ಮಾಡಿ ಸುರುಗಿ ನೀರನ್ನು ಹಾಕಿದರು.
ಬಳಿಕ ಮಾಂಗಲ್ಯ ಧಾರಣೆ ಮಾಡಿ ಗ್ರಾಮಸ್ಥರು ಅಕ್ಷತೆಯನ್ನು ಹಾಕುವುದರ ಮೂಲಕ ಕತ್ತೆಗಳಿಗೆ ಸಾಂಪ್ರದಾಯಕವಾಗಿ ಮದುವೆ ಮಾಡಿ ಸಂಭ್ರಮಿಸಿದರು. ಮದುವೆ ನಂತರ ಕತ್ತೆಗಳನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿದರು. ಈ ಮೂಲಕ ಕತ್ತೆಗಳ ಮದುವೆ ನೋಡಿ ವರುಣನಿಗೆ ನಗು ಬಂದು ಧರೆಗೆ ಇಳಿಯುತ್ತಾನೆ. ಆ ಮೂಲಕ ಭೂಮಿತಾಯಿ ಮಡಿಲನ್ನು ತಂಪುಗೊಳಿಸಿ ಎಲ್ಲಾ ಸಕಲ ಜೀವರಾಶಿಗಳ ದಾಹ ನೀಗಿಸುತ್ತಾನೆ ಅಂತ ರೈತರು ನಂಬಿಕೆಯಾಗಿದೆ.