ಬೆಂಗಳೂರು: ರಾಜ್ಯದಲ್ಲಿ ರೌಡಿಸಂ ಹಾಗೂ ಅಸಾಮಾಜಿಕ ಚಟುವಟಿಕೆಗಳನ್ನು ನಿಯಂತ್ರಿಸಲು ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಂಡಿದೆ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸೂಚನೆಯ ಹಿನ್ನೆಲೆಯಲ್ಲಿ ಪ್ರತಿ ಪೊಲೀಸ್ ವಲಯ ಮತ್ತು ಠಾಣಾ ಮಟ್ಟದಲ್ಲಿ ಆ್ಯಂಟಿ ರೌಡಿ ಸ್ಕ್ವಾಡ್‌ಗಳನ್ನು ರಚಿಸಲು ಆದೇಶಿಸಲಾಗಿದೆ.
ಈ ಕುರಿತು ಪೊಲೀಸ್ ಮಹಾನಿರ್ದೇಶಕ ಮತ್ತು ಮಹಾ ಪರಿಶೋಧಕ ಡಾ. ಎಂ.ಎ. ಸಲೀಂ ಅವರು ಸರ್ಕ್ಯುಲರ್ ಹೊರಡಿಸಿದ್ದು, ಕಾನೂನು ಮತ್ತು ಸುವ್ಯವಸ್ಥೆಯನ್ನು ಬಲಪಡಿಸಲು ಶೂನ್ಯ ಸಹಿಷ್ಣುತೆ ನೀತಿ ಅನುಸರಿಸಲು ಎಲ್ಲಾ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಹೊಸ ವ್ಯವಸ್ಥೆಯಡಿ ಸರ್ಕಲ್ ಇನ್ಸ್‌ಪೆಕ್ಟರ್‌ಗಳ ಮೇಲ್ವಿಚಾರಣೆಯಲ್ಲಿ ಪ್ರತಿ ವಲಯದಲ್ಲಿ ರೌಡಿ ಸ್ಕ್ವಾಡ್ ಕಾರ್ಯನಿರ್ವಹಿಸಲಿದ್ದು, ಠಾಣಾ ಮಟ್ಟದಲ್ಲೂ ಪ್ರತ್ಯೇಕ ತಂಡಗಳನ್ನು ರಚಿಸಲಾಗುತ್ತದೆ. ಸ್ಥಳೀಯ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಎಸಿಪಿ ಅಥವಾ ಉಪ ವಿಭಾಗಾಧಿಕಾರಿಗಳು ತಂಡದ ಸಂಯೋಜನೆ ನಿರ್ಧರಿಸಲಿದ್ದಾರೆ.
ಸ್ಕ್ವಾಡ್‌ಗಳಿಗೆ ರೌಡಿ ಶೀಟ್ ತೆರೆಯುವುದು, ಅಪರಾಧ ಚಟುವಟಿಕೆಗಳ ಮೇಲೆ ನಿಗಾ ವಹಿಸುವುದು, ಹೊಸ ಗ್ಯಾಂಗ್‌ಗಳನ್ನು ಗುರುತಿಸುವುದು ಹಾಗೂ ಗುಪ್ತಚರ ಮಾಹಿತಿ ಸಂಗ್ರಹಿಸುವ ಜವಾಬ್ದಾರಿ ನೀಡಲಾಗಿದೆ. ಜೊತೆಗೆ ಗುಂಡಾ ಕಾಯ್ದೆ, ಕೆಸಿಒಸಿಎ ಹಾಗೂ ಪಿಎಆರ್ ಸೇರಿದಂತೆ ಕಾನೂನು ಕ್ರಮಗಳನ್ನು ತ್ವರಿತವಾಗಿ ಕೈಗೊಳ್ಳುವಂತೆ ಸೂಚಿಸಲಾಗಿದೆ.
ಪ್ರತಿ ಠಾಣೆಯಲ್ಲಿ ಸ್ಕ್ವಾಡ್ ಚಟುವಟಿಕೆಗಳ ದಾಖಲಾತಿಗಾಗಿ ಪ್ರತ್ಯೇಕ ರಿಜಿಸ್ಟರ್ ನಿರ್ವಹಿಸಲಾಗುವುದು ಹಾಗೂ ಮಾಸಿಕ ವರದಿಯನ್ನು ಸಲ್ಲಿಸಬೇಕಾಗಿದೆ. ಹಿರಿಯ ಅಧಿಕಾರಿಗಳು ನಿಯಮಿತವಾಗಿ ಪರಿಶೀಲನೆ ನಡೆಸಿ ಕಾರ್ಯಕ್ಷಮತೆಯನ್ನು ವಿಮರ್ಶಿಸಲಿದ್ದಾರೆ.
ರೌಡಿ ಚಟುವಟಿಕೆಗಳ ವಿರುದ್ಧ ಯಾವುದೇ ರೀತಿಯ ಸಡಿಲತೆ ತೋರಬಾರದು ಎಂದು ಸ್ಪಷ್ಟವಾಗಿ ಸೂಚಿಸಿರುವ ಪೊಲೀಸ್ ಇಲಾಖೆ, ಸಾರ್ವಜನಿಕ ಶಾಂತಿ ಕಾಪಾಡಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದೆ.



