ಬಾಗಲಕೋಟೆ: ಜಿಲ್ಲೆಯ ಬಾದಾಮಿ ತಾಲೂಕಿನ ಕೆರೂರಿನಲ್ಲಿ ಲಂಚ ಸ್ವೀಕರಿಸುತ್ತಿದ್ದ ಪಿಎಸ್ಐ ಹಾಗೂ ಪೇದೆ ಇಬ್ಬರು ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಬಂಧಿತರನ್ನು ಕೆರೂರು ಪೊಲೀಸ್ ಠಾಣೆಯ ಪಿಎಸ್ಐ ಭೀಮಪ್ಪ ರಬಕವಿ ಮತ್ತು ಪೇದೆ ಸಂತೋಷ್ ಬಿರಾದರ್ ಎಂದು ಗುರುತಿಸಲಾಗಿದೆ. ಇಸ್ಪೀಟ್ ಆಟದ ವೇಳೆ ಸಿಕ್ಕಿಬಿದ್ದಿದ್ದ ಆರೋಪಿಯನ್ನು ಪ್ರಕರಣದಿಂದ ಬಿಡುಗಡೆ ಮಾಡಲು ಹಾಗೂ ಆತನ ಬೈಕ್ ವಾಪಸ್ ನೀಡಲು 2 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.
ದೂರುದಾರ ಮುತ್ತಪ್ಪ ನಾಯ್ಕರ್ ನೀಡಿದ ಮಾಹಿತಿಯ ಮೇರೆಗೆ, 1.70 ಲಕ್ಷ ರೂಪಾಯಿ ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಇಬ್ಬರನ್ನು ರೆಡ್‌ಹ್ಯಾಂಡ್ ಆಗಿ ಬಂಧಿಸಿದರು. ಫೋನ್ ಕರೆ ರೆಕಾರ್ಡಿಂಗ್ ಆಧಾರದಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ.
ಈ ದಾಳಿ ಕರ್ನಾಟಕ ಲೋಕಾಯುಕ್ತದ ಎಸ್‌ಪಿ ಮಹಾಲಿಂಗ್ ನಂದಗಾಂವಿ ಅವರ ಮಾರ್ಗದರ್ಶನದಲ್ಲಿ, ಡಿವೈಎಸ್ಪಿ ಸುರೇಶ್ ರೆಡ್ಡಿ ನೇತೃತ್ವದಲ್ಲಿ ನಡೆದಿದೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.



