ಬಿಗ್ ಬಾಸ್ ಮೂಲಕ ಜನಪ್ರಿಯತೆ ಹೆಚ್ಚಿಸಿಕೊಂಡ ನಟ ಧರ್ಮ ಕೀರ್ತಿರಾಜ್ ಅವರ ಸಿನಿಮಾ ಪಯಣಕ್ಕೆ ಮತ್ತೊಂದು ಮಹತ್ವದ ಅಧ್ಯಾಯ ಸೇರ್ಪಡೆಯಾಗಿದೆ. ತಮ್ಮ 25ನೇ ಸಿನಿಮಾವಾಗಿ ‘ನಯನ ಮನೋಹರ’ ಚಿತ್ರವನ್ನು ಅವರು ಒಪ್ಪಿಕೊಂಡಿದ್ದು, ಇತ್ತೀಚೆಗೆ ಟೈಟಲ್ ಹಾಗೂ ಟೀಸರ್ ಬಿಡುಗಡೆ ಕಾರ್ಯಕ್ರಮ ಭರ್ಜರಿಯಾಗಿ ನಡೆಯಿತು.
ವೇದಿಕೆಯಲ್ಲಿ ಮಾತನಾಡಿದ ಧರ್ಮ ಕೀರ್ತಿರಾಜ್, “ಅಪ್ಪ, ಅಮ್ಮ, ಅಕ್ಕ ಇಲ್ಲಿ ಇದ್ದಿರುವುದು ನನಗೆ ದೊಡ್ಡ ಶಕ್ತಿ. 25ನೇ ಸಿನಿಮಾ ನನ್ನ ಜೀವನದ ಮೈಲಿಗಲ್ಲು. ನಿಜವಾದ ಹೀರೋ ಎಂದರೆ ನಿರ್ಮಾಪಕರು. ನಿರ್ದೇಶಕರು ಕಥೆ ಹೇಳಿದ ಕ್ಷಣದಲ್ಲೇ ನನಗೆ ತುಂಬಾ ಸಂತೋಷ ಆಯಿತು. ಈ ಸಿನಿಮಾದಲ್ಲಿ ಮೂರು ವಿಭಿನ್ನ ಶೇಡ್‌ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ” ಎಂದು ಭಾವನಾತ್ಮಕವಾಗಿ ಹೇಳಿದರು.
ನಿರ್ದೇಶಕ ಪುನೀತ್ ಕೆಜಿಆರ್, “ಈ ಸಿನಿಮಾ ಧರ್ಮ ಕೀರ್ತಿರಾಜ್ ಅವರಿಗೆ ಖಂಡಿತ ಗೆಲುವು ಕೊಡುತ್ತದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು. ಸಂಗೀತ ನಿರ್ದೇಶಕ ವಾಸುಕಿ ವೈಭವ್ ಅವರ ಸಂಗೀತ ಚಿತ್ರದ ಪ್ರಮುಖ ಪ್ಲಸ್ ಆಗಲಿದೆ ಎಂಬ ನಿರೀಕ್ಷೆ ಇದೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಿಯಾಂಕಾ ಉಪೇಂದ್ರ, “ಈ ಸಿನಿಮಾ 100 ದಿನ ಪೂರೈಸಿ ಇದೇ ಜಾಗದಲ್ಲಿ ಸಂಭ್ರಮಿಸೋಣ” ಎಂದು ಶುಭ ಹಾರೈಸಿದರೆ, ವಿನೋದ್ ಪ್ರಭಾಕರ್ “ಟೀಸರ್ ತುಂಬಾ ಚೆನ್ನಾಗಿ ಬಂದಿದೆ. ಪಾತ್ರ ಪರಿಚಯ ಗಮನಸೆಳೆದಿದೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.



