ಬೆಂಗಳೂರು: ರಾಜಧಾನಿ ಬೆಂಗಳೂರಿನ ಕಮ್ಮಗೊಂಡನಹಳ್ಳಿಯಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದೆ.
ಗ್ಯಾಸ್ ರಿಪಿಲ್ಲಿಂಗ್ ಅಂಗಡಿಯೊಂದರಲ್ಲಿ 20ಕ್ಕೂ ಹೆಚ್ಚು ಗ್ಯಾಸ್ ಸಿಲಿಂಡರ್ಗಳು ಸ್ಫೋಟಗೊಂಡಿದ್ದು, ಸ್ಫೋಟದ ತೀವ್ರತೆಗೆ ಅಂಗಡಿಯ ಶೀಟ್ಗಳು ಸೀಳಿ ವಸ್ತುಗಳು ಹೊರಕ್ಕೆ ಚದುರಿಬಿದ್ದಿವೆ. ಅದೃಷ್ಟವಶಾತ್, ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ರಾತ್ರಿ ಸುಮಾರು 8.30ರ ವೇಳೆಗೆ ಈ ಘಟನೆ ನಡೆದಿದೆ ಎನ್ನಲಾಗಿದೆ. ಅಂಗಡಿಯಲ್ಲಿ ಗ್ಯಾಸ್ ರಿಪಿಲ್ಲಿಂಗ್ ಮಾಡುವ ವೇಳೆ ಮೊದಲು ಗ್ಯಾಸ್ ಸೋರಿಕೆಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಸೋರಿಕೆ ಗಮನಕ್ಕೆ ಬರುತ್ತಿದ್ದಂತೆ ಅಂಗಡಿಯಲ್ಲಿದ್ದ ವ್ಯಕ್ತಿ ಹೊರಗೆ ಓಡಿಹೋಗಿದ್ದಾನೆ. ಅಷ್ಟರಲ್ಲೇ ಒಂದರ ಹಿಂದೆ ಒಂದರಂತೆ ಸಿಲಿಂಡರ್ಗಳು ಸ್ಫೋಟಗೊಂಡಿವೆ ಎನ್ನಲಾಗಿದೆ.
ಅಂಗಡಿಯಲ್ಲಿ ಗ್ಯಾಸ್ ಸಿಲಿಂಡರ್ಗಳ ಜೊತೆಗೆ ಪೆಟ್ರೋಲ್ ಮತ್ತು ಕೆರೋಸಿನ್ ಕೂಡ ಸಂಗ್ರಹಿಸಲಾಗಿತ್ತು ಎನ್ನಲಾಗಿದ್ದು, ಬೆಂಕಿ ವ್ಯಾಪಿಸಿ ಇಡೀ ಕಟ್ಟಡ ಧಗಧಗಿಸಿದೆ. ಸ್ಫೋಟಗೊಂಡ ಸಿಲಿಂಡರ್ಗಳ ಭಾಗಗಳು ಅಂಗಡಿಯ ಮೇಲ್ಛಾವಣಿಯನ್ನು ಸೀಳಿ ಹೊರಕ್ಕೆ ಹಾರಿಬಿದ್ದಿವೆ.
ಅಂಗಡಿಯ ಪಕ್ಕದಲ್ಲೇ ಇರುವ ನೂರಾನಿ ಮಸೀದಿಯಲ್ಲಿ ನಮಾಜ್ ಮಾಡುತ್ತಿದ್ದವರು ಸ್ಫೋಟದ ಸದ್ದು ಕೇಳುತ್ತಿದ್ದಂತೆ ಆತಂಕಗೊಂಡು ಹೊರಗೆ ಓಡಿಬಂದಿದ್ದಾರೆ. ಅಕ್ಕಪಕ್ಕದ ಮನೆಗಳ ನಿವಾಸಿಗಳು ಕೂಡ ಭಯಭೀತರಾಗಿ ಮನೆಗಳನ್ನು ತೊರೆದು ಸುರಕ್ಷಿತ ಸ್ಥಳಗಳಿಗೆ ತೆರಳಿದ್ದಾರೆ.
ಇನ್ನು, ಜನವಸತಿ ಪ್ರದೇಶದಲ್ಲಿ ಗ್ಯಾಸ್ ರಿಪಿಲ್ಲಿಂಗ್ ಮಾಡುವುದರ ಜೊತೆಗೆ ಪೆಟ್ರೋಲ್ ಮತ್ತು ಕೆರೋಸಿನ್ ಸಂಗ್ರಹಿಸಿ ಮಾರಾಟ ಮಾಡಲು ಅನುಮತಿ ನೀಡಿದವರು ಯಾರು ಎಂಬ ಪ್ರಶ್ನೆಯನ್ನು ಸ್ಥಳೀಯರು ಎತ್ತಿದ್ದಾರೆ. ಒಂದು ವೇಳೆ ಪ್ರಾಣಹಾನಿ ಸಂಭವಿಸಿದ್ದರೆ ಹೊಣೆ ಯಾರು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜನವಸತಿ ಪ್ರದೇಶದಲ್ಲಿ ಇಂತಹ ಅಪಾಯಕಾರಿ ಚಟುವಟಿಕೆಗಳು ನಡೆಯುತ್ತಿದ್ದರೆ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಿದ್ದಾರೆಯೇ ಎಂಬ ಪ್ರಶ್ನೆಯೂ ಇದೀಗ ಉದ್ಭವಿಸಿದೆ. ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ವಿವರಗಳು ನಿರೀಕ್ಷಿಸಲಾಗುತ್ತಿದೆ.










