ಮೈಸೂರು: ಮೈಸೂರು ಅರಮನೆ ಮುಂಭಾಗದಲ್ಲಿ ಹೀಲಿಯಂ ಗ್ಯಾಸ್ ತುಂಬಿದ್ದ ಸಿಲಿಂಡರ್ ಸ್ಫೋಟಗೊಂಡು ಬಲೂನ್ ವ್ಯಾಪಾರಿ ಸಲೀಂ ಸಾವನ್ನಪ್ಪಿದ ಪ್ರಕರಣದ ಹಿಂದಿನ ನಿಜವಾದ ಕಾರಣ ಇದೀಗ ಬೆಳಕಿಗೆ ಬಂದಿದೆ.
ಸಲೀಂ ನಿರಂತರವಾಗಿ ಬಲೂನ್ಗಳಿಗೆ ಹೀಲಿಯಂ ಗ್ಯಾಸ್ ತುಂಬುತ್ತಿದ್ದು, ಸಿಲಿಂಡರ್ ಅನ್ನು ಪದೇಪದೇ ವೇಗವಾಗಿ ಆನ್–ಆಫ್ ಮಾಡಿದ ಪರಿಣಾಮ ಒಳಭಾಗದಲ್ಲಿ ತಾಪಮಾನ ಹೆಚ್ಚಾಗಿ ಒತ್ತಡ ಉಂಟಾಗಿದೆ. ಇದರ ಪರಿಣಾಮವಾಗಿ ಏಕಾಏಕಿ ಸಿಲಿಂಡರ್ ಸ್ಫೋಟಗೊಂಡಿದೆ ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ ಎಂದು ಮೈಸೂರು ಪೊಲೀಸ್ ಮೂಲಗಳು ತಿಳಿಸಿವೆ.
ಉತ್ತರ ಪ್ರದೇಶ ಮೂಲದ ಸಲೀಂ, ಕಳೆದ ವಾರ ವ್ಯಾಪಾರಕ್ಕಾಗಿ ಮೈಸೂರಿಗೆ ಬಂದಿದ್ದ. ಒಂದು ವಾರದಿಂದ ಮೈಸೂರು ಅರಮನೆ ಸುತ್ತಮುತ್ತ, ವಿಶೇಷವಾಗಿ ವಸ್ತುಪ್ರದರ್ಶನ ಆವರಣದ ಬಳಿ ಸೈಕಲ್ ಮೇಲೆ ಹೀಲಿಯಂ ಗ್ಯಾಸ್ ಸಿಲಿಂಡರ್ ಇಟ್ಟುಕೊಂಡು ಬಲೂನ್ ಮಾರಾಟ ಮಾಡುತ್ತಿದ್ದ. ಘಟನೆ ನಡೆದ ದಿನ ರಾತ್ರಿ ಸುಮಾರು 8.30ರ ವೇಳೆಗೆ ವರಾಹ ಗೇಟ್ ಬಳಿ ಬಲೂನ್ ಮಾರಾಟ ಮುಗಿಸಿ, ದೊಡ್ಡಕೆರೆ ಮೈದಾನದ ಎದುರಿನ ಜಯಮಾರ್ತಾಂಡ ಗೇಟ್ ಕಡೆಗೆ ಬಂದಾಗ ಈ ದುರ್ಘಟನೆ ಸಂಭವಿಸಿದೆ.
ಘಟನೆ ಸಮಯದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಬಲೂನ್ ಖರೀದಿಗೆ ಸೇರಿದ್ದರಿಂದ ಸಲೀಂ ನಿರಂತರವಾಗಿ ಗ್ಯಾಸ್ ತುಂಬುತ್ತಿದ್ದ. ಈ ವೇಳೆ ಸಿಲಿಂಡರ್ ಅನ್ನು ಮರುಮರು ವೇಗವಾಗಿ ಆನ್–ಆಫ್ ಮಾಡಿದ್ದರಿಂದ ಒಳಭಾಗದಲ್ಲಿ ತೀವ್ರ ತಾಪಮಾನ ಏರಿಕೆಗೊಂಡು ಒತ್ತಡ ಹೆಚ್ಚಾಗಿದೆ. ಪರಿಣಾಮವಾಗಿ ಸಿಲಿಂಡರ್ ಸ್ಫೋಟಗೊಂಡು ಸಲೀಂ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಸಲೀಂ ಪಕ್ಕದಲ್ಲೇ ಇದ್ದ ನಾಲ್ವರಿಗೆ ಗಂಭೀರ ಗಾಯಗಳಾಗಿದ್ದು, ಅವರಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಗಾಯಾಳುಗಳಲ್ಲಿ ಒಬ್ಬರಿಗೆ ಮೈಸೂರಿನ ಜೆ.ಎಸ್.ಎಸ್ ಆಸ್ಪತ್ರೆಯಲ್ಲಿ ಹಾಗೂ ಮೂವರಿಗೆ ಕೆ.ಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಫೋಟವು ವರಾಹ ಗೇಟ್ ಬಳಿ ಸಂಭವಿಸದೆ ಜಯಮಾರ್ತಾಂಡ ಗೇಟ್ ಬಳಿ ನಡೆದಿರುವುದರಿಂದ ದೊಡ್ಡ ಅನಾಹುತ ತಪ್ಪಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ವರಾಹ ಗೇಟ್ ಬಳಿ ಹೆಚ್ಚಿನ ಜನಸಂದಣಿ ಇದ್ದುದರಿಂದ ಅಲ್ಲಿ ಸ್ಫೋಟವಾಗಿದ್ದರೆ ಹೆಚ್ಚಿನ ಸಾವು-ನೋವು ಸಂಭವಿಸುವ ಸಾಧ್ಯತೆ ಇತ್ತು ಎಂದು ಹೇಳಲಾಗುತ್ತಿದೆ.
ಈ ಘಟನೆ ಸಂಬಂಧ ಮೈಸೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಎಫ್ಎಸ್ಎಲ್ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಸಿಲಿಂಡರ್ ಬಳಕೆಯಲ್ಲಿನ ಸುರಕ್ಷತಾ ಕ್ರಮಗಳ ಉಲ್ಲಂಘನೆ, ವ್ಯಾಪಾರಕ್ಕೆ ಅಗತ್ಯ ಪರವಾನಗಿಗಳಿದ್ದವೆಯೇ ಎಂಬ ಅಂಶಗಳ ಕುರಿತು ಪೊಲೀಸರು ಮುಂದುವರಿದ ತನಿಖೆ ಕೈಗೊಂಡಿದ್ದಾರೆ.



