ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕಳೆದ ಎರಡು-ಮೂರು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಜನಜೀವನದ ಮೇಲೆ ಪರಿಣಾಮ ಬೀರಿದೆ.
ಕುಶಾಲನಗರ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಮೂರು ಮನೆಗಳು ಹಾಗೂ ಕೊಟ್ಟಿಗೆಗೆ ಹಾನಿಯಾಗಿರುವ ಘಟನೆಗಳು ವರದಿಯಾಗಿವೆ.
ಚಿಕ್ಕ ಅಳುವಾರ ಗ್ರಾಮದ ವಿಜಯಕುಮಾರ್ ಟಿ.ವೈ. ಅವರ ಮನೆಯ ಗೋಡೆಯ ಒಂದು ಭಾಗ ರಾತ್ರಿ ಸುರಿದ ಮಳೆಯಿಂದ ಹಾನಿಗೊಳಗಾಗಿದೆ. ಕೂಡುಮಂಗಳೂರು ಗ್ರಾಮದ ಜಯಲಕ್ಷ್ಮಿ ಅವರ ಮನೆಯ ಮೇಲ್ಛಾವಣಿಗೂ ಹಾನಿಯಾಗಿದೆ.
ಇನ್ನು ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಂಗಸಮುದ್ರ ಗ್ರಾಮದ ನವೀನ್ ಅವರ ಕೊಟ್ಟಿಗೆ ಮಳೆಯಿಂದ ಹಾನಿಗೊಳಗಾಗಿದೆ ಎಂದು ತಿಳಿದುಬಂದಿದೆ.
ಘಟನೆಗಳ ಕುರಿತು ಮಾಹಿತಿ ಪಡೆದ ಕುಶಾಲನಗರ ತಹಶೀಲ್ದಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಾನಿಯ ವಿವರಗಳನ್ನು ಸಂಗ್ರಹಿಸಿ, ಸಂಬಂಧಪಟ್ಟ ಅಧಿಕಾರಿಗಳ ಮೂಲಕ ವರದಿ ಸಲ್ಲಿಸಲಾಗಿದೆ.
ಜಿಲ್ಲೆಯಲ್ಲಿ ಮಳೆ ಮುಂದುವರಿದಿರುವುದರಿಂದ ಗ್ರಾಮೀಣ ಭಾಗದ ನಿವಾಸಿಗಳಲ್ಲಿ ಆತಂಕ ಹೆಚ್ಚಾಗಿದೆ. ಮಳೆಯಿಂದ ಮನೆ ಹಾಗೂ ಇತರ ಕಟ್ಟಡಗಳಿಗೆ ಹಾನಿಯಾಗುವ ಸಾಧ್ಯತೆ ಇರುವುದರಿಂದ ಜನರು ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.










